ಖುಷಿ

ಸ್ವಸ್ಥ ಸಮಾಜದ ಶಿಲ್ಪಿಗಳು

ಒಂದು ಊರು ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಮೊದಲಿಗೆ ಅಲ್ಲಿನ ನೀರು ಕುಡಿಯಬೇಕಂತೆ. ಹಾಗೆಯೇ ಅಲ್ಲಿನ ಪತ್ರಿಕೆಯನ್ನೂ ಓದಬೇಕು. ನೀರಿನ ರುಚಿ, ಅದರ ಗಡಸು ಅಥವಾ ಮೃದುತನ ಆ ಊರಿನ ಪರಿಸರ, ಸ್ವಚ್ಛತೆ, ಮಣ್ಣಿನ ಧರ್ಮ, ಹವಾಮಾನ ಇತ್ಯಾದಿಗಳನ್ನು ತಿಳಿಸುತ್ತದೆ. ಹಾಗೆಯೇ ಅಲ್ಲಿನ ಪತ್ರಿಕೆಯನ್ನು ನೋಡಿದಾಕ್ಷಣ ಅಲ್ಲಿನ ಜನರ ಮನೋಭಾವ ಹೇಗಿದೆ? ಅಲ್ಲಿ ಸಂಸ್ಕೃತಿಯೇನು? ಊರಿನ ಇತಿಹಾಸ ಹಿನ್ನೆಲೆ ಎಂಥದ್ದು ಎಂಬುದನ್ನು ಸಹಜವಾಗಿ ತಿಳಿಯಬಹುದು. ಸಾಹಿತ್ತಿಕ, ಸಾಂಸ್ಕೃತಿಕ ಸುದ್ದಿಗಳಿಂದ ತುಂಬಿದ ಪತ್ರಿಕೆಯ ಪುಟಗಳು ಧನಾತ್ಮಕ ಅಭಿಪ್ರಾಯವನ್ನು ಮೂಡಿಸಿದರೆ, ಅಪರಾಧ ವರದಿಗಳಂಥವು ಅಲ್ಲಿನ ಜನರ ಬಗ್ಗೆ ಎಂಥ ಭಾವವನ್ನು ಕಟ್ಟಿಕೊಡಬಹುದೆಂಬುದನ್ನು ಊಹಿಸಬಲ್ಲಿರಿ. ನಾಲ್ಕಾರು ವರ್ಷಗಳ ಹಿಂದೆ ಐಸ್‌ಲ್ಯಾಂಡ್ ಪ್ರವಾಸಕ್ಕೆಂದು ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಹೋಗಿದ್ದಾಗ ಅಲ್ಲಿನ ಪತ್ರಿಕೆಗಳನ್ನು ನೋಡಿ ಅಚ್ಚರಿಯಾಯಿತು. ಅಲ್ಲಿನ ಪತ್ರಿಕೆಗಳಲ್ಲಿ ಅಪರಾಧಕ್ಕೆಂದು ಒಂದು ಪುಟವೆಂಬುದೇ ಇರಲಿಲ್ಲ. ಹೀಗೇಕೆಂದು ಸ್ಥಳೀಯರನ್ನು ವಿಚಾರಿಸಿದಾಗ ಇನ್ನೂ ಅಚ್ಚರಿಯ ಸಂಗತಿ ಅರಿವಿಗೆ ಬಂತು. ಕಳೆದ ಮೂವತ್ತು ವರ್ಷಗಳ ಹಿಂದೆ ಐಸ್‌ಲ್ಯಾಂಡ್‌ನಲ್ಲಿ ಒಂದು ಕೊಲೆಯಾಗಿದ್ದು ಬಿಟ್ಟರೆ ಆನಂತರ ಒಂದೇ ಒಂದು ಅಪರಾಧವೂ ಅಲ್ಲಿ ಜರುಗಿರಲೇ ಇಲ್ಲವಂತೆ. ಆ ದೇಶದ ಆಡಳಿತ, ಮನೋಧರ್ಮಕ್ಕೆ ಹಿಡಿದ ಕೈಗನ್ನಡಿ ಅದು.
ಹೇಗೆ ಒಂದು ದೇಶವನ್ನು ಅಲ್ಲಿನ ಸರಕಾರದಿಂದ ಅಂತೆಯೇ ಸರಕಾರ, ಆಡಳಿತವನ್ನು ಅದರ ನಾಯಕತ್ವ, ಮಂತ್ರಿಗಳನ್ನು ನೋಡಿ ಅಳೆಯಬಹುದೋ ಹಾಗೆಯೇ ಒಂದು ಸಮಾಜದ, ಭಾಷೆಯ ಮನಃಸ್ಥಿತಿಯನ್ನು ಅಲ್ಲಿನ ಪತ್ರಕರ್ತರು ಸಂಕೇತಿಸುತ್ತಾರೆ. ಉತ್ತಮ, ಜನಪರ, ಜಾಗೃತ ಪತ್ರಿಕೆಗಳು ಮತ್ತು ಆ ಪತ್ರಿಕೆಯಲ್ಲಿನ ಪತ್ರಕರ್ತರು ಎಂಥದ್ದೇ ಸನ್ನಿವೇಶವನ್ನೂ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉದಾಹರಣೆಗೆ ದಿಲ್ಲಿಯಲ್ಲಿ ಅತ್ಯಂತ  brilliant ಎನ್ನಿಸುವ ಹತ್ತು ಪತ್ರಕರ್ತರಿದ್ದರೆ ಸಾಕು. ಅವರು ಇಡೀ ದೇಶದ ಚಿತ್ರಣವನ್ನು, ಹೆಚ್ಚೇಕೆ ಸರಕಾರವನ್ನೂ ಬದಲಿಸಬಲ್ಲರು. ಪತ್ರಿಕೋದ್ಯಮ ಒಳ್ಳೆಯ ಮನಃಸ್ಥಿತಿಯಲ್ಲಿದ್ದರೆ ಖಂಡಿತಾ ದೇಶ ಅಭಿವೃದ್ಧಿಶೀಲ ಗತಿಯಲ್ಲಿ ಸಾಗುತ್ತದೆ ಎಂಬುದು ನಂಬಿಕೆ ಮಾತ್ರವಲ್ಲ, ಅದು ವಾಸ್ತವ. ಇವತ್ತಿನ ಪತ್ರಿಕೋದ್ಯಮದಲ್ಲಿ ಅಂಥ ಒಳ್ಳೆಯ ಮನಃಸ್ಥಿತಿಯುಳ್ಳ ಯುವಕರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಸಮಾಧಾನದ ಸಂಗತಿ. ಹಿಂದೆಲ್ಲ ಎಲ್ಲೂ ಉದ್ಯೋಗ ಸಿಗದೇ ಅಲೆದಾಡಿ ಸೋತವರು ಪತ್ರಿಕೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಇವತ್ತು ಪರಿಸ್ಥಿತಿ ಹಾಗಿಲ್ಲ. ಪತ್ರಕರ್ತರಾಗಲು ನಿರ್ದಿಷ್ಟ ವಿದ್ಯಾರ್ಹತೆ ಅಗತ್ಯ. ಪ್ರತಿಭಾವಂತಿಕೆ, ಉತ್ಸಾಹ, ಬದ್ಧತೆ, ಸಂಕಲ್ಪಗಳು ವೃತ್ತಿ ಯಶಸ್ಸಿನ ಮಾನದಂಡವಾಗಿವೆ. ಮಾತ್ರವಲ್ಲ ಎಂಜಿನಿಯರಿಂಗ್, ವೈದ್ಯ, ವಿಜ್ಞಾನ ಹೀಗೆ ಬೇರೆಬೇರೆ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದಂಥವರೂ ಪತ್ರಕರ್ತರಾಗಿ ಹೆಮ್ಮೆಯಿಂದ ಕೆಲಸ ಮಾಡಲು ಬರುತ್ತಿದ್ದಾರೆ. ಹಿಂದೆಂದಿಗಿಂತಲೂ ಗೌರವಯುತ ವೃತ್ತಿಯಾಗಿದೆ ಪತ್ರಿಕೋದ್ಯಮ. ಉತ್ತಮ ಓದು, ವೈಜ್ಞಾನಿಕ ಚಿಂತನೆ, ಅಭಿವೃದ್ಧಿಪರ ಮನೋಭಾವ, ಮಾನವೀಯ ಕಳಕಳಿ, ಹೊಸತರ ತುಡಿತ, ಸಾಹಸಿ ಪ್ರವೃತ್ತಿ ಪತ್ರಕರ್ತರಲ್ಲಿ ಹೆಚ್ಚುತ್ತಿದೆ. ಜನರು ಪತ್ರಿಕೆಗಳ ಮೇಲೆ ಭರವಸೆ ಇಡಲು ಇದಕ್ಕಿಂತ ಹೆಚ್ಚಿನ ಕಾರಣ ಇನ್ನೇನು ಬೇಕು? ಇಂದಿನ ಪತ್ರಕರ್ತರಲ್ಲಿ ಬಹುತೇಕರ್ಯಾರೂ ಸಂಬಳಕ್ಕಾಗಿಯೋ ಇನ್ನಾವುದೋ ವೈಯಕ್ತಿಕ ಲಾಭಕ್ಕಷ್ಟೇ ಕೆಲಸ ಮಾಡುವ ಮನೋಭಾವದಲ್ಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಪತ್ರಿಕೋದ್ಯಮವೊಂದು ಪ್ಯಾಷನ್. ಉನ್ನತ ಜ್ಞಾನ, ನಿರಂತರ ಪ್ರವಾಸ, ಕುತೂಹಲದ ದೃಷ್ಟಿ, ಓದಿಗೆ ತೆರೆದುಕೊಳ್ಳುತ್ತ  ಸಾಗುವ ಯುವ ಪತ್ರಕರ್ತರನ್ನು ಕಂಡಾಗ ನಿಜಕ್ಕೂ ಹೆಮ್ಮೆಯೆನಿಸುತ್ತದೆ.
ಕನ್ನಡದ ಅಂಥ ಭರವಸೆಯ ಇಪ್ಪತ್ತೈದು ಯುವ ಪತ್ರಕರ್ತರನ್ನು ಗುರುತಿಸುವ ಪ್ರಯತ್ನವನ್ನು ಈ ಸಂಚಿಕೆಯಲ್ಲಿ ಮಾಡಿದ್ದೇವೆ. ಇಂದಿನ ಪತ್ರಕರ್ತರೇ ಮುಂದಿನ ಸ್ವಾವಲಂಬಿ, ಸ್ವಸ್ಥ ಸಮಾಜದ ಶಿಲ್ಪಿಗಳಾಗಬಲ್ಲರು ಎಂಬ ದೃಷ್ಟಿಯಿಂದ 'ಖುಷಿ'ಯ ಈ ಪ್ರಯತ್ನ ಸಾರ್ಥಕ್ಯ ಪಡೆಯುತ್ತದೆ. ಹಾಗೆಂದು ಇವರಷ್ಟೇ ಉತ್ತಮರು ಎಂಬುದೂ ಅಲ್ಲ. ಇವರಲ್ಲದೆಯೂ ಇನ್ನೂ ಅನೇಕ ಸಮರ್ಥ, ಭರವಸೆಯ ಮುಖಗಳೂ ಕನ್ನಡದಲ್ಲಿವೆ. ಸಂಚಿಕೆಯ ಪರಿಮಿತಿಯೊಳಗೆ ಹಿಡಿದಿಡಲು ಸಾಧ್ಯವಾಗಿದ್ದು ಇಷ್ಟು. ಯುವಕರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಇದು ಸಹಾಯಕ. ಹಾಗೆಯೇ ಸುದ್ದಿ ಬರೆಯುವವರು ಸುದ್ದಿಯಾಗುವುದು ಸಕಾರಣಕ್ಕೆ ವಿರಳವೇ. ಈ ದೃಷ್ಟಿಯಿಂದಲೂ for a change ಪತ್ರಕರ್ತರನ್ನೂ ನೀವು 'ಹೀರೋ' ಆಗಿ ಸ್ವೀಕರಿಸಿ.
ವಂದನೆಗಳು,

- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್