ವೃದ್ಧಾಶ್ರಮ- ಪ್ಲೇಹೋಂ
ತಿಮ್ಮಾ: ಯಾವ ಊರಾಗ ಪ್ಲೇಹೋಂ ಮತ್ತಡ ವೃದ್ಧಾಶ್ರಮಗಳ ದಿನಕ್ಕ ದಿನಾ ಹೆಚ್ಚಾಗತಾವಲಾ, ಆ ಊರಾಗ ಏನೋ ಪ್ರಾಬ್ಲಮ್ ಆಗೇತಿ ಅಂತನಡ ಅರ್ಥ!
ತಮ್ಮಾ: ಹಂಗ್ಯಾಕ್ ಅಂತಿ? ಪ್ಲೇಹೋಂ ನಡೆಸೋದು ವೃದ್ಧಾಶ್ರಮ ಕಟ್ಟೋದು ಕೆಲವು ಆ ಮಂದಿ ಬಿಸಿನೆಸ್‌ಪಾಡ.
ತಿಮ್ಮಾ: ಅದ ನೋಡ! 'ಬಿಸಿನೆಸ್' ಆಗಬಾರದ ಅದು!!
ತಮ್ಮಾ: ಯಾಕ್ ಎಲ್ಲಾ ಅನುಕೂಲನೂ ಇರತಾವಲಾ ಅಲೆ, ವ್ಯವಸ್ಥಾ ಮಾಡಿ ರೊಕ್ಕ ತಗೋತಾರ, ತಪ್ಪೇನು ಅವರದು?
ತಿಮ್ಮಾ: ತಪ್ಪು ಅವರದಲ್ಲ! ನಮ್ಮದು!!
ತಮ್ಮಾ: ಹ್ಯಾಂಗಂತಿ?
ತಿಮ್ಮಾ: ಅಲ್ಲಪಾ ಹಡೆದ ಮಕ್ಕಳನ್ನ ನೋಡಿಕ್ಕೊಳ್ಳಲಿಕ್ಕೆ ಆಗದ ಪ್ಲೇಹೋಂನ್ಯಾಗ ಬೆಳೀಲಿಕ್ಕೆ ಬಿಡತಾರಲಾ ಈ ದುಡಿಯೋ ದಂಪತಿ, ಮುಂದಡ ಅದ ಮಕ್ಕಳ ಯಾಕ ಇವರ ಅನಕೊಂಡ ಹಂಗ ಇರತಾರ ಹೇಳು?
ತಮ್ಮಾ: ಹೌದು ಇವರು ತಮ್ಮನ್ನ ಪ್ಲೇಹೋಂನ್ಯಾಗ ಬಿಟ್ಟಿದ್ದಕ್ಕ, ಮಕ್ಕಳ ಪಾಲಕರನ್ನು ಒಲ್ಡ್‌ಏಜ್ ಹೋಂನ್ಯಾಗ ಬಿಡತಾರಲಾ?
ತಿಮ್ಮಾ: ಇದ್ದರೂ ಇರಬಹುದಪಾ, ಅದಕ್ಕ ಕಂಡಕಂಡಲ್ಲೆ ಪ್ಲೇಹೋಂಗಳ ಆಟ ನಡದೈತಿ, ಮತ್ತ ವೃದ್ಧಾಶ್ರಮಗಳ ಸಂಖ್ಯಾ ವೃದ್ಧಿಸಲಿಕ್ಕತ್ತೈತಿ.
ತಮ್ಮಾ: ಮೊನ್ನೆ ಒಂದು ಕೂಸನ್ನ ಒಬ್ಬ ತಾಯಿ ಪ್ಲೇಹೋಂಗೆ ಬಿಟ್ಟು ಆಫೀಸಿಗೆ ಹೋಗೊ ಸೀನ್ ನೋಡಿದ್ನಪಾ...
ತಿಮ್ಮಾ: ಎಲ್ಲಿ ನೋಡಿದ್ಯೋ..?
ತಮ್ಮಾ: ಅದ ನಮ್ಮ ಮನಿ ಮುಂದಿನ ಕ್ರಾಸ್‌ನ್ಯಾಗ ಆ ತಾಯಿ ತಯಾರಾಗಿ ಆಪೀಸ್‌ಗೆ ಹೋಗೋ ಮುಂದ ಎರಡುವರಿ ವರ್ಷದ ತನ್ನ ಕೂಸಿನ್ನ ಶೃಂಗಾರ ಮಾಡಿ ಬಗಲಾಗ ಕೂಡಿಸಿಕೊಂಡು ಬಂದು, ಪ್ಲೇಹೋಂ ಬಾಗಲದಾಗ ಬಿಟ್ಟಲಪಾ...
ತಿಮ್ಮಾ: ಕೂಸು ಅಳಲಿಲ್ಲ?
ತಮ್ಮಾ: ಇಲ್ಲ, ಅದು ಸರಳ ಒಳಗ ಹೋಗಿ ಅಲ್ಲೆ ಮಗ್ಗಲದಾಗ ಇರೋ ಖಿಡಕಿಗೆ ಬಂದು ನಿಂತಿತು. ಖಿಡಕ್ಯಾಗ ಮಗು ಕಾಣಿಸೋ ತನಕ ಹೊರಗ ನಿಂತಿದ್ದ ತಾಯಿಗೆ ದುಃಖ ಉಮ್ಮಳಿಸಿ ಬಂತಪಾ, ಎರಡು ಕಣ್ಣು ತುಂಬಿ ಬಂದವು, ಆ ತಾಯಿ ವಾಪಸ್ ಬಂದು ತನ್ನ ಮಗಳನ್ನ ತಬ್ಬಿಕೋತಾಳ ಅನಿಸಿತ್ತು, ಆದರ ಅಷ್ಟರಾಗ, ಬಸ್ಸೊಂದು ಪಾಂ ಪಾಂ ಅಂತ ಹಾನರ್ ಹಾಕಿತು, ತಾಯಿ ಬಸ್ ನೋಡಿದಳು, ಡ್ರೈವರ್ ಪರಿಚಯದ ನಗಿ ನಕ್ಕ, ಕಣ್ಣು ಒರೆಸಿಕೊಂಡ ತಾಯಿ ಬಸ್ ಹಿಡಿಲಿಕ್ಕ ಓಡಿದಳು...
ತಿಮ್ಮಾ: ಆ ಕೂಸು ಏನ್ಮಾಡ್ತಿತ್ತು...?
ತಮ್ಮಾ: ದೂರ ದೂರ ಹೋಗ್ತಿದ್ದ ಬಸ್‌ನ ನೋಡ್ತಿತ್ತು... ಮನಸಿನ್ಯಾಗ ಅನಕೂಂಡಿರಬೇಕು...
ಅವ್ವ ಯಾಕೆ ಹೋಗ್ತೀಯ?
ಅವ್ವ ಎಲ್ಲಿಗೆ ಹೋಗ್ತೀಯ??
ಒಂದು ದಿನ ರಜಾ ಹಾಕಿ ಬಾರ..
ಬದುಕಿನ ಮಜಾ ನನಗ ತೋರ..
ತಿಮ್ಮಾ: ಇದು ಭಾರಿ ಎಮೋಷನಲ್ ಆತು ಬಿಡು.. ಆದರ ಒಂದನೇ ಕ್ಲಾಸ್ ಓದೋ ಹುಡುಗ ಅವರ ಅವ್ವ ಅಪ್ಪನ ಕೇಳಿದ ಪ್ರಶ್ನೆ ಮಜಾ ಇತ್ತು ನೋಡು...
ತಮ್ಮಾ: ಏನ್ ಕೇಳೈತಿ ಆ ಪೋರ ದುಡಿಯೋ ತಂದಿ ತಾಯಿನ್ನ?
ತಿಮ್ಮಾ: ಹೆಂಡತಿ ಆರೈಕಿಗೆ ಅಂತ ಸಂಜಯದತ್ತಗೆ ಜೈಲನವರ ರಜಾ ಕೊಟ್ಟಾರಡ ನನಗ ಅರಾಮ ಇಲ್ಲ ಅಂದ್ರ ನಿಮ್ಮ ಆಫೀಸವರು ಒಂದ ದಿನ ರಜಾ ಕೊಡಂಗಿಲ್ಲ?? ಟಿ
= ಯಶವಂತ ಸರದೇಶಪಾಂಡೆ
khullamkhullabevubella@gmail.com