ಗುಡ್ಡ್ಡಿss, ಶೂ ಬಿಚ್ಚು...
ಬಾಲ್ಯದ ನೆನಪಿಗೆ ಲಗೋರಿ!
11.15 ಆಗ್ತಿದೆ, ಈ ಮೇಡಂ ಶಾಲೆ ಬಿಡೋ ಲಕ್ಷಣಗಳೇ ಕಾಣ್ತಿಲ್ಲ. 11.30ಕ್ಕೆ ಮನೆ ತಲುಪಬೇಕು ಸಾಧ್ಯನಾ? ಈ ಚಡಪಡಿಕೆ ಇದ್ದದ್ದು ನಾನು 4ನೇ ತರಗತಿ ಓದಬೇಕಾದರೆ. ಯಾಕೆ ಅಂತೀರಾ? ಆಗಿನ ನಮ್ಮ ನೆಚ್ಚಿನ ಸೂಪರ್ಹೀರೋ ಧಾರಾವಾಹಿ 'ಶಕ್ತಿಮಾನ್'ಗೆ. ಪ್ರತಿ ಶನಿವಾರ ಬೆಳಗಿನ ಶಾಲೆ ಮುಗಿಸಿಕೊಂಡು ಮನೆಗೆ ಓಡಿಕೊಂಡು ಹೋಗ್ತಾ ರಸ್ತೆಯ ಆಜುಬಾಜಿನ ಮನೆಗಳಿಂದ ಬರುತಿದ್ದ 'ಶಕ್ತಿ ಶಕ್ತಿ ಶಕ್ತಿಮಾನ್...' ಹಾಡು ನಮ್ಮನ್ನ ಇನ್ನು ಬೇಗ ಮನೆ ತಲುಪಲು ಪ್ರೇರೇಪಿಸುತ್ತಿದ್ದವು. ಮನೆಯ ಗೇಟ್ ತಳ್ಳಿ ಶೂ ಬಿಚ್ಚೋದನ್ನೂ ಮರೆತು ಮನೆ ಒಳಗೆ ಹಾರಿ ಹೋಗೋವಾಗ, 'ಗುಡ್ಡಿಡಡ ಶೂ ಬಿಚ್ಚು' ಅನ್ನೋ ಅಜ್ಜಿಯ ಕೂಗು ಆ ಏದುಸಿರಿನ ಶಬ್ದದ ನಡುವೆ ಸಣ್ಣಗೆ ಮರೆಯಾಗುತಿತ್ತು.
ಸ್ಕೂಲ್ ಬ್ಯಾಗ್ ಅನ್ನೋ ಮೂಟೇನ ಮೂಲೆಯಲ್ಲಿ ತಳ್ಳಿ ಟಿವಿ ಮುಂದೆ ಪ್ರತ್ಯಕ್ಷ ಆಗೋ ಹೊತ್ತಿಗೆ ಧಾರಾವಾಹಿಯ ಮೊದಲನೇ ವಿರಾಮ. ಹಾಗೆ ಕೂತಲ್ಲೇ ಅಜ್ಜಿ ತಿನ್ನಿಸುತಿದ್ದ ಊಟ ಮಾಡಿ, ಸಣ್ಣ ನಿದ್ದೆ. ಮಧ್ಯಾಹ್ನ 4ಕ್ಕೆ ಆಟ ಆಡಲು ಮನೆಯಿಂದ ಹೊರಬಂದರೆ ಮತ್ತೆ ಮನೆ ಬಾಗಿಲು ಕಾಣಿಸುತ್ತಿದ್ದುದ್ದು ಅಪ್ಪ ಬಂದು ಕರೆದಾಗಲೇ.
ಭಾನುವಾರದ ಹರಳೆಣ್ಣೆ ಸ್ನಾನ ಮತ್ತೆ ಧಾರಾವಾಹಿಗಳ ಸರಮಾಲೆ 'ಚಂದ್ರಕಾಂತ', 'ಶ್ರೀ ಕೃಷ್ಣ', 'ಡೊನಾಲ್ಡ್ ಡಕ್'... ಎಂಥ ಮೋಜಿನ ದಿನಗಳವು! ಇದುವರೆಗೂ ನನ್ನ ಸೋಲಿಸುವ 7 ಮನೆ ಚೌಕಾಭಾರ; ಪ್ರತೀ ಸಲ ಸೋತಾಗಲೂ ಹಠಕ್ಕೆ ಬಿದ್ದು, ಮತ್ತೆ ಅಪ್ಪನ ಮೇಲೆ ಮುಂದಿನ ಆಟ ಆಡುತಿದ್ದ ಮಜಾ; ಕಾಯಿ ಹೊಡೆದಾಗ ಆಗುತ್ತಿದ್ದ ಸಂಕಟ; ಗಂಟಲಲ್ಲೇ ನಿಂತ ಅಳು; ಮಗಳ ಸಂಕಟ ನೋಡಲಾಗದೆ ಬೇರೆ ಕಾಯಿ ನಡೆಸುತಿದ್ದ ಅಪ್ಪನ ಮುಗ್ಧ ಮನಸ್ಸು; ಮತ್ತದೇ ಅಪ್ಪನನ್ನು ಚಿಕ್ಕಪ್ಪನ ಸಂಗಡ ಸೇರಿ ಎದುರಾಳಿಯಾಗಿ ಅವರ ಕಾಯಿ ಹೊಡೆದಾಗಿನ ಸಂತೋಷ; ಅಜ್ಜಿಯ ಊಟದ ಕರೆಗೆ ಓಗೊಟ್ಟು, ಆಟ ಮುಗಿಸಿ 'ಗುಡ್ಡಿ ಆಟ ಗೆದ್ದೇ ಬಿಟ್ಳು' ಅಂತ ನನ್ನ ಉಬ್ಬಿಸಿ ಆಟದಿಂದ ಬಿಡಿಸುತಿದ್ದ ರೀತಿ... ನಿದ್ದೆ ಹೋದರೂ ಗೆದ್ದೇ ಅನ್ನೋ ನಗು ಮುಖದಲ್ಲೇ ಉಳಿಯುತ್ತಿತ್ತು.
ಅಜ್ಜಿ, ಅಮ್ಮ, ಚಿಕ್ಕಮ್ಮ ಮಾಡಿದ ಕೋಡುಬಳೆ ಸವಿಯುತ್ತ ಭಾನುವಾರ ಕಳೆದುಹೋಗುತ್ತಿತ್ತು. ನಾಳೆ ಶಾಲೆ ಅನ್ನೋದು ಮನಸ್ಸಿಗೆ ಬಂದರೆ ಸಾಕು ಅಮ್ಮನ ಮೇಲೆ ಸುಮ್ಮನೆ ಕೂಗಾಟ. ಮುಖ ಸಿಂಡರಿಸಿಕೊಂಡು ಹೋಂವರ್ ಮಾಡೋದು. ಮರುದಿನ ಬೆಳಗ್ಗೆ ಯಥಾಪ್ರಕಾರ ಚಿಕ್ಕಮ್ಮ ಹಾಕಿದ ಜಡೆ ಅಲ್ಲಾಡಿಸಿಕೊಂಡು, ಬೆನ್ನಿಗೆ ಬ್ಯಾಗು, ಊಟದ ಬುಟ್ಟಿ ಹಿಡಿದು ಸ್ನೇಹಿತೆಯರ ಸಂಗ ಸೇರಿ ಭಾನುವಾರದ ಕಥೆಗೆ ಹಿಂದುಮುಂದು ಸೇರಿಸಿ ದೊಡ್ಡದಾಗಿ ಹೇಳುತ್ತಾ ಹೊರಟರೆ ಮನೆಯ ನೆನಪು ಹಿಂದುಳಿಯುತ್ತಿತ್ತು.
ನನಗಿನ್ನೂ ನೆನಪಿದೆ. ಮಾಧುರಿ ದೀಕ್ಷಿತ್ ಎಂದರೆ ನನಗೆ ಬಹಳ ಇಷ್ಟ. ನಾನಾಗ ಸ್ನೇಹಿತೆಯರಿಗೆಲ್ಲ ಸುಳ್ಳು ಹೇಳುತ್ತಿದ್ದೆ; 'ಮನೆಗೆ ಬಂದೋರೆಲ್ಲ ನನ್ನನ್ನ ಮಾಧುರಿ ದೀಕ್ಷಿತ್ ಥರ ಇದ್ದೀಯ, ಆದರೂ ನಿಂಗ್ಯಾಕೆ ವಿಭಾ ಅಂತಾರೆ? ಅಂತ ಕೇಳ್ತಾರೆ'. ಆಗ ಅವರಿಗೆಲ್ಲ ನನ್ನ ಸೌಂದರ್ಯದ ಮೇಲೆ ಗೌರವ ಮೂಡುತ್ತಿತ್ತು!
ಅಂತೂ ಕಾಲೇಜು ಮುಗಿಸಿ, ಕೆಲಸಕ್ಕೂ ಸೇರಿ, ಮದುವೇನೂ ಆಗಿ, ಸೆಟ್ಲ್ ಆಗಿ ನೆಮ್ಮದಿ ಇಂದ ಇದ್ದೀನಿ. ಈಗ ಇದೆಲ್ಲ ಯಾಕೆ ನೆನಪಿಗೆ ಬಂತು ಅಂತೀರಾ? ನಾವು ಆಡಿದ ಆಟಗಳು ಕುಂಟೆಬಿಲ್ಲೆ, ಲಗೋರಿ, ಚೌಕಾಭಾರ, ಅಳುಗುಲಿ ಮಣೆ, ಕಣ್ಣಾಮುಚ್ಚಾಲೆ, ಆಲಿಕಲ್ಲು... ಈ ಎಲ್ಲ ಆಟಗಳೂ ನನ್ನ ಮಕ್ಕಳಿಗೆ ಸಿಗುತ್ತಾ? ಈ ಯುಗದಲ್ಲಿ ನಾವು ನಮ್ಮ ಮಕ್ಕಳಿಂದ ಅವರ ಬಾಲ್ಯ ಕಸಿದುಕೊಳ್ಳುತ್ತಿದ್ದೇವೆ ಅನ್ನೋ ಭಾವನೆ. ಇಲ್ಲ ಇದೇ ಬದಲಾವಣೆಯಾ? ನಾವು ಬೆಳೆದ ಹಾಗೆ ನಮ್ಮ ಮಕ್ಕಳು ಬೆಳೀಬೇಕು, ಹಳ್ಳಿ ಸೊಗಡು ಮಣ್ಣಿನ ಕಂಪಿನೊಂದಿಗೆ ಮಕ್ಕಳ ಬಾಲ್ಯ ಕಲೀಬೇಕು ಅನ್ನೋ ಆಸೆ ನೆರವೇರೋದು ಕಷ್ಟನಾ?
ಈಗಿನ ಮಕ್ಕಳ ಬಾಲ್ಯ ಹೇಗಿದೆ? ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳಬೇಕು. ಶಾಲೆಯಿಂದ ಮನೆ, ಮನೆಯಲ್ಲಿ ಕಂಪ್ಯೂಟರ್ ಮುಂದೆ ಇಲ್ಲ ಟಿವಿ ಮುಂದೆ. ಭಾನುವಾರ ಡ್ಯಾನ್ಸೋ, ಸಂಗೀತ ಕ್ಲಾಸೋ ಅಥವಾ ಪೇಂಟಿಂಗ್, ಡ್ರಾಯಿಂಗ್, ಸ್ವಿಮ್ಮಿಂಗ್. ಹೀಗೆ ಕಳೆದುಹೋಗುತ್ತಿವೆ. ಬೇರೆ ಬೇರೆ ಭಾಷೆ ಕಲಿಸೋ ಭರದಲ್ಲಿ ನಮ್ಮ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. 'ಮನೆಯಿಂದ ಹೊರಗೆ ಹೋಗ್ಬೇಡ, ಸೆಕ್ಯೂರಿಟಿ ಇಲ್ಲ. ಇಂಗ್ಲಿಷಿನಲ್ಲಿ ಮಾತಾಡು. ಸರಿಯಾಗಿ ಬಿಹೇವ್ ಮಾಡು. ಡಿಸಿಪ್ಲಿನ್ ಇಲ್ಲ. ಮ್ಯಾನರ್ಸ್ ಕಲಿತ್ಕೊ'- ಹೀಗೆ ಮಕ್ಕಳನ್ನ ನಾವೇ ಬದಲಾಯಿಸುತ್ತಿದ್ದೇವೆ.
ನಿಜಕ್ಕೂ ಭಯ ಆಗುತ್ತೆ. ಈ ಬದಲಾವಣೆಯ ಬಿರುಸಿನಲ್ಲಿ ನಮ್ಮ ಸಂಸ್ಕಾರ ಮರೆಯಾಗ್ತಿದೆಯಾ? ಇಲ್ಲ ನಾನು ತುಂಬ ಯೋಚಿಸ್ತಿದ್ದೀನಾ? ಇಂಥ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲೂ ಇದೆಯಾ? ಇಲ್ಲ ನಾನು ಓವರ್ ಪ್ರೊಟೆಕ್ಟಿವ್ ಆಗ್ತಿದ್ದೇನಾ? ಈ ಸಕಲ, ಸವಕಲು ಯೋಚನೆಗಳ ನಡುವೆ, ನಮ್ಮ ತುಂಬು ಮನೆ, ಒಳ್ಳೆ ಭಾಷೆ, ಒಳ್ಳೆ ಜನ ಇರಬೇಕಾದ್ರೆ ನಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕಾರ ಸಿಕ್ಕೇ ಸಿಗುತ್ತೆ ಅನ್ನೋ ಭರವಸೆಯ ನಿಟ್ಟುಸಿರು. ಈ ಗೊಂದಲಗಳ ಮತ್ತು ನೆಮ್ಮದಿಯ ನಡುವೆ ನಮ್ಮ ಪಯಣ ಮುಂದುವರಿದಿದೆ.
- ವಿಭಾ ರಘು
vibha.giri87@gmail.com