ಸ್ಪೇನ್‌ನ ದಕ್ಷಿಣಕ್ಕೆ ಹೊರಳಿದರೆ ಸಿಗುವುದು ಅಂಡಾಲೂಸಿಯ. ಅಲ್ಲೊಂದು ಸಿಟಿ ಇದೆ. ಅದನ್ನು ನೀವು 'ಸವಿಲ್ಲೆ' ಅಂತಾದರೂ ಕರೆಯಿರಿ, 'ಸವಿಲ್' ಅಂತಾದರೂ ಕರೆಯಿರಿ. ಎರಡೂ ಒಂದೇ. ಇದು ಅಂಡಾಲೂಸಿಯಾದ ರಾಜಧಾನಿ. ಇಲ್ಲಿಂದ ಒಂದುವರೆ ಗಂಟೆ ಪಯಣಿಸಿದರೆ 'ಕಾಡಿಜ್' ಎಂಬಲ್ಲಿ ಮುನಿಸಿಪಾಲಿಟಿಗೆ ಸೇರಿದ 'ಜೆರೆಜ್' ಎಂಬ ಊರು ಸಿಗುತ್ತದೆ. ಒಂದು ಕ್ಷಣ ಅಲ್ಲೇನು ಜಾತ್ರೆಯೋ, ಸಂತೆಯೋ ಎಂಬ ಅನುಮಾನ ಬರುವುದು ನಿಜ. ಅಷ್ಟೊಂದು ಪ್ರವಾಸಿಗರು. ಅವರೆಲ್ಲ ಬಂದಿರುವುದು, ಎರಡು ತಾಸುಗಳ ಕುದುರೆಗಳ ಡ್ಯಾನ್ಸ್ ನೋಡಿ ಎಂಜಾಯ್ ಮಾಡಲು!
ಏನು ಕುದುರೆಗಳೂ ಡ್ಯಾನ್ಸ್ ಮಾಡುತ್ತವಾ? ಜಗತ್ತಿನಲ್ಲಿ ಬೇರೆಲ್ಲೂ ಮಾಡುವುದಿಲ್ಲ. ಸ್ಪೇನ್‌ನಲ್ಲಿ ಮಾತ್ರ! ಇಲ್ಲಿನ ರಾಯಲ್ ಅಂಡಾಲುಸಿಯನ್ ಸ್ಕೂಲ್ ಆಫ್ ಈಕ್ವೀಟಿಯನ್ ಕೆಲೆ ಅವರು 'ಈಕ್ವೀಟಿಯನ್ ಬ್ಯಾಲೆ' ಎಂಬ ಹೆಸರಿನಲ್ಲಿ ಕುಣಿವ ಕುದುರೆಗಳ ಶೋ ನಡೆಸುತ್ತಾರೆ. ಸ್ಪ್ಯಾನಿಷ್ ಸಂಗೀತದ ಹಿನ್ನೆಲೆಯಲ್ಲಿ, 18ನೇ ಶತಮಾನದ ಸಾಂಪ್ರದಾಯಿಕ ಪೋಷಾಕು ತೊಟ್ಟ ಎಂಟು ಕುದುರೆಗಳ ತಂಡ
ಒಂದೊಂದಾಗಿ ರಂಗಪ್ರವೇಶ ಮಾಡುತ್ತವೆ. ಸುತ್ತಲೂ ಗ್ಯಾಲರಿಯಲ್ಲಿ ಕಿಕ್ಕಿರಿದು ಜನ ನೆರೆದಿರುತ್ತಾರೆ. ಮಧ್ಯ ಆಯತಾಕಾರದ ಎರಿನಾದಲ್ಲಿ ಕುಣಿದು ಕುಪ್ಪಳಿಸುತ್ತವೆ ಈ ಕುದುರೆಗಳು.
ಜಾಕ್ಸನ್‌ಗೂ ಹೊಟ್ಟೆಕಿಚ್ಚು
ಇವುಗಳ ಡ್ಯಾನ್ಸಿನ ಅಂದ, ಸಂಗೀತವನ್ನೇ ಉರು ಹೊಡೆದಿವೆಯೇನೋ ಎಂಬ ಗುಮಾನಿ ಹುಟ್ಟಿಸುವಷ್ಟು. ಒಮ್ಮೆ ಮುಂದಿನ ಕಾಲನ್ನು, ಮತ್ತೊಮ್ಮೆ ಹಿಂದಿನ ಕಾಲನ್ನು ಕೊಂಕಿಸಿ, ಬಾಗಿಸಿ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಿಸುತ್ತವೆ. ಈ ಒನಪು, ವಯ್ಯಾರದಿಂದ ಕುಣಿವ ಕುದುರೆಗಳನ್ನು ನೋಡಿದರೆ ಮೈಕೆಲ್ ಜಾಕ್ಸನ್‌ಗೂ ಹೊಟ್ಟೆಕಿಚ್ಚು ಬರಬಹುದು. ಸರ್ವ ಇಂದ್ರಿಯಗಳಿಗೂ ಮುದ ತರುವ ಈ ಡಾನ್ಸಿಂಗ್ ಹಾರ್ಸ್‌ಗಳು ಘನತೆ, ಗಾಂಭೀರ್ಯವನ್ನೂ ಸಂಕೇತಿಸುತ್ತವೆ. ಈ ದೃಶ್ಯ ವೈಭವಕ್ಕೆ ಅದೆಷ್ಟು ತಾಲೀಮು ನಡೆಸಿರಬೇಕು ನೀವೇ ಊಹಿಸಿ.
ಕೋಲೆ ಬಸವ ನೆನಪಾದ!
ಕುದುರೆಗಳಿಗೆ ಈ ಮಟ್ಟದಲ್ಲಿ ಡ್ಯಾನ್ಸ್ ಹೇಳಿಕೊಟ್ಟವರು ಯಾರು? ಅದಕ್ಕೂ ಇಲ್ಲಿ ಸ್ಪೆಷಲಿಸ್ಟ್‌ಗಳಿದ್ದಾರೆ. ಅವರಿಗೆ ಕುದುರೆಗಳ ಭಾಷೆ ಗೊತ್ತು. ಸಂಗೀತಕ್ಕೆ ತಕ್ಕಂತೆ ಸಾವಿರಾರು ಜನರಿಗೆ ಮನರಂಜನೆ ಕೊಡುವ ಮೊದಲೇ ಇವಕ್ಕೆ ನೂರಾರು ಬಾರಿ ರಿಹರ್ಸೆಲ್ ಮಾಡಿಸುತ್ತಾರೆ. ಇವು ಗೋಣು ಬಗ್ಗಿಸಿ ಕುಣಿವ ಹೊತ್ತಲ್ಲಿ, ನಮ್ಮೂರಿನ ಕೋಲೆ ಬಸವ ಎಲ್ಲೋ ಒಂದು ಕಡೆ ನೆನಪಾಗಿ ಹಾದುಹೋಗುತ್ತಾನೆ.
ವೈಭವದ ಪೋಷಾಕು
ಐಟಂ ಗರ್ಲ್‌ಗಳಂತೆ ಬೆತ್ತಲೆ ಮೈ ತೋರಿಸುತ್ತಾ ಕುಣಿವ ಕುದುರೆಗಳಲ್ಲ ಇವು. 'ನಮಗೂ ಮಾನ ಮರ್ಯಾದೆ ಇದೆ' ಎನ್ನುವ ಕ್ಲಾಸಿಕ್ ಜಾತಿಗೆ ಸೇರಿದವು ಇವು. ಈ ಕುದುರೆಗಳಿಗಾಗಿಯೇ ವಿಶೇಷ ಡ್ರೆಸ್ ಇದೆ. ಅಲ್ಲಿಯ ತನಕ ಸ್ವಲ್ಪ ಚೆಲ್ಲು ಚೆಲ್ಲಾಡುವ ಇವು, ಡ್ರೆಸ್ ಮೈಯನ್ನು ಆವರಿಸಿದೊಡನೆ ರಾಜಗಾಂಭೀರ್ಯ ಪಡೆಯುತ್ತವೆ. ಯಾವುದೋ ಗತ್ತಲ್ಲಿ ಹೆಜ್ಜೆ ಊರುತ್ತವೆ. ಇವುಗಳ ಉಡುಗೆ ತೊಡುಗೆ ನೋಡಿಕೊಳ್ಳಲೆಂದೇ ವಿಶೇಷ ತಂಡವಿದೆ.
ಕಿತ್ತಳೆಗೆ ಕೈ ಹಾಕೊಲ್ಲ!
ಕುಣಿವ ಕುದುರೆಗಳ ಗ್ಯಾಲರಿಗೆ ಆಗಮಿಸುವ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ರಸ್ತೆಗುಂಟ ಕಿತ್ತಳೆ ಹಣ್ಣಿನ ಮರಗಳು ಹೇರಳ. ಮರದ ತುಂಬೆಲ್ಲ ಬರೀ ಹಣ್ಣುಗಳೇ. ಹೀಗಿದ್ದರೂ, ಒಬ್ಬರೇ ಒಬ್ಬ ದಾರಿಹೋಕ ಈ ಹಣ್ಣನ್ನು ಕೀಳುವುದಿಲ್ಲ. ಅದೆಂಥ ಶಿಸ್ತು, ಅಬ್ಬಾ! ಇಷ್ಟೆಲ್ಲ ವೈವಿಧ್ಯ ಇರುವ ಸ್ಪೇನ್‌ನಲ್ಲಿ ಇನ್ನೂ ನೋಡಬೇಕಾದ ಅನೇಕ ಸಂಗತಿಗಳಿವೆ. ನೀವೂ ಸ್ಪೇನ್‌ಗೆ ಭೇಟಿ ನೀಡಿದ್ದೇ ಆದಲ್ಲಿ ಈ ಶೋ ಮಿಸ್ ಮಾಡಿಕೊಳ್ಳಬೇಡಿ. ಆದರೆ, ಇಲ್ಲಿ ಫೋಟೊ ಕ್ಲಿಕ್ಕಿಸುವುದು ಮಾತ್ರ ನಿಷಿದ್ಧ.
- ಶಾಂತಾ ಕೊಟ್ರೇಶ್