ಉತ್ತರ ಕರ್ನಾಟಕ ಎಂದರೆ ತಕ್ಷಣವೇ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ಇಲ್ಲಿನ ಬಿಳಿಜೋಳದ ರೊಟ್ಟಿ, ಬದನೆಕಾಯಿ ಪಲ್ಯೆ. ಅಂತಹ ಉತ್ತರ ಕರ್ನಾಟಕದ ಕಡಕ್ ರೊಟ್ಟಿ, ಕರಿಹಿಂಡಿ, ಬಿಸಿ ಬರ್ತ(ಬಜ್ಜಿ) ದ ರುಚಿಯೇ ಬೇರೆ. ಆ ಊಟದ ರುಚಿ ಬೇಕೆಂದು ಬಯಸುವವರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆಗೆ ಬನ್ನಿ.
12ನೇ ಶತಮಾನದ ಶರಣ ಕಾಯಕ ಹಾಗೂ ದಾಸೋಹ ಸಿದ್ಧಾಂತವನ್ನು ನಡೆಸಿಕೊಂಡು ಬರುತ್ತಿರುವ ಗದಗ, ಡಂಬಳ, ಎಡೆಯೂರು ಸಂಸ್ಥಾನ ಮಠದ ಜ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಇದನ್ನೇ ಜನ ಸಂಸ್ಕೃತಿಯಾಗಿಸಿ ರೊಟ್ಟಿ ಊಟದ ಜಾತ್ರೆ ಆಚರಿಸುವ ಮೂಲಕ ಜನರನ್ನು ಜಾಗೃತಗೊಳಿಸುತ್ತಿದ್ದಾರೆ. ಎಲ್ಲರೂ ಕೂಡಿಕೊಂಡು ಮಾಡಿ ಕೂಡಿಟ್ಟ ಅಡುಗೆಯನ್ನು ತಾವೂ ಉಂಡು ಇತರರನ್ನೂ ಉಣಿಸುವ ಸತ್ ಸಂಪ್ರದಾಯವನ್ನು ಶ್ರೀಗಳು ಹಾಕಿಕೊಂಡಿದ್ದಾರೆ.
ಶ್ರೀ ಮಠದಲ್ಲಿ ಅಂತಹದ್ದೊಂದು ವಿಶೇಷ ರೊಟ್ಟಿ ಜಾತ್ರೆ ಫೆ. 16ರಂದು ರಾತ್ರಿ ಜರುಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ರೊಟ್ಟಿ ಜಾತ್ರೆಗೆಂದೇ ಸುಮಾರು 20ರಿಂದ 25 ಚೀಲ ಜೋಳದ ರೊಟ್ಟಿಗಳನ್ನು ತಯಾರಿಸಿಡಲಾಗಿದೆ. ಬಹು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ರೊಟ್ಟಿ ಊಟದ ಜಾತ್ರೆಗೆ ಗದುಗಿನ ಜ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದಾಸೋಹ ಸಂಸ್ಕೃತಿಯೇ ಸಾಕಾರವಾಗಿದೆ. ಈ ರೊಟ್ಟಿ ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಎಳ್ಳು ಹಚ್ಚಿದ ರೊಟ್ಟಿ, ಸಜ್ಜೆರೊಟ್ಟಿ ಹಾಗೂ ರೊಟ್ಟಿ ಊಟದಲ್ಲಿ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ, ಸೌತೆಕಾಯಿ, ಗಜ್ಜರಿ, ಶೇಂಗಾಕಾಳು, ಅಗಸಿ ಸೇರಿಸಿ ಮಾಡಿದ ಕರಿಹಿಂಡಿ, ವಿವಿಧ ಕಾಳುಗಳು, ತರಕಾರಿ, ಸೊಪ್ಪುಗಳನ್ನು ಸೇರಿಸಿ ಕುದಿಸಿ ವಗ್ಗರಣೆ ಹಾಕಿದ ಬಿಸಿ ಬರ್ತ ಅಥವಾ ಬಜ್ಜಿಯ ರುಚಿ ರೊಟ್ಟಿ ಊಟದ ವಿಶೇಷ.
ಸಹ ಭೋಜನ
ಈ ರೊಟ್ಟಿ ಜಾತ್ರೆಗೆ ಡಂಬಳ ಗ್ರಾಮವೂ ಸೇರಿದಂತೆ ಸುತ್ತ ಮುತ್ತಲಿನ 7-8 ಗ್ರಾಮಗಳಲ್ಲಿ ಜಾತಿ-ಭೇದವೆನ್ನದೇ ಎಲ್ಲರ ಮನೆಗೆ ರೊಟ್ಟಿ ಮಾಡುವುದಕ್ಕಾಗಿ ಹಿಟ್ಟು ಹಾಕಿ ರೊಟ್ಟಿ ಮಾಡಿಸಲಾಗುತ್ತಿದೆ. ದಾಸೋಹಕ್ಕೆ ಬೇಕಾದ ಪುಂಡಿಪಲ್ಲೆ, ಪಾಲಕ್ ಸೊಪ್ಪನ್ನು ಡಂಬಳದ ಶ್ರೀಮಠದ ಜಮೀನಿನಲ್ಲಿ ಸ್ವಲ್ಪಮಟ್ಟಿನಲ್ಲಿ ಬೆಳೆಯಲಾಗುತ್ತಿದೆ. ಹೆಚ್ಚಿನ ತರಕಾರಿಯನ್ನು ಗದಗ, ಹುಬ್ಬಳ್ಳಿ, ಬೆಳಗಾವಿಯ ತರಕಾರಿ ಮಾರುಕಟ್ಟೆಯಿಂದ ಕೊಂಡುತರಲಾಗುತ್ತದೆ. ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಒಂದಾಗಿ ಒಂದೇ ಪಂಕ್ತಿಯ ಸಾಲಿನಲ್ಲಿ ಕುಳಿತುಕೊಂಡು ಸಹ ಭೋಜನ ಮಾಡುವುದು ರೊಟ್ಟಿ ಜಾತ್ರೆಯ ಇನ್ನೊಂದು ವೈಶಿಷ್ಟ್ಯವಾಗಿದೆ.
ಡಂಬಳ ಗ್ರಾಮದ ಈ ಜಾತ್ರೆಯನ್ನು ಬರೀ ರೊಟ್ಟಿ ಊಟಕ್ಕೆ ಮಾತ್ರ ಸೀಮಿತಗೊಳಿಸದೇ ಜಾತ್ರೆಯ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಡೊಳ್ಳಿನ ಪದ, ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ದೇಶಿ ಬೀಜ, ಹೈನುಗಾರಿಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.
= ಶರಣು ಸೊಲಗಿ