ಕಾಣೆ ಆದವರಿಗೂ ಇದೊಂದು ಠಾಣೆ! ಮೊದಲೆಲ್ಲ ಮಕ್ಕಳು ಕಾಣಲಿಲ್ಲವೆಂದರೆ ಪಕ್ಕದ ಮನೆಯಲ್ಲೋ, ಆಟದ ಫೀಲ್ಡಿನಲ್ಲೋ ಹುಡುಕುತಿದ್ದರು. ಈಗ ಕಾಲ ಬದಲು. 'ಫೇಸ್ಬುಕ್'ಗೆ ಲಾಗಿನ್ ಆದರೆ ಮಕ್ಕಳು ಅಲ್ಲಿರುತ್ತಾರೆ. ಅದೇನು ಜೈಲಲ್ಲ, ಮಾಯಾ ರೈಲು. ಈ ಹತ್ತು ವರ್ಷದಲ್ಲಿ ಫೇಸ್ಬುಕ್ ಮಾವನಮನೆಗಿಂತ ಹೆಚ್ಚು ಆಪ್ತ.
ಮಾರ್ಕ್ ಜುಕನ್ಬರ್ಗ್ ಈಗ ಜಾಗತಿಕ ಹೀರೋ. ಫೇಸ್ಬುಕ್ಗೆ ಜನ್ಮ ಕೊಟ್ಟವನೇ ಅವನು. ಹಳ್ಳಿಯ ಯಾವುದೋ ಮೂಲೆಯಲ್ಲಿ ನೆಟ್ಟಿನ ಮುಂದೆ ಕೂತ ನಾಗೇಶನಿಗೆ ಅದು ಗೊತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಹೊತ್ತಲ್ಲಿ ಆತ ಬಹಳ ನೆನಪಾಗುತ್ತಾನೆ. ಅವನ ಕೂಸಿಗೆ ಈಗ ಹತ್ತು ವರುಷ. ಅದಕ್ಕೆ ಮಾತು ಬಂದಿದೆ. ಅದು ಗಟ್ಟಿ ಕಾಲೂರಿದೆ. ಕೋಟಿ ಕೋಟಿ ಹಿಂಬಾಲಕರಿದ್ದಾರೆ. ಅದು ಒಮ್ಮೆ ಚೀರಿದರೆ ಊರಿನಾಚೆಯ ಜನರೂ ಅಯ್ಯೋ ಎನ್ನುತ್ತಾ ಕಮೆಂಟು ಹಾಕುತ್ತಾರೆ. ಅವನ ಕೂಸೀಗ ಎಲ್ಲರ ಕೂಸು. ಜಗದ ನಗು.
ಫೇಸ್ಬುಕ್ ಈಗ ವಿಸ್ಮಯ ಬಡಾವಣೆ. ಇಲ್ಲೊಂದು ಅಂಗಡಿಯಿಲ್ಲ. ಕುಳಿತು ಮಾತನಾಡಲು ಒಂದೊಳ್ಳೆ ಕಟ್ಟೆಯಿಲ್ಲ. ಮರದ ನೆರಳಿಲ್ಲ. ಚಹ- ಬಿಸ್ಕತ್ತು ಸಿಗುವುದಿಲ್ಲ. ವಾಹನದ ಹಾರನ್ನಿನ ಕಿರುಚಾಟವಿಲ್ಲ. ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಕೂತವನಿಗೆ ಬ್ರಹ್ಮಾಂಡವೇ ಕಂಡಷ್ಟು ಹರ್ಷ ಇಲ್ಲಿ ದಕ್ಕುತ್ತದೆ. ಖುಷಿಯಾಗಿದ್ದರೆ 'ಐ ಫೀಲ್ ಹ್ಯಾಪಿ' ಎಂದು ಪದ ಜೋಡಿಸುತ್ತಾನೆ. 'ಲೈಕ್' ಒತ್ತುವ ಮೂಲಕ ಅಲ್ಲಿ ನಾನಾ ಗೆಳೆಯರು ಅವನ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಕೈಯ್ಯಾಡಿಸದಿದ್ದರೆ, ಅಕ್ಷರ ಜೋಡಿಸದಿದ್ದರೆ ಇಲ್ಲಿ ಭಾವನೆ ಅರಿಯಲು- ವಿನಿಮಯ ಮಾಡಲು ಅಸಾಧ್ಯ.
ಕರೆಕ್ಟಾಗಿ ದಶಕದ ಹಿಂದಿದು ದೇವಲೋಕ. ನಾವೆಲ್ಲ ದೇವರೆಂದುಕೊಳ್ಳುವ ಸೆಲೆಬ್ರಿಟಿಗಳಷ್ಟೇ ಅಲ್ಲಿ ಕಾಣಿಸುತ್ತಿದ್ದರು. ಈಗ ಫೇಸ್ಬುಕ್ ಜಾತ್ರೆ. ಫೇಸ್ಬುಕ್ ಪ್ರಭಾವದಿಂದ ಪ್ರತಿಯೊಬ್ಬನೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.
ಸಾಮಾಜಿಕ ತಾಣ ನಮ್ಮ ಸಾಂಸ್ಕೃತಿಕ ಭಾರತದಲ್ಲಿ 'ಹಳ್ಳಿ ಕಟ್ಟೆ'ಯ ಸ್ವರೂಪದಲ್ಲಿತ್ತು. ಅದಕ್ಕೆ 'ಸೋಮಾರಿ ಕಟ್ಟೆ' ಅಂತಲೂ ಹಣೆಪಟ್ಟಿ ಇತ್ತು. ಅದೇ ಸಾಮಾಜಿಕ ತಾಣಕ್ಕೆ ಆಧುನಿಕ ಬಣ್ಣ ಹಚ್ಚಿದ್ದು ಪಾಶ್ಚಾತ್ಯ ದೇಶಗಳು. ಕಾಫಿ ಅಂಗಡಿ ಸಂಸ್ಕೃತಿಯ ಮುಂದುವರಿದ ರೂಪವಾಗಿ ಈ ಫೇಸ್ಬುಕ್ಕನ್ನು ಜನಪ್ರಿಯಗೊಳಿಸಲಾಯಿತು. ಭಾವನೆಗಳ ಹಂಚಿಕೆಗಷ್ಟೇ ಇಂದು ಮುಖಪುಸ್ತಕ ಬಳಕೆಯಾಗುತ್ತಿಲ್ಲ. ಇಲ್ಲೂ ವ್ಯವಸ್ಥಿತ ಗುಂಪುಗಳಿವೆ. ಕೃಷಿ, ವಾಣಿಜ್ಯ, ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಗಳೂ ಇಂದು ಮುಖಹೊತ್ತಗೆಯ ಪಾಲುದಾರರು.
ಫೇಸ್ಬುಕ್ಗಳಲ್ಲಿ ಹುಡುಗಿಯರು ಮುಖ ತೂರಲು ಸ್ವಲ್ಪ ಅಂಜುತ್ತಾರೆ. ಫೋಟೋಗಳನ್ನು ದುರ್ಬಳಕೆ ಮಾಡಿ ಪೋರ್ನ್ ತಾರೆಯರ ದೇಹದೊಂದಿಗೆ ಜೋಡಿಸಿ ಹರಿಯಬಿಡುವ ಜಾಲದ ಬಗ್ಗೆ ಅವರಿಗೆ ಆತಂಕ. ಬಹುಶಃ ಇಂಥ ಬೆಳವಣಿಗೆ ಹುಡುಗರ ನಿಯತ್ತನ್ನು ಪ್ರಶ್ನಿಸುತ್ತದೆ.
ಇಲ್ಲೂ ಎರಡನೇ ಸ್ಥಾನ
ಫೇಸ್ಬುಕ್ ಬಳಕೆ ವಿಚಾರದಲ್ಲೂ ಭಾರತ, ಅಮೆರಿಕಕ್ಕಿಂತ ಸೂಪರ್ ಫಾಸ್ಟ್. ನಮಗಿಲ್ಲಿ ಎರಡನೇ ಸ್ಥಾನ. 300 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಚೀನಾ ಇಲ್ಲಿ ಮುಂದಿದೆ. ಭಾರತದಲ್ಲಿ 243 ಮಿಲಿಯನ್ ಫೇಸ್ಬುಕ್ ಬಳಕೆದಾರರಿದ್ದಾರೆ. ಅಂದರೆ ಶೇ.16!
ಪ್ರಚಾರ ಪ್ರಚಾರ
ಇಂದು ರಾಜಕೀಯ ಪಕ್ಷಗಳು ಬ್ಯಾನರ್, ಕರಪತ್ರಗಳನ್ನು ಹೆಚ್ಚು ಮುದ್ರಿಸುತ್ತಿಲ್ಲ. ಅದಕ್ಕೂ ಫೇಸ್ಬುಕ್ ಕಾರಣ. ರಾಜಕೀಯ ಲಾಭಕ್ಕಾಗಿ ಫೇಸ್ಬುಕ್ ಬಳಕೆ ಬೇಡಿಕೆ ಪಡೆದಿದೆ. ಪ್ರತೀ ರಾಜಕೀಯ ಪಕ್ಷಗಳಿಗೂ ಪೇಜ್ಗಳಿವೆ. ಲೈಕರ್ಸ್ ಸಂಖ್ಯೆ ಆಧಾರದಲ್ಲಿ ಪ್ರತಿಷ್ಠೆಯನ್ನೂ ಪಣಕ್ಕಿಡುತ್ತವೆ. ಫೇಸ್ಬುಕ್ನಲ್ಲಿ ಜೋತಿಷ್ಯ ಪೇಜ್ಗಳೂ ಲಭ್ಯವಿದ್ದು, ಲೈಕ್ ಮಾಡಿದರೆ ಆಯಾ ದಿನದ ಭವಿಷ್ಯ ತಿಳಿಯತ್ತದೆ. ಆದರೆ, ಎಷ್ಟು ನಂಬಿಕೆಗೆ ಅರ್ಹ ಎಂಬುದು ಮಾತ್ರ ನಿಗೂಢ!
ಸ್ನೇಹ ಸೇತುವೆ
ಇದು ಸ್ನೇಹಲೋಕ. ತುಸು ಮುಂದುವರಿದರೆ ಪ್ರೇಮಲೋಕ. ಚಾಟಿಂಗ್ ಮಾಡಲು, ಇಷ್ಟದ ಫೋಟೋಗಳನ್ನು ಶೇರ್ ಮಾಡಲು, ಸ್ನೇಹಿತರೊಂದಿಗಿರುವ ಫೋಟೋ ಅಪ್ಲೋಡ್ ಮಾಡಿ ಅದರ ಕುರಿತಾಗಿ ಫನ್ನಿ ಕಮೆಂಟ್ ಮಾಡುವುದು- ಹೀಗೆ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲು ಫೇಸ್ಬುಕ್ ನೆರವಾಗಿದೆ.
ಫೋಟೋ ಕ್ರೇಜ್
ಅಂದೆಲ್ಲ ಫೋಟೋ ತೆಗೆಸಿಕೊಳ್ಳುತ್ತಿದ್ದುದು ಬಸ್ಪಾಸ್ ಮಾಡಿಸಲು, ಶಾಲಾ ಕಾಲೇಜುಗಳಿಗೆ ಅರ್ಜಿ ಹಾಕಲು ಅಷ್ಟೇ. ಈಗ ಹೆಚ್ಚಿನವರು ಫೋಟೋ ತೆಗೆಸಿಕೊಳ್ಳುವುದು ಫೇಸ್ಬುಕ್ಗೆ ಅಪ್ಲೋಡ್ ಮಾಡಲಿಕ್ಕಾಗಿ. ಒಂದು ಹಂತದಲ್ಲಿ ಫೇಸ್ಬುಕ್ ಫೋಟೋ ಲೈಬ್ರೆರಿ ಎನ್ನಬಹುದು.
ಇಲ್ಲೂ ಕನ್ನಡತನ
ಅನೇಕ ಫೇಸ್ಬುಕ್ ಸಾಹಿತಿಗಳೂ ಹುಟ್ಟಿಕೊಂಡಿದ್ದಾರೆ. ದಿನಕ್ಕೊಂದು ಚುಟುಕು, ಕುಟುಕು, ಒನ್ಲೈನ್ಸ್ ಇತ್ಯಾದಿಗಳು ದಾಂಗುಡಿ ಇಡುತ್ತಿವೆ. ಇದು ಕನ್ನಡತನ ಹರಡಲೂ ನೆರವಾಗಿದೆ. ಕನ್ನಡ ಭಾಷಾ ಉಳಿವಿಗೆ ಟೊಂಕ ಕಟ್ಟಿ ನಿಂತ ಅನೇಕ ಗುಂಪುಗಳು, ಪೇಜ್ಗಳೂ ಇಲ್ಲಿವೆ. ಆದರೆ, ಇಲ್ಲ್ಯಾರೂ ಬ್ಯಾನರ್ ಹಿಡಿದು ನಿಂತಿಲ್ಲ... 'ಫೇಸ್ಬುಕ್ ಕನ್ನಡಿಗರ ವೇದಿಕೆ' ಅಂತ!
ಇಷ್ಟೆಲ್ಲ ಫೇಸ್ಬುಕ್ ಮೇನಿಯಾ ನಡುವೆ ಮೊನ್ನೆಯೊಂದು ಸರ್ವೆ ಕೂಗೆಬ್ಬಿಸಿತು. ಈ ಫೇಸ್ಬುಕ್ಕಿಗೂ ಆರ್ಕುಟ್ಟಿನ ಸ್ಥಿತಿಯೇ ಬರುತ್ತೆ, ಇನ್ನೈದು ವರ್ಷದಲ್ಲಿ ಸತ್ತೇ ಹೋಗುತ್ತೆ. 'ಫೇಸ್ಬುಕ್ಕೂ ಒಂಥರ ಪ್ಲೇಗು. ಅಬ್ಬರಿಸಿದ ಮೇಲೆ ಸಾಯಲೇಬೇಕು' ಎಂದು ಅಲ್ಲ್ಯಾರೋ ತಂತ್ರಜ್ಞಾನಿ ಭವಿಷ್ಯ ನುಡಿದ. ಅಥವಾ ಶಾಪ ಹಾಕಿದನೋ!
- ಮಂಜುನಾಥ ಎಲ್.ಕೆ.
mhk963@gmail.com