ಖುಷಿ

ಸರ್‌ಮೇಡಂ!

ಗೂಗಲ್ ಪೇಜ್‌ಗೆ ಹೋಗಿ 'ಮಾಲತಿ ಸರದೇಶಪಾಂಡೆ' ಅಂತ ಹುಡುಕಾಟಕ್ಕೆ ಮುಂದಾದರೆ ಪರ ಭಾಷೆಯ ನಟಿಯ ಭಾವಚಿತ್ರಗಳು ರಾರಾಜಿಸುತ್ತವೆ! ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಇಂಟರ್‌ನೆಟ್‌ಗೂ ಪೋಷಕ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ಅಂದ್ರೆ ಭಯ, ಭಕ್ತಿ, ಗೌರವಾನೇ ಇಲ್ಲ ನೋಡಿ! ಇರಲಿ, ಈಗ ಇಲ್ಲಿ ಹೇಳಲಿಕ್ಕೆ ಹೊರಟಿರುವುದು ಕನ್ನಡದ ಮಾಲತಿ ಸರದೇಶಪಾಂಡೆ ಅವರ ಕುರಿತು. ಹೆಸರಿನಲ್ಲಿ 'ಸರದೇಶಪಾಂಡೆ' ಇರುವುದರಿಂದ ನೀವು ಅವರಿಗೆ 'ಆಲ್ ದಿ ಬೆಸ್ಟ್‌' ಅಂದ್ರೆ, ಅವರ ಪತಿ ಯಶವಂತ ಸರದೇಶಪಾಂಡೆ ಅವರಿಗೆ ಮಾತ್ರ ಸಲ್ಲುತ್ತದೆ!
ಕಿರುತೆರೆಯ ಬ್ಯುಸಿ ಗ್ಲಾಮರ್ 'ಅಮ್ಮ'ಂದಿರನ್ನು ಒಮ್ಮೆ ನೆನಪಿಸಿಕೊಳ್ಳಿ. ಅನೇಕರು ಕಣ್ಣ ಮುಂದೆ ಸುಳಿಯುತ್ತಾರೆ. ೆಅವರ ಸಾಲಿನಲ್ಲಿ ಬಹುಬೇಗ ಗಮನ ಸೆಳೆಯುವುದು ಮಾಲತಿ ಸರದೇಶಪಾಂಡೆ. ಸಾಧಕ ಪತಿಯ ಹಿಂದಿನ ಸಾಧಕಿ ಇವರು.
ಸಿನಿಮಾ, ಕಿರುತೆರೆ, ನಾಟಕ ಸೇರಿದಂತೆ ಕಲಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಯಶವಂತ ಸರದೇಶಪಾಂಡೆ ಹಾಗೂ ಮಾಲತಿ ಸರದೇಶಪಾಂಡೆ ದಂಪತಿಯದು ದೊಡ್ಡ ಹೆಸರು. ಯಾವುದೇ ಪಾತ್ರಕ್ಕೆ ಹೊಂದಿಕೊಳ್ಳುವ ಮಾಲತಿ ಅವರು ಪೋಷಕ ಪಾತ್ರಗಳ ಮುಖ್ಯ ಪಿಲ್ಲರ್. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಮಾಲತಿ, ತೀರಾ ಚಿಕ್ಕ ವಯಸ್ಸಿನಲ್ಲೇ ಕ್ಯಾಮೆರಾ ಮುಂದೆ ನಿಂತವರು. ಅವರ ಮೂಲ ರಂಗಭೂಮಿ. ಈಗಲೂ ರಂಗವೇದಿಕೆಯಲ್ಲಿ ಸಕ್ರಿಯವಾಗಿರುವ ಇವರಿಗೆ ಸಿನಿಮಾಗಳಲ್ಲಿ ನಟಿಸುವುದಕ್ಕೂ ಸಮಯ ಸಿಗುತ್ತಿಲ್ಲ.
ತಮ್ಮ ಕಲಾಪಯಣವನ್ನು ಮಾಲತಿ 'ಖುಷಿ'ಯೊಂದಿಗೆ ಹಂಚಿಕೊಂಡಿದ್ದು ಹೀಗೆ-
    ನಾನು ಓದಿದ್ದು ಎಸ್‌ಎಸ್‌ಎಲ್‌ಸಿ. ಬಿಜಾಪುರದ ಬಳಿ ನಮ್ಮ ಊರು. ತೀರಾ ಚಿಕ್ಕವಯಸ್ಸಿಗೆ ಬಣ್ಣ ಹಚ್ಚಿದೆ. ಕಾರಣ ನಮ್ಮ ಮನಯಲ್ಲೇ  ರಂಗಭೂಮಿಯ ನೆರಳು ಇತ್ತು. ನನ್ನ ಅಜ್ಜ ಪ್ರಸಿದ್ಧ ನಾಟಕಕಾರ. ಅವರೇ ನನ್ನ ಬಣ್ಣದ ಜಗತ್ತಿನ ಬಹುದೊಡ್ಡ ಸ್ಫೂರ್ತಿ ಮತ್ತು ಪ್ರೇರಣೆ. ಅವರ ಜೊತೆಯೇ ನಾನು ನಾಟಕಗಳನ್ನು ನೋಡಲು ಆರಂಭಿಸಿದ್ದು. ಅಜ್ಜನ ಜೊತೆ ಹೆಚ್ಚು ಒಡನಾಟ ಇದ್ದುದ್ದರಿಂದ ಚಿಕ್ಕವಯಸ್ಸಿನಲ್ಲೇ ಬಣ್ಣದ ಗೀಳು ಅಂಟಿಕೊಂಡಿತು.
    ಮೊದಲು ಅಭಿನಯಿಸಿದ್ದು 'ಹಯವದನ' ನಾಟಕದಲ್ಲಿ. ಆರಂಭದಲ್ಲೇ ಮುಖ್ಯ ಪಾತ್ರ. ಮೊದಲ ನಾಟಕದಲ್ಲೇ ಗೆಲುವಿನ ಸಂಭ್ರಮ ಸಿಕ್ಕಿತು. ಅದಕ್ಕೂ ಮೊದಲು ಆಕಾಶವಾಣಿಯಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದೆ. ಬಹುಶಃ ಅಕಾಶವಾಣಿಯಲ್ಲಿ ತೊಡಗಿಸಿಕೊಂಡಿದ್ದಕ್ಕೋ ಏನೋ, ನಾಟಕಗಳಲ್ಲಿ ಹೆಚ್ಚುಹೆಚ್ಚು ಅವಕಾಶ ಸಿಕ್ಕಿತು. 1991ರಲ್ಲಿ ರಂಗಭೂಮಿಗೆ ಬಂದ ನಾನು ಇಲ್ಲಿವರೆಗೂ 'ಆಲ್ ದಿ ಬೆಸ್ಟ್‌' ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ.
    1997ರಲ್ಲಿ ಯಶವಂತ ಅವರು 'ಆಲ್ ದಿ ಬೆಸ್ಟ್‌' ನಾಟಕವನ್ನು ಶುರು ಮಾಡಿದ್ರು. ಆಗ ನಾನು ಈ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಲು ಬಂದೆ. ಈ ನಾಟಕದಲ್ಲೇ ನನ್ನ ಮತ್ತು ಯಶವಂತ ಅವರ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೀತಿಗೆ ತಿರುಗಿತು. ಆದರೆ, ಮೊದಲು ಪ್ರಪೋಸ್ ಮಾಡಿದ್ದು ಮಾತ್ರ ಯಶವಂತ ಸರದೇಶಪಾಂಡೆ ಅವರೇ. ಹೀಗಾಗಿ ನನ್ನ ಹಿಂದೆ ಅವರು ಬಂದ್ರೇ ಹೊರತು ನಾನು ಅವರ ಹಿಂದೆ ಹೋಗಲಿಲ್ಲ. ಹ್ಹ ಹ್ಹ ಹ್ಹ...
    ನನಗೆ ನನ್ನದೇ ಆದ ಕಲಾ ಜಗತ್ತಿನ ಹಿನ್ನೆಲೆ ಇದೆ. ನಾನೂ ಕೂಡ ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದೇನೆ. ನನ್ನದೇ ಐಡೆಂಟಿಟಿ ಇದೆ. ಆದರೂ, ಮಾಲತಿ ಅಂದ್ರೆ ಯಶವಂತ ಸರದೇಶಪಾಂಡೆ ಹೆಂಡತಿ ಅಂತ ಗುರುತಿಸುತ್ತಾರೆ. ಇದರಿಂದ ನನಗೆ ಯಾವುದೇ ಬೇಸರ ಮತ್ತು ಇಗೋ ಇಲ್ಲ. ಯಾಕೆಂದರೆ ಯಶವಂತರ ಸಾಧನೆ, ಪರಿಶ್ರಮ ಮತ್ತು ಅವರ ಪ್ರತಿಭೆ ಏನು ಅಂತ ನನಗೆ ಗೊತ್ತು. ನನ್ನನ್ನ ಅವರ ಐಡೆಂಟಿಟಿಯಲ್ಲಿ ಗುರುತಿಸುತ್ತಾರೆ ಅಂದ್ರೆ ಅದಕ್ಕೆ ಹೆಮ್ಮೆ ಪಡಬೇಕು.
    ನನಗೆ ಸ್ಟೇಜ್ ಪಿಯರ್, ಕ್ಯಾಮರಾ ಭಯ ಇಲ್ಲ. ಇದು ನನ್ನ ನಟನೆಯ ಶಕ್ತಿ ಮತ್ತು ವಿಶ್ವಾಸ ಕೂಡ. ಯಾವುದೇ ಪಾತ್ರ ಕೊಟ್ಟರೂ ಅಭಿನಯಿಸಬಲ್ಲೆ ಎಂದು ಧೈರ್ಯವಾಗಿ ಹೇಳಿಕೊಳ್ಳುವುದಕ್ಕೆ ರಂಗಭೂಮಿಯ ಹಿನ್ನೆಲೆಯೇ ಕಾರಣ.
    ನಾನು ಅಭಿನಯಿಸಿದ ಮೊದಲ ಸಿನಿಮಾ 'ಹೃದಯವಂತ'. ಮೊದಲ ಧಾರಾವಾಹಿ 'ಅಭಿಮಾನ್‌'. ಸಿನಿಮಾಗಳಲ್ಲಿ ಅತಿ ಹೆಚ್ಚು ನಾಯಕ ಅಥವಾ ನಾಯಕಿಗೆ ಅಮ್ಮನ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ. ಒಂದೇ ರೀತಿಯ ಪಾತ್ರವಾದರೂ ಕೂಡ ಬೇಸರವಿಲ್ಲ. ಯಾಕೆಂದರೆ ಪಾತ್ರ ಒಂದೇ ಆಗಿದ್ದರೂ ನಟನೆಯಲ್ಲಿ ವಿವಿಧತೆ ತೋರಿಸಬಹುದಲ್ಲ. 'ಡಕೋಟಾ ಪಿಕ್ಚರ್‌', 'ಶಂಕರ್ ಐಪಿಎಸ್‌', 'ರಾಮ್‌', 'ಅಂತೂ ಇಂತೂ ಪ್ರೀತಿ ಬಂತು', 'ಬಾ ಬಾರೋ ರಸಿಕಾ' ಹೀಗೆ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. 'ಡಕೋಟ ಪಿಕ್ಚರ್‌' ತುಂಬಾ ಚೆನ್ನಾಗಿತ್ತು. ಅದಕ್ಕೆ ಯಶವಂತ ಅವರದ್ದೇ ಚಿತ್ರಕಥೆಯಾಗಿರುವುದರಿಂದ ಪಾತ್ರಗಳ ಸಂಯೋಜನೆ, ಸಂಭಾಷಣೆಯ ಶೈಲಿ ಚೆನ್ನಾಗಿತ್ತು.
    ಸದ್ಯ ಈಗ 'ಆಕಾಶದೀಪ', 'ಮದರಂಗಿ' ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದೇನೆ. ಜೊತೆಗೆ ಬಹುಭಾಷಾ ನಟ ಪ್ರಕಾಶ್ ರೈ ನಿರ್ದೇಶನದ 'ಒಗ್ಗರಣೆ' ಹಾಗೂ 'ಬ್ಲಾಕ್ ಕೋಬ್ರಾ', 'ಕೃಷ್ಣ ಸನ್ ಆಫ್ ಸಿಎಂ' ಸಿನಿಮಾಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 'ಒಗ್ಗರಣೆ' ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದರ ನಡುವೆ ನಾಲ್ಕೈದು ಜಾಹೀರಾತುಗಳಿಗೂ ಮಾಡೆಲ್ ಆದೆ. ಅಂದಹಾಗೆ 'ಚೈಲ್ಡ್‌' ಎನ್ನುವ ಇಂಗ್ಲೀಷಿನ ಸಾಕ್ಷ್ಯ ಚಿತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಆದರೆ, ನನ್ನ ರಂಗಭೂಮಿ ಚಟುವಟಿಕೆಗಳಿಂದ ತುಂಬಾ ಸಿನಿಮಾಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಉದಾ: 'ಮುಂಗಾರು ಮಳೆ', 'ನಿನ್ನಿಂದಲೇ', 'ಮಾಣಿಕ್ಯ' ಚಿತ್ರಗಳು.
    ರಂಗಭೂಮಿ, ಕಿರುತೆರೆ, ಸಿನಿಮಾ ಈ ಮೂರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುನ ನನಗೆ ರಂಗಭೂಮಿ ತುಂಬಾ ಮಜವಾಗಿರುತ್ತದೆ ಮತ್ತು ಲೈವ್ಲಿ ಆಗಿರುತ್ತದೆ. ಆದರೆ, ಸದ್ಯಕ್ಕೆ ಸಿನಿಮಾ ಮತ್ತು ಕಿರುತೆರೆ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಈಗ 'ಆಲ್ ದಿ ಬೆಸ್ಟ್‌' ನಾಟಕ ಒಂದು ಸಾವಿರ ಪ್ರದರ್ಶನದತ್ತ ದಾಪುಕಾಲಿಟ್ಟಿದೆ. ಅದರ ತಿರುಗಾಟದಲ್ಲಿದ್ದೇನೆ.
    ನಾನು ಟೇಕ್ ಒನ್ ಕಲಾವಿದೆ ಎಂದು ನನ್ನ ಬಗ್ಗೆ ನಾನೇ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಯಾಕೆಂದರೆ ಧಾರಾವಾಹಿಗಳಲ್ಲಿ ನಾಲ್ಕೈದು ಪುಟಗಳ ಸಂಭಾಷಣೆಯನ್ನು ಒಂದೇ ಟೇಕ್‌ನಲ್ಲಿ ಮುಗಿಸುತ್ತೇನೆ. ಇದಕ್ಕೆ ಸಪೋರ್ಟ್ ಆಗಿರುವುದು ನನ್ನ ಮೆಮೋರಿ.
    ನಾನು ನೋಡಿರುವ ಪ್ರಕಾರ ನಮ್ಮಲ್ಲಿ ಪೋಷಕ ಪಾತ್ರಗಳಿಗೆ ಹೆಚ್ಚು ಸ್ಕೋಪ್ ಇಲ್ಲ. ಅದು ಯಾಕೆ ಅಂತ ಗೊತೇತಿಲ್ಲ. ಕೆಲವು ಚಿತ್ರಗಳಲ್ಲಂತೂ ಕಾಟಾಚಾರಕ್ಕೆ ಪೋಷಕ ಪಾತ್ರಗಳನ್ನು ಇಡಲಾಗಿರುತ್ತದೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇದೆ.
    ನಟನೆಯ ಹೊರತಾಗಿ ಸಂಗೀತ ಕೇಳುತ್ತೇನೆ. ಹಾಡುತ್ತೇನೆ. ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೇನೆ!

=  ಆರ್.ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!