ನನ್ನ ಪತಿ ದುಬೈಗೆ ಕೆಲಸದ ನಿಮಿತ್ತ ಹೋಗಿ ಆಗಲೇ ಆರು ತಿಂಗಳಾಗಿತ್ತು. ಇನ್ನು ನಾನೂ ಹೊರಟೆ. 'ಸ್ವಲ್ಪ ಎಕ್ಸ್‌ಟ್ರಾ ರೊಕ್ಕ ಕೊಟ್ಟರೂ ಪರವಾಗಿಲ್ಲ. ನಿನ್ನೆಲ್ಲ ಪಾತ್ರೆ- ಪಗಡ, ಕೆಲವು ಅಗತ್ಯ ವಸ್ತುಗಳು ಇಲ್ಲಿ ಸಿಗಲಾರವು, ತಂದುಬಿಡು' ಅಂತ ಗೆಳತಿ ಪುಕ್ಕಟೆ ಸಲಹೆ ನೀಡಿದ್ದಳು. ಹೀಗಾಗಿ ನನ್ನ ಲಗ್ಗೇಜು ಗಾಬರಿ ಹುಟ್ಟಿಸುವಂತಿತ್ತು. ಏರ್‌ಪೋರ್ಟ್‌ನ ಕಸ್ಟಮ್ಸ್ ಇಲಾಖೆಗೆ ನನ್ನಿಂದ ಬೃಹತ್ ಆದಾಯ ಅಂತ ವಾರದ ಭವಿಷ್ಯ ಕೇಳಿದ ಹಾಗಿತ್ತು! ನನ್ನ ದೇವರಗಳನ್ನೂ ಪುಷ್ಪಕ ವಿಮಾನದಲ್ಲಿ ಹತ್ತಿಸಲು ದೊಡ್ಡ ಗಂಟೊಂದನ್ನೇ ಮಾಡಿದ್ದೆ (ಸದ್ಯ ದೇವರ ಮನೆ ಇಲ್ಲೇ ಉಳಿಸಿದ್ದೆ!).
ನಾನು 'ರೀ ಮನೇಲಿ ಗಸಗಸೆ ತುಂಬಾ ಮಿಕ್ಕಿದೆ, ಅಲ್ಲಿಗೇ ತಂದ್‌ಬಿಡ್ತೀನಿ, ಹೇಗೂ ನಿಮಗೆ ಗಸಗಸೆ ಪಾಯಸ ಅಂದ್ರೆ ಇಷ್ಟ ಅಲ್ವಾ?' ಅಂದೆ. ಇವರು ಗಾಬರಿಯಿಂದ 'ಆಯ್ಯೋ ಮಾರಾಯ್ತಿ, ಮೊದಲು ಅದನ್ನ ಹೊರಗೆ ಎತ್ತಿಡು. ಈ ದೇಶದಲ್ಲಿ ಗಸಗಸೆಯನ್ನ ಡ್ರಗ್ಸ್ ಅಂತ ಪರಿಗಣಿಸ್ತಾರೆ. ಅದು ಬ್ಯಾನ್ ಪದಾರ್ಥ' ಅಂದರು. ತಂಪಾದ ಗಸಗಸೆ ತಗೊಂಡು ಹೋಗೋ ಮುಂಚೇನೇ ಇವರು ಶಾಕ್ ಕೊಟ್ಟರು.
ಅಂತೂ ನನ್ನ ಬೃಹತ್ ಲಗ್ಗೇಜು, ನನ್ನೆರಡು ಪುಟ್ಟ ಲಗ್ಗೇಜು (ಮಕ್ಕಳು) ಜತೆ ದುಬೈ ಮುಟ್ಟಿದೆ. ಹೊಸ ವಾತಾವರಣ ಇಷ್ಟವಾಯಿತು. ಇಲ್ಲಿನ ವಿಶ್ವದರ್ಜೆಯ ಸೌಕರ್ಯಗಳು, ಹೈಟೆಕ್ ಶಾಪಿಂಗ್ ಮಾಲ್‌ಗಳು, ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು ಹೀಗೆ... ಎಲ್ಲವನ್ನೂ ಬೆರಗಿನಿಂದ ನೋಡುತ್ತಾ ಕ್ರಮೇಣ ಹೊಸ ಪರಿಸರಕ್ಕೆ ಹೊಂದಿಕೊಂಡೆ. ಕೆಲವು ತಿಂಗಳ ನಂತರ ನಾನೂ ಅಲ್ಲಿ ಕೆಲಸಕ್ಕೆ ಸೇರಿಕೊಂಡೆ.
ಮೂಲತಃ ಅದು ಅರಬ್ ಕಂಪನಿ. ಅಲ್ಲಿ ಎಲ್ಲರೂ ಅರಬ್ಬರೇ. ಕೆಲವರಷ್ಟೇ ಬ್ರಿಟಿಷರು. ನಾನು, ಮತ್ತೊಬ್ಬಳು ಮಲೆಯಾಳಿ- ಇಬ್ಬರೇ ಭಾರತೀಯರು. ಅಲ್ಲಿ ನಾನೊಬ್ಬಳೇ ಹಿಂದೂ. ಸಾಮಾನ್ಯವಾಗಿ ಅರಬ್ಬರು, ಭಾರತೀಯ ಮೂಲದವರನ್ನ 'ಅಲ್ ಹಿಂದ್' ಎನ್ನುತ್ತಾರೆ. ಮೊದಮೂದಲು ನಾನಾದನ್ನು ಕನ್ನಡೀಕರಿಸಿ ಗಲಿಬಿಲಿಗೊಂಡೆ.
ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಲೆಬೆನಾನ್‌ನವರು. ಆತ್ಮೀಯವಾಗಿ ಮಾತನಾಡುತ್ತಿದ್ದರು. ಅವರು ಭಾರತದ ಜೈಪುರ, ಹೈದರಾಬಾದ್, ಬೆಂಗಳೂರಿಗೆ ಬಹಳ ಸಲ ಭೇಟಿ ನೀಡಿದ್ದರಂತೆ. ಅವರ ಅಣ್ಣನ ಮಗ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದನಂತೆ. ಭಾರತದ ಸಂಸ್ಕೃತಿಯನ್ನು ಬಹಳ ಮೆಚ್ಚಿದ್ದರು. ಹಿಂದಿ ಸಿನಿಮಾ ಮೇಲಿನ ಅವರ ಒಲವು ಅಚ್ಚರಿ. ಶಾರುಖ್‌ಖಾನ್, ಕರೀನಾ ಕಪೂರ್, ಸಲ್ಮಾನ್‌ಖಾನ್, ಐಶ್ವರ್ಯ ರೈ ಸಿನಿಮಾಗಳನ್ನು ಮಿಸ್‌ಮಾಡದೆ ನೋಡುತ್ತಿದ್ದರು. ಇಲ್ಲಿನ ಟಾಕೀಸುಗಳಲ್ಲಿ ಹಿಂದಿ ಸಿನಿಮಾಗಳಿಗೆ ಅರೇಬಿಕ್ ಭಾಷೆಯ ಸಬ್‌ಟೈಟಲ್ ತೋರಿಸುತ್ತಾರೆ. ಇಲ್ಲಿ ಅನೇಕ ಅರಬ್ಬರು ಬಾಲಿವುಡ್ ತಾರೆಗಳ ಕಟ್ಟಾ ಫ್ಯಾನುಗಳು.
ಅವರು ನನ್ನನ್ನು ಕರೆಯುವುದು 'ಹಲೋ ಅರ್ರಾ...... ತೀ' ಎಂದು. 'ರಾ' ಅಕ್ಷರವನ್ನು ಎಷ್ಟು ದೀರ್ಘವಾಗಿ ಎಳೀತಾ ಇದ್ದರು ಅಂದ್ರೆ... ಅದೇ ಸಮಯದಲ್ಲಿ ಒಂದು ಲಾಡು ಆರಾಮಾಗಿ ಅವರ ಬಾಯಲ್ಲಿ ಹಾಕಬಹುದು ಅಷ್ಟು!
ಇಲ್ಲಿಯವರಿಗೆ ವರ್ಷಕ್ಕೆರಡು ದೊಡ್ಡ ಹಬ್ಬ; ಒಂದು ರಮಾದಾನ್ (ರಂಜಾನ್, ಈದ್) ಮತ್ತು ಇನ್ನೊಂದು ಈದ್ ಅಲ್ ಫಿತರ್. ನಮಗೋ ನೂರೆಂಟು ಈದ್‌ಗಳು! ಒಮ್ಮೆ ಗಣಪತಿ ಹಬ್ಬದ ಬಗ್ಗೆ ಹೇಳುತ್ತಿದ್ದೆ. ಗಣಪನ ಮೂರ್ತಿ ತಂದು ವಿಜೃಂಭಣೆಯಿಂದ ಸ್ಥಾಪಿಸಿ, ನೀರಿನಲ್ಲಿ ವಿಸರ್ಜಿಸ್ತೀವಿ ಅಂತ ವಿವರಿಸಿದಾಗ, ಅವರು ಅಚ್ಚರಿಯಿಂದ "oh soo sad, ಪಾಪ ಮೂರ್ತಿಯನ್ನೂ ನೀರಲ್ಲಿ ಹಾಕ್ತೀರಾ?' ಅಂದರು. ಸುಮ್ನೆ ತಂದು ವೇಸ್ಟ್ ಮಾಡ್ಬಿಟ್ರಲ್ಲಾ ಅನ್ನೋ ಹಾಗೆ ಹೇಳಿದಾಗ ನಂಗಂತೂ ನಗು.
ಮತ್ತೆ ನನಗೆ ಪ್ರಶ್ನೆಗಳು. 'ಅದೇನು ನಿಮ್ಮ ದೇಶದಲ್ಲಿ ಪವಿತ್ರ ನದಿಯಂತೆ ಗ್ಯಾನ್ಜಸ್ಗ್ಯಾ (ಗಂಗಾ)? ಅದರಲ್ಲಿ ಮನುಷ್ಯರ ಅಸ್ತಿಗಳನ್ನು ಹಾಕ್ತಾರಂತೆ, ಯಾಕೆ? ನಿಮ್ಮ ಸಾಧುಗಳೇಕೆ ಮೈಯೆಲ್ಲ ಬೂದಿ ಬಳ್ಕೊಂಡು, ಇಷ್ಟುದ್ದ ಕೂದಲು ಬಿಟ್ಕೊಂಡಿರ್ತಾರಲ್ಲ?' ಅಂತೆಲ್ಲ ಕೇಳಿ ನನ್ನ ತಲೇಲಿ ಹುಳ ಬಿಡ್ತಿದ್ರು. ಅವರು ತುಂಬಾ ಒಳ್ಳೆಯವರೇ, ಆದರವರಿಗೆ ನಮ್ಮ ಆಚರಣೆಗಳನ್ನು ತಿಳಿಯುವ ಕುತೂಹಲವಿತ್ತಷ್ಟೇ.
ಅಂದು ನಾಗರ ಪಂಚಮಿ. ಭಕ್ತಿಯಿಂದ ನಾಗಪ್ಪನಿಗೆ ಹಾಲೆರೆದು, ತಂಬಿಟ್ಟು ಉಂಡೆಗಳನ್ನು ಅರ್ಪಿಸಿ, ಪೂಜೆ ಮುಗಿಸಿ ಆಫೀಸಿಗೆ ಸೀರೆ ಉಟ್ಟುಕೊಂಡು ಹೊರಟೆ. ಪ್ರಾಜೆಕ್ಟ್ ಮ್ಯಾನೇಜರು ನನ್ನೆಡೆ ತಿರುಗಿ, 'ಒಹ್ ಅರ್ರಾ.... ತೀ, ಏನು ಇವತ್ತು ಭಾರತೀಯ ಉಡುಗೆಯಲ್ಲಿ ಬಂದು ಬಿಟ್ಟಿದ್ದೀರಾ? ಇಂದು ನಿಮಗೆ ಯಾವ ಈದ್?' ಎಂದು ತಮಾಷೆಯಾಗಿ ಕೇಳಿದರು. ನಾನು, 'ಸರ್ ಇವತ್ತು "ಸ್ನೇಕ್ ಗಾಡ್" (ನಾಗಪ್ಪನ) ಹಬ್ಬ' ಅಂದಾಗ ಅವರಿಗೆ ಶಾಕ್. ಆಗವರು ಏನು ನಿಮಗೆ ಹಾವೂ ದೇವರೇ?' ಅಂತ ಭಯ ಮಿಶ್ರಿತ ಅಚ್ಚರಿಯ ಕಣ್ಣುಗಳನ್ನು ಹಿಗ್ಗಿಸಿ ಕೇಳಿದರು. ನಾನು 'ಹೌದು ಸರ್. ನಮ್ಮ ಸಂಪ್ರದಾಯದಲ್ಲಿ ಕೆಲವು ಪ್ರಾಣಿಗಳು ದೇವರ ಸ್ವರೂಪ. ನಾವು ಸ್ನೇಕ್‌ಗಾಡ್ ಅನ್ನು ಭಕ್ತಿಯಿಂದ ಪೂಜಿಸಿ, ಹಾಲೆರೆದು, ಸ್ವೀಟ್‌ಗಳನ್ನು ಅರ್ಪಿಸ್ತೀವಿ' ಅಂದೆ. ಅವರು ಆಗ ಜೀವಂತ ಹಾವನ್ನೇ ಕಲ್ಪಿಸಿಕೊಂಡು, ನನ್ನನ್ನು ಕಾಡಿನಲ್ಲಿ ಬೇಟೆಗಾರನ ರೂಪದಲ್ಲಿ ಚಿತ್ರಿಸಿಕೊಂಡರೇನೋ ಅನ್ಸುತ್ತೆ. ಅವರ ನೋಟ ಹಾಗಿತ್ತು.
- ಆರತಿ ಘಟಿಕಾರ್, ದುಬೈ
arathi_mohit@yahoo.co.in