ನನ್ನ ತಲೆಯಲ್ಲಿ ಹೊಸ ಹೊಸ ಆಲೋಚನೆ ಮೂಡಿದಾಗಲೆಲ್ಲಾ, ಮನೆಯಲ್ಲಿ ಕರೆಂಟ್ ಇರೊಲ್ಲ ಅಥವಾ ಡಾಟ್‌ಪೆನ್ ಬರೆಯೋಲ್ಲ ಅಥವಾ ನಾನು ಗಾಢ ನಿದ್ರೆಯಲ್ಲಿರ್ತೀನಿ.
ನಾನು ಮಾಡುವ ಕೆಲಸ ಮತ್ತು ನಾನು ಆಡುವ ಮಾತು, ಇವೆರಡನ್ನೂ ಬಿಟ್ಟು ಉಳಿದಿದ್ದೆಲ್ಲಾ ನನ್ನ ಹೆಂಡತಿಗೆ ಇಷ್ಟ.
ನನ್ನ ಹೆಂಡತಿ ವಿಶ್ವಜ್ಞಾನಿ, ಎಂಥಾ ಸಮಸ್ಯೆಯಾದರೂ ಪರಿಹಾರ ಹೇಳೇಬಿಡ್ತಾಳೆ.
ನನ್ನ ಕೆಲಸ ನನಗೆ ಇಷ್ಟ. ಅದಕ್ಕೇ ಆಫೀಸಿನಲ್ಲಿ ಅದನ್ನ ಮುಗಿಸದೆ ಮುಂದೆ ಇಟ್ಕೊಂಡೇ ಕೂತಿರ್ತೀನಿ.
ನನ್ನ ಹೆಂಡ್ತಿ ಪ್ರಪಂಚ ತೋರಿಸಿ ಅಂದ್ಳು, ನಾನು ಅಟ್ಲಾಸ್ ತಂದುಕೊಟ್ಟೆ.
ನನ್ನ ಕಂಪ್ಯೂಟರ್ ಇನ್ನೂ ಸರಿ ಹೋಗಿಲ್ಲ, ಯಾವಾಗಲೂ ತಲೆಕೆಳಗಾಗೇ ಬೀಳುತ್ತೆ.
ನನ್ನ ಹೆಂಡತಿ ಪಾಪ ಸದಾ ಅಡುಗೆಮನೆಯಲ್ಲೇ ಇರ್ತಾಳೆ, ಟಿವಿ, ಟೆಲಿಫೋನ್ ಎರಡೂ ಅಲ್ಲೇ ಇರೋದು.
ನನ್ನ ಟಿವಿ ನನಗೆ ಬೇಕಾದ ಶಾಂತಿ ಸಮಾಧಾನ ಕೊಡುತ್ತೆ. ನನ್ನ ಹೆಂಡತಿ ಅದರ ಮುಂದೇನೇ ಕೂತಿರೋದರಿಂದ.
ನನ್ನ ನಾಲಿಗೆ ಒದ್ದೆಯಾಗಿರುವುದರಿಂದ, ಜಾರುವ ಸಾಧ್ಯತೆಗಳು ಜಾಸ್ತಿ.
ನನ್ನ ಚಿನ್ನದ ಚೈನಿನ ಗಡಿಯಾರ ಸದಾ ಚಲಿಸ್ತಾನೇ ಇರುತ್ತೆ; ಮನೆಯಿಂದ ಗಿರವಿ ಅಂಗಡೀಗೆ, ಗಿರವಿ ಅಂಗಡಿಯಿಂದ ಮನೇಗೆ.
ನನ್ನ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಮನೋಚಿಕಿತ್ಸಕನ ಬಳಿಗೆ ನಾನು ಹೋಗೋದಿಲ್ಲ.
ನನ್ನ ಹೆಂಡತಿ ಜಾಣೆ, ಸಂಬಳದ ಖಾಲಿಕವರುಗಳನ್ನೆಲ್ಲಾ ಉಳಿಸಿದ್ದಾಳೆ.
ನನ್ನ ನರನಾಡಿಗಳಲ್ಲಿ ರಂಗಭೂಮಿ ತುಂಬಿಕೊಂಡಿದೆ. ಅದರ ಬದಲು ಸ್ವಲ್ಪ ರಕ್ತವೂ ಇದ್ದಿದ್ದರೆ ಚೆನ್ನಾಗಿತ್ತು ಅಂತಾರೆ ನನ್ನ ಡಾಕ್ಟ್ರು.
= ಸಂಪಟೂರು ವಿಶ್ವನಾಥ್