ನುಡಿಚಿತ್ರ
ಪತ್ರಕರ್ತೆ ಯು.ಬಿ. ರಾಜಲಕ್ಷ್ಮೀಯವರು ತಮ್ಮ ಡಿ.ಲಿಟ್. ಪದವಿಗಾಗಿ ಸಿದ್ಧಪಡಿಸಿದ ಸಂಶೋಧನ ಪ್ರಬಂಧ 'ಕನ್ನಡದ ಆಯ್ದ ವಾರಪತ್ರಿಕೆಗಳಲ್ಲಿ ನುಡಿಚಿತ್ರ ಒಂದು ಗುಣಾತ್ಮಕ ಅಧ್ಯಯನ'. ಪತ್ರಿಕೆಯೊಂದರ ವರದಿ ಹೇಗೆ ಆಕರ್ಷಕವಾಗಿ ಓದುಗನ ಕುತೂಹಲವನ್ನು ಉಳಿಸಿಕೊಂಡು ಮಾಹಿತಿಯನ್ನು ಒದಗಿಸಬೇಕು ಎಂಬುದನ್ನು ಅವರು ಈ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಾಗೂ ವೃತ್ತಿಯಲ್ಲಿ ಇರುವವರೂ ಈ ಕೃತಿಯನ್ನು ಓದಿದರೆ ಲಾಭವಿದೆ.
ಪ್ರ: ತುಲಾ ಪಬ್ಲಿಕೇಷನ್ಸ್ , ಮಣಿಪಾಲ, ಪುಟಗಳು 298, ಬೆಲೆ ರು. 200
ಪರಿಧಿ
ಎಚ್ಚೆತ್ತ ಮನಸ್ಸು ಸದಾ ತನ್ನ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುತ್ತ ಇರುತ್ತದೆ. ಇಂಥ ಮನಸ್ಸನ್ನು ಹೊಂದಿರುವ ಸರಸ್ವತಿ ಶಂಕರ್ ಅವರು 'ಪರಿಧಿ'ಯಲ್ಲಿ ವೈಚಾರಿಕ ಲೇಖನಗಳನ್ನು ಸಂಕಲಿಸಿ ಕೊಟ್ಟಿದ್ದಾರೆ. ಇಲ್ಲಿಯ ಪ್ರತಿಯೊಂದು ಲೇಖನವೂ ಅದನ್ನು ಬರೆದ ಕಾಲಘಟ್ಟಕ್ಕೆ ಪ್ರಸ್ತುತವಾಗಿರುವುದರಿಂದ ಓದುಗರು ಸಂಬಂಧಿತ ಕಾಲದ ಪರಿಧಿಯೊಳಗೇ ಅದನ್ನು ವಿಶ್ಲೇಷಿಸಬೇಕಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಸಾಂದರ್ಭಿಕ ಲೇಖನಗಳಾದರೂ ಸಾರ್ವಕಾಲಿಕ ಚಿಂತನೆಗಳಿರುವುದು ವಿಶೇಷ.
ಪ್ರ: ರವಿ ಪ್ರಕಾಶನ, ಬೆಂಗಳೂರು. ಪುಟಗಳು 174, ಬೆಲೆ ರು. 100
ಮೊಗ್ಗಿನ ಮನಸ್ಸು
ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಬಹು ಕಷ್ಟದ ಕೆಲಸ. ಶಿವಮೊಗ್ಗದ ಮನೋವೈದ್ಯೆ ಡಾ.ಕೆ.ಎಸ್. ಪವಿತ್ರ ಅವರು ಮುಖ್ಯವಾಗಿ ಶಾಲೆಗೆ ಹೋಗುವ ಮಕ್ಕಳ ಮನಸ್ಸಿನ ಕುರಿತು ರಚಿಸಿದ ಕೃತಿ 'ಮೊಗ್ಗನ ಮನಸ್ಸು- ಒಂದು ವೈಜ್ಞಾನಿಕ ದೃಷ್ಟಿಕೋನ'. ಕಲಿಕೆಯಲ್ಲಿ ಮಕ್ಕಳು ಎದುರಿಸುವ ಸಮಸ್ಯೆಗಳು ಹಾಗೂ ಅವುಗಳ ನಿವಾರಣೋಪಾಯಗಳ ಬಗ್ಗೆ ಇದರಲ್ಲಿ ಅವರು ಚರ್ಚಿಸಿದ್ದಾರೆ. ಮಕ್ಕಳ ಪೋಷಕರು ಮತ್ತು ಶಿಕ್ಷಕರು ಈ ಕೃತಿಯನ್ನು ಓದುವುದು ಉತ್ತಮ.
ಪ್ರ: ಕರ್ನಾಟಕ ವಿಜ್ಞಾನ ಪರಿಷತ್ತು, ಬೆಂಗಳೂರು. ಪುಟಗಳು 84, ಬೆಲೆ ರು. 50
ನೂರೆಂಟು ಮಾತು
ವಿಶ್ವೇಶ್ವರ ಭಟ್ ಅವರ ಅಂಕಣ ಬರೆಹಗಳ ಸಂಕಲನ 'ನೂರೆಂಟು ಮಾತು' ಭಾಗ -7 ಈಗ ಪ್ರಕಟವಾಗಿದೆ. ಜೀವನ ಪ್ರೀತಿಯ ಇಲ್ಲಿಯ ಬರೆಹಗಳು ಬದುಕನ್ನು ನೋಡುವ ನಮ್ಮ ದೃಷ್ಟಿಯನ್ನು ಬದಲಿಸಬಲ್ಲುದು. ಓದಿದ ಯಾವುದೋ ಒಂದು ಕೃತಿ, ಯಾವುದೋ ಊರಿಗೆ ಹೋಗಿ ಬಂದ ಅನುಭವ, ಯಾವುದೋ ವಿಶಿಷ್ಟ ವ್ಯಕ್ತಿಯೊಂದಿಗಿನ ಮುಖಾಮುಖಿ ಇದನ್ನೆಲ್ಲ ನಿಮಗೆ ಹೇಳಲೇಬೇಕು ಎಂಬ ಎದೆಯಾಳದ ತಹತಹ ಇಲ್ಲಿ ಅಕ್ಷರರೂಪ ತಾಳಿವೆ. ಓದಿನ ಆಸ್ವಾದ ನಿಮ್ಮದಾಗಲಿ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು 152, ಬೆಲೆ ರು. 120