ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಪಂಪ ತೀರದ ಎಚ್ಚೆಸ್ವಿ

Vishwanath S
Updated On : 1 Feb 2014, 3:32 am

ರಾಮಾಯಣ ಮತ್ತು ಮಹಾಭಾರತಗಳು ಈ ದೇಶದ ಸಂಸ್ಕೃತಿಯ ಎರಡು ಮಹಾಧಾರೆಗಳು. ಬದುಕಿನಲ್ಲಿ ಯಾವುದು ಆದರ್ಶ, ಯಾವುದನ್ನು ಅನುಸರಿಸಬೇಕು, ಬದುಕಿಗೆ ಅಹಿತ ಯಾವುದು? ಇತ್ಯಾದಿ ವಿವೇಚನೆಯ ಮಾತುಗಳನ್ನು ಈ ಕಾವ್ಯಗಳಲ್ಲಿ ಕಾಣುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ದೇಶವನ್ನು ಭಾವನಾತ್ಮಕವಾಗಿ ಬಂಧಿಸಿಟ್ಟಿದ್ದು ಈ ಎರಡು ಮಹಾಕಾವ್ಯಗಳು.
ಇವನ್ನು ನಮ್ಮ ಮಕ್ಕಳಿಗೆ ಕಲಿಸಲಾಗುತ್ತದೆ. ಮಠ ಮಂದಿರಗಳಲ್ಲಿ ಕೇಳಿಸಲಾಗುತ್ತದೆ. ಹಿರಿಯರು ಬುದ್ಧಿವಾದ ಹೇಳುವಾಗ ಇವುಗಳಲ್ಲಿನ ಘಟನೆಗಳನ್ನು ಸಾಮತಿಗಳಂತೆ ಹೇಳುತ್ತಾರೆ. ಈ ಕಾವ್ಯಗಳು ಭಾಷೆಯ ಭಾಗವಾಗಿ ಹೋಗಿರುವುದರಿಂದ ಅವು ನಮ್ಮ ಬದುಕಿನಲ್ಲಿ ಎಷ್ಟು ಆಳಕ್ಕಿಳಿದಿವೆ ಎಂಬುದು ಗೊತ್ತಾಗುತ್ತದೆ.
ಕನ್ನಡದ ಪುರಾತನ ಕವಿಗಳು ರಾಮಾಯಣ, ಮಹಾಭಾರತಗಳನ್ನು ಆಧರಿಸಿ ಕಾವ್ಯಗಳನ್ನು ಕಟ್ಟಿದರು. ಹಳೆಗನ್ನಡದ ನಡುಗನ್ನಡದ ಅವರ ಕಾವ್ಯ ಹೊಸಗನ್ನಡದ ಈಗಿನ ಹುಡುಗರಿಗೆ ಕಬ್ಬಿಣದ ಕಡಲೆ ಅನ್ನಿಸಿದರೆ ಅಚ್ಚರಿಯಿಲ್ಲ. ಅದು ಕಠಿಣ ಎನ್ನುವ ಕಾರಣಕ್ಕೇ ಅದನ್ನು ಓದದೇ ಹೋಗಬಹುದು.
ಈ ಹಳೆಗನ್ನಡ ಕಾವ್ಯದ ಅರ್ಥ ಸುಲಭವಾಗುವಂತೆ ಬಿಡಿಸಿ ಮೂಲ ಕಾವ್ಯದ ಸೊಗಸನ್ನೂ ಉಳಿಸಿಕೊಂಡು ಕಾವ್ಯರೂಪದಲ್ಲೇ ಮತ್ತೆ ಬರೆದರೆ ಹೇಗಿರುತ್ತದೆ? ಇಂಥ ಒಂದು ಅಪರೂಪದ ಯತ್ನವನ್ನು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮಾಡಿದ್ದಾರೆ. 'ಮಕ್ಕಳಿಗಾಗಿ ಪಂಪ' ಎಂಬ ತಮ್ಮ ಕೃತಿಯಲ್ಲಿ ನಮ್ಮ ಆದಿಕವಿ ಪಂಪನ ಭಾರತ ಮತ್ತು ಆದಿಪುರಾಣದ ಕೆಲವು ಭಾಗವನ್ನು ಮೂಲದ ಸೊಗಸಿನೊಂದಿಗೇ ಕಾವ್ಯರೂಪದಲ್ಲಿ ಹೊಸಗನ್ನಡಿಸಿದ್ದಾರೆ.
ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡುವುದೆಂದರೆ ಮಕ್ಕಳಲ್ಲಿ ಸಾಹಿತಿ ಪರಕಾಯಪ್ರವೇಶ ಮಾಡಬೇಕಾಗುತ್ತದೆ. ಕಾವ್ಯದ ಬೆರಗನ್ನು ಮಕ್ಕಳ ಬೆರಗಿನ ಪರಿಧಿಗೆ ಮುಟ್ಟಿಸುವುದು ಸುಲಭವೇನಲ್ಲ. ಎಚ್ಚೆಸ್ವಿ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇದು ಕೇವಲ ಮಕ್ಕಳಿಗಷ್ಟೇ ಅಲ್ಲ, ಆಧುನಿಕ ಪೀಳಿಗೆಯ ಹಿರಿಯರಿಗೂ ಪಂಪ ಕಾವ್ಯಾನುಸಂಧಾನಕ್ಕೆ ಉಪಯುಕ್ತ ಕೃತಿ.
ಈ ಕೃತಿಯಲ್ಲಿ ಕೌರವ ಪಾಂಡವರ ಬಾಲ್ಯ, ಕರ್ಣನ ಹುಟ್ಟು, ದ್ರುಪದ ದ್ರೋಣರ ಕಥೆ, ಕರ್ಣ-ದುರ್ಯೋಧನರ ಸ್ನೇಹ, ಭೀಷ್ಮ- ಕರ್ಣರ ತಿಕ್ಕಾಟದ ಪ್ರಸಂಗ, ಭರತ ಬಾಹುಬಲಿ ಕಥೆ ಮತ್ತು ಕೆಲವು ಬಿಡಿ ಪದ್ಯಗಳಿವೆ.
ಎಚ್ಚೆಸ್ವಿಯವರು ಭೀಷ್ಮ- ಕರ್ಣರ ತಿಕ್ಕಾಟದ ಪ್ರಸಂಗವನ್ನು ನಾಟಕದ ರೂಪದಲ್ಲಿ ಅಲ್ಲಿಯ ಪದ್ಯಗಳಿಂದಲೇ ಕಟ್ಟಿಕೊಟ್ಟಿದ್ದಾರೆ. ಪಂಪನ ಕಾವ್ಯದ ನಾಟಕೀಯತೆಯನ್ನು ಈ ರೀತಿಯಲ್ಲಿ ಅವರು ಮನಗಾಣಿಸಲು ಪ್ರಯತ್ನಿಸಿದ್ದಾರೆ.
ಈ ಭಾಗದ ಒಂದು ಪದ್ಯವನ್ನು ಅವಗಾಹನೆಗೆ ಇಲ್ಲಿ ಕೊಡಬಹುದು; ಭೀಷ್ಮರಿಗೆ ಸೇನಾಪತಿ ಪಟ್ಟ ಕಟ್ಟಿದ್ದಕ್ಕೆ ಕರ್ಣನಿಗೆ ಅಸಮಾಧಾನ. ನನಗೇ ಪಟ್ಟವ ಕಟ್ಟು ಎಂದು ಅವನು ದುರ್ಯೋಧನನಿಗೆ ಹೇಳುತ್ತಾನೆ.-
'ಕಟ್ಟುವುದೆಂದರೆ ಇವರಿಗೆ ಪಟ್ಟ ಬಿದುರಿನಟ್ಟ ಕಟ್ಟಿದ ಹಾಗೆ!/ ಇನ್ನಿವರ ಬಿಲ್ಲೋ ಬರೀ ಲಡ್ಡು! ಜೋಳದ ದಂಟಿನ ಹಾಗೆ/ ಕಂಗೆಟ್ಟ ಮುದಿಯಗೆ ಪಟ್ಟಗಟ್ಟಿದರೆ ಸಾಧಿತವಾದೀತೆ ಗೆಲುವು?/ ಹಗೆಗಳ ನಿಟ್ಟೆಲುವ ಮುರಿಯ ಬೇಕೇ ನನಗೆ ಪಟ್ಟವ ಕಟ್ಟು!/'-
ಹಾಗೆಯೇ ಮುಂದುವರಿದು, ಭೀಷ್ಮರು ಪಾಂಡವರನ್ನು ಚಿಕ್ಕವರಿದ್ದಾಗ ಎತ್ತಿ ಆಡಿಸಿದವರು. ಅಜ್ಜನಾದ ಅವರು ಮೊಮ್ಮಕ್ಕಳೊಂದಿಗೆ ಮನಸ್ಸಿಟ್ಟು ಯುದ್ಧ ಮಾಡುವುದಿಲ್ಲ ಎಂದೂ ಹೇಳುತ್ತಾನೆ. ಅದಕ್ಕೆ ಉತ್ತರಿಸುವ ದ್ರೋಣರು ಭೀಷ್ಮ ಮುದಿಯಾದರೂ ಸಿಂಹದಂತೆ. ಹಿಂಡು ಆನೆಯನ್ನೂ ಮುದಿ ಸಿಂಹ ಅಂಜಿಸುತ್ತದೆ. ನೀನು ಹಿರಿಯರನ್ನು ನಿಂದಿಸಿದೆ. ನಿನ್ನ ಕುಲವ ನಿನ್ನ ನಾಲಗೆಯೆ ನುಡಿಯಿತು ಎಂದು ಹೇಳುತ್ತಾರೆ. ಅದಕ್ಕೆ ಉತ್ತರಿಸುವ ಕರ್ಣ, 'ಅಭಿಮಾನವೊಂದೇ ಕುಲ, ಬಲವೆ ಕುಲ. ಮುಂಬರುವ ಸಮರದಲಿ ಕುಲವೇ ನಿಮಗೆ ವ್ಯಾಕುಲವಾಗದಿದ್ದರೆ ಕೇಳಿ' ಎಂದು ಎಚ್ಚರಿಸುತ್ತಾನೆ.
ಕರ್ಣನಿಗೆ ಉತ್ತರಿಸುವ ಭೀಷ್ಮರು, ಇದು ಮಹಾಭಾರತ ಯುದ್ಧ. ನಿನ್ನ ಸರದಿಯು ಕೂಡ ಬರುವುದಣ್ಣಾ (ಸೂಳ್ವಿಡಿಯಲಪ್ಪುದು ಕಾಣಾ ಮಹಾಜಿರಂಗದೊಳ್- ಮೂಲ ಪಂಪಭಾರತ) ಎಂದು ಹೇಳುತ್ತಾರೆ. ಮಹಾಕವಿ ಪಂಪನ ಪ್ರತಿಭಾ ವೃಕ್ಷದಲ್ಲಿ ಎಚ್ಚೆಸ್ವಿ ಪ್ರತಿಭಾ ಪಲ್ಲವವನ್ನು ಈ ಪುಟ್ಟ ಕೃತಿಯಲ್ಲಿ ನಾವು ಗುರುತಿಸಬಹುದು. ಇಡೀ ಪಂಪ ಭಾರತವನ್ನು ಈ ರೀತಿಯಲ್ಲಿ ಮರು ನಿರ್ಮಿಸಿದರೆ ಅದೆಷ್ಟು ಸೊಗಸು, ಅದೆಷ್ಟು ಉಪಕಾರ!
ಪ್ರ: ಅಭಿನವ, ಬೆಂಗಳೂರು,
ಪುಟಗಳು 60, ಬೆಲೆ ರು. 40

ಯೇಸುವಿನ ತಾಯಿ ಮೇರಿ
ಜಾನ್‌ನ ಸುವಾರ್ತೆಯೂ ಸೇರಿದಂತೆ ನಾಲ್ಕೂ ಸುವಾರ್ತೆಗಳಲ್ಲಿ ಬರುವ ಯೇಸುವಿನ ಜೀವನ ಚಿತ್ರಣದಲ್ಲಿ ಅವನ ತಾಯಿ ಮೇರಿಯ ಪಾತ್ರ ಮಹತ್ವದ್ದಾಗಿದೆ.
'ನಿನಗೆ ಹುಟ್ಟುವ ಮಗ ಲೋಕಪೂಜ್ಯನಾಗುತ್ತಾನೆ, ಮನುಕುಲೋದ್ಧಾರಕ ಆಗುವಂತಹ ಒಬ್ಬ ಪುರುಷೋತ್ತಮನ ತಾಯಿ ನೀನಾಗುತ್ತೀಯೆ' ಎಂದು ಯಾರಾದರೂ ಹಿರಿಯರು ಆಶೀರ್ವದಿಸಿದರೆ ಯಾವ ಹೆಣ್ಣು ಮಗಳಿಗೆ ತಾನೆ ಖುಷಿಯಾಗುವುದಿಲ್ಲ? ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ನಜ್ಹರೇತ್ ಗ್ರಾಮದ ಮೇರಿಗೂ ಹೀಗೇ ಅನ್ನಿಸಿತ್ತು. ಆದರೆ, ಹಾಗೆ ದಿಢೀರನೆ ಕಣ್ಣು ಕೋರೈಸುವ ಬೆಳಕಾಗಿ ಬಂದು, ಇಂತಹ ಸಂತಸದ ಅಶರೀರವಾಣಿಯನ್ನು ಮೊಳಗಿಸಿ ಕಣ್ಮರೆಯಾದ ದೇವದೂತ ಗೇಬ್ರಿಯಲ್ ಇನ್ನೊಂದು ಕಂಡರಿಯದ ಕೇಳರಿಯದ ವಿಚಾರವನ್ನೂ ಹೇಳಿ ಹೋಗಿದ್ದ. 'ಕನ್ನಿಕೆಯಾಗಿದ್ದರೂ, ನೀನು ತಾಯಿಯಾಗುವೆ!' ಎಂದು ಶಿಶುವಿಗೆ ಒಂದು ಹೆಸರನ್ನೂ ಸೂಚಿಸಿ ಹೋಗಿದ್ದ 'ನಮ್ಮೊಳಗಿನ ದೇವರು (ಎಮ್ಮಾನ್ಯುಯಲ್)' ಅಂತ. ಅಲ್ಲಿಂದ ಶುರುವಾಯಿತು, ಈ ಸಾಮಾನ್ಯಳ ಅಸಾಮಾನ್ಯ ಜೀವನ.
ಒಂದಂತೂ ನಿಜ. ಹುಟ್ಟಿದಾಗಲೂ ಸಾಯುವಾಗಲೂ ಯೇಸುವಿನ ಜತೆಗೆ ಇದ್ದ ಏಕೈಕ ವ್ಯಕ್ತಿಯೆಂದರೆ ಅವನ ತಾಯಿ ಮೇರಿ ಜೋಸೆಫ್ ಅವಳ ಗಂಡ ಜೋಸೆಫ್, ನಜರೇತ್‌ನ ಒಬ್ಬ ಬಡಗಿ, ಅವರ ಮಕ್ಕಳು ಜೀಸಸ್ ಅಥವಾ ಯೇಸು. ಜೇಮ್ಸ್, ಜೋಸೆಫ್, ಜುಡಾಸ್, ಸೈಮನ್ ಮತ್ತು ಹೆಣ್ಣುಮಕ್ಕಳು. ಇನ್ನು ಅವಳ ಹತ್ತಿರದ ನೆಂಟರೆಂದರೆ ಜ್ಹಕರಿಯಾ ಮತ್ತು ಎಲಿಜಬೆತ್.
ಹಿಂದೆ ಪ್ರವಾದಿಗಳು ನುಡಿದ ಭವಿಷ್ಯವಾಣಿಯನ್ನು ನಿಜವಾಗಿಸುವ ಹೊಣೆಯನ್ನು ಹತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು, ಕುರಿಯ ಕೊಟ್ಟಿಗೆಯಲ್ಲಿ ಆ ಲೋಕೋದ್ಧಾರಕನನ್ನು ಹೆತ್ತಳು, ಇಲ್ಲಿ ತನ್ನ ಒಂದು ಮುಗ್ಧ ನಗೆಯಿಂದಲೇ ಅವಳ ಬಾಳಿನಲ್ಲಿನ ಕಷ್ಟಕಾರ್ಪಣ್ಯಗಳ ನೋವನ್ನು ಮರೆಸುವ ಚಂದ್ರ ಉದಯಿಸಿದಂತೆ, ಅಲ್ಲಿ ತೇಜಃಪುಂಜ ನಕ್ಷತ್ರವಿಶೇಷ ಮೂಡಿ ನಲಿದಾಡಿತು. ಅದರ ಜಾಡು ಹಿಡಿದು, ಹತ್ತಿರದ ಹುಲ್ಲುಗಾವಲಿನಿಂದ ಕುರಿಗಾಹಿಗಳೂ, ದೂರದೂರದಿಂದ ದೈವಜ್ಞರೂ ಬಂದು ಹರಸಿ ಹೋದದ್ದಾಯಿತು. ಇಲ್ಲಿಯವರೆಗೆ ಮ್ಯಾಥ್ಯೂ ನಮ್ಮನ್ನು ನಡೆಸಿಕೊಂಡು ಹೋಗುತ್ತಾನೆ. ಆಮೇಲೆ?
ಪುಸ್ತಕ: ಬೈಬಲ್‌ನಲ್ಲಿ ಜಾನ್‌ನ ಸುವಾರ್ತೆ ಒಂದು ಅಧ್ಯಯನ
ಲೇಖಕ: ಶಿಕಾರಿಪುರ ಹರಿಹರೇಶ್ವರ
ಭಾರತೀ ಪ್ರಕಾಶನ, ಮೈಸೂರು. ಬೆಲೆ: ರು. 250

ಮಧ್ವಭಾರತ
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು ಶ್ರೀಮಧ್ವಾಚಾರ್ಯರ ಮಹಾಭಾರತತಾತ್ಪರ್ಯ ನಿರ್ಣಯದಲ್ಲಿನ ಭಾರತ ಕಥಾಸಂಗ್ರಹವನ್ನು 'ಮಧ್ವಭಾರತ' ಹೆಸರಿನಲ್ಲಿ ಕೊಟ್ಟಿದ್ದಾರೆ. ಭೀಮಸೇನನ ಅವತಾರವೇ ಮಧ್ವಾಚಾರ್ಯರು ಎಂಬ ನಂಬಿಕೆ ಮಧ್ವಮತದವರಲ್ಲಿದೆ. ಈ ಭಾರತದಲ್ಲಿ ಭೀಮಸೇನನಿಗೇ ಪ್ರಾಮುಖ್ಯತೆ. ಕುಮಾರವ್ಯಾಸನ ಹಾಗೆಯೇ ಮಧ್ವರಿಗೂ ಮಹಾಭಾರತವು ಕೃಷ್ಣ ಕತೆಯೇ. 'ಮಹಾ'ಭಾರತವನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪ್ರಭಂಜನಾಚಾರ್ಯರು ಸಂಗ್ರಹಿಸಿ ಕೊಟ್ಟಿದ್ದಾರೆ.
ಪ್ರ: ಐತರೇಯ ಪ್ರಕಾಶನ, ವ್ಯಾಸನಕೆರೆ, ಬೆಂಗಳೂರು, ಪುಟಗಳು 416, ಬೆಲೆ ರು. 150

ರಂಗ ಮಂಥನ
80- 90ರ ದಶಕದಲ್ಲಿ ನಾರಾಯಣ ರಾಯಚೂರು ಬರೆದಿರುವ ರಂಗಪ್ರಯೋಗಗಳ ಪತ್ರಿಕಾ ವಿಮರ್ಶೆಯ ಸಂಕಲನ 'ರಂಗ ಮಂಥನ'. ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ರಂಗ ಪ್ರಯೋಗಗಳ ವಿಮರ್ಶೆ ಇದರಲ್ಲಿದೆ. ವಿಮರ್ಶೆ ಎಂದರೆ ಒಂದು ರೀತಿಯ ಸಮೀಕ್ಷೆಯೇ ಅದು. ರಂಗ ಪ್ರಯೋಗಗಳನ್ನು ಹೇಗೆ ವಿಮರ್ಶೆ ಮಾಡಬೇಕು, ಪ್ರಯೋಗವೊಂದರ ಯಶಸ್ಸನ್ನು ಜನರ ಎದುರು ಹೇಗೆ ಇಡಬೇಕು, ಸೋಲನ್ನು ಹೇಗೆ ಹೇಳಬೇಕು ಎನ್ನುವುದಕ್ಕೆ ಈ ಕೃತಿ ಉತ್ತಮ ಉದಾಹರಣೆ.
ಪ್ರ: ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು, ಪುಟಗಳು 234, ಬೆಲೆ ರು. 220

ಕುಮಾರ ಪರ್ವತದ ಸುತ್ತಮುತ್ತ
ಬಿಸಲೆ- ಸುಬ್ರಮಣ್ಯ- ಮಡಿಕೇರಿ ಸೀಮೆಯ ಬೆಟ್ಟಗಳ ತಲೆಯನ್ನೆಲ್ಲ ಮೆಟ್ಟಿ ಬಂದಿರುವ ಜಿ.ಎನ್. ಅಶೋಕವರ್ಧನ ಅವರು ಶಿಸ್ತಿನ ಚಾರಣಿಗ. ಟ್ರೆಕಿಂಗ್ ಪ್ರಿಯರಿಗೆ ಆಪ್ತ ಮಿತ್ರ. ತಮ್ಮ 'ಕುಮಾರ ಪರ್ವತದ ಸುತ್ತಮುತ್ತ' ಕೃತಿಯಲ್ಲಿ ಚಾರಣದ ವಿವರಗಳೊಂದಿಗೆ ವನ ಮತ್ತು ವನ್ಯಜೀವಿಗಳ ಬಗೆಗಿನ ತಮ್ಮ ಕಾಳಜಿಯನ್ನೂ ಅವರು ದಾಖಲಿಸಿದ್ದಾರೆ. ಕನ್ನಡದಲ್ಲಿ ಬಂದಿರುವ ಚಾರಣದ ಕುರಿತಾದ ಕೃತಿಗಳಲ್ಲಿ ಇದು ವಿಶಿಷ್ಟವಾದದ್ದು. ಹತ್ತುಹಲವು ಉತ್ತಮ ಛಾಯಾಚಿತ್ರಗಳೂ ಕೃತಿಯ ಮೌಲ್ಯ ಹೆಚ್ಚಿಸಿವೆ.
ಪ್ರ: ಅಭಿನವ, ಬೆಂಗಳೂರು, ಪುಟಗಳು 192, ಬೆಲೆ ರು. 100

ರಾಜಾರಾಂ ಅಭಿನಂದನ
ನಾಲ್ಕು ದಶಕಗಳಿಂದ ನಾಟಕರಂಗದಲ್ಲಿ ತೊಡಗಿಸಿಕೊಂಡಿರುವ ಡಾ.ಬಿ.ವಿ. ರಾಜಾರಾಂ ಅವರಿಗೆ 60 ತುಂಬಿದ ಸಂದರ್ಭದಲ್ಲಿ ಅವರ ಮಿತ್ರರು, ಹಿತೈಷಿಗಳೆಲ್ಲ ಸೇರಿ ಸಿದ್ಧಪಡಿಸಿರುವ ಅಭಿನಂದನ ಗ್ರಂಥ 'ಕಲಾ ಅಜರಾಮರ'. ಇದನ್ನು ಸಂಪಾದಿಸಿದ್ದು ಶಾ.ಮಂ. ಕೃಷ್ಣರಾಯರು. ಸಂಘಟಕರಾಗಿ, ನಿರ್ದೇಶಕರಾಗಿ, ನಟರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ದುಡಿದ ರಾಜಾರಾಂ ಅವರ ಬಹುಮುಖ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ.
ಪ್ರ: ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು, ಪುಟಗಳು 396, ಬೆಲೆ ರು. 250



ಡಾ. ವಾಸುದೇವ ಶೆಟ್ಟಿ
vasudevs@sify.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement