ಖುಷಿ

ನನ್ನದಲ್ಲದ್ದು

'ಇನ್ನೊಂದು ಹತ್ತು ಸಾವಿರ ಕೊಟ್ಟಿದ್ರೆ ನಿನಗಿಂತ ಬೆಳ್ಳಗಿನ ತೆಳ್ಳಗಿನ ಹುಡುಗಿ ಸಿಗ್ತಿದ್ಲು.' ನನ್ನ ಗಂಡನ ಬಾಯಿಂದ ಬಂದ ಪ್ರಣಯ ಗೀತೆ...

'ಇನ್ನೊಂದು ಹತ್ತು ಸಾವಿರ ಕೊಟ್ಟಿದ್ರೆ ನಿನಗಿಂತ ಬೆಳ್ಳಗಿನ ತೆಳ್ಳಗಿನ ಹುಡುಗಿ ಸಿಗ್ತಿದ್ಲು.'
ನನ್ನ ಗಂಡನ ಬಾಯಿಂದ ಬಂದ ಪ್ರಣಯ ಗೀತೆ. ಎದ್ದು ಕೆನ್ನೆಯ ಮೇಲೊಂದು ಬಾರಿಸಿ ಬಿಡುವಷ್ಟು ಸಿಟ್ಟು ಬಂತು. ಗಂಡನ ಮೇಲಲ್ಲ. ಹೆತ್ತಪ್ಪನ ಮೇಲೆ. ಇಷ್ಟು ಅಹಂಕಾರದ ಹೆಣ್ಣು ಅಂತ ಮೊದಲೇ ಗೊತ್ತಿದ್ದರೆ ಇವಳನ್ನೇಕೆ ದುಡ್ಡುಕೊಟ್ಟು ತರಬೇಕಿತ್ತು? ಗಂಡ ಹಾಡುತ್ತಿದ್ದ ಹಾಡಿಗೆ ಸೋ ಗುಟ್ಟಂತೆ ಅತ್ತೆಯ ದನಿ. ಅಸಹಾಯಕವಾಗಿ ನಿಲ್ಲದೆ ಬೇರೆ ದಾರಿ ನನಗಿರಲಿಲ್ಲ. ಸ್ವಾಭಿಮಾನಿಯಾಗಿ ಬದುಕಿದ್ದೆ. ಅಹಂಕಾರಕ್ಕೂ ಸ್ವಾಭಿಮಾನಕ್ಕೂ ಇರುವ ಸೂಕ್ಷ್ಮವನ್ನು ಬಲ್ಲೆ ನಾನು. ಆದರೆ, ನಾ ಸಿಲುಕಿದ್ದು ಒಂದು ಸಂದಿಗ್ಧ ಪರಿಸ್ಥಿತಿ. ಒಬ್ಬ ಅಪರಾಧಿಯನ್ನು ನಿರಪರಾಧಿಯೆಂದುಕೊಂಡು ಅವನ ಪರ ವಕಾಲತ್ತು ವಹಿಸಿದರೆ ಅದರಲ್ಲಿ ಸ್ವಾಭಿಮಾನದ ತಪ್ಪೇನು? ಆದರೆ ನಾನಂದುಕೊಂಡ ನಿರಪರಾಧಿ ಅಪರಾಧಿಯೆಂದು ಗೊತ್ತಾದ ಕ್ಷಣ ತಪ್ಪಿಲ್ಲದಿದ್ದರೂ ತಲೆ ತಗ್ಗಿಸುವ ಸಂದಿಗ್ಧತೆ ಸ್ವಾಭಿಮಾನದ್ದು! ಅದು ಈಗ ನಂದೂ. ಹಾಗೆ ನೋಡಿದರೆ ತಪ್ಪು ನಂದೂ ಅಲ್ಲ, ನನ್ನ ಅತ್ತೆಯದೂ ಅಲ್ಲ, ನನ್ನ ಗಂಡನದೂ ಅಲ್ಲ. ಆದರೆ ಆಡಿದ ಮಾತಿನ, ಕೇಳಿದ ಬೈಗುಳದ ಸುಂಕ ಹಗುರವೆನಿಸಲಿಲ್ಲ.
ಸೀದಾ ಕೋಣೆಗೆ ಹೋಗಿ ಬಾಗಿಲೆಳೆದುಕೊಂಡೆ. 'ಅವಮಾನಕ್ಕೆ ಉರುಳು ಬಿಗಿದುಕೊಂಡಾಳು ನಿನ್ನ ಹೆಂಡತಿ. ಹಾಗೇನಾದರೂ ಆದರೆ ಜೈಲು ಪಾಲಾದೆವು. ನೋಡು ಸ್ವಲ್ಪ' ಎಂಬ ಅತ್ತೆಯ ಮಾತು ಗಟ್ಟಿಯಾಗೆ ಕೇಳಿಸಿತ್ತು. ಯಾರದ್ದೋ ತಪ್ಪಿಗೆ ನನ್ನ ಪ್ರಾಣ ಕಳೆದುಕೊಳ್ಳುವಷ್ಟು ಹೇಡಿ ನಾನಲ್ಲ. ನನ್ನ ಗಂಡನೆನಿಸಿಕೊಂಡವ ಬಾಗಿಲ ಬಳಿ, ನಿಂತು ಚಿಲಕ ದಡಬಡ ಮಾಡುತ್ತಿದ್ದ. ಮಂಚದ ಮೇಲೆ ಕುಳಿತಿದ್ದೆ. ಕಣ್ಣಲ್ಲಿ ನೀರು ದಳದಳ ಎನ್ನುತ್ತಿತ್ತು. ಗಂಟಲು ಕಟ್ಟಿ, ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದೆ. ನಾನೊಬ್ಬ ಹೆಣ್ಣು. ಹೆಣ್ಣಿಗೆ ಸಂಬಂಧಗಳ ಪಾಶ ಹೆಚ್ಚು. ಅದೇ ಅವಳ ಜೀವನ ಚೈತನ್ಯವೆಂದುಕೊಂಡಿದ್ದೆ. ಎಂಥ ಹುಚ್ಚಿ ನಾನು! ವಾಸ್ತವದಲ್ಲಿ ಹೆಣ್ಣು ಹುಟ್ಟು ಒಂಟಿ. ಅವಳಿಗೆ ಕರುಳ ಕುಡಿಯ ಬಿಟ್ಟು ನನ್ನವರೆಂಬ ಶಾಶ್ವತ ಸಂಬಂಧವೇ ಇಲ್ಲ. ಈ ಕ್ಷಣದಲ್ಲಿ ನನಗೆ ನನ್ನವರು ಎಂದು ಹೇಳಿಕೊಳ್ಳಲು ಯಾರೂ ಉಳಿದಿರಲಿಲ್ಲ. ತಾಳಿ ಕಟ್ಟಿದವ ಪರಕೀಯ, ಧಾರೆ ಎರೆದ ತಂದೆ ಈಗ ಬೇರೆ ಕುಲದವ. ನನಗೆ ನನ್ನವರೆಂದರೆ ನಾನೊಬ್ಬಳೇ! ಉಟ್ಟ ಸೀರೆಯೂ ನನ್ನದಲ್ಲದ್ದು. ಮಾನ ಮುಚ್ಚಿಕೊಳ್ಳಲೂ ಯಾರೋ ಕೊಟ್ಟ ತುಂಡನ್ನ ಸುತ್ತಿಕೊಳ್ಳಬೇಕೆನಿಸಿತ್ತು. ಗಳಿಸದ ಹೆಂಗಸು ಗುಲಾಮಳಿದ್ದಂತೆ. ಅದೂ ಕೊಂಡು ತಂದ ಹೆಂಗಸು ಗುಲಾಮಗಿರಿಯನ್ನು ಪರಿಷ್ಕರಿಸಿದಂತೆ. ಮನೆ ಬಿಟ್ಟು ಹೊರಡಲು ನಿರ್ಧರಿಸಿದೆ. ಬೀರನ್ನು ತೆಗೆದು ಸೀರೆಯನ್ನ ಚೀಲಕ್ಕೆ ತುಂಬ ಬೇಕೆಂದರೆ ನನ್ನ ಸೀರೆಗಳೇ ಕಾಣಿಸಲಿಲ್ಲ. ಎಲ್ಲವೂ ನನ್ನದಲ್ಲದ್ದು. ಅರ್ಧದಷ್ಟು ಗಂಡ ಕೊಟ್ಟ ಸೀರೆ, ಇನ್ನರ್ಧ ತಂದುಕೊಟ್ಟದ್ದು, ಇವೆರಡರಲ್ಲಿ ನನ್ನದೆಲ್ಲಿದೆ? ತನ್ನನ್ನ ತಾನೇ ಮಾರಿಕೊಂಡು ಬದುಕುವ ಸೂಳೆ ನನಗಿಂತ ವಾಸಿ ಎಂದೆನಿಸಿತು.
20 ವರ್ಷ ಕೆಳಗೆ ನಾ ಹುಟ್ಟಿದಾಗ ನನ್ನ ಹೆತ್ತವರು ಸಂತೋಷ ಪಡದಿದ್ದರೂ ಹೆಣ್ಣಾಯಿತಲ್ಲಾ ಎಂದು ದುಃಖಿಸಿರಲಾರರು ಎಂದುಕೊಂಡಿದ್ದೆ. ಹೆಣ್ಣು ಮಗುವನ್ನ ದ್ವೇಷಿಸುವ ಕಾಲದಲ್ಲಿ ಹುಟ್ಟಿರಲಿಲ್ಲ ನಾನು. ಆದರೂ ಬೆಳೆಯುವಾಗ ತಮ್ಮನ ಮೇಲಿದ್ದ ಪ್ರೀತಿ ನನ್ನ ಮೇಲಿರಲಿಲ್ಲ. ನನ್ನ ಹೆತ್ತವರಿಗದು ತಪ್ಪೆಂದು ನನಗೂ ಅನಿಸಲಿಲ್ಲ. ಯಾಕೆಂದರೆ ಅವ ಮುದ್ದಿನ ತಮ್ಮನೂ ಆಗಿದ್ದ. ನನಗೆ ಎಷ್ಟೇ ನೋವಾದರೂ ನನ್ನ ಉದ್ದ ಜಡೆಯನ್ನು ಅವನ ಮನಸೋಯಿಚ್ಛೆ ಎಳೆಯಬಿಟ್ಟ ಅಕ್ಕ ನಾನು ಪಿಯುಸಿಯಲ್ಲಿ ನನ್ನೆಲ್ಲ ಸಂಗಡಿಗರಿಗಿಂತ ಹೆಚ್ಚು ಅಂಕ ತೆಗೆದರೂ ಮನೆಯ ಆರ್ಥಿಕ ಅಸಹಾಯಕತೆಯನ್ನು ನಿಂದಿಸದೆ ಖುಷಿಯಿಂದ ಕನಸಿನ ಎಂಜಿನಿಯರಿಂಗ್ ಬಿಟ್ಟು ಹತ್ತಿರದ ಕಾಲೇಜು ಸೇರಿದ್ದೆ. ಪದವಿ ಮುಗಿಯುವುದರೊಳಗೆ ನನ್ನೆಲ್ಲ ಗೆಳತಿಯರೂ ಇಷ್ಟಪಟ್ಟ ಹುಡುಗರನ್ನ ಪ್ರೀತಿಸಿ ನಿಂತಿದ್ದರೂ, ಅಪ್ಪನ ಘನತೆಗೆ ಕುಂದು ಬರಬಾರದೆಂದು ಆ ಯೋಚನೆಯನ್ನು ಕನಸಿನಲ್ಲೂ ಹತ್ತಿರ ಬಿಡಲಿಲ್ಲ. ಯಾಕೆಂದರೆ ಅಂದು ನನ್ನ ತಂದೆ ನನ್ನವನಾಗಿದ್ದ. ಆದರೆ, ಅದೇ ತಂದೆ ಹುಟ್ಟಿದಾಗಿಂದ ಇಲ್ಲಿಯವರೆಗೆ ನನ್ನ ಸಾಕಿದ್ದ ಖರ್ಚನ್ನು ಎಣಿಸಿಟ್ಟಿದ್ದ ಎಂದರೆ ಅವನನ್ನ ಅಪ್ಪಾ ಎಂದು ಯಾವ ಬಾಯಲ್ಲಿ ಕರೆಯಲಿ..!?
ಕಬ್ಬಿಣದ ಚಿಕ್ಕ ಪಂಜರದ ಗಿಳಿಯನ್ನು ಚಿನ್ನದ ದೊಡ್ಡ ಪಂಜರದ ಒಡೆಯನಿಗೆ ಮಾರಿ, ಪ್ರತಿಯಾಗಿ ಪಡೆದ ಚಿನ್ನದ ನಾಣ್ಯಗಳ ಬಗ್ಗೆ ಗಿಳಿಗೇನು ಗೊತ್ತು ಪಾಪ!? ಅದು ನನಗೆ ಮದುವೆಯಾಗಿತ್ತು. ನನ್ನಪ್ಪನಿಗೆ ವ್ಯಾಪಾರ. ಮದುವೆಯಾಗಲು ಹೆಣ್ಣು ಸಿಗದ ಕಾಲ. ಅದರಲ್ಲೂ ಹಳ್ಳಿವಾಸಿ ಹುಡುಗರಿಗೆ ಮದುವೆ ಕನಸಿನ ಮಾತು. ಅದಕ್ಕೆ ಅಲ್ಲೊಂದು ಇಲ್ಲೊಂದು ಬಡ ಮನೆತನದ ಹುಡುಗಿಯರಿಗೆ ವಧುದಕ್ಷಿಣೆ ಕೊಟ್ಟು ಮದುವೆ ನಡೆಯುತ್ತಿತ್ತು. ವರದಕ್ಷಿಣೆ ಎಷ್ಟು ಅನಾಗರಿಕತೆಯೋ ಅಷ್ಟೇ ವಧುದಕ್ಷಿಣೆ ಎಂಬುದೂ ನನ್ನ ಭಾವನೆ. ಅದಕ್ಕೆ ಅಪ್ಪನಿಗೆ ಮೊದಲೇ ಹೇಳಿದ್ದೆ; 'ಬಡತನವಿರಬಹುದು. ಆದರೆ, ಇನ್ನೊಬ್ಬರ ಹಂಗಲ್ಲಿ ಬದುಕುವ ಕೆಟ್ಟ ಕಾಲ ಬಂದಿಲ್ಲ. ಮದುವೆ ಆಡಂಬರದ್ದೇನೂ ಬೇಕಿಲ್ಲ. ಅಳಿಯನಿಂದ ಹಣವನ್ನು ಮಾತ್ರ ಅಪೇಕ್ಷಿಸಬೇಡಿ' ಎಂದು. ನನ್ನೆದುರಿಗೆ ತಲೆಯಲ್ಲಾಡಿಸಿದ್ದ. ನಾನೂ ನಂಬಿದ್ದೆ. ಆದರೆ ಎಲ್ಲವೂ ನನ್ನ ಬೆನ್ನ ಹಿಂದೆ ನಡೆದಿತ್ತು. ಅಪ್ಪನ ಹಣದಾಸೆ. ಆ ಗಂಡಿನ ಹೆಣ್ಣಿನಾಸೆ ವ್ಯವಹಾರಕ್ಕೆ ಎಲ್ಲ ಅನುಕೂಲತೆಯನ್ನು ಮಾಡಿಕೊಟ್ಟಿತ್ತು. ನಾನು ಎರಡು ಲಕ್ಷದ ಇಪ್ಪತ್ತು ಸಾವಿರಕ್ಕೆ ಬಿಕರಿಯಾಗಿದ್ದೆ. ಗೊತ್ತಾಗಿದ್ದರೆ ಪ್ರತಿಭಟಿಸುತ್ತಿದ್ದೆ. ಮದುವೆ ಧಿಕ್ಕರಿಸಿ ಎದ್ದು ಬರುತ್ತಿದ್ದೆ. ಆದರೆ ಅದಾವುದೂ ಗೊತ್ತಿಲ್ಲದ ನಾನು ಅತ್ತೆಯ ಹತ್ತಿರ ಇಂದು ಜಗಳಕ್ಕೆ ನಿಂತಿದ್ದೆ. ಅತ್ತೆಯ ಕೊಂಕಿಗೆ ತಿರುಗಿ ಮಾತನಾಡಿ ಜಗಳವನ್ನು ನಾನೇ ಪ್ರಾರಂಭಿಸಿದ್ದು. ಯಾಕೆಂದರೆ ಜಗಳವಾಡುವ ಹಕ್ಕು ನನಗಿದೆ ಎಂದುಕೊಂಡಿದ್ದೆ. ನಾನೊಬ್ಬ ಕೊಡು ತಂದ ಗುಲಾಮ. ಗುಲಾಮ ಒಡೆಯನಿಗೆ ಮರು ಮಾತಾಡಬಾರದೆಂದು ನನಗೇನು ಗೊತ್ತಿತ್ತು? ತಾರಕಕ್ಕೇರಿದ ಜಗಳದಲ್ಲಿ ತಂದೆಯ ಬಗ್ಗೆ ಕೆಟ್ಟ ಮಾತು ಅತ್ತೆಯ ಬಾಯಿಯಿಂದ ಬಂದಾಗ ನನ್ನ ಸಹನೆ ಕಟ್ಟೆ ಒಡೆದಿತ್ತು. ನನಗೇನು ಗೊತ್ತಿತ್ತು, ಅವನೊಬ್ಬ ಮಗಳನ್ನು ಮಾರಿದ ವ್ಯಾಪಾರಿ ಎಂದು? ಕೊಂಡು ಕೊಂಡ ಗಂಡ ಬಂದು ಕೆನ್ನೆಗೊಂದು ಬಾರಿಸಿ, 'ಇನ್ನೊಂದು ಹತ್ತು ಸಾವಿರ ಕೊಟ್ಟಿದ್ರೆ ನಿನಗಿಂತ ಬೆಳ್ಳಗಿನ ಹುಡುಗಿ ಸಿಗ್ತಿದ್ಲು' ಎಂದಾಗ ನನ್ನ ಸ್ವಾಭಿಮಾನ ಸತ್ತು ಹೆಣವಾದದ್ದು ಸುಳ್ಳಲ್ಲ.
ಎರಡು ಲಕ್ಷಕ್ಕೆ ಮದುವೆಯ ನೆಪದಲ್ಲಿ ಮಾರುವ ಬದಲು ಯಾವುದೋ ವ್ಯಭಿಚಾರದ ಮನಗೆ ಮಾರಿದ್ದರೆ ಇನ್ನೊಂದು ಲಕ್ಷ ಹೆಚ್ಚೇ ಸಿಗುತಿತ್ತೇನೋ? ಧಾರೆ ಎರೆದ ನಾಟಕವೂ ಇರುತ್ತಿರಲಿಲ್ಲ. ಜೊತೆಗೆ ಮದುವೆಯ ಖರ್ಚೂ ಉಳಿಯುತ್ತಿತ್ತು ಎಂಬ ಕೆಟ್ಟ ಯೋಚನೆಗಳು ನನ್ನನ್ನು ಪರಿಹಾಸ್ಯ ಮಾಡಿದವು. ಅಷ್ಟರಲ್ಲಿ ಬಾಗಿಲ ಚಿಲಕ ಒಡೆದು ನನ್ನ ಗಂಡನೆಂದೆನಿಸಿಕೊಂಡಿದ್ದವ ಒಳಗೆ ಬಂದ. ಅಪ್ಪ ಮಾಡಿದ ವ್ಯಾಪಾರಕ್ಕೆ ಜೀವನವಿಡೀ ದಾಸಿಯಂತೆ ದಿನಕ್ಕೊಂದು ಕೊಂಕನ್ನು ಕೇಳಿಸಿಕೊಂಡು, ಇವನ ಹಂಗಿನಲ್ಲಿ ಬದುಕು ಅಸಾಧ್ಯ ಅನ್ನಿಸಿತು. ಕತ್ತಿನ ತಾಳಿಯನ್ನ ಬಿಚ್ಚಿ ಗಂಡನ ಕೈಯಲ್ಲಿಟ್ಟೆ. 'ಏನಿದರ ಅರ್ಥ?' ಎಂದ.
'ದುಡ್ಡಿಗೇನೂ ಕಮ್ಮಿಯಿಲ್ಲ. ನನಗಿಂತ ಕೇವಲ ಹತ್ತು ಸಾವಿರ ಜಾಸ್ತಿ. ಕೊಂಡು ತನ್ನಿ ತೆಳ್ಳಗಿನ ಬೆಳ್ಳಗಿನ ಹೆಂಡತಿಯನ್ನ. ಅವಳ ಕೊರಳಿಗೆ ಕಟ್ಟಿ ಇದನ್ನ' ಎಂದು ಹೊಸ್ತಿಲು ದಾಟಿ ನಡೆದಿದ್ದೆ... ನನ್ನದಲ್ಲದ ಖಾಲಿ ಕೈ ಚೀಲ ಹೊತ್ತು!


 -ವಿನಯ್ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!