ಡೈರೆಕ್ಟರ್ಸ್ ಹೆಂಡ್ತಿ ಸ್ಪೆಷಲ್!
ಆರತಿ, ನನ್ನೂರು ಕನಕಪುರ. ಓದಿದ್ದು ಮೈಸೂರಿನ ಜೆಎಸ್ಸೆಸ್ ವುಮೆನ್ಸ್ ಕಾಲೇಜಿನಲ್ಲಿ. ಗುರು ನನ್ನ ಅಕ್ಕನ ಸಹಪಾಠಿ. ಒಂದೇ ಕಾಲೇಜಿನಲ್ಲಿ ಓದುತ್ತಿದ್ದುದರಿಂದ ನಮ್ಮ ಮನೆಗೆ ಆಗಾಗ ಬಂದು ಹೋಗ್ತಿದ್ರು. ಗುರು ಎಬಿವಿಪಿಯಲ್ಲಿ ಸಕ್ರಿಯರಾಗಿದ್ದ ಕಾಲವದು. ಅಕ್ಕನ ಅನೇಕ ಗೆಳೆಯ ಗೆಳತಿಯರೆಲ್ಲ ನಮ್ಮನೆಗೆ ಬರುತ್ತಿದ್ದರು. ನಾನು ಮತ್ತು ಗುರು ಪರಿಚಯವಾಗಿದ್ದು ತುಂಬಾ ನಿಧಾನವಾಗಿ. ನಾನೊಮ್ಮೆ ರಜೆಯಲ್ಲಿ ಮನೆಗೆ ಬಂದಾಗ ಗುರು ಪ್ರೊಪೋಸ್ ಮಾಡಿದ್ರು. ಆವಾಗ ನನಗೆ 17 ವರ್ಷ. ಅವರು ನನಗಿಂತ 6 ವರ್ಷ ದೊಡ್ಡವರು. ನಮ್ಮದು 5 ವರ್ಷದ ಪ್ರಣಯಗೀತೆ.
ನನಗೆ ಪ್ರೊಪೋಸ್ ಮಾಡಿದಾಗ ಗುರು ನಿರುದ್ಯೋಗಿ. ಬರೋಬ್ಬರಿ 5 ವರ್ಷದ ನಂತರ, ಅವರು ಲೈಫ್ನಲ್ಲಿ ಸೆಟ್ಲಾದ ಮೇಲೆ ನನ್ನನ್ನು ಮದುವೆಯಾದರು. ಮದ್ವೆಗೂ ಮುಂಚೆಯೇ ಅವರು ಮನೆ, ಮನೆಗೆ ಬೇಕಾದ ವಸ್ತುಗಳನ್ನೆಲ್ಲ ಸೆಟ್ ಮಾಡಿದ್ದರು. ಸ್ಟೀಲ್ ಪಾತ್ರೆ ಖರೀದಿಸಿ, ಅದರಲ್ಲೆಲ್ಲ 'ಪ್ರತಿಪದೆ' ಅಂತ ಬರೆದಿದ್ದರು. ನಮ್ಮದು ಅಂತರ್ಜಾತೀಯ ವಿವಾಹ. ಗುರು ಸಂಪ್ರದಾಯಸ್ಥ ಕುಟುಂಬದವರು. ಅವರ ಅಪ್ಪ ಬ್ರಾಹ್ಮಣ ಸಂಘದ ಗೌರವಾನ್ವಿತ ವ್ಯಕ್ತಿ. ಅವರು ನಮ್ಮ ಮದ್ವೆಗೆ ಬಂದೇ ಇರಲಿಲ್ಲ.
ಗುರು ಆಗ ಹಿಂದೂಸ್ತಾನ್ ಲಿವರ್ ಕಂಪನಿಯ ಉದ್ಯೋಗಿ. ನಾನಾಗ ಗರ್ಭಿಣಿ. ಒಂದಿನ ಬೆಳಗ್ಗೆ ಅವರನ್ನು ಎಬ್ಬಿಸಿ, 'ಟೈಮಾಯ್ತು. ಆಫೀಸಿಗೆ ಹೋಗಲ್ವಾ?' ಕೇಳಿದೆ. ಅದಕ್ಕವರು 'ನಾನು ಕೆಲಸ ಬಿಟ್ಟಿದ್ದೀನಿ' ಎಂದಾಗ ನನಗೆ ಶಾಕ್! 'ನನ್ನೀ ಅವಸ್ಥೆಯಲ್ಲಿ ಕೆಲಸ ಬಿಡುವುದೆಂದರೆ?' 'ಏನು ಮಾಡುವುದು?'- ಒಂದೊಂದೇ ಪ್ರಶ್ನೆ ಕೇಳಿದೆ. ಅದಕ್ಕವರು 'ನಾನು ನಿರ್ದೇಶಕನಾಗಬೇಕು' ಅಂದರು. ನನಗಂತೂ ದಿಕ್ಕೇ ತೋಚಲಿಲ್ಲ. ಮಿಗಿಲಾಗಿ 'ನಿಮ್ಮ ಗಂಡ ಏನು ಮಾಡ್ತಾರೆ?' ಅನ್ನೋ ಜನರ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಆಗಿತ್ತು. ಅವರು ಮನೆಯಲ್ಲೇ ಇರುತ್ತಿದ್ದರಲ್ಲ ಆಗಂತೂ 'ನಿಮ್ಮ ಹಸ್ಪೆಂಡ್ ಮನೇಲೇ ಇರ್ತಾರಲ್ಲಾ?' ಅಂತ ಯಾರಾದ್ರೂ ಕೇಳ್ತಾನೇ ಇದ್ರು. ನಾನಾಗ ಆಕಾಶ ನೋಡ್ತಿದ್ದೆ.
ಗುರು ಮೊದಲಿನಿಂದಲೂ ಕವಿತೆ, ಕಥೆ ಬರೆಯುತ್ತಿದ್ದರು. ಅವರು ಮನೆಯಲ್ಲಿ ಹೇಳಿದ ಡೈಲಾಗ್ಗಳನ್ನೆಲ್ಲ ನಾನು ಬರೆದಿಡುತ್ತೇನೆ. ಕೆಲವೊಂದಿಷ್ಟನ್ನು ಅನುವಾದಿಸುತ್ತೇನೆ. ಅವರು ತಮಿಳು ಸಿನಿಮಾ ತುಂಬಾ ನೋಡ್ತಾರೆ. ನನಗೆ ಹಿಂದಿ ಸಿನಿಮಾಗಳೆಂದರೆ ಹುಚ್ಚು.
ಮನೆಯಲ್ಲೇ ಕುಳಿತು ನಿರ್ದೇಶಕನಾಗಲು ತಯಾರಿ ನಡೆಸಿದರು. ಸಿಕ್ಕಾಪಟ್ಟೆ ಸಿನಿಮಾ ನೋಡುತ್ತಿದ್ದರು. ಕೆಲಸ ಇಲ್ಲದೇ ಇದ್ದರೂ ನಮ್ಮ ಜೀವನ ಸಾಗಿಸಲು ಅಗತ್ಯವಾದ ದುಡ್ಡನ್ನೂ ಸೇವ್ ಮಾಡಿಟ್ಟಿದ್ದರು. ಮಗುವಿನ ಖರ್ಚಿಗೂ ಪ್ಲ್ಯಾನ್ ಮಾಡಿದ್ದರು. ಅವರು ಎಷ್ಟು ಪ್ಲಾನಿಂಗ್ ಮಾಡಿದ್ದರೆಂದರೆ ನಮಗೆ ಹೆಣ್ಣು ಮಗುವೇ ಹುಟ್ಟುತ್ತೆ ಅನ್ನೋ ಬಲವಾದ ನಂಬಿಕೆ ಇತ್ತು. ಮಗಳು ಹುಟ್ಟುವ ಮೊದಲೇ ಆಕೆಗೆ 'ಪ್ರತಿಪದೆ' ಅಂತ ಹೆಸರಿಟ್ಟಿದ್ದರು. 'ಪ್ರತಿಪದೆ' ಅಂದ್ರೆ ಚಂದ್ರ ಬೆಳಗುವ ಮೊದಲ ದಿನ. ಮಗಳೀಗ ಏಳನೇ ಕ್ಲಾಸು ಓದುತ್ತಿದ್ದಾಳೆ.
'ಮಠ' ಸಿನಿಮಾ ಮಾಡುವವರೆಗೂ ನಾವು ಪ್ಲ್ಯಾನ್ ಮಾಡಿದಂತೆಯೇ ಎಲ್ಲ ನಡೆಯಿತು. ನಂತರ ಈ ಸಿನಿಮಾ ಫೀಲ್ಡಿನಲ್ಲಿ ಎಷ್ಟೆಲ್ಲ ಅವ್ಯವಸ್ಥೆ ಇದೆ ಅಂತ ಗೊತ್ತಾಯಿತು. 'ಮಠ' ನಂತರ ನಿರ್ಮಾಪಕರಿಂದ ದುಡ್ಡೇ ಬರಲಿಲ್ಲ. ಇವರು ಕುಡಿತ ಹೆಚ್ಚು ಮಾಡಿದರು. ದಿನೇ ದಿನೇ ದುಡ್ಡು ಖರ್ಚಾಗ್ತಾ ಹೋಯಿತು. 'ಮಠ' ಒಳ್ಳೆಯ ಹೆಸರು ತಂದುಕೊಟ್ಟಿದ್ದೇನೋ ಹೌದು, ಆದರೆ ಅದನ್ನು ಸಂಭ್ರಮಿಸುವ ಹೊತ್ತಲ್ಲಿ ಇವರು ಕುಡಿತದ ಕೂಪಕ್ಕಿಳಿದಿದ್ದರು.
ನಂತರ 'ಎದ್ದೇಳು ಮಂಜುನಾಥ' ಆಯಿತು. ಆಗಂತೂ ಅನೇಕ ನಿರ್ಮಾಪಕರು ಬಂದರು. ಆಗಲೂ ಇವರು ಕುಡಿತ ಬಿಡಲಿಲ್ಲ. ಹೀಗೆ ಪರಿಸ್ಥಿತಿ ಮುಂದುವರಿದಾಗ ಮನೆಯಲ್ಲಿ ಅಕ್ಕಿ ಇಲ್ಲ ಅನ್ನೋ ಸ್ಥಿತಿಯೂ ಬಂತು. ಅಂಥ ಟೈಮಲ್ಲಿ ನಾನು ತುಂಬಾನೇ ಪಾಸಿಟಿವ್ ಆಗಿದ್ದೆ. ಯಾವುದೇ ಪರಿಸ್ಥಿತಿ ಇರಲಿ, ನಾವು ಹೀಗೇ ಇರಬೇಕೂಂತ ಅಂದುಕೊಂಡಿದ್ದರೆ ಹಾಗೇ ಇರ್ತೀವಿ. ನಾನಾಗ ಹೀಗೆ ಪ್ರಾರ್ಥಿಸತೊಡಗಿದೆ; 'ಎಷ್ಟು ಕಷ್ಟಗಳು ಬರುತ್ತೋ ಅದೆಲ್ಲವೂ ಈಗಲೇ ಬಂದು ಬಿಡಲಿ. ಆಮೇಲೆ ನಾವು ಚೆನ್ನಾಗಿರ್ತೀವಿ'. ಆ ಕಷ್ಟಗಳಿಂದ ನಾವು ಸಾಕಷ್ಟು ಕಲಿತೆವು. ನಂತರದ ದಿನಗಳಲ್ಲಿ ಆ ಅನುಭವ ಸಾಕಷ್ಟು ಸಹಾಯ ಮಾಡಿತು. ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಂಡು ಮುಂದೆ ಸಾಗತೊಡಗಿದೆವು. ಆ ಐದು ವರ್ಷ ನಮ್ಮ ಜೀವನದ ಪರೀಕ್ಷಾ ಘಟ್ಟ.
ಇದಾಗಿ 'ಡೈರೆಕ್ಟರ್ಸ್ ಸ್ಪೆಷಲ್' ಮಾಡುವಾಗ ಅವರು ಕುಡಿತ ಪೂರ್ತಿಯಾಗಿ ಬಿಟ್ಟೇ ಬಿಟ್ಟಿದ್ರು. ಅವರಿಗೆ ಸಿನಿಮಾ ಎಷ್ಟು ಹುಚ್ಚೆಂದರೆ, ಅವರ ಮಾತುಗಳಲ್ಲಿ ಶೇ.95 ಸಿನಿಮಾನೇ ಇರುತ್ತೆ. 'ಮಠ', 'ಎದ್ದೇಳು ಮಂಜುನಾಥ'ಕ್ಕೆ ನಾನು ಸ್ಕ್ರಿಪ್ಟ್ ಮತ್ತು ಶೂಟಿಂಗ್ನಲ್ಲಿ ಸಹಾಯ ಮಾಡಿದ್ದೆ. ಗುರು ಅವರ ಎಲ್ಲ ಸ್ವಭಾವಗಳೂ ನನಗಿಷ್ಟ. ಸಿಗರೇಟ್ ಸೇದ್ತಾರೆ. ಅದು ಸ್ವಲ್ಪ ಆಗೋಲ್ಲ. ಉಪ್ಸಾರು ಮುದ್ದೆ, ಅವರೆಕಾಳು, ಅಮ್ಮ ಮಾಡಿದ ಉಪ್ಪಿಟ್ಟು ಗುರುವಿಗಿಷ್ಟ. ಗ್ರೀನ್ ಟೀ ಅಂದ್ರೆ ಅವರಿಗೆ ಪ್ರಾಣ. ಅವರಿಗೆ ಯಾರೂ ಒತ್ತಡ ಹೇರಬಾರದು. ಅವರು ಕೆಲಸವನ್ನು ಎಂಜಾಯ್ ಮಾಡುತ್ತಾರೆ. ಯಾವತ್ತೂ ಹೊಸ ಹೊಸ ಕತೆ ಬಗ್ಗೆಯೇ ಯೋಚಿಸುತ್ತಿರುತ್ತಾರೆ.
ಒಂದು ಕೆಲ್ಸ ಹೇಳಿ ಅದನ್ನು ಸರಿಯಾಗಿ ಮಾಡದಿದ್ದರೆ ಅವರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಆ ಕೋಪ ಸಿನಿಮಾ ಸಂಬಂಧಿ ವಿಷಯಕ್ಕೆ ಮಾತ್ರ. ಅವರಿಗೆ ಸಮಯ ಪ್ರಜ್ಞೆ ಜಾಸ್ತಿ. ಅವರು ಮಾತನಾಡುವಾಗ ತುಂಬಾ ಇಂಟೆರೆಸ್ಟಿಂಗ್ ಆಗಿಯೇ ಮಾತನಾಡುತ್ತಾರೆ ನಿಜ. ಸಭೆ- ಸಮಾರಂಭಗಳಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಚೆನ್ನಾಗಿ ನರೇಟ್ ಮಾಡ್ತಾರೆ. ಸದಾ ಹೊಸತನವನ್ನು ಬಡಿಸುವ ಪ್ರವೃತ್ತಿ ಅವರದು. ವಿಶೇಷ ಗೊತ್ತಾ, ಗುರು ಒಂದೇ ಜೋಕ್ನ ಹತ್ತು ಸಾರಿ ಹತ್ತು ವಿಧದಲ್ಲಿ ಹೇಳಬಲ್ಲರು!
ಮೂರು ವರ್ಷಕ್ಕೊಂದು ಸಿನಿಮಾ ಕೊಡ್ತಾರೆ. ಈ ಅಂತರ ಅವರಿಗೆ ನಷ್ಟವೇ ಹೌದು. ಆದರೆ ಅವರು ದುಡ್ಡಿನ ಬಗ್ಗೆ ಚಿಂತಿಸುವುದಿಲ್ಲ. ಕ್ವಾಲಿಟಿಗೆ ಹೆಚ್ಚು ಗಮನ ಹರಿಸುತ್ತಾರೆ. 'ನಾನು ಸತ್ತ ಮೇಲೂ ಜನ ನಾನು ಮಾಡಿದ ಸಿನಿಮಾವನ್ನು ನೆನಪಿನಲ್ಲಿಡಬೇಕು. ಪುಟ್ಟಣ್ಣ ಕಣಗಾಲ್ ಸಿನಿಮಾವನ್ನು ಜನ ನೋಡುವಂತೆ, ನನ್ನ ಸ್ಕಿಪ್ಟ್ನ ಅಧ್ಯಯನ ಮಾಡಬೇಕು. ಅದೇ ನನಗೆ ಸಿಗುವ .ಗೌರವ'- ಇದು ಅವರ ಆಸೆ.
ಅವರು ಸದಾ ಪಂಚ್ಲೈನ್ ಬರೀತಾ ಇರ್ತಾರೆ. ಅಚ್ಚರಿ ಅಂದರೆ, ವಿದ್ಯಾರ್ಥಿ ದೆಸೆಯಲ್ಲೇ ಅವರು ಜಾಸ್ತಿ ಡೈಲಾಗ್ ಬರೆದಿದ್ದಂತೆ. ಗಡ್ಡ ಅವರ ವ್ಯಕ್ತಿತ್ವದ ಭಾಗವೇ ಆಗಿಹೋಗಿದೆ. ಗಡ್ಡ ಇಲ್ಲದ ಗುರುವನ್ನು ಇಮ್ಯಾಜಿನ್ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಮುದ್ದು ಮಾಡುವಾಗ ಮಗಳಿಗೆ ಚುಚ್ಚುತ್ತೆ ಬಿಟ್ಟರೆ, ಅದರಿಂದೇನೂ ಕಿರಿಕಿರಿ ಇಲ್ಲ.
ನಮ್ಮ ಮನೆಯಲ್ಲಿ ಎರಡು ನಾಯಿಮರಿ ಸಾಕಿದ್ದೀವಿ. ಒಂದು 'ಬೆಳ್ಳಿ', ಇನ್ನೊಂದು 'ಲಯನ್ ಕಿಂಗ್'. ಇವೆರಡು ನಾಯಿಗಳು ಅವರಿಗೆ ಬಹಳ ಪ್ರೀತಿ. 'ನಮಗೆ ಮೂರು ಹೆಣ್ಮಕ್ಕಳು' ಎನ್ನುತ್ತಾ ನಗುತ್ತಾರವರು.
ನಮ್ಮ ಇಷ್ಟಗಳು ಬೇರೆ ಬೇರೆ. ಅವರಿಗೆ ಶಾಪಿಂಗ್ ತುಂಬಾ ಇಷ್ಟ. ನನಗದರಲ್ಲಿ ಹೆಚ್ಚು ಆಸಕ್ತಿ ಇಲ್ಲ. ನಾನು ಶಾಪಿಂಗ್ ಮಾಡುವುದೇ ಅಪರೂಪ. ಅವರು ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ. ಕೋಸು ಪಲ್ಯ, ಆಲೂಗಡ್ಡೆ, ಈರುಳ್ಳಿ ಹುಳಿಯನ್ನು ಸೊಗಸಾಗಿ ಮಾಡ್ತಾರೆ. ಇಂತಿಂಥ ತರಕಾರಿಯನ್ನು ಇಷ್ಟಿಷ್ಟೇ ಬೇಯಿಸಬೇಕೆಂಬುದು ಅವರಿಗೆ ಗೊತ್ತು. ಹೆಂಗಸರನ್ನು ತುಂಬಾ ಗೌರವಿಸುತ್ತಾರೆ ಗುರು. ಅವರ ಆಯ್ಕೆಯಲ್ಲಿ ಬಹಳ ಬುದ್ಧಿವಂತರು. ಬಹುಶಃ ನನ್ನನ್ನು ನೋಡಿದರೆ ನಿಮ್ಗೆಲ್ಲ ಗೊತ್ತಾಗುತ್ತೆ!
ಇಂಡಿಯನ್ ಇಂಗ್ಲಿಷ್ ಫಿಲ್ಮ್ ಮಾಡ್ಬೇಕು ಎಂಬುದು ಅವರ ಬಹುದಿನದ ಕನಸು. ಕನ್ನಡದ ಪರವಾಗಿ ಆಸ್ಕರ್ ತೆಗೆದುಕೊಳ್ಳಬೇಕು. ರೆಡ್ ಕಾರ್ಪೆಟ್ನಲ್ಲಿ ನಿಂತುಕೊಳ್ಳಬೇಕು ಎಂಬ ಅದಮ್ಯ ಬಯಕೆ ಅವರಿಗೆ. ಅವತ್ತು ಎ.ಆರ್. ರೆಹಮಾನ್ ಆಸ್ಕರ್ ತೆಗೆದುಕೊಳ್ಳೋವಾಗ ತಾವೇ ಆಸ್ಕರ್ ಪಡೆದಷ್ಟು ಖುಷಿಪಟ್ಟರು.
ಹುಟ್ಟಿನಿಂದ ನಾನು ಡೈರೆಕ್ಟರ್ ಹೆಂಡ್ತಿ ಅಲ್ಲ. ನಾನೊಬ್ಬಳು ಸಾಮಾನ್ಯ ಮನುಷ್ಯ. ವಿವೇಕಾನಂದರ ಮಾತುಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿವೆ. ಈಗ ಪ್ರಭಾವ ಬೀರುತ್ತಿರುವುದು 'ಗುರು'ವಿನ ಮಾತುಗಳು!
-ನಿರೂಪಣೆ: ರಶ್ಮಿ ಕಾಸರಗೋಡು
rashmitendulkar@gmail.com