ಅಲ್ಲವಳು ಕಣ್ಣೀರಲ್ಲೇ ಕೈತೊಳೆಯುತ್ತಾಳೆ. ಕಿರ್ಗಿಸ್ತಾನದ ಆ ಹುಡುಗಿ ಗಂಟಲು ಹರಿದು ಕೂಗಿದರೆ ಪಕ್ಕದ ಮನೆಯ ಕಿವಿ ಇದ್ದವನಿಗೂ ಕೇಳಿಸದು. ದೊಡ್ಡವರಾಗುತ್ತಿದ್ದಂತೆ ಕನಸಿನ ರಾಜಕುಮಾರ, ಮದುವೆ, ಮಕ್ಕಳು, ಪುಟ್ಟ ಸಂಸಾರ... ಹೀಗೆ ಕನಸನ್ನು ಪೋಣಿಸಿಕೊಳ್ಳುವ ಸುಖದಿಂದ ಇಲ್ಲಿನವರು ವಂಚಿತರು. ಅಂಥ ಸಣ್ಣ ಕನಸಿಗೆ ಕೈಹಾಕಲೂ ಹೆದರುತ್ತಾರಿವರು. ಅದಕ್ಕೆ ಕಾರಣ, 'ಅಲ ಕಚ್ಚು' (ಕದ್ದೋಡು). ಹೇಳಹೆಸರಿಲ್ಲದೆ ಹರೆಯದ ಹೆಣ್ಣುಮಕ್ಕಳು ಕಿಡ್ನ್ಯಾಪ್ ಆಗುತ್ತಾರಿಲ್ಲಿ.
ಅದು ಕದ್ದೋಡು...
ಕಿರ್ಗಿಸ್ತಾನದಲ್ಲಿ 'ಕದ್ದೋಡು' ಸಂಸ್ಕೃತಿ ದೊಡ್ಡ ಕಿರಿಕಿರಿ ಸೃಷ್ಟಿಸಿದೆ. ವಯಸ್ಸಿಗೆ ಬಂದ ಯುವತಿಯರನ್ನು ಅಪಹರಿಸಿ ಮದುವೆಯಾಗುತ್ತಾರೆ. ಇಲ್ಲಿ ಶೇ.40ರಷ್ಟು ಹೆಣ್ಣುಮಕ್ಕಳು ಕಿಡ್ನಾಪ್ ಆಗಿಯೇ ವಿವಾಹವಾದವರು. 1994ರಿಂದ ಈ 'ಕದ್ದೋಡು ಸಂಸ್ಕೃತಿ'ಯನ್ನು ಸರ್ಕಾರ ಅಕ್ರಮವೆಂದು ಘೋಷಿಸಿದರೂ, ಕಾನೂನನ್ನು ಪಾಲಿಸುವ ಗಂಡಸರು ಇಲ್ಲಿಲ್ಲ.
ಮದುವೆಯಾಗಬೇಕೆಂಬ ಆಸೆ ಹುಟ್ಟಿದೊಡನೆ ಹುಡುಗ ಕಾರನ್ನೇರಿ 5-6 ಮಂದಿ ಗೆಳೆಯರನ್ನು ಕಟ್ಟಿಕೊಂಡು ಊರು ಸುತ್ತುತ್ತಾನೆ. ಆಗ ಯಾವುದಾದರೂ ಯುವತಿ ಕಣ್ಣಿಗೆ ಬಿದ್ದು, ಆಕೆ ತನಗೆ ಓಕೆ ಎನಿಸಿದರೆ ಸಾಕು. ಹಿಂದೆ ಮುಂದೆ ನೋಡದೆ ಅವಳನ್ನು ಹೊತ್ತುಕೊಂಡು ಹೋಗುತ್ತಾನೆ. ಯುವತಿಯ ನೋವು, ರೋದನಕ್ಕೆ ಅವರು ಕಿವುಡಾಗಿರುತ್ತಾರೆ. ಅಲ್ಲಿಂದ ನೇರವಾಗಿ ಆಕೆಯನ್ನು ಹೊತ್ತು ತರುವುದು ಯುವಕನ ಮನೆಗೆ.
ಒತ್ತಡ ತಂತ್ರ
ಮಗ ಹುಡುಗಿಯನ್ನು ಅಪಹರಿಸಿ ತಂದಿದ್ದಾನೆ. ಇದು ಅಪರಾಧ ಎಂಬ ಭಾವನೆ ಮನೆಯವರಿಗೆ ಕಿಂಚಿತ್ತೂ ಇರುವುದಿಲ್ಲ. ಮಗ ಯುವತಿಯನ್ನು ಕರೆತಂದೊಡನೆ ಮದುವೆಯ ಸಿದ್ಧತೆ ಶುರು. ಯುವಕನಿಗೆ ಎಷ್ಟೇ ವಯಸ್ಸಾಗಿರಲಿ, ಯುವತಿಗೆ ಆತ ಮೆಚ್ಚುಗೆಯಾಗಲೀ, ಬಿಡಲಿ, 'ನೀನು ಈ ಮದುವೆಗೆ ಒಪ್ಪಲೇಬೇಕು. ಒಂದು ಬಾರಿ ಅಪಹರಣಕ್ಕೊಳಗಾದ ಮೇಲೆ ಮತ್ತೆ ಮನೆಗೆ ವಾಪಸಾದರೂ ನಿನ್ನನ್ನು ಯಾರೂ ಕನ್ಯೆ ಎಂದು ಪರಿಗಣಿಸುವುದಿಲ್ಲ, ಬೇರೆ ಮದುವೆಯಾಗುವುದೂ ಸಾಧ್ಯವಿಲ್ಲ' ಎಂಬಿತ್ಯಾದಿ ಒತ್ತಡತಂತ್ರಗಳನ್ನು ಪ್ರಯೋಗಿಸಲಾಗುತ್ತದೆ. ಯುವತಿ ಪಟ್ಟುಹಿಡಿದು ಕುಳಿತರೆ ಆಕೆಯ ಮೇಲೆ ಅತ್ಯಾಚಾರ ಎಸಲಾಗುತ್ತದೆ. ಯುವತಿ ಮದುವೆಗೆ ಒಪ್ಪಲೇಬೇಕಾದಂಥ ಪರಿಸ್ಥಿತಿ. ಅಪಹರಣಕ್ಕೊಳಗಾದ ಶೇ.84 ಮಂದಿ ಅಪಹರಿಸಿದ ಪುರುಷನನ್ನೇ ಮದುವೆಯಾಗಿರುವುದು ಇದಕ್ಕೆ ಸಾಕ್ಷಿ.
ಬಿಳಿ ಸ್ಕಾರ್ಫ್ ಸಂಕೇತ
ಯುವತಿ ಮದುವೆಗೆ ಒಪ್ಪಿದ್ದಾಳೆ ಎಂಬುದಕ್ಕೆ ಬಿಳಿ ಸ್ಕಾರ್ಫ್ ಸಂಕೇತ. ಆಕೆ ಮದುವೆಗೆ ಒಪ್ಪಿದೊಡನೆ ತಲೆಗೆ ಬಿಳಿ ಬಣ್ಣದ ಶಾಲನ್ನು ಹೊದಿಸಲಾಗುತ್ತದೆ. ಆಕೆಯ ಮನೆಯವರು ಬಂದರೂ, ಬಿಳಿ ಸ್ಕಾರ್ಫ್ ನೋಡಿ ಹಿಂತಿರುಗುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಹೆದರಿಸಿ, ಬೆದರಿಸಿ ಯುವತಿಯ ತಲೆಗೆ ಬಿಳಿ ಬಟ್ಟೆ ತೊಡಿಸುತ್ತಾರೆ. ನಂತರ ಒಲ್ಲದ ಗಂಡನಾದರೂ ಆತನ ಜತೆಗೇ ಸಂಸಾರ ನಡೆಸಬೇಕು.
ಪ್ರೀತಿಗಿಲ್ಲ ಬೆಲೆ
ಈ ಕಿರ್ಗಿಸ್ತಾನದಲ್ಲಿ ಪ್ರೀತಿಗೆ ಬೆಲೆಯಿಲ್ಲ. ಹಿಂದೆಲ್ಲ ಪ್ರೀತಿಸಿದ ಯುವಕನು ಯುವತಿಯ ಸಮ್ಮತಿ ಪಡೆದು ಕಿಡ್ನ್ಯಾಪ್ ಮಾಡುತ್ತಿದ್ದ. ಆಕೆಯೂ ಖುಷಿಯಿಂದಲೇ ಮದುವೆಯಾಗುತ್ತಿದ್ದಳು. ಕ್ರಮೇಣ ಪರಿಸ್ಥಿತಿ ಬದಲಾಯಿತು. ಯುವಕರು ಸಿಕ್ಕಸಿಕ್ಕ ಯುವತಿಯರನ್ನು ಅಪಹರಿಸುವುದು, ಮದುವೆಯಾಗುವುದು, ಕಾಮತೃಷೆ ತೀರಿಸಿಕೊಂಡ ಬಳಿಕ ಕಿರುಕುಳ ನೀಡುವುದು ಮುಂದುವರಿಯಿತು.
ಸಾಯಲು ಹೊರಟವರು
ಮದುವೆಗೆ ಮೊದಲೇ ಯಾರಿಗೋ ಮನಸ್ಸು ಕೊಟ್ಟಿರುತ್ತಾರೆ. ಆತನೇ ತನ್ನ ಇನಿಯ ಎಂದು ಕನಸು ಕಂಡಿರುತ್ತಾರೆ. ಆದರೆ, ಆತ ಬಂದು ವಿವಾಹವಾಗೋ ಮೊದಲೇ ಇನ್ನ್ಯಾರೋ ಕಿಡ್ನ್ಯಾಪ್ ಮಾಡಿದರೆ? ಇಂಥ ಎಷ್ಟೋ ಘಟನೆಗಳು ಕಿರ್ಗಿಸ್ತಾನದಲ್ಲಿ ನಡೆಯುತ್ತಿವೆ. ಇಷ್ಟವಿಲ್ಲದ ಮದುವೆಯಿಂದ ಸಂಸಾರ ನಡೆಸಲು ಸಾಧ್ಯವಾಗದೆ, ಸಮಾಜದ ಮುಂದೆ ತಲೆಎತ್ತಲಾಗದೆ ಹಲವು ಯುವತಿಯರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅಲ್ಲಿಗೆ ಅವರ ಕನಸು, ಭವಿಷ್ಯ ಎಲ್ಲವೂ ಮಣ್ಣುಪಾಲು. ಅಂದಹಾಗೆ, ಈ ಕದ್ದೋಡು ಸಂಸ್ಕೃತಿ ಇಥಿಯೋಪಿಯಾ, ರವಾಂಡ, ಕೀನ್ಯಾ, ಕಿರ್ಗಿಸ್ತಾನ, ಕಜಕಿಸ್ತಾನ, ಉಜ್ಬೇಕಿಸ್ತಾನ, ಚೆಚನ್ಯಾ, ಜಾರ್ಜಿಯಾ ಮತ್ತಿತರ ರಾಷ್ಟ್ರಗಳ ಕೆಲವು ಭಾಗಗಳಲ್ಲೂ ಇದೆ.
ಭಾರತದಲ್ಲೂ ನಡೆಯುತ್ತೆ!
ಈಶಾನ್ಯ ಹಾಗೂ ಮಧ್ಯ ಭಾರತದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇಂಥ 'ವಧು ಅಪಹರಣ' ಸಂಸ್ಕೃತಿ ಚಾಲ್ತಿಯಲ್ಲಿದೆ. ಆದರೆ ಇಲ್ಲಿ ಕಿರ್ಗಿಸ್ತಾನದಷ್ಟು ಹಿಂಸಾತ್ಮಕ ಸ್ಥಿತಿ ಇಲ್ಲ. ಇಲ್ಲಿ ಯುವಕ ಯುವತಿಯ ಜತೆ ಓಡಿಹೋಗುತ್ತಾನೆ. ಗ್ರಾಮಸ್ಥರು ಅವರ ಬೆನ್ನಟ್ಟುತ್ತಾರೆ. ಕೆಲವು ಗಂಟೆಗಳವರೆಗೆ ಅವರು ಗ್ರಾಮಸ್ಥರ ಕಣ್ಣಿಗೆ ಬಿದ್ದಿಲ್ಲ ಎಂದಾದರೆ, ಅವರು ಮದುವೆಯಾದರು ಎಂದರ್ಥ. ಈಶಾನ್ಯದಲ್ಲಿ 'ಪೀತ್‌ಚಕ್' ಪದ್ಧತಿಯಿದೆ. ಇದರಲ್ಲಿ ಯುವಕ ಯುವತಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಓಡುತ್ತಾನೆ. ಸಂತಾಲ್ ಜನಾಂಗದಲ್ಲಿ ಯುವತಿ ಇಷ್ಟವಾದರೆ ಆತ ಆಕೆಯ ಮನೆ ಮುಂದೆ ಸಾಲ್ ಮರದ ರೆಂಬೆಯನ್ನಿಟ್ಟು ಹೋಗುತ್ತಾನೆ. ಆ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಯುವತಿಯರಿದ್ದರೆ ಎಲ್ಲರೂ ಮದುವೆಗೆ ಸಿದ್ಧರಾಗಬೇಕು. ಮಾರನೇ ದಿನ ವೃತ್ತರೇಖೆ ಎಳೆದು ಯುವತಿಯರನ್ನು ಪ್ರತ್ಯೇಕವಾಗಿ ನಿಲ್ಲಿಸಲಾಗುತ್ತದೆ. ಯುವಕ ತಾನಿಷ್ಟಪಟ್ಟ ಯುವತಿ ನಿಂತಿರುವ ವೃತ್ತದೊಳಕ್ಕೆ ಹೋಗಬೇಕು. ಹುಡುಗಿಗೂ ಇಷ್ಟವಾದರೆ ಮದುವೆ. ಇಲ್ಲದಿದ್ದರೆ ಆಕೆ ಅಲ್ಲಿಂದ ಓಡಬೇಕು ಅಥವಾ ಶಸ್ತ್ರಾಸ್ತ್ರಗಳೊಂದಿಗೆ ಆತನ ಜತೆ ಹೋರಾಡಬೇಕು.
= ಹಲೀಮತ್ ಸಅದಿಯಾ
halee_diya@yahoo.com