ಓ! ಸಿದ್ಲಿಂಗು
"ಎಂದಿನಂತೆ ಹುಡುಗರೆಲ್ಲ ನಮ್ಮ ಮನೆಯ ಪಕ್ಕದ ಮೋಟುಗೋಡೆಯ ಮೇಲೆ ನಿಂತು ಅಪ್ಪ ಅಮ್ಮಂದಿರನ್ನು ಕೂಗುತ್ತಿದ್ದಾಗ ನಮಗೆ ಒಂದು ನೋಟ ಕಾಣಿಸಿತು. ಐನೋರ ಹೊಲದಲ್ಲಿ ಇಬ್ಬರು ಮನುಷ್ಯರು ಹೆಗಲ ಮೇಲೆ ನೊಗ ಹೂಡಿ ಇನ್ನೊಬ್ಬರು ಹೊಲ ಉಳುತ್ತಿದ್ದರು. ನೊಗ ಹೊತ್ತ ಆ ಇಬ್ಬರು ಮನುಷ್ಯರು ಎತ್ತುಗಳಂತೆ ಮುಂದೆ ಹೋಗುತ್ತಿದ್ದರೆ ಅವನು ಹಿಂದಿನಿಂದ ಚಾಟಿ ತಿರುಗಿಸುತ್ತಾ ಉಳುಮೆ ಮಾಡುತ್ತಿದ್ದ ದೃಶ್ಯ ಮೋಜಿನಂತೆ ಕಂಡರೂ ನೊಗ ಹೊತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಅಪ್ಪ ಎಂದು ಗೊತ್ತಾದ ಕ್ಷಣದಿಂದ ನನ್ನಲ್ಲಿ ವಿಚಿತ್ರವಾದ ಸಂಕಟ ಶುರುವಾಯಿತು. ಹುಡುಗರಿದ್ದ ಜಾಗಕ್ಕೆ ಬಂದ ಕೆಲವು ಹೆಂಗಸರು 'ಪಾಪ ದ್ಯಾವಣ್ಣನಿಗೆ ಎಂಥ ಕಷ್ಟ ಬಂತು' ಎಂದದ್ದು ನನ್ನ ಕಿವಿಗೆ ಬಿದ್ದು ಮನಸ್ಸಿನ ನೋವು ಇಮ್ಮಡಿಯಾಯಿತು. ಗದ್ದೆಯಲ್ಲಿ ಎತ್ತಾಗಿ ದುಡಿದ ನಮ್ಮಪ್ಪ ಸಂಜೆ ಮನೆಗೆ ಬಂದಾಗ ಅವ್ವ ಅವನ ಭುಜಕ್ಕೆ ಎಣ್ಣೆ ಕಾಯಿಸಿ ಹಚ್ಚುತ್ತಿದ್ದಳು"
ಇದು ಜೀವ ಸಂವೇದಿ ಬಡವರ ಒಡಲು ಬೆದಕಿ ಬರೆಯುವ ಕವಿ ಸಿದ್ಧಲಿಂಗಯ್ಯನವರ 'ಊರುಕೇರಿ'ಯ ಆತ್ಮಕಥೆ ಸಾಲುಗಳು.
ಮೂಡಿಗೆರೆಯ ಗ್ರಂಥಾಲಯದ ಒಂದು ಮೂಲೆಯಲ್ಲಿರುವ ಬುಕ್ ರ್ಯಾಕಿನಲ್ಲಿ ಅಲ್ಲಲ್ಲಿ ಹರಿದು ಹಳತಾದಂತೆ ಕೊಳೆ ಕೊಳೆಯಾಗಿರುವ ಪುಸ್ತಕಗಳ ಕಂತೆ. ಆಗಲ್ಲಿ ಅವುಗಳ ನಡುವೆ ಮುದುಡಿದ ಸ್ಥಿತಿಯ, ಚಳಿಯಲ್ಲಿ ನಡುಗುತ್ತ ನರಳುತ್ತ ನನ್ನನ್ನು ಕೂಗಿ ಕರೆದ 'ಊರುಕೇರಿ' ಪುಸ್ತಕವನ್ನು ಬೆಚ್ಚನೆಯ ಕೈಯಿಂದ ಸ್ಪರ್ಶಿಸಿದೆ. ಪುಟ ತೆರೆದು ಕಣ್ಣರಳಿಸಿ ನೋಡಿದೆ. ನಿಂತಲ್ಲೇ 'ಐನೋರ ಹೊಲ' ಎಂಬ ಮೇಲಿನ ಈ ಭಾಗವನ್ನು ಓದಿದೆ. ಕರುಳು ಚುರುಕ್ ಎಂದಿತು. ದ್ಯಾವಣನ ಸಹೋದರನಂತಿರುವ ನನ್ನಪ್ಪ ಕೂಡ ಕನ್ನಡಿಯಲ್ಲಿನ ಪ್ರತಿಬಿಂಬದಂತೆ ಪುಸ್ತಕದಲ್ಲಿ ಹರಡಿಕೊಂಡಿದ್ದ ಅಕ್ಕರಗಳ ನಡುವೆ ಹೊಲದಲ್ಲಿ ದುಡಿಯುತ್ತಿದ್ದ ದೃಶ್ಯ ಕಂಡುಬಂತು.
ಆ ಒಂದು ಕ್ಷಣ ಭಾವುಕ ಮನಸ್ಸು ಬಿಕ್ಕಳಿಸಿತು. ನಿಂತಲ್ಲೇ ಕಣ್ಣುಗಳು ಕಪ್ಪು ಮೋಡದಂತೆ ಹೆಪ್ಪುಗಟ್ಟಿದವು. ಹೀಗೆ ತುಸು ತುಸುವೆ ಕರಗಿ ಉದುರು ಮಳೆಯು ಜಿನುಗಿ ಸುರಿವಂತೆ ಹನಿಯೊಡೆದು ತೊಟ್ಟಿಕ್ಕಿದವು. ಪುಸ್ತಕದ ಹಾಳೆಯು ಸ್ವಲ್ಪ ಒದ್ದೆ ಆಯಿತು. ಅದೇನಾದರಾಗಲಿ ಎಂದುಕೊಂಡೆ. ಐನೋರ ಹೊಲಕ್ಕೆ ನೀರು ಹಾಯಿಸಿ ಸುಸ್ತಾದರೂ ತೋರ್ಪಡಿಸಿಕೊಳ್ಳದೆ ಚಿಲ್ಲರೆ ಕಾಸಿಗೆ ಕೈಯ್ಯೊಡ್ಡುವ ಹುಡುಗನಂತೆ ಲೈಬ್ರರಿಯನ್ನಿಂದ ಕಾರ್ಡಿಗೆ ಪುಸ್ತಕ ಪಡೆದೆ. ಮನೆಗೆ ಬಂದು ತಲೆದೆಸೆ ಇಟ್ಟುಕೊಂಡು ಎಚ್ಚರವಾದಾಗಲೆಲ್ಲ ಓದತೊಡಗಿದೆ. ಇಂಥ ಓದಿನ ದುಡಿಮೆಯಲ್ಲಿ ಸಿದ್ಧಲಿಂಗಯ್ಯ ನನ್ನಣ್ಣನಾಗಿ ಕಾಡತೊಡಗಿದರು. ಕೊನೆಕೊನೆಗೆ ನೋವಿನ ಒಡಲಿಗೆ ಸ್ಫೂರ್ತಿ ತುಂಬುವ ಗೆಳೆಯನಾಗಿ ನನ್ನ ಕೈ ಹಿಡಿದು ನಡೆಯತೊಡಗಿದರು. ಆ ಸಂದರ್ಭ ನನ್ನ ಆತ್ಮ 'ಓ! ಸಿದ್ಲಿಂಗು' ಎಂದು ಏಕವಚನದಿಂದ ಕೂಗಿಕೊಂಡಿತು. ಸಿದ್ಲಿಂಗು ನಗುತ್ತಿದ್ದ. ಅವನ ಕಣ್ಣಲ್ಲಿ ಆನಂದಬಾಷ್ಪ ಸುರಿಸುತ್ತ!?
ಜನವರಿ 8, 2014. ಮಡಿಕೇರಿಯ ತಂಪೆಲರ ನಾಡಿನಲ್ಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಇದರ ಪ್ರಯುಕ್ತ ಆಯೋಜಿಸಿದ್ದ ಗೋಷ್ಠಿಯಲ್ಲಿ ನನ್ನ ಸಿದ್ಲಿಂಗು ಮನಸು ಬಿಚ್ಚಿ, ನಗೆಚೆಲ್ಲಿ ಒಂದೆರೆಡು ಮಾತನಾಡಿದ್ದ. ಈ ಸಂಗತಿಯನ್ನು 'ಹೃದಯದಲ್ಲಿ ನೋವಿದೆ, ಮುಖದಲ್ಲಿ ನಗುವಿದೆ' ಎಂಬ ಪುಟ್ಟ ಶೀರ್ಷಿಕೆಯಡಿಯಲ್ಲಿ ಪತ್ರಿಕೆಯೊಂದು ಪ್ರಕಟಿಸಿತ್ತು. ಈ ತುಣುಕನ್ನು ಕತ್ತರಿಸಿ ಜೇಬಿನಲ್ಲಿಟ್ಟುಕೊಂಡು ಮತ್ತೆ ಮತ್ತೆ ಓದಿದೆ. ಅದರ ಸಾರ ಹೀಗಿದೆ... ಸಿದ್ಲಿಂಗುವಿನ ಗೆಳೆಯನೊಬ್ಬನಿಗೆ ಆಗದವರು ಚರ್ಮ ಕಿತ್ತು, ರಕ್ತ ಬರುವಂತೆ ಹೊಡೆದಿದ್ದರು. ಸಿದ್ಲಿಂಗು ಮತ್ತು ಇತರ ಗೆಳೆಯರು ಆತನನ್ನು ಆಸ್ಪತ್ರೆಗೆ ಸೇರಿಸಿ ಉಪಚರಿಸಿದರು. ಪೊಲೀಸ್ ಕಂಪ್ಲೇಂಟು ಕೊಡಲು ಅನುಕೂಲವಾಗಲಿ ಎಂದು ಫೋಟೋ ತೆಗೆಸಿಕೊಂಡು ಬಾರೋ ಎಂದು ಕಳುಹಿಸಿದರು. ಅಳುವ ಚಿಂತಾಜನಕ ಸ್ಥಿತಿಯಲ್ಲಿರುವ ಆತ ನಗುಮುಖದಲ್ಲಿ ಫೋಟೋ ತೆಗೆಸಿಕೊಂಡು ಬಂದಿದ್ದ. ಇದನ್ನು ನೋಡಿದ ಸಿದ್ಲಿಂಗು, 'ಯಾಕೋ ನಗುತ್ತಿದ್ದೀಯಾ? ಈ ಫೋಟೋ ನೀಡಿದರೆ ಪೊಲೀಸರು ದೂರು ಸ್ವೀಕರಿಸುವುದಿಲ್ಲ' ಎಂದರೇ 'ಫೋಟೋ ತೆಗೆಯುವಾಗ ಫೋಟೋಗ್ರಾಫರ್ ಸ್ಮೈಲ್ ಎಂದ, ಅದಕ್ಕೆ ನಕ್ಕೆ' ಎಂದನಂತೆ ಆ ಗೆಳೆಯ!
ಈ ಘಟನೆಯನ್ನು ಮುಗ್ಧರ ಸಾಂದರ್ಭಿಕ ದಡ್ಡತನ ಹಾಗೂ ಒಡಲಾಳದ ನೋವಿನ ರೂಪಕವಾಗಿ ಸಿದ್ಲಿಂಗು ಕಟ್ಟಿಕೊಟ್ಟಿದ್ದ. ಒಂದಂತೂ ನಿಜ, ಮುಗ್ಧರ ಕರುಳ ಕುಡಿಯಾಗಿ ಜನಿಸಿದ ಸಿದ್ಲಿಂಗುವಿಗೆ ಮಾತ್ರ ಈ ತೆರನಾದ ಅನುಭವದ ಜೀವಾಮೃತಧಾರೆಯನ್ನು ಸಾಹಿತ್ಯ ರೂಪದಲ್ಲಿ ಉಣಬಡಿಸಲು ಸಾಧ್ಯವಾಗುವುದು. ಮತ್ತು ನನ್ನಂಥ ಆಪ್ತ ಓದುಗರೊಂದಿಗೆ ಹೆಜ್ಜೆಹಾಕಲು ಧೈರ್ಯ ಬರುವುದು!
ಮಾಗಡಿ ತಾಲೂಕು ಮಂಚನಬೆಲೆಯಲ್ಲಿ 1995ರಲ್ಲಿ ಜನಿಸಿದ ಸಿದ್ಲಿಂಗು, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಎಂ.ಎ., ಪಿಎಚ್ಡಿ ಪದವಿ ಪಡೆದು ಅಲ್ಲಿಯೇ ಅಧ್ಯಾಪಕನಾದದ್ದು. ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರದ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದು. 'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ' ಎಂದು ಎಚ್ಚರಿಸಿದ್ದು. ಸಾಮಾನ್ಯ ಸಂಗತಿಯೇ?
'ಪಾಪ ದ್ಯಾವಣ್ಣನಿಗೆ ಎಂಥ ಕಷ್ಟ ಬಂತು' ಎಂಬ ಮಾತನ್ನು ನೆನಪಿಸಿಕೊಂಡಾಗ ಕರುಳು ಕೊರೆದಂತಾಗುವುದು ದಿಟ. ಆದರೆ ಅದೇ ದ್ಯಾವಣ್ಣನ ಮಗ ಈ ಸಿದ್ಲಿಂಗುವಿನ ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಹೆಮ್ಮೆ ಎನಿಸುತ್ತದೆ. ಸಿದ್ಲಿಂಗುವಿಗೆ ದೊರೆತ ಕೀರ್ತಿ ಇಲ್ಲದಿದ್ದರೇನಂತೆ? ಸ್ಫೂರ್ತಿಯಾದರೂ ಸಿಗಲಿ ಎಂದು ನನ್ನ ಆಪ್ತಜೀವ ಕ್ಷಣ ಕ್ಷಣವೂ ಮಿಡಿದು ಗುಡುಗುತ್ತದೆ. 'ಓ! ಸಿದ್ಲಿಂಗು' ಎನ್ನುತ್ತಲೇ ಮತ್ತೆ ಮತ್ತೆ ಕಂಪಿಸುತ್ತದೆ.
- ಸಂಪತ್ ಬೆಟ್ಟಗೆರೆ
sampathbettagere@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.