ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ದ್ರೌಪದಿ ಆಗಲಾರೆ...

Vishwanath S
Updated On : 22 Feb 2014, 2:26 am

ಪುನಃ ಪುನಃ ಆ ಕಣ್ಣುಗಳು ನನ್ನನ್ನು ಕಾಡುತ್ತಿದ್ದವು. ಮನೆಗೆ ಬರಲಿ, ಕೆಲಸಕ್ಕೆ ಹೋಗಲಿ... ಆ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿದ್ದವು. ನಿದ್ದೆಯಲ್ಲೂ ಕಾಡುತ್ತಿದ್ದವು. ನಾನು ಬಾನಂಗಳದಿ ಕಣ್ಣು ತೆರೆಯಲು ತಾರೆಗಳ ಮಧ್ಯ ನನಗೆ ಕಾಣುತ್ತಿದ್ದವು. ಆ ದಯನೀಯ ಅಸಹಾಯಕ ಕಣ್ಣುಗಳು. ತೊಯ್ದಾಡುತ್ತಿದ್ದ ದುಗುಡ ತುಂಬಿದ ನನ್ನ ಮನಸ್ಸು ಛಿದ್ರವಾಗಿತ್ತು. ಆ ನೇತ್ರಗಳಲ್ಲಿ ಉಕ್ಕುತ್ತಿರುವ ಕಣ್ಣೀರು ಮನದಾಳದ ಸಂದೇಶವನ್ನು ಸಾರುತ್ತಿದ್ದು, ಇವುಗಳಿಗೆ ಭಾಷೆಗಳ ಅಗತ್ಯವಿಲ್ಲ.
ರೈಲಿನಲ್ಲಿ ಪಯಣಿಸುತ್ತಿದ್ದೆ. ಒಬ್ಬಳು ಮುಗ್ಧೆ ತನ್ನ ಚಿಕ್ಕ ಮಗುವಿನೊಂದಿಗೆ ಶೌಚಾಲಯದ ಬಳಿ ಕುಳಿತಿದ್ದಳು. ಎರಡು ಬಾರಿ ಅಡ್ಡಾಡಿ ಬಂದೆ. ಅವಳು ಏನನ್ನೋ ಹೇಳಲೆತ್ನಿಸುತ್ತಿದ್ದಳು. ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆಯುವುದಾ? ಇನ್ನೊಂದೆಡೆ, 'ನೀನೂ ಹೆಣ್ಣಲ್ಲವೆ? ತಾಯಿಯಲ್ಲವೆ?' ಅಂತರಾತ್ಮ ಚೀರುತ್ತಿತ್ತು. ಕೇಳಿಯೇ ಬಿಟ್ಟೆ; 'ಬೆಹೆನ್ ಕಹ್ಞಾಂ ಜಾ ರಹಿ ಹೋ?'. ಕಣ್ಣೀರನ್ನು ಧಾರಾಕಾರ ಸುರಿಸಿದಳು. ನಾನೂ ಅವಳಲ್ಲಿ ಐಕ್ಯವಾಗುತ್ತಿದ್ದೆ. ನನ್ನ ಸ್ಪರ್ಶ ಅವಳಿಗೆ ಸಾಂತ್ವನ ನೀಡುತ್ತಿತ್ತು. 'ದೀದೀ, ಮೇರೀ ಕಹಾನೀ ಸುನೋ'- ಅವಳ ಕಣ್ಣುಗಳನ್ನು ನೋಡುತ್ತಿದ್ದಂತೆ ನನ್ನ ಕರುಳು ಕಿತ್ತು ಬಂದಂತಾಗಿತ್ತು. ಅವಳು ಕಥೆ ಹೇಳತೊಡಗಿದಳು...
ಬಡತನದಲ್ಲಿ ಬೆಳೆದ ನಾನು ಕನಸುಗಳ ರಾಜಕುಮಾರಿ. ಅಪ್ರಾಪ್ತ ವಯಸ್ಸಿನಲ್ಲಾಯಿತು ಮದುವೆ. ದೂರದೂರಿನಲ್ಲಿ ಕನಸು ನನಸಾಗಿಸಲು ಹೊರಟಿದ್ದೆ. ಗಂಡ ಜೊತೆಗಿದ್ದ. ಅವನ ಸ್ಪರ್ಶ ನನಗೆ ಮುದನೀಡಿತ್ತು. ಆ ಮನೆ ಬಹಳ ಚಿಕ್ಕದು. ಐದು ಗಂಡು ಮಕ್ಕಳು, ತಾಯಿ. ಹೊರಾಂಗಳ, ಅಡುಗೆಮನೆಯಲ್ಲೇ ಅವನು ನನಗೆ ಸ್ವರ್ಗ ದರ್ಶನ ಮಾಡಿಸಿದ. ಅದು ನನ್ನ ಅರಮನೆಯಾಗಿತ್ತು.
ಮುಸ್ಸಂಜೆಯಲ್ಲಿ ನನ್ನ ಇನಿಯನ ದಾರಿ ಕಾಯುತ್ತ ಹಾಡು ಕೇಳುತ್ತಿದೆ; "ಏಕ್ ಪ್ಯಾರ್ ಕಾ ನಗಮಾ ಹೆ ಮೌಜೊಂಕೀ ರವಾನೀ ಹೆ, ಜಿಂದಗೀ ಔರ್ ಕುಛ್ ಭೀ ನಹೀ ತೇರೀ ಮೇರೀ ಕಹಾನೀ ಹೆ...".
ಗಾಳಿಗೆ ಒದ್ದಾಡುತ್ತಿರುವ ದೀಪ. ಜೋರು ಮಳೆ. ಗುಡುಗು, ಸಿಡಿಲು. ಕಿಟಕಿಯ ಬಾಗಿಲುಗಳನ್ನು ಮುಚ್ಚಿದೆ. ಅತ್ತೆ ದೂರದ ಸಂಬಂಧಿಕರ ಮನೆಗೆ ಹೋಗಿದ್ದರು. ನನ್ನ ಗಂಡನ ತಮ್ಮಂದಿರೆಲ್ಲ ಮನೆ ಸೇರಿದರು. ನನ್ನವರಿಗಾಗಿ ಕಾಯುತ್ತಿದ್ದೆ. ಕಂದೀಲು ದೀಪ ಮಂದವಾಗಿತ್ತು. ನನ್ನವರು ಬಂದರು, ಎಲ್ಲರಿಗೂ ಊಟವಿಕ್ಕಿದೆ. ಆ ಅಂಧಕಾರದ ನಡುವೆ ಹುಟ್ಟುತ್ತಿದ್ದ ಸಿಡಿಲುಗಳು ನನ್ನ ಜೀವನದಲ್ಲೂ ಬಿರುಗಾಳಿಯನ್ನು ತರುವವೆಂದು ತಿಳಿದಿರಲಿಲ್ಲ. ಚುಮು ಚುಮು ಮುಂಜಾವು. ಕಣ್ಣು ಬಿಟ್ಟೆ, ತುಂತುರು ಮಳೆಯಿತ್ತು. ಎರಡು ಬಾರಿ ಕಣ್ಣನ್ನು ಉಜ್ಜಿಕೊಂಡೆ. ನಿದ್ದೆಯ ಮಂಪರು ಅಲ್ಲ ಸತ್ಯ... ನನ್ನ ಪಕ್ಕದಲ್ಲಿ ಮೈದುನ ಬಿದ್ದುಕೊಂಡಿದ್ದ. ನನ್ನವರಿಗೆ ಮುಖ ತೋರಿಸಬಾರದು, ಆತ್ಮಹತ್ಯೆಯೇ ಗತಿ ಎನಿಸಿ ಹೊರಬರುತಿರಲು ನನ್ನ ಗಂಡನ ದನಿ ಎದುರಾಯಿತು. 'ಇನ್ನು ನೀನು ನಮಗೆಲ್ಲ ದ್ರೌಪದಿ' ಎಂದ.
"ಕರ್ಮಣ್ಯೇ ವಾಧಿಕಾರಸ್ಥೆ ಮಾಫಲೆಷು ಕದಾಚನ". ಯಾಕೆ ನಾನು ಕರ್ಮವನ್ನು ಮಾಡಲಿಲ್ಲವೇ? ನನ್ನ ಕರ್ಮಕ್ಕೆ ಈ ಪ್ರತ್ಯುತ್ತರವೆ? ಭೂಮಿಯು ಯಾಕೆ ಬಾಯ್ತೆರೆಯಲಾರದು? ವೈದೇಹಿಯಂತೆ ನನ್ನನ್ನು ಸ್ವೀಕರಿಸಲಾರದು? ನನ್ನ ಮನದಳಲನ್ನು ಯಾರಿಗೆ ಹೇಳಲಿ? ಹಗಲು ರಾತ್ರಿಯ ಭೇದವರಿಯದೆ ಪ್ರಾಣಿಯಂತಾಯಿತು ನನ್ನ ಜೀವನ. ನಾನು ಅತ್ತೆಯವರಿಗೆ ಕಾದೆ. ಆರು ತಿಂಗಳ ನಂತರ ಮನೆಗೆ ಬಂದರು. ಅವರು ಗಾಂಧಾರಿ. ಮನಸಿನ ಅಳಲನ್ನು ಸಾರಿ ಸಾರಿ ಹೇಳಿಕೊಂಡೆ. ಇವರು ಹೆಣ್ಣಲ್ಲ, ಕಲ್ಲು ಬಂಡೆ ಅಂದುಕೊಂಡೆ. ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ? ಆದರೆ, ನಾನು ಯಾರಿಗೆ ಮುದ್ದು? ತರಕಾರಿ, ಹಣ್ಣುಗಳ ಹಾಗಾಗಿಬಿಟ್ಟೆ. ಕಂದನೂ ಮಡಿಲಿಗೆ ಬಂದ. ಮಗು ಹುಟ್ಟಿದ ಮಾರನೇ ದಿನವೇ ಹೇಗೋ ಮಾಡಿ ಓಡಿ ಬಂದೆ.
ನಾನು ದ್ರೌಪದಿಯಾಗಲು ಸಾಧ್ಯವೆ? ಅವಳಿಗೆ ಅರ್ಜುನನಿದ್ದ, ಅವಳು ಕರೆದರೆ ಕಾಪಾಡಲು ಕೃಷ್ಣನಿದ್ದ. ನನಗ್ಯಾರು? ನನಗೆ ನಾನು. ಗೋಡೆಗೆ ಮಣ್ಣು. ಏನೋ ಜೀವನದ ಬಗ್ಗೆ ಜಿಗುಪ್ಸೆ. ಸಾಯಲು ಕಷ್ಟ. ಬದುಕುವುದಂತೂ ಇನ್ನೂ ಕಷ್ಟ.

ಅವಳಿಗೆ ಸಮಾಧಾನ ಮಾಡಿ ನನ್ನ ಜಾಗದಲ್ಲಿ ಮಲಗು ಎಂದೆ. ರಾತ್ರಿಯ ಎರಡು ಗಂಟೆ. ಜಗತ್ತು ನಿದ್ರಿಸುತ್ತಿತ್ತು. ನಾನು ಇಳಿಯುವ ಸ್ಥಳಬಂತು. ನಮ್ಮವರ ಜೊತೆ ಇಳಿದು ಹೊರಟುಬಿಟ್ಟೆ. ಯಾವಾಗ ಕಾರಲ್ಲಿ ಕುಳಿತೆನೋ, ಭೂಕಂಪವಾದಂತೆನಿಸಿತ್ತು. ಬಲು ವೇಗದಲ್ಲಿ ತಿರುಗಿ ಓಡಿಬಂದೆ. ಎಲ್ಲವೂ ಸ್ತಬ್ಧ. ದೀರ್ಘ ಮೌನ. ರೈಲು ತನ್ನ ವೇಗವನ್ನು ಹಿಡಿದಿತ್ತು. ರೈಲಿನ ಘರ್ಷಣೆಯಲ್ಲಿ ಅವಳ ವೇದನೆಯೂ ಐಕ್ಯವಾಗಿತ್ತು. ಅವಳು ನಿಮಗೂ ಸಿಗಬಹುದು. ತನ್ನ ಅಂತರಾಳವನ್ನು ಹೇಳಿಕೊಳ್ಳಲು ಹಾತೊರೆಯುವಳು. ಅವಳ ನೇತ್ರಗಳಿಂದ ನಿಮಗೂ ಕಥೆಯನ್ನು ಸಾರಬಲ್ಲಳು.ಅವಳನ್ನು ನೀವು ಕಂಡಿರಾ? ಅವಳನ್ನು ನೀವು ಕಂಡಿರಾ? ಟಿ
(ಸತ್ಯ ಘಟನೆ ಆಧಾರಿತ ಕಥೆ)


-ಡಾ. ವಾಣಿ ಸಂದೀಪ್, ಸೌದಿ ಅರೇಬಿಯಾ
sanvada@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement