ಖುಷಿ

ಅಂಕಗಳ ಅಂಕಣದಲ್ಲಿ...

ಪ್ರತಿಭೆ ಎನ್ನುವುದು ಹುಟ್ಟಿನಿಂದಲೇ ಬರುತ್ತದೆ, ಆದರೆ ಪರಿಪೂರ್ಣತೆ ತರಬೇತಿ- ಪರಿಶ್ರಮದಿಂದ ಮಾತ್ರ ದಕ್ಕುವಂಥದ್ದು. ಜೀನಿಯಸ್‌ನ ಮೂಲ ಇರುವುದು ಜೀನ್‌ನಲ್ಲಿ. ಒಪ್ಪೋಣ. ಆದರೆ ಅದು ಪ್ರತಿಯೊಂದು ಮಗುವಿನಲ್ಲೂ ಮೊಳೆತಿರುತ್ತದೆ. ಅದನ್ನು ಗುರುತಿಸಿ, ನೀರೆರೆಯಬೇಕಾದ್ದು ಪರಿಸರದ ಹೊಣೆ. ಗುಣಾತ್ಮಕ, ಮೌಲ್ಯಯುತ ಕ್ರಮಗಳಿಂದ ಮಾತ್ರವೇ ಒಬ್ಬ ಜೀನಿಯಸ್‌ನನ್ನು ತಯಾರಿಸುಲಾಗುತ್ತದೆಯೇ ಹೊರತೂ ಹಲವು ಮಿಶ್ರಣಗಳನ್ನು ಕಲಕಿ ಎರಕ ಹೊಯ್ಯುವುದರಿಂದಾಗಲೀ, ಹರಕೆ, ಹಾಡ್ಯಗಳನ್ನು ಹೊತ್ತು ಅಂಥ ಮಗುವನ್ನು ಹೆತ್ತು ಬಿಡುತ್ತೇನೆ ಎಂಬ ನಂಬಿಕೆಯಿಂದಾಗಲೀ ಜೀನಿಯಸ್‌ನನ್ನು ಪಡೆಯಲು ಸಾಧ್ಯವೇ ಇಲ್ಲ. ನಮ್ಮ ಮೆದುಳಿನ ವಿಶೇಷ ಗುಣ ಮತ್ತು ಅದರ ವೈಫಲ್ಯ ಎರಡೂ ಒಂದೇ. ಏನೆಂದರೆ ಬಳಸದೇ ಇದ್ದ ಭಾಗ ಸಾಯುತ್ತದೆ. ಶೇ. 25ರಷ್ಟು ಮೆದುಳನ್ನು ಮಾತ್ರ ಸದಾ ಕ್ರಿಯಾಶೀಲವಾಗಿಟ್ಟು ಉಳಿದದ್ದನ್ನು ಹಾಗೆಯೇ ಬಿಟ್ಟರೆ ಅದು ನಮ್ಮೊಂದಿಗೇ ಸತ್ತು ಹೋಗುತ್ತದೆ. ಹಾಗೆ ಸಾಯದಂತೆ ಮೆದುಳಿನ ಎಲ್ಲ ಭಾಗವನ್ನೂ ಕ್ರಿಯಾಶೀಲವಾಗಿರುವಂತೆ ಮಾಡಲು ಮೂಲಭೂತವಾಗಿ ಬೇಕಾಗಿರುವಂಥದ್ದು ಪ್ರೇರಣೆ. ಅಂಥ ಪ್ರೇರಣೆಯನ್ನು ಮಕ್ಕಳಿಗೆ ಹೆತ್ತವರು, ಶಿಕ್ಷಕರು, ಬಂಧುಗಳು ಅಥವಾ ಸುತ್ತಲಿನ ಪರಿಸರದ ವ್ಯಕ್ತಿಗಳು ನೀಡಬೇಕಾಗುತ್ತದೆ. ಆಗ ತಂತಾನೇ ಅವರೊಳಗಿನ ಆಸಕ್ತಿ, ಕುತೂಹಲಗಳು ಹೆಚ್ಚಿ ಮಕ್ಕಳು ಆತ್ಮವಿಶ್ವಾಸದೊಂದಿಗೆ ಮುಂದಡಿ ಇಡಲಾರಂಭಿಸುತ್ತವೆ.
ಹೆಜ್ಜೆ ಇಡಲಾರಂಭಿಸುವ ಮಗುವನ್ನು ಬಿದ್ದುಬಿಟ್ಟೀತೆಂದು ಕಟ್ಟಿಹಾಕಿ ಬಿಟ್ಟರೆ ಅದರ ಕಾಲು ಬಲಿತು ನಡೆಯುವುದನ್ನು ಕಲಿಯುವುದಾದರೂ ಹೇಗೆ? ಅಥವಾ ನಾವೇ ಅದನ್ನು ಕೆಳಕ್ಕೆ ಇಳಿಸದೆ ಎತ್ತಿಕೊಂಡೋ, ಕೈಹಿಡಿದುಕೊಂಡೋ ತಿರುಗಾಡಿಸಿದರೂ ಮಗು ಅವಲಂಬನೆಯಿಂದ ಹೊರಬರುವುದೇ ಇಲ್ಲ. ಮಗು ಬೀಳಲೇಬೇಕು. ಅದರಿಂದ ಅದಕ್ಕೆ ತೀವ್ರ ಆಘಾತವಾಗದಂತೆ ಕಣ್ಣೆಚ್ಚರದಲ್ಲಿ ಇಟ್ಟುಕೊಳ್ಳುವುದಷ್ಟೇ ನಮ್ಮ ಕರ್ತವ್ಯ. ಜತೆಗೆ ಹೀಗೆಯೇ ನಡೆ ಎನ್ನುವುದನ್ನು ನಾವದರ ಮುಂದೆ ನಡೆದಾಡಿ ತೋರಿಸಿ ತಿದ್ದಬೇಕು. ಆಗಲೇ ಅದು ದೃಢವಾಗಿ ತನ್ನ ಕಾಲಮೇಲೆ ನಿಂತುಕೊಳ್ಳುತ್ತದೆ. ನಂತರ ದಿನವೂ ಸ್ವಲ್ಪ ಸ್ವಲ್ಪವೇ ನಡೆದಾಡಿಸಿ, ಓಡಿಸಿ, ಕಠಿಣ ವ್ಯಾಯಾಮಗಳನ್ನು ಕಲಿಸಿ, ತಂತ್ರಗಾರಿಕೆಗಳನ್ನು ಕಲಿಸಿ ಆ ಮಗುವನ್ನು ನುರಿತ ಓಟಗಾರನನ್ನಾಗಿ ಸಿದ್ಧಪಡಿಸಬಹುದು. ಆತ್ಮಬಲ, ಸ್ವಯಂಶಿಸ್ತು, ಪರಿಶ್ರಮ, ಕಾರ್ಯತತ್ಪರತೆಗಳನ್ನು ಮಕ್ಕಳಲ್ಲಿ ತುಂಬಿದಾಗ ಬೇರೆ ಬೇರೆ ಅಭಿರುಚಿಯ ಮಕ್ಕಳು ಆಯಾ ಕ್ಷೇತ್ರಗಳ ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ಇಲ್ಲದಿದ್ದರೆ ಕತ್ತೆಯನ್ನು ಗಾಣಕ್ಕೆ ಕಟ್ಟಿ ಕೋಣವನ್ನು ಮರಳುಗಾಡಿಗೆ ಬಿಟ್ಟಂತಾಗಬಹುದು!
ತಮ್ಮ ಮಗು ಎಲ್ಲರಿಗಿಂತ ಬುದ್ಧಿವಂತನಾಗಬೇಕು ಎಂಬುದು ಬಹುಶಃ ಈ ಭೂಮಿಯ ಮೇಲಿನ ಎಲ್ಲರ ಹೆಬ್ಬಯಕೆಯೂ ಆಗಿರುತ್ತದೆ. ಆದರೆ ಅಂಥ ಕನಸಿಗೆ ನೀರೆರೆದು ಪೋಷಿಸಿಕೊಳ್ಳುವಲ್ಲಿ ಸ್ವತಃ ಹೆತ್ತವರೇ ವಿಫಲರಾಗುತ್ತಾರೆ. ಹೊಸತನ, ಆವಿಷ್ಕಾರಗಳಿಗೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸೃಜನಶೀಲರನ್ನಾಗಿಸಿದಾಗಲೇ ಅವರೊಳಗಿನ ಪ್ರತಿಭೆ ಪುಟವಿಟ್ಟುಕೊಂಡು ಹೊಳೆಯಲು ಸಾಧ್ಯ. ಮಾತ್ರವಲ್ಲ, ವ್ಯಕ್ತಿ, ವಸ್ತು, ಸ್ಥಳ, ಸನ್ನಿವೇಶ ಮತ್ತು ವಿಷಯಗಳ ಬಗ್ಗೆ ನಾವು ಮೊದಲು ಸಕಾರಾತ್ಮಕವಾಗಿ ಯೋಚಿಸಬೇಕು. ಆಗ ನಮ್ಮ ಮಕ್ಕಳು ಸಹ ವಿಶ್ವಾಸದ ಹೆಜ್ಜೆಗಳನ್ನು ಇಡಲು ಸಾಧ್ಯ. ಸ್ಪರ್ಧೆಗೆ ಹೆದರುವ ಮನಸ್ಸುಗಳಿಂದ ಯಾವುದೇ ಸಾಧನೆ ಸಾದ್ಯವೇ ಇಲ್ಲ. ಹೀಗಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳಲ್ಲಿನ ಪುಕ್ಕಲುತನ, ಹಿಂಜರಿಕೆ, ಸಂಕೋಚ, ಅವಿಶ್ವಾಸಗಳನ್ನು ಹೊಡೆದೋಡಿಸಿ. ಜತೆಗೆ ಎಲ್ಲ ಮಕ್ಕಳೂ ಎಲ್ಲದರಲ್ಲೂ ಪರಿಣಿತರಾಗಿರಲು ಸಾಧ್ಯವೇ ಇಲ್ಲ. ಅದು ನಮ್ಮ ದೌರ್ಬಲ್ಯ. ನವಿಲನ್ನು ಕಂಡೊಡನೆ ನಮ್ಮ ಮಗುವೂ ನೃತ್ಯ ಮಾಡಬೇಕಿತ್ತು ಎನಿಸುತ್ತದೆ. ಕೋಗಿಲೆಯನ್ನು ನೋಡಿ ಮಗುವನ್ನು ಹಾಡುಗಾರನಾಗಿಸಬೇಕಿತ್ತು ಎಂದುಕೊಳ್ಳುತ್ತೇವೆ. ನಿಜವಾಗಿ ಅದು ಓಡುವ ಚಿಗರೆ. ಒಂದೊಂದು ಮಗುವಿನಲ್ಲಿ ಒಂದೊಂದು ವಿಶೇಷತೆ ಇರುತ್ತದೆ. ಅದನ್ನು ಗುರುತಿಸಿ ಆ ದಾರಿಯಲ್ಲೇ ಮುನ್ನಡೆಸಿದರೆ ಯಶಸ್ಸು ಖಂಡಿತಾ ಲಭ್ಯ.
ಪರೀಕ್ಷೆಯ ಹೊಸ್ತಿಲಿನಲ್ಲಿ ನಿಮ್ಮ ಮಗುವಿನ ಸಿದ್ಧತೆ ಹೇಗಿರಬೇಕು. ಉತ್ತಮ ಅಂಕ ಗಳಿಕೆಗೆ ಯಾವ ಮಾರ್ಗ ಅನುಸರಿಸಬೇಕು ಎಂಬ ಕಿವಿಮಾತನ್ನು ಈ ಸಂಚಿಕೆ ಹೊತ್ತು ತರುತ್ತಿದೆ. ನಿಜವಾಗಿ ಇದು ಪರೀಕ್ಷೆಯೆಂಬ ರಣರಂಗದಲ್ಲಿ ಹೋರಾಡಲು ಸಿದ್ಧವಾಗುತ್ತಿರುವ ಮಕ್ಕಳಿಗಾಗಿ ಅಲ್ಲವೇ ಅಲ್ಲ. ಅವರನ್ನು ಸಂಬೋಧಿಸಿ ಇದ್ದರೂ ಇದನ್ನು ಪಾಲಿಸುವಂತೆ ನೋಡಿಕೊಳ್ಳಬೇಕಾದ ಹೊಣೆ ಹೆತ್ತವರದ್ದೇ ಎಂಬ ನಂಬಿಕೆ ನಮ್ಮದು.
ಆಲ್ ದಿ ಬೆಸ್ಟ್.
ವಂದನೆಗಳೊಂದಿಗೆ


- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ