ತಪ್ಪು ಮಾಡದ ತೃಪ್ತ ಭಾವದಲ್ಲಿ ರೆಫ್ರೀ ವಿಜಯ್ ಕುಮಾರ್
ರೆಫ್ರೀ ಅಂದರೆ, ಅದು ಯಾರನ್ನೂ ತೃಪ್ತಿಗೊಳಿಸಲಾಗದ ಕೆಲಸ. ರೆಫ್ರೀ ಫುಟ್ಬಾಲ್ ಆಟಗಾರರಿಗಿಂತ ಒಂದು ಎಳೆ ಹೆಚ್ಚಿನ ಫಿಟ್ನೆಸ್ ಹೊಂದಿರಬೇಕು. ರೆಫ್ರಿ ಕೆಚ್ಚೆದೆ ಮತ್ತು ...
ರೆಫ್ರೀ ಅಂದರೆ, ಅದು ಯಾರನ್ನೂ ತೃಪ್ತಿಗೊಳಿಸಲಾಗದ ಕೆಲಸ. ರೆಫ್ರೀ ಫುಟ್ಬಾಲ್ ಆಟಗಾರರಿಗಿಂತ ಒಂದು ಎಳೆ ಹೆಚ್ಚಿನ ಫಿಟ್ನೆಸ್ ಹೊಂದಿರಬೇಕು. ರೆಫ್ರಿ ಕೆಚ್ಚೆದೆ ಮತ್ತು ಜಾಣತನ ಹೊಂದಿರಬೇಕು. ರೆಫ್ರೀ ಕೆಲಸ ಸಂಪೂರ್ಣವಾಗಿ ದೈಹಿಕ ಭಾಷೆಯೆ ಮೇಲೆ ಅಡಕವಾಗಿರುತ್ತದೆ. ರೆಫ್ರೀ ಪಾದರಸದಂತೆ ಚುರುಕಾಗಿರಬೇಕು ಮತ್ತು ಸನ್ನಡತೆ ಹೊಂದಿರಬೇಕು. ರೆಫ್ರೀ ನ್ಯಾಯದೇವರೇ ಆಗಿರಬೇಕು. ಇದೆಲ್ಲದರೊಂದಿಗೆ ದೇವರ ಅನುಗ್ರಹ ಖಂಡಿತ ಇರಲೇಬೇಕು ಎನ್ನುತ್ತಾರೆ ಇತ್ತೀಚೆಗಷ್ಟೇ ತಮ್ಮ ವೃತ್ತಿಯ ಕೊನೆಯ ಐ-ಲೀಗ್ ಪಂದ್ಯದ ರೆಫ್ರೀಯಾಗಿ ಕಾರ್ಯನಿರ್ವಹಿಸಿದ ವಿಜಯ್ ಕುಮಾರ್.
8 ವರ್ಷಗಳ ಕಾಲ ಫುಟ್ಬಾಲ್‌ನಲ್ಲಿ ರೆಫ್ರಿಯಾಗಿ, ವಿವಾದವಿಲ್ಲದ ತೀರ್ಪುಗಳನ್ನು ನೀಡಿದ ಬಗ್ಗೆ ತೃಪ್ತಿ ಹೊಂದಿರುವ ಅವರು 'ಕನ್ನಡಪ್ರಭದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
2011ರಲ್ಲಿ ಕೋಲ್ಕತಾದಲ್ಲಿ ನಡೆದ 115ನೇ ಐಎಫ್‌ಎ ಶೀಲ್ಡ್ ಪಂದ್ಯಕ್ಕೆ ರೆಫ್ರೀಯಾಗಿ ಕಾರ್ಯನಿರ್ವಹಿಸಿದ್ದು ನನಗೆ ಇದುವರೆಗೂ ತೃಪ್ತಿ ನೀಡಿದ ಪಂದ್ಯವಾಗಿದೆ. ಈ ಪಂದ್ಯಕ್ಕೆ ನಾನು ರೆಫ್ರಿಯಾಗಿ ಕಾರ್ಯನಿರ್ವಹಿಸಲು ರೆಫ್ರೀ ಸಹಾಯಕರೊಬ್ಬರು ಅನುಮಾನ ವ್ಯಕ್ತಪಡಿಸಿದರು. ಆದರೆ, ಪಂದ್ಯದ ಕಮಿಶನರ್ ಆಗಿದ್ದ ಎಸ್.ಎಸ್ ಶೆಟ್ಟಿ ಎಂಬುವವರು ನನಗೆ ಅವಕಾಶ ನೀಡಿದರು. ಈ ಪಂದ್ಯದಲ್ಲಿ ನಾನು ಅದ್ಭುತವಾಗಿ ಕಾರ್ಯನಿರ್ವಹಿಸದ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ನಾನು ರೆಫ್ರಿ ಕಾರ್ಯ ಆಯ್ದುಕೊಂಡಿದ್ದಕ್ಕೆ ತೃಪ್ತ ಭಾವ ನನ್ನಲ್ಲಿ ಮೂಡಿತ್ತು ಎಂದು ನಿಮಗೆ ತೃಪ್ತಿ ನೀಡಿದ ಪಂದ್ಯ ಯಾವದು ಎಂದು ಕೇಳಿ ಪ್ರಶ್ನೆಗೆ ವಿಜಯ್ ಕುಮಾರ್ ಉತ್ತರಿಸಿದರು.
ರೆಫ್ರಿಯಾಗಿ ಕಾರ್ಯನಿರ್ವಹಿಸುವುದು ಸುಲಭ ಮಾತಲ್ಲ. ಆದರೆ, ಮನಸ್ಸು ಮಾಡಿದರೆ, ಯಾವದೂ ದೊಡ್ಡದಲ್ಲ. ರೆಫ್ರಿಯಾದವರು ಪಂದ್ಯವೊಂದರ ನ್ಯಾಯಾಧೀಶರೇ ಸರಿ. ಅದಕ್ಕೆ ತಕ್ಕನಾಗಿಯೇ ಕಾರ್ಯನಿರ್ವಹಿಸಬೇಕು. ಪಂದ್ಯದಲ್ಲಿ ನಮ್ಮ ದೈಹಿಕ ಭಾಷೆ ಮಹತ್ವದ್ದಾಗಿರುತ್ತದೆ. ಆ ಮೂಲಕವೇ ಆಟಗಾರರು ರೆಫ್ರಿಗೆ ಗೌರವ ಕೊಡುತ್ತಾರೆ. ಅದರಲ್ಲಿ ಸೋತರೆ, ನಮ್ಮ ಕಾರ್ಯದಲ್ಲಿ ಸೋತಂತೆ. ಆಟಗಾರರ ಸರಿ ತಪ್ಪುಗಳ ಕುರಿತು ಸ್ವಲ್ಪ ಹೆಚ್ಚು ಕಡಿಮೆಯಾದರೂ, ಹಾವಿನ ಮೇಲೆ ಕಾಲಿಟ್ಟಂತೆ ಸರಿ. ಅಷ್ಟೊಂದು ರೋಷವಿರುತ್ತದೆ ಫುಟ್ಬಾಲ್ ಆಟಗಾರರಲ್ಲಿ. ಆಕಸ್ಮಿಕ ತಪ್ಪುಗಳಾಗುತ್ತವೆ. ಆದರೆ, ಯಾವುದನ್ನೂ ಉದ್ದೇಶಪೂರ್ವಕವಾಗಿ ಮಾಡಬಾರದು ಎನ್ನುತ್ತಾರೆ ರೆಫ್ರಿಯ ಜವಾಬ್ದಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ್ ಕುಮಾರ್.
ಫುಟ್ಬಾಲ್ ನಿಯಮ ಬಲ್ಲವರು ಯಾರಾದರೂ ರೆಫ್ರಿಯಾಗಿ ಕಾರ್ಯನಿರ್ವಹಿಸಬಹುದು. ಆದರೆ, ಆಟಗಾರರೇ ರೆಫ್ರಿಯಾಗಿ ಕಾರ್ಯನಿರ್ವಹಿಸಿದರೆ ಸೂಕ್ತ ಎಂದು ನನಗೆ ಎನಿಸುತ್ತದೆ. ಏಕೆಂದರೆ, ಪಂದ್ಯವೊಂದರಲ್ಲಿ ರೆಫ್ರೀಗಳು ನೀಡುವ ತೀರ್ಪುಗಳು ತುಂಬಾ ಮಹತ್ವದ್ದಾಗಿರುತ್ತವೆ. ಆ ತೀರ್ಪುಗಳು ಕೊಂಚ ತಪ್ಪಾಗಿದ್ದರೂ ಉಂಟಾಗುವ ನೋವನ್ನು ಆಟಗಾರನಾದವನು ಅನುಭವಿಸಿರುತ್ತಾನೆ ಎಂದು ಯಾರು ರೆಫ್ರಿಯಾದರೆ ಸೂಕ್ತ? ಎಂಬ ಪ್ರಶ್ನೆಗೆ ಉತ್ತರಿಸಿದರು.
- ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com