ಓದಿ ತಲೆಕೆಟ್ಟಿರಬೇಕು!
ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ. ನಾನೇನೇ ಹೇಳಲು ಹೊರಟರೂ ಮನೆಯವರು ಒಪ್ಪುವುದಿಲ್ಲ. ಜಾಸ್ತಿ ಓದಿ ತಲೆ ಕೆಟ್ಟಿರಬೇಕು ಎಂದು ಝಾಡಿಸುತ್ತಾರೆ. ಅವರ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ.
- ನವೀನ್ ಕೆ.ಪಿ., ಸುರಪುರ
ನೀನು ವಿಚಾರವನ್ನು ಗಹನವಾಗಿ ಚಿಂತಿಸಿ, ವಿಮರ್ಶಿಸಿ ಮಾತನಾಡಿರುತ್ತೀಯ. ಅಷ್ಟು ಜ್ಞಾನವಿಲ್ಲದ ನಿನ್ನ ಮನೆಯವರಿಗೆ ವಿಚಿತ್ರವೆಂದೆನಿಸುತ್ತದೆ. ಹಾಗಾಗಿ ಅವರು ಆ ರೀತಿ ವರ್ತಿಸುತ್ತಿದ್ದಾರೆ. ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸು. ಸರಿ ತಪ್ಪುಗಳನ್ನು ಮನವರಿಕೆ ಮಾಡು. ಸರಿ ಹೋಗುತ್ತದೆ.
ಹಳ್ಳಿ ಶಾಲೆಗೆ ಹೋಗ್ತಾನಂತೆ...
ನನ್ನ ಮಗ ಹಳ್ಳಿಯಲ್ಲಿ ಶಾಲೆಗೆ ಹೋಗುತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾನೆ. ರಜೆಯಲ್ಲಿ ಅಜ್ಜಿಮನೆಗೆಂದು ಹಳ್ಳಿಗೆ ಹೋಗಿದ್ದ. ಅಲ್ಲಿ ಹುಡುಗರೊಂದಿಗೆ ಆಡಿ ಅದೇ ಚಾಳಿಗೆ ಬಿದ್ದಿದ್ದಾನೆ.
- ರಾಜೇಶ್ವರಿ, ಯಶವಂತಪುರ
ಅಲ್ಲಿಯೇ ಶಾಲೆಗೆ ಸೇರಿಸಿ. ಪ್ರಕೃತಿಯಲ್ಲಿ ಆಡಿ ಬೆಳೆಯುತ್ತಾ ಕಲಿಯುತ್ತಾನೆ. ಹಳ್ಳಿ ಎಂದ ಮಾತ್ರಕ್ಕೆ ಕಲಿಕೆಯಲ್ಲಿ ಹಿಂದೆ ಬೀಳುವುದಿಲ್ಲ. ಆಟ ಎಂಬುದು ಮಕ್ಕಳ ಹಕ್ಕು, ಅದಕ್ಕೆ ಅವಕಾಶ ಮಾಡಿಕೊಡಿ.
ಬಾಗಿಲಿಗೆ ಬರುವ ಗಿಡಗಳು
ವೈಜ್ಞಾನಿಕವಾಗಿ ಕೃಷಿ ಮಾಡಬೇಕೆಂದಿರುವೆ. ಆದರೆ ಲ್ಯಾಬೋರೇಟರಿ ಬಳಸಲು ಬರುವುದಿಲ್ಲ. ಟಿಶ್ಯೂ ಕಲ್ಚರ್ ಬಗ್ಗೆ ಗೊತ್ತಿಲ್ಲ. ಹೇಗೆ ಮಾಡಬಹುದು?
-ಚೆನ್ನಬಸಪ್ಪ, ಹಳಿಯೂರು
ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿ. ಟಿಶ್ಯೂ ಕಲ್ಚರ್ ಬಗ್ಗೆ ಚಿಂತಿಸಬೇಕಿಲ್ಲ. ನೀವು ಕೃಷಿಯಲ್ಲಿ ಬಳಸಲು ಇಚ್ಛಿಸುವ ತಳಿಯ ಯಾವುದಾದರೊಂದು ಭಾಗವನ್ನು ಲ್ಯಾಬೋರೇಟರಿಗೆ ತೆಗೆದುಕೊಂಡು ಹೋಗಿ ಕೊಡಿ. ಎಷ್ಟು ಗಿಡಗಳು ಬೇಕು ಎಂಬುದರ ಮಾಹಿತಿ ನೀಡಿ. ನಿಮ್ಮ ಮನೆ ಬಾಗಿಲಿಗೆ ಕೃಷಿ ಭೂಮಿಯಲ್ಲಿ ನೇರವಾಗಿ ನೆಡಬಹುದಾದ ಗಿಡಗಳು ಲಭ್ಯವಾಗುತ್ತವೆ.
-ಡಾ. ನರೇಂದ್ರ ಗಾಂಧಿ
nemmadikendra4@gmail.com