ಆಡುವವರು ಅವರು ಪದ ಹೇಳುವವರು ಇವರು!
ಅಬ್ಬಾ! 1983ರಲ್ಲಿ ಆಂಗ್ಲರ ಪಿಚ್‌ನಲ್ಲಿ ಕಪಿಲ್‌ದೇವ್ ಬೌಂಡರಿ ಸಿಕ್ಸರ್‌ಗಳನ್ನು ಅಟ್ಟುತ್ತಿದ್ದರೆ, ಅಲ್ಲಿ ಜಯಘೋಷಗಳು ಆಕಾಶಕ್ಕೆ ತೋರಣ ಕಟ್ಟಿದ್ದವು. ಆ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಪಿಲ್ ನಾಯಕತ್ವದ ಪಡೆ ಟ್ರೋಫಿಯನ್ನೂ ಗೆದ್ದಿತು. ಆಗ ಟಿವಿಗಳಲ್ಲಿ ನೇರ ಪ್ರಸಾರವಿರಲಿಲ್ಲ. ಸ್ಯಾಟ್‌ಲೈಟ್ ಚಾನೆಲ್‌ಗಳ ವಿಳಾಸವೇ ಇರಲಿಲ್ಲ. ಆದರೂ ಕ್ರಿಕೆಟ್ ಅಭಿಮಾನಿಗಳು ದೂರದ ಇಂಗ್ಲೆಂಡಿನಲ್ಲಿ ನಮ್ಮವರು ಮೆರೆಯುತ್ತಿದ್ದ ಶೌರ್ಯದ ಪ್ರತಿಯೊಂದು ಕ್ಷಣವನ್ನೂ ಇಲ್ಲಿಯೇ ಕಣ್ಣಿಗೆ ಕಟ್ಟಿಕೊಳ್ಳುತ್ತಿದ್ದರು.
ನಿಜಕ್ಕೂ, ಆ ರೇಡಿಯೋ ವೀಕ್ಷಕ ವಿವರಣೆಕಾರರಿಗೆ (ಕಾಮೆಂಟೇಟರ್) ಥ್ಯಾಂಕ್ಸ್ ಹೇಳಲೇಬೇಕು. ಈಗ ಟಿವಿಯಲ್ಲಿ ನೋಡಿ ಸಂಭ್ರಮಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಪಂದ್ಯದ ಪ್ರತಿಯೊಂದು ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಣೆ ನೀಡುತ್ತಿದ್ದ ಕಾಮೆಂಟೇಟರ್ ಕೇಳುಗನನ್ನು ಸಲೀಸಾಗಿ ಒಲಿಸಿಕೊಂಡಿದ್ದರು. ಎಲ್ಲ ಕ್ರೀಡೆಗಳಲ್ಲೂ ವೀಕ್ಷಕ ವಿವರಣೆಗಾರರು ಇರುತ್ತಾರೆ. ಆದರೆ, ನೇರ ಪ್ರಸಾರವಾಗುವ ಜನಪ್ರಿಯ ಫುಟ್ಬಾಲ್, ಕ್ರಿಕೆಟ್ ಹಾಗೂ ಹಾಕಿ ವಿಶ್ಲೇಷಣೆಯನ್ನು ನಾವು ಕೇಳುತ್ತೇವೆ.
1922ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಸಿಡ್ನಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಾಮೆಂಟ್ರಿ ಕೊಟ್ಟ ಲಿಯೋನೆಲ್ ವಾಟ್‌ರಿಂದ ಹಿಡಿದು, ಕ್ರಿಕೆಟ್ ಆಡದೇ ದೊಡ್ಡ ವೀಕ್ಷಕ ವಿವರಣೆಕಾರರಾಗಿ ಬೆಳೆದಿರುವ ಇಂದಿನ ಹರ್ಷಾ ಭೋಗ್ಲೆ ಅವರೇ ಪ್ರೇಕ್ಷಕರಲ್ಲಿ ಕ್ರೀಡಾಸ್ಫೂರ್ತಿ ಉಕ್ಕಿ ಹರಿಯಲು ಪ್ರಮುಖ ಕಾರಣರಾಗಿದ್ದಾರೆ.
ಮಹತ್ವದ ಅಂಶ
'ಪಂದ್ಯ ನಡೆಯುತ್ತಿರುವಾಗ, ವಿಭಿನ್ನ ವ್ಯಕ್ತಿತ್ವ ಹೊಂದಿದ ಆಟಗಾರರು ನೀಡುವ ಪ್ರದರ್ಶನವನ್ನು ಆ ಕ್ಷಣ ಮಾತ್ರದಲ್ಲೇ ಗ್ರಹಿಸಿ, ಅದಕ್ಕೊಂದಿಷ್ಟು ಮಸಾಲೆ ಬೆರೆಸಿ ಜನರ ಕಿವಿ ತಂಪಾಗುವಂತೆ ಮಾಡುವ ಕಾರ್ಯ ಕಠಿಣವಾದದ್ದು. ಆಟಗಾರರ ಬಗ್ಗೆ ಸಕಲ ಮಾಹಿತಿಗಳು ಆತನಿಗೆ ಗೊತ್ತಿರಬೇಕು. ಭಾಷೆಯ ಮೇಲೆ ಹಿಡಿತ ಸಾಧಿಸಿದಾಗ ಇದು ಸಾಧ್ಯ' ಎನ್ನುತ್ತಾರೆ ಕನ್ನಡದ ವೀಕ್ಷಕ ವಿವರಣೆಕಾರ ಎಂ. ರಾಘವೇಂದ್ರ.
ಅರ್ಹತೆ
ಮಾತನಾಡುವ ಕಲೆ, ಕೇಳಿಸಿಕೊಳ್ಳುವ ವ್ಯವಧಾನ, ಚರ್ಚಿಸುವ ತಾಳ್ಮೆ ಹಾಗೂ ಸಂಶೋಧನೆ ಇವು ವೀಕ್ಷಕ ವಿವರಣೆಕಾರನಿಗರಬೇಕಾದ ಅರ್ಹತೆಗಳು. ಭಾಷೆಯ ಮೇಲೆ ಹಿಡಿತ ಸಾಧಿಸುವ ಮೂಲಕ ರೇಡಿಯೋ ಸೇರಿದಂತೆ, ಸ್ಥಳೀಯ ಪಂದ್ಯಗಳಲ್ಲಿ ಚಮತ್ಕಾರ ಮೆರೆದವರೂ ಜಾಗತಿಕ ಮಟ್ಟದಲ್ಲಿ ಬೆಳೆಯಬಹುದು.
ಗಳಿಕೆ ಹೇಗೆ?
ಈಗ ಪಂದ್ಯಾವಳಿಗಳ ಪ್ರಸಾರದ ಹಕ್ಕನ್ನು ಖಾಸಗಿ ಚಾನೆಲ್‌ಗಳು ಖರೀದಿಸುತ್ತವೆ. ಹೀಗಾಗಿ ಅವು ಶ್ರೇಷ್ಠ ಕಾಮೆಂಟೇಟರ್‌ಗಳನ್ನು ಆರಿಸುವ ಮೂಲಕ, ಅವರಿಗೆ ತಕ್ಕ ಸಂಭಾವನೆ ನೀಡುತ್ತವೆ. ಇದು ಟೂರ್ನಿಯೊಂದಕ್ಕೆ ಲಕ್ಷವನ್ನೂ ಮೀರಬಹುದು.
-ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com