ನನ್ನೊಳಗೆ
ಕತ್ತಲ ಘೋಷಿಸಿ ಹೋದ
ಆ ಹುಡುಗಿಯ
ನಿರಂತರ ಹುಡುಕಾಟದಲ್ಲಿದ್ದೇನೆ,
ಬೆಟ್ಟ- ಗುಡ್ಡ, ಗವಿ ಗಹ್ವರಗಳ
ಹತ್ತಿ ಇಳಿದಿದ್ದಾಯ್ತು
ಕಾಲುಗಳು ಸೋತಲ್ಲಿ
ಈ ಜಗತ್ತು ಜೀವಂತ ಮಸಣವಾಗಿಬಿಡಲಿ
ಮರಳು ದಿಬ್ಬಗಳ ನಡುವೆ
ದಿಕ್ಕುಗಳ ಎಣಿಸುತ್ತಾ ಎಣಿಸುತ್ತಾ
ಹೂತು ಹೋಗಿದ್ದೇನೆ
ಅಂಗೈಗೆ ಅಂಟಿದ ರಕ್ತ
ಒಂದು ಕ್ಷಣದ ಸಾಕ್ಷಿ,
ಕಪ್ಪು ಮುಳ್ಳುಗಳ ಮೈಯಲ್ಲಿ ನೀಲಿ ಹೂವು
ಅರಳಿದ್ದು ಹೇಗೆ,
ಯಾವ ಹಕ್ಕಿಯೂ ನಿದ್ದೆ
ಹೋಗಲಿಲ್ಲ,
ರೆಕ್ಕೆ ಬಡಿದು ಬಡಿದು
ಅಲ್ಲೊಂದು ದಳ, ಇಲ್ಲೊಂದು ದಳ
ಆ ಹುಡುಗಿಯ ಗೆಜ್ಜೆಸದ್ದು
ಅಚ್ಚಾಗಿರಬಹುದು
ಕಸದಬುಟ್ಟಿಯೊಳಗೆ ಮುದುಡಿ
ಬಿಸಾಡಿದ ಆಕಾಶದ
ನೆಪಗಳಲ್ಲೇ
ಬಂಡೆಗೆ ಆನಿಕೊಂಡು ಕುಂತುಬಿಟ್ಟೆ,
ಯಾವ ಕಸೂತಿಯೂ ಇಲ್ಲದ ಹಕ್ಕಿಗಳು
ರಾತ್ರಿಯ ರೋಮಾಂಚನ...
ಕಣ್ಗಪ್ಪಿನ ಹುಡುಗಿ
ಸ್ನಾನದ ಮನೆಯ ನಿಲುವುಗನ್ನಡಿಗೆ
ಅಂಟಿಸಿದ ಟಿಕ್ಕುಲಿ
ನನ್ನೊಳಗಿನ ತತ್ತಿಯ ಕಾವು,
ಈಗೆಲ್ಲಿ ನೀನು
ಒಡೆದ ಕನ್ನಡಿಯೊಳಗೆ
ಸಾವಿರ ಟಿಕ್ಕುಲಿ.
ಕಣ್ಣುಗಳಲ್ಲಿ ನಿರಾಶೆಯ ಛಾಯೆ
ಬೆಳೆದ ಬಿದಿರಲ್ಲಿ
ಸಣ್ಣಗಿನ ಗಾಳಿ ತೂರಿ
ಆ ಹುಡುಗಿಯ ದನಿ
ಯಾವ
ಹುಡುಕಾಟಕ್ಕೂ
ಅಲೆದಾಟಕ್ಕೂ ದಕ್ಕದ ಆ ಹುಡುಗಿಯಲ್ಲಿ
ಸಾಲ ಕೊಡುವಷ್ಟು ಬೇಸರವಿದೆ
- ಪ್ರವರ ಕೊಟ್ಟೂರು
pravarakumvee@gmail.com