ಶಾಪಿಂಗ್ ಅಥವಾ ಖರೀದಿ. ಇದಕ್ಕೆ ಇಂಥದ್ದೇ ಪರಿಧಿ ಅಂಥೇನೂ ಇಲ್ಲ. ಈ ಬಗ್ಗೆ ಕೇಳಿದರೂ ಒಬ್ಬೊಬ್ಬರದ್ದು ಒಂದೊಂದು ಅಭಿಮತ. ಒಬ್ಬರು ಶಾಪಿಂಗ್ ತುಂಬಾ ಇಷ್ಟ ಅಂದರೆ, ಮತ್ತೆ ಕೆಲವರು ಅಯ್ಯೋ ಅದು ತುಂಬಾ ಬೋರಿಂಗ್ ಕಣ್ರೀ... ಎನ್ನುತ್ತಾರೆ. ಕೆಲವರಿಗೆ ಇದು ಬಹಳ ಸರಳ, ಹಲವರಿಗೆ ತುಂಬಾ ಕಷ್ಟ. ಅಯ್ಯೋ ಈ ಟ್ರಾಫಿಕ್ ಕಿರಿಕಿರಿಯಲ್ಲಿ ಶಾಪಿಂಗ್ ಮಾಡಬೇಕು ಅಂದರೆ ಸಾಕಾಗಿ ಹೋಗುತ್ತೆ ಅನ್ನೋರೂ ಇದಾರೆ.
ನಿಜ ಹೇಳಬೇಕೆಂದರೆ ಶಾಪಿಂಗ್ ಮಾಡುವುದು ಅಷ್ಟೇನೂ ಕಷ್ಟವಲ್ಲ. ತುಂಬಾ ಸುಲಭವೂ ಹೌದು. ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಆದರೆ ಅದಕ್ಕೊಂದು ಇಂಟರ್ನೆಟ್ ಸಂಪರ್ಕ ಬೇಕು. ಕುಳಿತಲ್ಲೇ ಶಾಪಿಂಗ್ ಮಾಡಬಹುದು. ಮನೆ ಬಾಗಿಲಿಗೇ ನೀವು ಕೇಳಿದ್ದನ್ನು ತರಿಸಿಕೊಳ್ಳಬಹುದು. ಸಮಯವೂ ಉಳಿತಾಯ, ಹೊರಗೆ ಹೋಗಬೇಕಾದ ಅನಿವಾರ್ಯತೆಯೂ ಇರುವುದಿಲ್ಲ. ಇಂಥ ಒಂದು ಸಿಸ್ಟಂ ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ಮುಂದುವರಿದ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಇದರ ಜತೆಗೆ ಜನರ ಮನಸ್ಥಿತಿಯೂ ಬದಲಾವಣೆಯಾಗುತ್ತಿದೆ. ಎಲ್ಲವನ್ನೂ ಏಕೆ ಖರೀದಿಸಬೇಕು ಎಂಬ ಧೋರಣೆಯೂ ತಲೆದೋರಿದೆ. ಅಲ್ಲಿ ತೀರಾ ಸರಳವಾಗಿ ಶಾಪಿಂಗ್ ಪರಿಕಲ್ಪನೆಯನ್ನು ತಮಗೆ ಬೇಕಾದಂತೆ ಬದಲಿಸಿಕೊಂಡಿದ್ದಾರೆ. ಹೆಚ್ಚು ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ಜತೆಗೆ ಅಲ್ಲಿ ಕಂಪನಿಗಳೂ ಸಹ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ಹಲವಾರು ರೀತಿಯ ಸರ್ಕಸ್ ಮಾಡುತ್ತಿವೆ. ಮುಖ್ಯವಾಗಿ ಗ್ರಾಹಕನನ್ನು ಖುಷಿ ಪಡಿಸಲು ಮಾಡಬೇಕಾದ ಎಲ್ಲ ಪ್ರಯತ್ನಗಳನ್ನೂ ಸಾಕಾರಗೊಳಿಸಲಾಗಿದೆ. ಉತ್ಪಾದನೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳು ಆಗಲಾರಂಭಿಸಿವೆ.
ಹಾಗಂತ ಭಾರತವೇನೂ ಹಿಂದೆ ಬಿದ್ದಿಲ್ಲ. ಅಲ್ಲಿನ ಎಲ್ಲ ಟೆಕ್ನಾಲಜಿಗಳು ಇನ್ನೂ ಇಲ್ಲಿನ ಜನರನ್ನು ಬಂದು ತಲುಪಿಲ್ಲ. ಆನ್‌ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಇದೆ. ಸಾಕಷ್ಟು ಮಾಲ್‌ಗಳು ತಲೆ ಎತ್ತಿವೆ. ಬೇಕಾದ ಎಲ್ಲ ವಸ್ತುಗಳೂ ಒಂದೇ ಸೂರಿನಡಿ ಸಿಗುತ್ತಿವೆ. ಆದರೆ ಶಾಪಿಂಗ್ ವಿಷಯದಲ್ಲಿ ಅಲ್ಲಿನ ಪರಿಪೂರ್ಣತೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಸಾಧ್ಯವಾಗುತ್ತದೆ. ಅದು ಭವಿತವ್ಯದಲ್ಲಿ, ಅಂದರೆ ಮುಂದಿನ ಪೀಳಿಗೆ ಬರುವಷ್ಟರಲ್ಲಿ ಇಂಥ ವ್ಯವಸ್ಥೆ ನಮ್ಮ ದೇಶದಲ್ಲೂ ಜಾರಿಗೆ ಬರಲಿದೆ.
ಹೀಗೆ ವಿದೇಶಗಳಲ್ಲಿ ಈಗಾಗಲೇ 'ಚಾಲ್ತಿ ಖಾತೆ'ಯಲ್ಲಿರುವ ಟಾಪ್ 10 ಶಾಪಿಂಗ್ ಸಿಸ್ಟಂ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ನಿಮ್ಮ ಯೋಚನಾ ಲಹರಿಯನ್ನೂ ಮೀರಿ ಅಧ್ಯಯನ
ನಿಮ್ಮ ಮೇಲೆ ಇಂಥದ್ದೊಂದು ಪ್ರಯೋಗ ನಡೆದಿದೆ ಎನ್ನುವುದೇ ನಿಮಗೆ ಗೊತ್ತಿರುವುದಿಲ್ಲ. ಆದರೆ ಕಂಪನಿಗಳು ನಿಮಗೇ ಗೊತ್ತಿಲ್ಲದಂತೆ ನಿಮ್ಮನ್ನು ಅಧ್ಯಯನ ನಡೆಸಿ ನೀವು ಮೆಚ್ಚುವಂತಹ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಟ್ಟಿರುತ್ತದೆ. ಅದು ಹೇಗೆ ಅನ್ನುತ್ತೀರಾ? ನೋಡಿ ಈ ಉದಾಹರಣೆ. ನೀವು ಯಾವುದೋ ಒಂದು ಗ್ರಾಹಕರ ಸ್ಟೋರ್‌ಗೆ ಹೋಗುತ್ತೀರಿ. ಅಲ್ಲಿ ಸಾವಿರಾರು ವಸ್ತುಗಳಿರುತ್ತವೆ. ಅವುಗಳಲ್ಲಿ ಕೆಲವು ನಿಮ್ಮನ್ನು ಆಕರ್ಷಿಸುತ್ತದೆ. ಅವುಗಳನ್ನು ಕೈಯಿಂದ ಎತ್ತಿಕೊಂಡು ನೋಡುತ್ತೀರಿ. ಅವೆಲ್ಲವನ್ನೂ ಖರೀದಿಸುವುದಿಲ್ಲ. ನಿಮಗೆ ಬೇಕಾದ್ದನ್ನು ಮಾತ್ರ ಖರೀದಿಸಿ ಬರುತ್ತೀರ. ಆದರೆ ಇಲ್ಲೇ ಇರುವುದು ಅಸಲಿ ಹಕೀಕತ್ತು. ನೀವೇನೋ ಖರೀದಿಸಿ ಮನೆಗೆ ಹಿಂತಿರುಗುತ್ತೀರಿ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿರುತ್ತದೆ. ನಿಮಗೆ ಮಾತ್ರ ಅದು ತಿಳಿದಿರುವುದಿಲ್ಲ. ನೀವು ಎತ್ತಿಕೊಂಡು ನೋಡಿದ ವಸ್ತುಗಳೂ ಸಹ ಖರೀದಿಗೆ ಯೋಗ್ಯ ಎಂಬ ಶರಾವನ್ನು ಕಂಪನಿಗಳು ಬರೆಯುತ್ತವೆ. ಅಂತಹ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಬಿಡುತ್ತವೆ.
ಡ್ರೋನ್ ಡೆಲವರಿ
ಈ ಪರಿಕಲ್ಪನೆಯೇ ವಿಚಿತ್ರ. ಇಂಥ ವ್ಯವಸ್ಥೆಯೊಂದು ಇದೆಯೇ ಎಂಬ ಅನುಮಾನವೂ ನಿಮ್ಮನ್ನು ಕಾಡದೇ ಇರದು. ಮಾನವನ ಸಹಾಯವಿಲ್ಲದೇ ಯಾವುದೋ ಒಂದು ಯಂತ್ರ ಸಾಧನವೊಂದು ಆಕಾಶದಿಂದ ನೀವು ಬಯಸಿದ ವಸ್ತುವನ್ನು ನಿಮ್ಮ ಮನೆ ಮುಂದೆಯೇ ತಂದು ಇರಿಸುವುದು ಎಂದರೆ ನಂಬುವಿರೇ? ಆದರೆ ನಂಬಲೇ ಬೇಕು. ಇಂಥದ್ದೊಂದು ವ್ಯವಸ್ಥೆಯು ಈಗ ಅಮೆರಿಕದಲ್ಲಿದೆ. ಇದನ್ನು ಡ್ರೋನ್ ಎಂಬ ಯಂತ್ರದ ಮೂಲಕ ಸಾಕಾರಗೊಳಿಸಲಾಗಿದೆ. ಮನೆಯಲ್ಲಿದ್ದು ಆನ್‌ಲೈನ್ ಮೂಲಕ ಇಂಥ ವಸ್ತು ಬೇಕು ಎಂದು ಕ್ಲಿಕ್ ಮಾಡಿದರೆ ಸಾಕು. ಆ ವಸ್ತುಗಳು ಕೆಲವೇ ಗಂಟೆಗಳಲ್ಲಿ ನಿಮ್ಮ ಮನೆ ಮುಂದೆ ಬಂದಿರುತ್ತದೆ. ಆದರೆ ಇಂಥದ್ದೊಂದು ಅದ್ಭುತ ವ್ಯವಸ್ಥೆ ಭಾರತದಲ್ಲಿ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ ಬಿಡಿ.
ಆಸಕ್ತಿ ನಿಮ್ಮದು, ಮಾಹಿತಿ ಅವರದು
ನೀವು ಇಷ್ಟಪಡುವ ವಸ್ತು. ಅಥವಾ ನಿಮಗೆ ಆಸಕ್ತಿ ಇರುವ ವಸ್ತುಗಳು ಹೊಸದಾಗಿ ಮಾರುಕಟ್ಟೆಗೆ ಬಂದಾಗ ತಕ್ಷಣ ಮಾಹಿತಿ ಸಿಗುವಂತಿದ್ದರೆ ಎಷ್ಟು ಚೆನ್ನ. ಇಂಥ ವ್ಯವಸ್ಥೆಯು ಆನ್‌ಲೈನ್‌ನಲ್ಲಿದೆ. ಆನ್‌ಲೈನ್ ವೆಬ್‌ಸೈಟ್‌ಗಳಾದ ಫ್ಲಿಪ್‌ಕಾರ್ಟ್, ಇ-ಬೇ ಇತ್ಯಾದಿ ವೆಬ್‌ಸೈಟ್‌ಗಳಿಗೆ ನೀವು ಪದೇ ಪದೆ ಭೇಟಿ ಕೊಟ್ಟಾಗ, ಅಲ್ಲಿ ನೀವು ಹೆಚ್ಚು ಯಾವ ವಸ್ತುಗಳ ಬಗ್ಗೆ ಹುಡುಕಿರುತ್ತೀರೋ ಅಂತಹ ಹೊಸ ವಸ್ತುಗಳ ಮಾಹಿತಿಯನ್ನು ಆಗಾಗ ನಿಮಗೆ ಇ-ಮೇಲ್ ಮೂಲಕ ಮಾಹಿತಿ ರವಾನೆ ಮಾಡುತ್ತಿರುತ್ತದೆ. ಆದರೆ ನಿಮ್ಮ ಮನೆ ಸಮೀಪ ಇರುವ ಸ್ಟೋರ್‌ಗಳಲ್ಲೋ ಅಥವಾ ನೀವು ಯಾವಾಗಲೂ ಭೇಟಿ ನೀಡುವ ಸ್ಟೋರ್‌ಗಳಲ್ಲಿ ಹೊಸ ಪ್ರಾಡಕ್ಟ್‌ಗಳು ಬಂದಾಗ ವಿಷಯ ಹೇಗೆ ತಿಳಿಯುತ್ತದೆ? ಅಲ್ಲಿಗೆ ಹೋಗಿಯೇ ನೀವು ನೋಡಬೇಕು ಎಂದು ಭಾವಿಸಬೇಡಿ. ಆ ಸ್ಟೋರ್ ಮಾಲೀಕರೇ ನಿಮಗೆ ಮಾಹಿತಿ ರವಾನೆ ಮಾಡುತ್ತಾರೆ. ಹೇಗಂತೀರಾ, ಸ್ಟೋರ್ ಮಾಲೀಕ ನಿಮ್ಮ ಪ್ರತಿ ಆಸಕ್ತಿಯನ್ನೂ ದಾಖಲಿಸಿಕೊಳ್ಳುತ್ತಿರುತ್ತಾನೆ. ನಿಮ್ಮ ಆಸಕ್ತಿದಾಯಕ ವಸ್ತುಗಳು ಸ್ಟೋರ್‌ಗೆ ಬಂದಾಗ ಇ-ಮೇಲ್ ಮುಖಾಂತರವೋ, ಫೋನ್ ಮುಖಾಂತರವೋ ನಿಮಗೆ ಮಾಹಿತಿ ಹಾಕುತ್ತಾನೆ. ಇದಕ್ಕಿಂತ ಇನ್ನೇನು ವ್ಯವಸ್ಥೆ ಬೇಕಾದೀತು ಅಲ್ಲವೇ.
ಮಾಧ್ಯಮಗಳ ಮೂಲಕ ಮಾರಾಟ
ಮಾಧ್ಯಮಗಳೆಂದರೆ ಕೇವಲ ಸುದ್ದಿ ಕೊಡುವುದಷ್ಟೇ ಎಂಬ ಪರಿಕಲ್ಪನೆ ದೂರವಾಗುತ್ತಿದೆ. ಇಲ್ಲಿ ಜಾಹೀರಾತುಗಳು ಹಾಕುವುದು ಕಾಮನ್. ಆದರೆ ಮಾಧ್ಯಮಗಳೇ (ದೃಶ್ಯ ಮಾಧ್ಯಮ ಇರಬಹುದು, ಮುದ್ರಣ ಮಾಧ್ಯಮ ಇರಬಹುದು) ಮಾರಾಟಕ್ಕೆ ಇಳಿದರೆ? ಹೌದು. ಪೈಪೋಟಿಯ ಈ ದಿನಗಳಲ್ಲಿ ಜನರನ್ನು ತಲುಪಲು ಮಾಧ್ಯಮಗಳೂ ಸಾಕಷ್ಟು ಬೆವರು ಹರಿಸಲೇಬೇಕು. ಅದಕ್ಕಾಗಿ ಸ್ವಲ್ಪ ತಲೆಯನ್ನೂ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಕೆಲವು ಮಾಧ್ಯಮಗಳು ವಿವಿಧ ಕಂಪನಿಗಳ ಜತೆ ಹೊಂದಾಣಿಕೆ (ಟೈ ಅಪ್) ಮಾಡಿಕೊಂಡು ಡಿಸ್ಕೌಂಟ್ ಆಫರ್‌ಗಳನ್ನು ನೀಡಿ ಮಾರಾಟ ಮಾಡತ್ತಿವೆ. ಇದು ಗ್ರಾಹಕನನ್ನು ಸೆಳೆಯಲು ಪರಿಣಾಮಕಾರಿ ಉಪಾಯವಾಗಿದೆ. ಏಕೆಂದರೆ ಗ್ರಾಹಕ ಕೇವಲ ಸುದ್ದಿಯನ್ನಷ್ಟೇ ಓದುವುದಿಲ್ಲ. ಇಲ್ಲಿ ನೀಡಿರುವ ಜಾಹೀರಾತುಗಳೂ ಸಹ ಕಣ್ಣಿಗೆ ಬೀಳುತ್ತವೆ. ತಮಗೆ ಬೇಕಾದ್ದನ್ನು ಆನ್‌ಲೈನ್ ಮೂಲಕ ಬುಕ್ ಮಾಡಿದರೆ ಸಾಕು. ಮನೆ ಬಾಗಿಲಿಗೆ ಬಂದು ಬೀಳುತ್ತದೆ.
ಕೈಗಾರಿಕಾ ಕ್ರಾಂತಿ
ಉದ್ಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಎಲ್ಲವೂ ಯಾಂತ್ರೀಕರಣವಾಗುತ್ತಿದೆ. ಮಾನವನ ಹಸ್ತಕ್ಷೇಪವನ್ನು ಸಾಧ್ಯವಾದಷ್ಟು ಕಡಿತಗೊಳಿಸುವ ಪ್ರಯತ್ನದಲ್ಲಿ ಕಂಪನಿಗಳು ಹೆಜ್ಜೆ ಇಡುತ್ತಿವೆ. ಇಂದು ಹತ್ತು ಜನರು ಮಾಡುವ ಕೆಲಸವನ್ನು ಒಂದು ಯಂತ್ರವು ಏಕಕಾಲಕ್ಕೆ ಮಾಡುತ್ತದೆ. ಇಲ್ಲಿ ಸಮಯವೂ ಉಳಿತಾಯ ಹಾಗೂ ಕಾರ್ಮಿಕರಿಗೆ ನೀಡುವ ಹಣವೂ ಉಳಿತಾಯ. ಯುರೋಪ್ ರಾಷ್ಟ್ರಗಳಲ್ಲಿ ವಾಲ್‌ಮಾರ್ಟ್ ಹಾಗೂ ಮೆಕ್‌ಡೊನಾಲ್ಡ್‌ನಂಥ ಕಂಪನಿಗಳು ಹೆಚ್ಚು ಹೆಚ್ಚು ಯಾಂತ್ರೀಕರಣಗೊಳಿಸುತ್ತಿವೆ. ಕಳೆದ ವರ್ಷ ವಾಲ್‌ಮಾರ್ಟ್‌ಗಳಲ್ಲಿ ಸುಮಾರು 10,000 ಕಡೆಗಳಲ್ಲಿ ಸ್ವ-ರಕ್ಷಣಾ ಪದ್ಧತಿ (ಸೆಲ್ಫ್ ಚೆಕೌಟ್ ಸಿಸ್ಟಂ) ಅನ್ನು ಅಳವಡಿಸಿದೆ. ಇದರಿಂದ ಸೆಕ್ಯುರಿಟಿಗಾಗಿ ಯಾರನ್ನೂ ನೇಮಿಸಿಕೊಳ್ಳುವ ಅಗತ್ಯವೇ ಬರುವುದಿಲ್ಲ. ಈ ಮಷಿನ್ ಒಳಗೆ ಬರುವ ಹಾಗೂ ಹೊರಗೆ ಹೋಗುವ ವ್ಯಕ್ತಿಗಳನ್ನು ತಾನಾಗಿಯೇ ಸ್ಕ್ಯಾನ್ ಮಾಡುತ್ತದೆ. ಯಾವುದಾದರೂ ತೊಂದರೆ ಇದ್ದಲ್ಲಿ ತಕ್ಷಣ ಸೈರನ್ ಮೊಳಗಿಸುತ್ತದೆ. ಇನ್ನು ಮೆಕ್‌ಡೊನಾಲ್ಡ್ 7000 ಟಚ್‌ಸ್ಕ್ರೀನ್‌ಗಳನ್ನು ಅಳವಡಿಸಿದೆ. ಇಲ್ಲಿ ಗ್ರಾಹಕ ಹೋಗಿ ತನಗೆ ಬೇಕಾದ ತಿನಿಸುಗಳನ್ನು ಆಯ್ಕೆ ಮಾಡಿಕೊಂಡು ಕಾರ್ಡ್ ಮೂಲಕ ಹಣ ಕಟ್ಟಿದರೆ ಸಾಕು. ಬೇಕಾದ ತಿನಿಸು ಕೈ ಸೇರುತ್ತದೆ ಅಷ್ಟೆ.
ಅದೇ ದಿನ, ಇಲ್ಲವೇ ಗಂಟೆಗಳಲ್ಲಿ
ನಿಮಗೆ ಯಾವುದೋ ಒಂದು ಪುಸ್ತಕವೋ, ಇಲ್ಲವೇ ಎಲೆಕ್ಟ್ರಾನಿಕ್ಸ್ ವಸ್ತೋ ಬೇಕು ಎಂದಿಟ್ಟುಕೊಳ್ಳೋಣ. ಅದನ್ನು ಆನ್‌ಲೈನ್ ಸೈಟ್ ಮೂಲಕ ಬುಕ್ ಮಾಡುತ್ತೀರಿ. ಆದರೆ ಅದು ಬರಲು ಎರಡು ಅಥವಾ ಒಂದು ದಿನ ಬೇಕಾಗುತ್ತದೆ. ಆದರೆ ನೀವು ಬಯಸಿದ ವಸ್ತು ಅದೇ ದಿನ ಅಥವಾ ಕೆಲವೇ ಗಂಟೆಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುವಂತಿದ್ದರೆ ಹೇಗೆ? ಈ ನಿಟ್ಟಿನಲ್ಲಿ ನ್ಯೂಯಾರ್ಕ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಕಳೆದ ವರ್ಷ ಇ-ಬೇ ಹೆಚ್ಚು ಹೆಚ್ಚು ಘಟಕಗಳನ್ನು ತೆರೆದಿವೆ. ಇದನ್ನು 'ಬೆಂಗಳೂರೀಕರಿಸಿ' ಹೇಳಬೇಕೆಂದರೆ ನಿಮ್ಮ ಮನೆ ಜಯನಗರದಲ್ಲಿ ಇರುತ್ತದೆ ಎಂದಿಟ್ಟುಕೊಳ್ಳೋಣ. ನೀವು ಒಂದು ವಸ್ತುವನ್ನು ಬಯಸಿ ಆನ್‌ಲೈನ್‌ನಲ್ಲಿ ಬುಕ್ ಮಾಡುತ್ತೀರಿ. ಆದರೆ ಆನ್‌ಲೈನ್ ಘಟಕವು ನೆಲಮಂಗಲ ಅಥವಾ ಅದಕ್ಕಿಂತ ದೂರ ಇರುತ್ತದೆ. ಹೀಗಿರುವಾಗ ಅಲ್ಲಿಂದ ತೆಗೆದುಕೊಂಡು ಅದೇ ದಿನ ಹೇಳಿದ ವ್ಯಕ್ತಿಗೆ ತಂದುಕೊಡಲು ಆಗದೇ ಇರಬಹುದು. ಹಾಗಾಗಿ ಜಯನಗರ ಇಲ್ಲವೇ ಅದಕ್ಕೆ ಸಮೀಪದಲ್ಲಿಯೇ ಬ್ರ್ಯಾಂಚ್ ಇದ್ದರೆ? ಬೇಗ ತಲುಪಿಸಬಹುದಲ್ಲವೇ. ಇಂತಹ ವ್ಯವಸ್ಥೆಯನ್ನು ಯಾವುದಾದರೂ ಒಂದು ಆನ್‌ಲೈನ್ ಸೈಟ್ ಮಾಡಿದರೂ ಸಹ ಪೈಪೋಟಿಗೆ ಬೀಳುವ ಉಳಿದವೂ ಇದೇ ದಾರಿ ಹಿಡಿಯುತ್ತವೆ. ಒಟ್ಟಿನಲ್ಲಿ ಗ್ರಾಹಕನಿಗೆ ಸುಲಭವಾಗಿ, ಶೀಘ್ರವಾಗಿ ಬೇಕಾದ ವಸ್ತು ಸಿಗುವಂತಾಗುತ್ತದೆ.
ಗೌಪ್ಯತೆ ಕಾಪಾಡು
ಯಾವುದೇ ಗ್ರಾಹಕನಾದರೂ ತನ್ನ ವೈಯಕ್ತಿಕ ಮಾಹಿತಿಯನ್ನು ಇನ್ನೊಬ್ಬರಿಗೆ ನೀಡಬೇಕೆಂದರೆ ಆತನಿಗೆ ಅಂಜಿಕೆ ಇದ್ದೇ ಇರುತ್ತದೆ. ವಸ್ತುಗಳನ್ನು ಖರೀದಿಸಿದ ಮೇಲೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸುವಾಗ ಅವುಗಳ ದುರ್ಬಳಕೆಯಾಗುತ್ತದೆಯೇ ಎಂಬ ಬಗ್ಗೆ ಸಣ್ಣ ಅನುಮಾನ ಇದ್ದೇ ಇರುತ್ತದೆ. ಇದು ಆನ್‌ಲೈನ್ ಖರೀದಿಯಲ್ಲಾಗಬಹುದು, ಆಫ್‌ಲೈನ್ ಖರೀದಿಯಲ್ಲಾಗಬಹುದು. ಆದರೆ ಗ್ರಾಹಕನ ಮಾಹಿತಿಯನ್ನು ಗೌಪ್ಯವಾಗಿಡುವ ಬಗ್ಗೆ ವೆಬ್‌ಸೈಟ್‌ಗಳು ಹಾಗೂ ಸ್ಟೋರ್‌ಗಳು ಶ್ರಮಿಸುತ್ತವೆ. ನಂಬಿಕೆ ಗಳಿಕೆಗೆ ಇಲ್ಲಿ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಏಕೆಂದರೆ ಒಮ್ಮೆ ಮಾಹಿತಿ ಬಹಿರಂಗಗೊಂಡು ಗ್ರಾಹಕ ನಷ್ಟ ಅನುಭವಿಸಿದರೆ ಆತ ಮತ್ತೆಂದಿಗೂ ಅತ್ತ ಕಡೆ ತಲೆಹಾಕುವುದಿಲ್ಲ. ಈ ವಿಷಯ ಆತನ ಮೂಲಕ ಮತ್ತಷ್ಟು ಜನರಿಗೆ ತಿಳಿದರೆ ವ್ಯಾಪಾರಕ್ಕೆ ದೊಡ್ಡ ಹೊಡೆತವೇ ಬೀಳುತ್ತವೆ. ಈ ಎಲ್ಲ ಕಾರಣಗಳಿಂದ ಗೌಪ್ಯತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಬ್ರ್ಯಾಂಡ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
ಜನರು ಬ್ರ್ಯಾಂಡ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಮನಸ್ಥಿತಿಯಿಂದ ಈಗ ಹೊರಗೆ ಬಂದಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಯಾವುದು ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿರುತ್ತಾರೆ. ಇದಕ್ಕಾಗಿ ಫ್ಲಿಪ್‌ಕಾರ್ಟ್, ಇ-ಬೇಗಳಂಥ ವೆಬ್‌ಸೈಟ್‌ಗಳಲ್ಲೂ ಸಹ ಯಾವುದರಲ್ಲಿ ಕಡಿಮೆ ಆಫರ್ ಇದೆ ಎಂಬುದರ ಬಗ್ಗೆ ತಡಕಾಡುತ್ತಾರೆ. ಉದಾಹರಣೆಗೆ ದೊಡ್ಡ ಬ್ರ್ಯಾಂಡ್ ಇರುವ ಮೊಬೈಲ್ ಕಂಪನಿಗಳು ಭಾರಿ ಮೊತ್ತಕ್ಕೆ ನೀಡುವ ಹ್ಯಾಂಡ್‌ಸೆಟ್‌ಗಳಲ್ಲಿರುವ ಫೀಚರ್‌ಗಳನ್ನೇ ಸೇರಿಸಿ ಭಾರತದ ಒಂದು ಮೊಬೈಲ್ ಕಂಪನಿ ಕಡಿಮೆ ಬೆಲೆಗೆ ಗುಣಮಟ್ಟದ ಸೆಟ್ ಅನ್ನು ಮಾರುಕಟ್ಟೆಗೆ ಬಿಟ್ಟಾಗ ಮಧ್ಯಮ ವರ್ಗದ ಜನ ಈ ಕಡಿಮೆ ಬೆಲೆಯ ಮೊಬೈಲ್ ಬಗ್ಗೆಯೇ ಹೆಚ್ಚು ಒಲವು ತೋರಿಸುವ ಹಾಗೆ. ಇಲ್ಲಿ ಬ್ರ್ಯಾಂಡ್ ಹವಾ ವರ್ಕೌಟ್ ಆಗುವುದಿಲ್ಲ. ಜತೆಗೆ ವಿದೇಶಗಳಲ್ಲಿ ಮಧ್ಯಮ ವರ್ಗದ ಜನ ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತಿದ್ದು, ನಿರರ್ಥಕ ಬಂಡವಾಳ (ಡೆಡ್ ಇನ್ವೆಸ್ಟ್‌ಮೆಂಟ್) ಹೂಡಿಕೆಗೆ ಒಲವು ತೋರುತ್ತಿಲ್ಲ. ಅಂದರೆ ಕೆಲವೊಂದು ವಸ್ತುವು ಕೇವಲ ಒಂದು ಬಾರಿ ಮಾತ್ರ ಬಳಕೆ ಬರುತ್ತದೆ. ನಂತರ ಅದರ ಅವಶ್ಯಕತೆ ಇರುವುದಿಲ್ಲ. ಇಂಥ ವಸ್ತುಗಳನ್ನು ಬಾಡಿಗೆ ಮೂಲಕವೋ ಅಥವಾ ಪರಿಚಯಸ್ಥರಿಂದಲೋ ಹಂಚಿಕೊಳ್ಳುವ ಪದ್ಧತಿಗೆ (ಶೇರಿಂಗ್) ಮೊರೆ ಹೋಗುತ್ತಿದ್ದಾರೆ.
ಸಾಮಾಜಿಕ ಪ್ರತಿಕ್ರಿಯೆ
ಯಾವುದೇ ಒಂದು ವಸ್ತುವನ್ನು ಖರೀದಿಸಬೇಕೆಂದರೂ ಸಹ ಅದರ ಫೀಡ್‌ಬ್ಯಾಕ್ ಹೇಗಿದೆ ಎಂದು ನೋಡುವ ಕಾಲ ಇದಾಗಿದೆ. ಈ ಉತ್ಪನ್ನ ಹೇಗಿದೆ? ಇದೇ ರೀತಿ ಉತ್ಪನ್ನಗಳು ಬೇರೆ ಕಂಪನಿಯಲ್ಲಿವೆಯೇ? ಅಲ್ಲಿಗೂ, ಇಲ್ಲಿಗೂ ದರದಲ್ಲೇನಾದರೂ ವ್ಯತ್ಯಾಸ ಇದೆಯೇ? ಗುಣಮಟ್ಟ ಹೇಗಿದೆ? ಈ ಬಗ್ಗೆ ಈಗಾಗಲೇ ಕೊಂಡುಕೊಂಡ ಗ್ರಾಹಕನ ಅಭಿಮತ ಹೇಗಿದೆ ಎಂಬಿತ್ಯಾದಿ ಬಗ್ಗೆ ಮೊದಲು ಗಮನಹರಿಸಿ ಆ ಮೇಲೆ ಕೊಂಡುಕೊಳ್ಳುವ ಪ್ರವೃತ್ತಿ ಪ್ರಾರಂಭವಾಗಿದೆ. ಹೀಗಾಗಿ ಗ್ರಾಹಕನ ಅಭಿಪ್ರಾಯಕ್ಕೆ ಇಲ್ಲಿ ಹೆಚ್ಚಿನ ಬೆಲೆ ಇದೆ.
ದರ ಹೆಚ್ಚಳ, ಇಳಿಕೆ
ಇಂದು ಯಾವುದೇ ವಸ್ತುಗಳ ಬೆಲೆ ಏರಿಳಿತಗಳು ಕೆಲವು ಸಂದರ್ಭ, ಕಾಲ, ಬೇಡಿಕೆ ಹಾಗೂ ಪರಿಸ್ಥಿತಿಗಳಿಗೆ ಹೊಂದಿಕೊಂಡಂತೆ ಆಗುತ್ತವೆ. ಕೆಲವೊಮ್ಮೆ ಒಂದೇ ಕಂಪನಿ ತಯಾರಿಸಿದ ಒಂದೇ ಉತ್ಪನ್ನವು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದರಗಳಲ್ಲಿ ಮಾರಾಟವಾಗುವುದೂ ಉಂಟು. ಆದರೆ ಇವುಗಳ ಬೆಲೆಗಳ ಹೆಚ್ಚಳ ಅಥವಾ ಇಳಿಕೆ ದಿಢೀರನೆ ಆಗುವುದಿಲ್ಲ. ಪೈಪೋಟಿ ಹೆಚ್ಚಳ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಆನ್‌ಲೈನ್ ಶಾಪಿಂಗ್‌ಗಳಲ್ಲಿ ಅಥವಾ ಆಫ್‌ಲೈನ್ ಶಾಪಿಂಗ್‌ಗಳಲ್ಲಿ ದರ ಸಮರ ಪ್ರಾರಂಭವಾಗಲಿದೆ. ಹೀಗಾಗಿ ಬೆಲೆ ಕಡಿಮೆಯಾಗಲು ಹಬ್ಬದ ಆಫರ್‌ಗಳಿಗಾಗಿ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ.
= ಆದರ್ಶ ಎಸ್. ಅಂಚೆ
adianche@gmail.com