ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ನನ್ನ ಇಚ್ಛಾಮರಣ

ನಾನು ಸತ್ತ ಸುದ್ದಿ ಎಲ್ಲರಿಗಿಂತ ನನಗೇ ಮೊದಲು ತಿಳಿಯಿತು. ನನಗೆ ನನ್ನ ಬದುಕು ದೊಡ್ಡ ಘಟನೆ ಎನ್ನಿಸಿದ್ದಿಲ್ಲ. ಜನಕ್ಕೆ ನನ್ನ ಸಾವೂ ಸಣ್ಣ ಘಟನೆಯೆ ಅನಿಸಿತು....

Rashmi Kasaragodu
Updated On : 4 Jan 2014, 3:45 am

ನಾನು ಸತ್ತ ಸುದ್ದಿ ಎಲ್ಲರಿಗಿಂತ ನನಗೇ ಮೊದಲು ತಿಳಿಯಿತು. ನನಗೆ ನನ್ನ ಬದುಕು ದೊಡ್ಡ ಘಟನೆ ಎನ್ನಿಸಿದ್ದಿಲ್ಲ. ಜನಕ್ಕೆ ನನ್ನ ಸಾವೂ ಸಣ್ಣ ಘಟನೆಯೆ ಅನಿಸಿತು.
ಅನೇಕ ಚಿಕ್ಕವರು ಸಾಯುವ ಹಾಗೆಯೆ ನಾನೂ ಜೀವ ಹೋಗುವ ನೆವದಿಂದಲೇ ಸತ್ತು ಬಿಟ್ಟೆ.
ಸಾಯುವುದರಲ್ಲಿ ನಾನು ಯಾವ ಪವಾಡವನ್ನೂ ತೋರಿಸಲಿಲ್ಲ. ನಾನು ಬದುಕಿದ್ದೇ ಒಂದು ಪವಾಡವಾಗಿತ್ತು.
ನನಗೆ ಸಾವಿನ ಬಗ್ಗೆ ಬಹಳ ನಿರಾಶೆಯಾಯಿತು. ಸತ್ತ ಬಳಿಕ ಇರುವ ಕಷ್ಟ ತಪ್ಪಬಹುದು, ಆಗುವ ನಷ್ಟ ನಿಲ್ಲಬಹುದು ಎಂದುಕೊಂಡಿದ್ದೆ. ನನ್ನ ಎಣಿಕೆ ಶೀರ್ಷಾಸನ ಹಾಕಿತು. ಆದರೂ ಭಾರವಾದ ಬದುಕಿಗಿಂತ ಸಾವು ಹಗುರ.
ನಾನು ಬದುಕಿದ್ದಾಗ- ನನಗೆ ನಿತ್ಯ ಜನನ ಮರಣ.
ನನ್ನ ಹೆಂಡತಿಗೆ... ಬರಿ ಜನನ, ಅದು ಅವಳಿಗೆ ವಾರ್ಷಿಕೋತ್ಸವ.
ಅಮಿತ ಸಂತಾನ ಸಂಪತ್ತು ನನ್ನ ಪಾಲಿಗಿತ್ತು. ಅಂತೆಯೇ ತಿಂದ ಕೂಳು ಮೈಗೆ ಹತ್ತಲಿಲ್ಲ. ತಿನ್ನಬೇಕೆನ್ನುವ ಕೂಳು ಕೈಗೂ ಹತ್ತುತ್ತಿರಲಿಲ್ಲ.
ನಾನು ಒಂದು ಆಫೀಸಿನಲ್ಲಿ ಎರಡು ತಪ ಜೀವ ತೇಯ್ದೆ. ನನ್ನ ತಪಸ್ಸು ವಿಫಲವಾಗುತ್ತಲೇ ಇತ್ತು. ತಾಪ ಹೆಚ್ಚುತ್ತಲೇ ನಡೆಯಿತು ಸ್ಥಾನಾಂತರಗೊಂಡು ಹೊಸ ಊರಿಗೆ ಹೋದಾಗ-
ಹೊಸಬರೊಡನೆ ಪರಿಚಯದ ಮೊದಲ ಸುತ್ತಿನಲ್ಲಿಯೇ ನನಗೆ ನಾಚಿಕೆ.
ನಾಚಿಕೆ ಏಕಾಗಬೇಕು ನಾನು ಹೆಂಗಸಲ್ಲವಲ್ಲ. ಅಲ್ಲ, ಬಲಿಷ್ಠ ಗಂಡಸೆಂಬುವುದೇ ನನ್ನ ನಾಚಿಕೆಯ ಮೂಲಕಾರಣ. ಮಗ್ಗುಲ ಕುರ್ಚಿಯವನು ಮೆಲ್ಲಗೆ ಕೇಳುತ್ತಾನೆ:
ನಿಮಗೆ ಮಕ್ಕಳೆಷ್ಟು?
ಆತ ತರುಣ. ಇನ್ನೂ ಮದುವೆಯಾಗದವ. ಆದರೂ ನನ್ನ ಪ್ರಜಾ ಕೋಟಿಯ ಬಗ್ಗೆ ಅಷ್ಟು ಆಸೆ ಏಕೊ?
ಅವನ ಹಲ್ಲುಗಳ ಬೆಳಕಿನಲ್ಲಿ ಈ ಪ್ರಶ್ನೆಯನ್ನು ತೂರಿದರೂ ನನ್ನ ಎದೆಗೆ ಶೂಲ ತಿವಿದ ನೋವು. ನನ್ನ ಪೌರುಷಕ್ಕೆ ಧಿಕ್ಕಾರ ಎನ್ನಿಸುತ್ತಿತ್ತು.
ಏನು ಉತ್ತರ ಹೇಳಬೇಕು?
ಹದಿನಾಲ್ಕು ಎಂದು ಹೇಳಲೆ?
ಸತ್ಯ ಎಷ್ಟು ಕಠೋರ, ಕ್ರೂರ!
ಆ ಹೊಸ ತರುಣ ನಗದೆ ಇದ್ದಾನೆಯೆ?
ತುಟಿಯನ್ನು ಕಿವಿಯವರೆಗೆ ಜಗ್ಗಿ ಹಲ್ಲುಗಳನ್ನು ಹೊರನೂಕಿ ಆತ 'ಖೂಳ್‌' ಎಂದು ಶಬ್ದ ಮಾಡಲಿಕ್ಕಿಲ್ಲ. ಅಂತರಂಗದಲ್ಲಿ ಆತನ ವಿಕಟ ಅಟ್ಟಹಾಸ ಮೇರೆದಪ್ಪಿ ಮೆರೆಯದೆ ಇರಬಹುದೇ?
ಆತ ತಾನೊಬ್ಬನೇ ತನ್ನೊಳಗೆ ನಗಲಿಲ್ಲ. ನನ್ನ ಮರೆಯಲ್ಲಿ ಅವನ ನಗೆ ಬಾಯಿಗಡಿಗೆಯೊಡೆದು ಚೆಲ್ಲಿದ ಮೊಸರು. ಅದರ ಹುಳಿ ನನ್ನ ಹಿಗ್ಗಿನ ಹಾಲಿನಲ್ಲಿ.
ಒಮ್ಮೆ ನಾನು ನನ್ನವಳ ಹದಿನೈದನೆಯ ಹೆರಿಗೆಗೆ ಎರಡು ದಿನ ರಜೆ ಹಾಕಿದ್ದೆ. ಕುಟುಂಬ ನಿಯೋಜನೆಯ ಕೇಂದ್ರದಲ್ಲಿಯೇ ಇದ್ದ ಹೆರಿಗೆಯ ಆಸ್ಪತ್ರೆಯಿಂದ ಮನೆಗೆ ಸುತ್ತಾಡಿ ಸುಸ್ತಾಗಿತ್ತು. ಅವಳಿಗೋ ಹೆತ್ತು ಅಭ್ಯಾಸವಾಗಿ ಹೋಗಿತ್ತು. ನಾನು ಮರುದಿನ ಆಫೀಸಿಗೆ ಬಂದಾಗ ಇನ್ನೂ ಬೇನೆ ತಿನ್ನುತ್ತಿದ್ದೆ.
ಕಳ್ಳನಿಗೆ ಪಾಠ ಹೇಳುವ ಹೆಜ್ಜೆಯೊಂದಿಗೆ ಅಪರಾಧಿಯಂತೆ ಆಫೀಸು ಸೇರಿದಾಗ ಎಲ್ಲರೂ ಒಮ್ಮೆಯೇ ಮಾತನಾಡುತ್ತಿದ್ದರು. ನನಗೆ ಸಂಶಯ ಬಂತು. ನಾನು ಹೊಕ್ಕದ್ದು ನನ್ನ ಆಫೀಸೆ, ವಿಧಾನಸಭೆಯೆ?
ಮಾತು ಒಮ್ಮೆಲೇ ಹೂತು ಹೋಯಿತು. ಮಾತು ಹೂತು ಹೋದರೇನಾಯಿತು ವಿಷಯ ವಾಸನೆ ಕಿವಿಗೆ ತಾಗುತ್ತಲೇ ಇತ್ತು.
ನನ್ನ ಪಂಚದಶಿಯ ಮೇಲೆಯೇ ಅಲ್ಲಿ ವ್ಯಾಖ್ಯಾನ ನಡೆದಿತ್ತು.
ನನ್ನ ಆಫೀಸು ನನ್ನನ್ನು ಅಣಕಿಸಿತು. ಅಣಕಿಸಿದವರ ಮೋರೆಯೆ ಡೊಂಕು ಎಂದು ನನಗೆ ಮನದಟ್ಟಾಗಿತ್ತು. ಸಮಾಜ ಕಲ್ಯಾಣ ಶಾಖೆಯಲ್ಲಿ ಕೆಲಸ ಮಾಡುವ ನನಗೇಕೆ ಈ ಸರಳ ವಿಚಾರಗಳು ಎಂದು ಕುರ್ಚಿಯ ಮೇಲೆ ಕುಳಿತೆ. ಮಾತಿನಿಂದ ಸಂತಾನ ನಿಯಂತ್ರಣ ಮಾಡಲು ನನಗೆ ಸರಕಾರ ಸಂಬಳ ಕೊಡುತ್ತಿತ್ತು. ಸರಕಾರದ ಕೆಲಸವನ್ನು ದೇವರ ಕೆಲಸವೆಂದೇ ನಾನು ಮಾಡಿದೆ. ಆ ಮಾತನ್ನು ಕೃತಿಯಲ್ಲಿ ಬಳಸುವ ಅಪಚಾರ ನಾನೆಂದೂ ಮಾಡಲಿಲ್ಲ.
ನನಗೆ ನೌಕರಿ ಹತ್ತಿದ್ದೆ ಚರರಾಶಿಯಲ್ಲಿ, ಅಂತೆಯೇ ವರುಷ ತುಂಬುವುದರೊಳಗೆ ಇದ್ದ ಊರು ಬಿಡಬೇಕು. ಯಾವ ಊರೂ, ಆಫೀಸೂ ನನ್ನನ್ನು ಬೇಡಿ ಕರೆಸಿಕೊಳ್ಳಲಿಲ್ಲ. ತಾವು ಇರುವ ಊರು ಬೇಡವಾದಾಗ ಎಲ್ಲೋ ಇದ್ದ ನನ್ನನ್ನು ಎಳೆದು ಈ ಬಾವಿಗೆ ನೂಕಿ ತಾವು ಪಾರಾಗುತ್ತಿದ್ದರು. ತಮಗೆ ಬೇಕಾದ ಊರಿಗೆ ಈ ಅಜಾತಪುತ್ರನಾದ ನಾನೆ ಬಲಿ.
ಯಾರು, ಯಾರ ಬೆನ್ನೋ ಹತ್ತಿ ನನ್ನನ್ನು ಬೆನ್ನಟ್ಟುತ್ತಿದ್ದರು. ಆದರೆ ನನ್ನ ಬೆನ್ನಿಗೆ-
ನನ್ನನ್ನು ಬಾಗಿಸಿದ ಪಂಚದಶೀ ಪ್ರಪಂಚ ಆ ಮುತ್ತುಗಳನ್ನು ಹೆತ್ತು ಸಿಂಪಿಯಾದ ನನ್ನ ಹಳೇ ಷೋಡಶಿ.
ಸತ್ತರೂ ಬದುಕಿನ ವಿಷಯ ಬಿಡಲೊಲ್ಲದು. ವಿಷಯಾಸ್ಥೆಯೇ ಅಷ್ಟು ಜಿಗುಟು.
ಬದುಕಿದ್ದಾಗ ಜನ ಸತ್ತರೆ ಕಾಲವಶವಾದ ಎನ್ನುತ್ತಾರೆ. ನಾನೂ ಮೊದಲು ಹಾಗೆಯೇ ಅನ್ನುತ್ತಿದ್ದೆ. ಸತ್ತ ಮೇಲೆ ನನಗೆ ಇದು ಶುದ್ಧ ಸುಳ್ಳು, ತಪ್ಪು ಎನ್ನಿಸಿದೆ.
ಈಗ ನಾನು ಕಾಲ ವಶನಲ್ಲ. ಕಾಲವೇ ನನ್ನ ಅಧೀನ. ಬದುಕಿದ್ದಾಗ ಕಾಲವೊಂದು ಕಾಲ್ತೊಡಕು. ಹಳ್ಳಿಯಲ್ಲಿ ಕಾಲ ಕಳೆಯುವುದು ಕಷ್ಟ. ನಗರಗಳಲ್ಲಿ ಅದು ಉಳಿಯುವುದು ಕಷ್ಟ ಕಾಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments