ಬಿಟ್ಟೆನೆಂದರೂ ಬಿಡದೀ ಹ್ಯಾಬಿಟ್ಟು
ಕೆಲವು ಅಭ್ಯಾಸಗಳು, ತಿಕ್ಕಲುತನಗಳು, ವಿಚಿತ್ರ ವರ್ತನೆಗಳು ಕೇವಲ ನಮ್ಮ ನಿಮ್ಮ ಸ್ವತ್ತಲ್ಲ. ಅತಿ ದೊಡ್ಡ ವ್ಯಕ್ತಿಗಳು, ಸೆಲೆಬ್ರಿಟಿಗಳಲ್ಲೂ ಇಂಥ ಹಲವು ಗುಣಗಳು ಸರ್ವೇಸಾಮಾನ್ಯ. ಅವರೂ ತಮ್ಮ ದಿನಚರಿಯಲ್ಲಿ ಕೆಲವು ಅಭ್ಯಾಸಗಳಿಗೆ, ಮೂಢನಂಬಿಕೆಗಳಿಗೆ, ಶಕುನಗಳಿಗೆ ತಮಗೇ ಗೊತ್ತಿಲ್ಲದಂತೆ ಜೋತುಬಿದ್ದಿರುತ್ತಾರೆ. ಅವು ಕೆಟ್ಟ ಅಭ್ಯಾಸಗಳಲ್ಲದೆ ಇರಬಹುದು. ಆದರೆ ನೋಡುವವರ ಕಣ್ಣಿಗೆ ವಿಚಿತ್ರವಾಗಿ, ಕೆಲವೊಮ್ಮೆ ತಮಾಷೆಯಾಗಿ ಕಾಣೋದಂತೂ ಹೌದು. ಇದಕ್ಕೆ ಬಾಲಿವುಡ್‌ನ ಕೆಲವು ತಾರೆಗಳು ಇಲ್ಲಿ ಉದಾಹರಣೆಯಾಗಿ ಸಿಕ್ಕಿದ್ದಾರೆ...
ಅಮಿತಾಭ್ ಬಚ್ಚನ್
ಆರೂ ಚಿಲ್ರೆ ಅಡಿ ಎತ್ತರದ ಈ ಲಂಬೂಜಿ ಕುರ್ಚಿಯಲ್ಲಿ ಕೂತರೂ ಸುಮಾರು ಐದು ಅಡಿ ಎತ್ತರ ಕಾಣಿಸ್ತಾರೆ. ಕಾರಣ ಏನು ಗೊತ್ತಾ? ಇವರಿಗೆ ಕುರ್ಚಿ ಮೇಲೆ ಕುರ್ಚಿ ಹೇರಿಕೊಂಡು ಕೂತೇ ಅಭ್ಯಾಸ. ಇವರು ಎಲ್ಲೇ ಕೂರೋ ಸಂದರ್ಭ ಬಂದರೂ ಕುರ್ಚಿ ಮೇಲೆ ಒಂದೋ ಎರಡೋ ಕುರ್ಚಿ ಹಾಕಿ ಅದರ ಮೇಲೆಯೇ ಕೂರೋದು. ಅಮಿತಾಭ್ ಮನೆಯಲ್ಲಿ ಇನ್ನೊಂದು ನಿಯಮ ಇದೆ. ಯಾರೇ ದಿನಪತ್ರಿಕೆ ಓದಿದರೂ ಓದಿದ ನಂತರ ಅವರು ಅದರ ಮೇಲೆ ಸಹಿ ಮಾಡಿಡಬೇಕು. ಇನ್ನೊಂದು ವಿಶೇಷ ಅಂದ್ರೆ, ಮಗ- ಸೊಸೆ ಕೆಲಸದ ನಿಮಿತ್ತ ಊರು ತೊರೆದಾಗಲೆಲ್ಲ ಬಚ್ಚನ್ ಎರಡೆರಡು ವಾಚ್ ಕಟ್ಟುತ್ತಾರೆ. ಒಂದು ವಾಚಿನಲ್ಲಿ ಮಗ- ಸೊಸೆಯ ಇರುವ ಜಾಗದ ಟೈಮ್‌ಸೆಟ್ ಮಾಡಿಕೊಂಡಿರುತ್ತಾರೆ.
ಪ್ರೀತಿ ಜಿಂಟಾ
ಪ್ರೀತಿಗೆ ಹಲವು ನಟನಟಿಯರಿಗಿರುವಂತೆ ಶುಚಿತ್ವದ ಬಗ್ಗೆ ಅತಿ ಎನಿಸುವಷ್ಟು ನಿಗಾ. ಈಕೆಗೆ ತಾನು ಬಳಸುವ ಶೌಚಾಲಯ, ವಾಷ್ ಬೇಸಿನ್ನು, ಬಚ್ಚಲು ಇವೆಲ್ಲ ಸದಾ ಸುವಾಸನೆಯಿಂದ ಘಮ್ಮೆನ್ನುತ್ತಿರಬೇಕು ಹಾಗೂ ಲಕಲಕ ಹೊಳೆಯುವಷ್ಟು ಕ್ಲೀನಾಗಿರಬೇಕು. ಎಲ್ಲೇ ಹೋಟೆಲ್ ಬುಕ್ ಮಾಡಿದರೂ ಈಕೆ ಮೊದಲು ಗಮನಿಸೋದೇ ಅಲ್ಲಿನ ಬಾತ್‌ರೂಮನ್ನಂತೆ!
ಅಮೀರ್‌ಖಾನ್
'ಮಿಸ್ಟರ್ ಪರ್‌ಫೆಕ್ಟ್' ಅಮೀರ್ ಖಾನ್ ತನ್ನ ದೇಹವನ್ನು ತಾನು ಹೇಳಿದಂತೆ ಕೇಳೋ ಹಾಗೆ ಮಾಡಿಟ್ಕೊಂಡಿರೋದು ಎಲ್ರಿಗೂ ಗೊತ್ತು. 'ಘಜಿನಿ'ಗೋಸ್ಕರ ಎಂಟು ಪ್ಯಾಕ್ ಆ್ಯಬ್ಸ್ ಮಾಡ್ಕೊಂಡ್ರೆ, 'ತ್ರೀ ಈಡಿಯಟ್ಸ್' ಚಿತ್ರಕ್ಕೆ ಪಕ್ಕಾ ಕಾಲೇಜ್ ಬಾಯ್ ಆಗಿಬಿಡ್ತಾನೆ. ಹಿಂಗೆಲ್ಲ ಬದಲಾಗೋಕೆ ಕಾರಣ ಅವನ ತೂಕದ ಬದುಕು. ಆತ ನಿತ್ಯ ಬೆಳಗಿನ ತಿಂಡಿಗೆ ಮುನ್ನ ದೇಹದ ತೂಕ, ಕೊಬ್ಬಿನಂಶ ಇತ್ಯಾದಿಗಳ ರಿಪೋರ್ಟ್ ಪಡೆದು, ಎಷ್ಟು ತಿನ್ನಬೇಕು ಅಂಥ ನಿರ್ಧರಿಸುತ್ತಾನಂತೆ.
ಕರೀನಾ ಕಪೂರ್
ಕನ್ನಡಿ ಎಂಬ ಮಾಯೆ ಯಾರನ್ನು ಬಿಟ್ಟಿದೆ? ಅದರಲ್ಲೂ ನಟನಟಿಯರಿಗೆ ಕನ್ನಡಿಯೇ ದೇವರು! ಕರೀನಾ ಕಪೂರ್ ಕನ್ನಡಿಪ್ರೇಮಿ ಏನಲ್ಲ. ಆದರೆ ಮನೆಯಿಂದ ಹೊರ ಹೊರಡುವಾಗ ಆಕೆ ಒಮ್ಮೆ ಕನ್ನಡಿ ಎದುರು ನಿಂತು ನಗುವ ರಿಹರ್ಸಲ್ ಮಾಡುತ್ತಾಳಂತೆ. ತಾನು ಸಾರ್ವಜನಿಕ ಸಭೆಯಲ್ಲಿ, ಪಾರ್ಟಿಗಳಲ್ಲಿ ನಕ್ಕಾಗ ಹೇಗೆ ಕಾಣಿಸ್ತೀನಿ, ಎಷ್ಟು ನಕ್ಕರೆ ಚೆನ್ನಾಗಿ ಕಾಣಿಸ್ತೀನಿ ಅನ್ನೋದನ್ನ ತಿಳ್ಕೊಳ್ಳೋಕೆ!
ರಣಬೀರ್ ಕಪೂರ್
ಈ 'ಬರ್ಫಿ' ಹೀರೋಗೆ ಒಂದು ವಿಚಿತ್ರ ಮೂಢನಂಬಿಕೆ. ದಾರಿಯಲ್ಲಿ ಕೆಂಪು ವ್ಯಾನ್ ನೋಡಿದ ಕೂಡಲೇ ಎರಡೂ ಕೈಗಳ ಬೆರಳುಗಳನ್ನು ಲಾಕ್ ಮಾಡಿಕೊಂಡು ಅದೇನೋ ಬೇಡಿಕೊಳ್ತಾನೆ. ಹಾಗೂ ಆನಂತರ ಮೂರು ಕಪ್ಪು ಬಣ್ಣದ ಕಾರ್ ಕಾಣಿಸೋ ತನಕ ಮೌನವ್ರತ ಆಚರಿಸುತ್ತಾನೆ. ಆ ಹೊತ್ತಲ್ಲಿ ಯಾರೇ ಮಾತಾಡಿಸಿದರೂ ಮಾತಾಡಲ್ಲ. ಮಾತಾಡದಿರಲು ಕೆಲವೊಮ್ಮೆ ನಿದ್ರೆ ಬಂದವನಂತೆಯೂ ನಟಿಸುತ್ತಾನೆ.
ಪ್ರಿಯಾಂಕಾ ಚೋಪ್ರಾ
ಮಾಜಿ ವಿಶ್ವ ಸುಂದರಿಗೆ ತನ್ನಷ್ಟೇ ತನ್ನ ಸುತ್ತಲ ಪರಿಸರವೂ ಸುಂದರವಾಗಿರಬೇಕೆಂಬ ಹಟ. ಎಲ್ಲೇ ಹೋದರೂ ಯಾವ ಯಾವ ವಸ್ತು ಎಲ್ಲಿತ್ತೋ ಅಲ್ಲೇ ಇರಬೇಕು ಎಂದು ನಿರೀಕ್ಷಿಸುತ್ತಾಳೆ. ಅಪ್ಪಿತಪ್ಪಿ ವಸ್ತುಗಳು ಸ್ಥಾನ ಪಲ್ಲಟಗೊಂಡಿದ್ದರೆ, ಅದು ತನ್ನ ಮನೆಯಾಗಿರಲಿ, ಬೇರೆಯವರ ಮನೆಯಾಗಿರಲಿ, ಪಬ್ಲಿಕ್ ಫಂಕ್ಷನ್ ಆಗಿರಲಿ, ವಸ್ತುಗಳನ್ನು ಆಯಾ ಜಾಗಕ್ಕೆ ಸೇರಿಸಿದರೇನೇ ಸಮಾಧಾನವಂತೆ!
-ನವೀನ್ ಸಾಗರ್
naveen2709@gmail.com