ಕುಸ್ತಿಯದ್ದೇ ಕಂಪ್ಲೆಂಟು
ನನ್ನ ಮಗನಿಗೆ ಸಿಕ್ಕಾಪಟ್ಟೆ ಕುಸ್ತಿ ನೋಡುವ ಹುಚ್ಚು. ಈ ಪರಿಣಾಮ, ತನಗಿಂತ ಚಿಕ್ಕ ಮಕ್ಕಳ ಮೇಲೆಲ್ಲಾ ಪ್ರಹಾರ ಮಾಡಿ ಬರ್ತಾನೆ. ನನಗೆ ಈ ದೂರುಗಳನ್ನು ಕೇಳೀಕೇಳಿ ಸಾಕಾಗಿದೆ. ಏನ್ಮಾಡ್ಲಿ?
- ಸುರೇಶ್ ಶ್ರೀವತ್ಸ, ಮೈಸೂರು
ಇದು ಬಹುತೇಕ ಮಕ್ಕಳ ಸಮಸ್ಯೆ. 'ಕುಸ್ತಿ ಎನ್ನುವುದು ಸಿನಿಮಾ ಥರ. ಅದು ಬರೀ ನಟನೆ. ಹೊಡೆದಂತೆ ಕಂಡರೂ ಅವರು ಹೊಡೆದಿರುವುದಿಲ್ಲ. ನೋವಾದಂತೆ ಚೀರಾಡಿದರೂ ನೋವಾಗಿರುವುದಿಲ್ಲ' ಎಂದೆಲ್ಲ ಹೇಳಿ ನಂಬಿಸಿ. ಇನ್ನೊಬ್ಬರಿಗೆ ನೋವು ಮಾಡಬಾರದು ಅಂತ ಹೇಳಿ. ಸಾಧ್ಯವಾದರೆ ಕುಸ್ತಿ ಪ್ರಸಾರ ಮಾಡುವ ಚಾನೆಲ್ಗಳನ್ನು ಸ್ವಲ್ಪ ಕಾಲ ಡಿಸ್ಕನೆಕ್ಟ್ ಮಾಡಿ.
'ಹೊಗಲೇ' ಅಂತಾಳಲ್ಲಾ...
ನನ್ನ ಮಗಳು ಏನೇ ಹೇಳಿದರೂ ತಿರುಗಿ ಉತ್ತರಿಸ್ತಾಳೆ. 'ಹೊಗಲೇ..!' ಅನ್ನುವಷ್ಟು ಜೋರಾಗಿದ್ದಾಳೆ. ದೊಡ್ಡವರೆಂದರೆ ಭಯವೇ ಇಲ್ಲದಂತಾಗಿದೆ.
- ವಾಸುದೇವ ನಾಡಿಗ, ಮಹನೂರು
ಅಂಥ ಬೆಳವಣಿಗೆಗೆ ನೀವೇ ಕಾರಣರಾಗಿರುತ್ತೀರಿ. ಅಪ್ಪ ಅಮ್ಮನ ನಡುವಿನ ಸಂಭಾಷಣೆಯ ಪ್ರತಿಬಿಂಬವಾಗಿ ಮಕ್ಕಳು ಮಾತನಾಡುತ್ತವೆ. ಮೊದಲು ನಿಮ್ಮ ಸಂಭಾಷಣೆ ಶುದ್ಧವಾಗಿಸಿ. ಅಧಿಕಾರ ವಾಣಿಯನ್ನು ಬಿಟ್ಟು ವಿನಂತಿಪೂರ್ವಕವಾಗಿ ಸಂಭಾಷಿಸಿ. ತಾನಾಗೇ ಮಕ್ಕಳೂ ಹಾಗೇ ಮಾತಾಡುವುದನ್ನು ರೂಢಿಸಿಕೊಳ್ಳುತ್ತವೆ.
ಮಿಟ್ರು ಇಲ್ವಂತೆ, ಏನ್ಮಾಡ್ಲಿ?
ಅವನೇ ಮೊದಲು ಪ್ರೊಪೋಸ್ ಮಾಡಿದ್ದು. ಪ್ರತಿ ವಿಚಾರಕ್ಕೂ ಅಮ್ಮನನ್ನು ಕೇಳಬೇಕು ಅಂತಾನೆ. 'ಮುಂದೆ ನನ್ನನ್ನು ಮದ್ವೆ ಆಗ್ತೀಯಾ?' ಅಂದ್ರೂ 'ಅಮ್ಮನನ್ನು ಕೇಳಿ ಹೇಳ್ತೀನಿ' ಅಂತಾನೆ. 'ಅಕಸ್ಮಾತ್ ಒಪ್ಪದಿದ್ರೆ ಓಡಿಸಿಕೊಂಡು ಹೋಗಿ ಮದ್ವೆ ಆಗ್ತೀಯಾ?' ಅಂದ್ರೆ 'ಮೀಟ್ರು ಇಲ್ಲ' ಅಂತಾನೆ. ದಾರಿ ಗೊತ್ತಾಗ್ತಿಲ್ಲ.
- ಹೆಸರು ಬೇಡ, ಹೊಸನಗರ
'ಕಾಲೇಜಿಗೆ ಬಂದ ಮೇಲೆ ಒಂದಾದ್ರೂ ಲವ್ ಮಾಡ್ಬೇಕು' ಎಂಬ ಕಾನ್ಸೆಪ್ಟ್ ಇಟ್ಕೊಂಡೇ ಹಲವರು ಬಂದಿರುತ್ತಾರೆ. ಇದೂ ಒಂದು ರೀತಿಯ ಫ್ಯಾಷನ್. ಆತನಿಗೆ ಭವಿಷ್ಯದ ಕುರಿತಾಗಿ ಚಿಂತನೆ ಇದೆ. ನಿನಗೆ ಯಾಕಿಲ್ಲ? ಆತನ ತಾಯಿ ಒಪ್ಪದಿದ್ದರೆ ಆತ ನಿನ್ನನ್ನು ಮದುವೆ ಆಗುವುದಿಲ್ಲ. ಓಡಿಸಿಕೊಂಡು ಹೋಗಿ ಮದುವೆ ಆಗುವುದು ಮರ್ಯಾದಸ್ತರು ಮಾಡುವಂಥದ್ದಲ್ಲ ಎಂಬುದು ನೆನಪಿರಲಿ. ಸದ್ಯ ಓದಿನತ್ತ ಗಮನ ಕೊಡು.
-ಡಾ. ನರೇಂದ್ರ ಗಾಂಧಿ
nemmadikendra4@gmail.com