ಮಾನಂದಿ ಬೆಟ್ಟ
ವಾನಪ್ರಸ್ಥ ಎಂದರೆ ಇದೇ ಇರಬೇಕು! ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಎಲ್ಲ ಸೇರಿ 36 ...
ವಾನಪ್ರಸ್ಥ ಎಂದರೆ ಇದೇ ಇರಬೇಕು!
ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಎಲ್ಲ ಸೇರಿ 36 ಸದಸ್ಯರ ತುಂಬು ಕುಟುಂಬ. ಹಣಕ್ಕೇನೂ ತೊಂದರೆಯಿಲ್ಲ. ಆದರೆ ಅವರದು ಮಾತ್ರ ಎಲೆ ಮೇಲಿನ ನೀರ ಹನಿಯಂಥ ಜೀವನ. ಎಲ್ಲವನ್ನೂ ಅನುಭವಿಸಿದ ಬಳಿಕ ಹುಟ್ಟಿಕೊಳ್ಳುವ ನಿರ್ಲಿಪ್ತತೆ. ದಾನ, ಧರ್ಮ, ಸಮಾಜಸೇವೆಗೇ ಉಳಿದ ಬದುಕು ಮೀಸಲಿಡುವ ಸಂಕಲ್ಪ. ಸಂಕಲ್ಪವೇನು? ಹಾಗೆಯೇ ಬದುಕುತ್ತಿದ್ದಾರೆ ಕೂಡ. ಮಾನಂದಿ ನಂಜುಂಡ ಶೆಟ್ಟರು ಯಾರನ್ನೂ ಬರಿಗೈಲಿ ಕಳಿಸುವುದಿಲ್ಲ ಎನ್ನುವುದು ಜನಜನಿತ ಮಾತು.
ಮಾನಂದಿ ನಂಜುಂಡ ಶೆಟ್ಟಿ... ಥಟ್ಟಂತ ಮನಸ್ಸು ಚಿಕ್ಕಪೇಟೆ ಮತ್ತು ಜಯನಗರದ ಸ್ಯಾರಿ ಮಂದಿರ್ ಅನ್ನು ನೆನಪಿಸಿಕೊಂಡುಬಿಡುತ್ತದೆ. ಇವತ್ತು ಇಡೀ ದಕ್ಷಿಣ ಭಾರತದಲ್ಲಿ ಬಟ್ಟೆಯ ಸಗಟು ವ್ಯಾಪಾರದಲ್ಲಿ ಮಾನಂದಿ ಕುಟುಂಬದ್ದು ಬಹುದೊಡ್ಡ ಹೆಸರು. ಆ 'ಟ್ರೇಡ್ಮಾರ್ಕ್' ಹಿಂದಿರುವುದು ನಂಜುಂಡ ಶೆಟ್ಟರ ಪರಿಶ್ರಮ ಮತ್ತು ಪ್ರಾಮಾಣಿಕತೆ. ತನ್ನ 14ನೇ ವಯಸ್ಸಿನಲ್ಲಿ ಬಟ್ಟೆ ವ್ಯಾಪಾರಕ್ಕೆ ಇಳಿದ ಶೆಟ್ಟರು, ಮಕ್ಕಳಿಗೆ ಜವಾಬ್ದಾರಿ ವಹಿಸಿ ಮೂರು ವರ್ಷ ಹಿಂದೆ (2010) ವಿಆರ್ಎಸ್ ತೆಗೆದುಕೊಂಡಿದ್ದಾರೆ. ಈಗೇನಿದ್ದರೂ ಸಮಾಜ ಸೇವೆಯೇ ಜೀವನ. ಪತ್ನಿ ನಾಗಸುಂದರಮ್ಮ ಅವರದ್ದೂ ಅದೇ ಮನಸ್ಥಿತಿ. ನಿಜಕ್ಕೂ ಅಪರೂಪದ ಜೋಡಿ.
ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಊರು. ತಾತ ಮಾನಂದಿ ನಂಜುಂಡ ಶೆಟ್ಟಿ ಹಳ್ಳಿಗೇ ಯಜಮಾನರಾಗಿದ್ದವರು. ಅವರ ಹೆಸರನ್ನೇ ಇವರಿಗೆ ಇಟ್ಟದ್ದು. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಪ್ಪ, ನಂತರ ಅಮ್ಮ ಇಬ್ಬರೂ ತೀರಿಕೊಂಡಾಗ ಶೆಟ್ಟರಿಗೆ ಆರೋ, ಎಂಟೋ ವರ್ಷ. ಇಬ್ಬರು ಅಣ್ಣಂದಿರು. ಎರಡು ಅಂಗಡಿಗಳಿದ್ದವು. ಕೆಲಕಾಲದಲ್ಲೇ ಒಬ್ಬ ಅಣ್ಣನೂ ನಿಧನ ಹೊಂದಿದಾಗ ಒಂದು ಅಂಗಡಿ ಮುಚ್ಚುವ ಸನ್ನಿವೇಶ. ಆಗ ಭಾವ 'ಓದಿ ಏನು ಮಾಡುತ್ತೀಯಾ? ಒಂದು ಅಂಗಡಿ ನೋಡಿಕೊ' ಎಂದು ಕಿವಿಮಾತು ಹೇಳಿದರು. ಹುಡುಗನಿಗೂ ಭವಿಷ್ಯದ ಬಗ್ಗೆ ಅತಿಯಾದ ಆಸೆ, ಮುಂದೇನು ಮಾಡಬೇಕು ಎಂಬ ತಿಳಿವಳಿಕೆ ಇರಲಿಲ್ಲ. 'ಹೂಂ' ಎಂದ. 14ರ ಪ್ರಾಯದಲ್ಲಿ ಹೀಗೆ ವ್ಯಾಪಾರವನ್ನು ಅಪ್ಪಿಕೊಂಡ. ಬಹಳ ಚಾಣಾಕ್ಷನಾಗಿದ್ದ ಹುಡುಗ ತನ್ನ 20ನೇ ವರ್ಷಕ್ಕೆಲ್ಲ ಉತ್ತರ ಭಾರತಕ್ಕೆ ಖರೀದಿಗೆ ಹೋಗುವಷ್ಟು ಪಳಗಿದ್ದ.
ಸ್ವಾಭಿಮಾನಿ ಮನೆ ಬಿಟ್ಟ!
ಬದುಕು ಎಷ್ಟು ವಿಚಿತ್ರ ನೋಡಿ. ಅಣ್ಣ, ಅತ್ತಿಗೆ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಅಣ್ಣ ತನ್ನ ಧಾರಾಳಿತನದಿಂದ ವಿಪರೀತ ಸಾಲ ಮಾಡಿಕೊಂಡಿದ್ದ. ತೀರಿಸಲು ಆಗಲಿಲ್ಲ. ಬ್ಯಾಂಕ್ನವರು ಕೇಸ್ ಹಾಕಿದರು. ಅದು 1962. 'ಆಸ್ತಿ ಮಾರಿ ಸಾಲ ತೀರಿಸಿಬಿಡೋಣ' ತಮ್ಮನ ಸಲಹೆ. 'ಪ್ರಾಣ ಇರುವವರೆಗೂ ಆಸ್ತಿ ಮಾರಲ್ಲ' ಅಣ್ಣನ ಖಡಕ್ ಮಾತು. 'ಏನಾದರೂ ಮಾಡಿಕೊ. ನಾನಂತೂ ಮನೆಯಲ್ಲಿ ಇರಲ್ಲ' ಎಂದವರೇ ಪತ್ನಿ, ಮಗನೊಂದಿಗೆ ಹೊರಗೆ ಕಾಲಿಟ್ಟರು. ಸ್ವಾಭಿಮಾನಿ ಒಂದು ರುಪಾಯಿಯನ್ನೂ ತೆಗೆದುಕೊಳ್ಳದೇ ಬಂದಿದ್ದರು. 'ಮುಂದೇನು? ಜೀವನಕ್ಕೆ ಏನು ಮಾಡುವುದು?' ಮೊದಲ ಬಾರಿಗೆ ಎದುರಾಯಿತು ಪ್ರಶ್ನೆ. 'ಏನಾದರೂ ಮಾಡಬೇಕು, ಕಷ್ಟಪಡಬೇಕು' ಎನ್ನುವ ಛಲ. ಗೆಳೆಯ ಶಿವಪ್ಪ (ಜವಳಿ ವರ್ತಕ ಬಿ.ಭೈರಪ್ಪ ಅವರ ಸಹೋದರ) ನೆರವಿಗೆ ಬಂದರು. 200 ರುಪಾಯಿ ನಗದು, ಒಂದು ಬೀರು ಇಟ್ಟುಕೊಂಡು ಚಿಕ್ಕಪೇಟೆಯ 20್ಢ20 ಅಳತೆಯ ಪುಟ್ಟ ಜಾಗದಲ್ಲಿ ಬಟ್ಟೆ ವ್ಯಾಪಾರ ಶುರುವಾಯಿತು. ಮುಂದೆ ಕೆಲವರ್ಷಗಳಲ್ಲಿ 'ಸ್ಯಾರಿ ಮಂದಿರ' ಆರಂಭ. ಇವತ್ತು ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ವಿತರಣೆಯ ಜಾಲ ಹೊಂದಿರುವ ಅದರ ಖ್ಯಾತಿ ಬಗ್ಗೆ ಹೇಳಬೇಕಾಗಿಯೇ ಇಲ್ಲ.
ಸ್ವತಂತ್ರವಾಗಿ ವ್ಯಾಪಾರ ಶುರು ಮಾಡಿದ ಆರಂಭದ ದಿನಗಳಾದರೂ ಹೇಗಿದ್ದವು? ಬೆಳಗ್ಗೆ 6ಕ್ಕೆಲ್ಲ ಮನೆ ಬಿಡುವುದು. ಕಬ್ಬನ್ಪೇಟೆ, ಹೊಸೂರುಗಳ ನೇಕಾರರ ಮನೆಗಳಿಗೆ ಹೋಗಿ ಸೀರೆಗಳನ್ನು ಕೈಗಡವಾಗಿ ತರುವುದು. ಬಟ್ಟೆ ಅಂಗಡಿಗಳಿಗೆ ಹೋಗಿ ಮಾರಾಟ ಮಾಡುವುದು. ಮರುದಿನ ಹಿಂದಿನ ದಿನದ ಹಣ ಕೊಟ್ಟು ಮತ್ತಷ್ಟು ಸೀರೆಗಳನ್ನು ತರುವುದು. ಆಗ 20-30 ಗ್ರಾಹಕರಿದ್ದರು. ಸುಮಾರು ಹತ್ತು ವರ್ಷ ಹೀಗೆಯೇ ಸಾಗಿತು. ನಂಜುಂಡ ಶೆಟ್ಟರು ಯಾರಿಗೂ ಮೋಸ ಮಾಡಲಿಲ್ಲ, ಅತಿಯಾದ ಆಸೆ ಪಡಲಿಲ್ಲ. ನ್ಯಾಯಯುತ ಲಾಭ ಇಟ್ಟಕೊಳ್ಳುತ್ತಿದ್ದರು. ಯಾರೊಬ್ಬರೂ ಇವರನ್ನೂ ವಂಚಿಸಲಿಲ್ಲ. ಪ್ರಾಮಾಣಿಕತೆ, ನಂಬಿಕೆಯೇ ವ್ಯವಹಾರದ ಬುನಾದಿಯಾಗಿತ್ತು. ಮುಂದೆ ಮಕ್ಕಳಾದ ಸುರೇಶ, ರಮೇಶ, ದ್ವಾರಕಾನಾಥ, ಸತೀಶ ನಾಲ್ವರೂ ಅಪ್ಪನಿಗೆ ಹೆಗಲಾಗಿ ನಿಂತರು.
ಒಂದು ಭಾಗ ಸಮಾಜಕ್ಕೆ
1979. 'ಸಂಕ್ರಾಂತಿ' ಅಗರಬತ್ತಿಯ ಬಿ.ವಿ.ರತ್ನಯ್ಯ ಶೆಟ್ಟರು, 'ಎಷ್ಟಂತ ಗಳಿಸ್ತೀಯಾ? ಬಾರೋ ನನ್ನ ಜೊತೆ' ಎಂದು ಕರೆದರು. ಅವರು ಆಗಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರ ಮುಂದಾಳತ್ವದಲ್ಲೇ ವಾಸವಿ ಎಜುಕೇಷನ್ ಟ್ರಸ್ಟ್ ಸ್ಥಾಪನೆ. 1982ರಲ್ಲಿ ವಿ.ವಿ.ಪುರಂನಲ್ಲಿ ಮುಖ್ಯಮಂತ್ರಿ ಗುಂಡೂರಾಯರು ಟ್ರಸ್ಟ್ಗೆ ಎರಡು ಎಕರೆ ಜಾಗ ಕೊಟ್ಟರು. ಆಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ಮಲ್ಲೇಶ್ವರಂನ ಮಹಿಳಾ ಸಮಾಜ ಬಿಟ್ಟರೆ ಮಾಂಟೆಸರಿ ಆರಂಭಿಸಿದ ಮತ್ತೊಂದು ಸಂಸ್ಥೆ ಎಂದರೆ ವಾಸವಿ ಎಜುಕೇಷನ್ ಟ್ರಸ್ಟ್. ಈ ಸಂಸ್ಥೆ ಸೇರಿದಂತೆ ಹತ್ತುಹಲವು ಸಂಸ್ಥೆಗಳಲ್ಲಿ ನಂಜುಂಡ ಶೆಟ್ಟರು ಈಗಲೂ ಸಕ್ರಿಯರು. ಪತ್ನಿ ನಾಗಸುಂದರಮ್ಮ ಕೂಡ ಜಯನಗರ ಸ್ತ್ರೀ ಸಮಾಜ, ಆಲ್ ಇಂಡಿಯಾ ವಿಮೆನ್ಸ್ ಅಸೋಸಿಯೇಶನ್ ಮೊದಲಾದ ಸಂಸ್ಥೆಗಳಲ್ಲಿ ಕ್ರಿಯಾಶೀಲರು. ಉದ್ಯಾನ ನಗರಿಯಲ್ಲಿ 60-70ರ ದಶಕದಲ್ಲಿ ಕಾರು ನಡೆಸುತ್ತಿದ್ದ ಬೆರಳೆಣಿಕೆಯ ಮಹಿಳೆಯರಲ್ಲಿ ನಾಗಸುಂದರಮ್ಮ ಕೂಡ ಒಬ್ಬರಾಗಿದ್ದರು. ಎರಡು ವರ್ಷಗಳಿಂದ ವೈದ್ಯರ ಸಲಹೆ ಮೇರೆಗೆ ಇಬ್ಬರೂ ಕಾರು ಚಲಾಯಿಸುವುದನ್ನು ನಿಲ್ಲಿಸಿದ್ದಾರೆ. ಅಂದಹಾಗೆ ಅವರ ವಯಸ್ಸು ಕೇಳಬೇಡಿ. ಶೆಟ್ಟರಿಗೆ ಬರೇ 85, ನಾಗಸುಂದರಮ್ಮ ಅವರಿಗೆ ಐದು ವರ್ಷ ಕಡಿಮೆ ಅಷ್ಟೇ.
'ಗಳಿಸಿದ್ದರಲ್ಲಿ ಒಂದು ಭಾಗವನ್ನು ದಾನ, ಧರ್ಮಕ್ಕೆ ಮೀಸಲಿಡಬೇಕು ಎಂದು 1979ರಲ್ಲಿಯೇ ತೀರ್ಮಾನಿಸಿದೆ. ಅಂದಿನಿಂದ ಹಾಗೆಯೇ ಮಾಡುತ್ತಿದ್ದೇನೆ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಕೊಡುತ್ತ ಬಂದಿದ್ದೇನೆ' ಎನ್ನುತ್ತಾರೆ ಶೆಟ್ಟರು. ತಮಗೆ, ಪತ್ನಿಗೆ ಅಗತ್ಯವಿರುವಷ್ಟು ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಇಟ್ಟುಕೊಂಡು, ಉಳಿದ ಆಸ್ತಿ, ಸಂಪತ್ತನ್ನೆಲ್ಲ ಮಕ್ಕಳಿಗೆ ಹಂಚಿದ್ದಾರೆ. ನಾಲ್ವರಿಗೂ ಜಯನಗರದಲ್ಲಿಯೇ ಮನೆ ಮಾಡಿಕೊಟ್ಟಿದ್ದಾರೆ (9172ರಲ್ಲಿ ಕಟ್ಟಿಸಿದ ಎಂಟು ಕೋಣೆಗಳ, ಸುಂದರ ವಿನ್ಯಾಸದ ಮನೆಯನ್ನು ಎರಡನೇ ಮಗ ರಮೇಶ ಅವರಿಗೆ ನೀಡಿದ್ದು, ಅವರೊಂದಿಗೆ ಆ ಮನೆಯಲ್ಲಿಯೇ ವಾಸವಿದ್ದಾರೆ). ಬಡ್ಡಿ ರೂಪದಲ್ಲಿ ಬಂದ ಹಣದಲ್ಲೂ ಬಹುಭಾಗ ದಾನ, ಧರ್ಮಕ್ಕೇ ವ್ಯಯವಾಗುತ್ತದೆ. ಮಾನಂದಿ ನಂಜುಂಡ ಶೆಟ್ಟಿ-ನಾಗಸುಂದರಮ್ಮ ಟ್ರಸ್ಟ್ ಮೂಲಕ ಹತ್ತುಹಲವು ಚಟುವಟಿಕೆ ನಡೆಸುತ್ತಿದ್ದಾರೆ.
'ನ್ಯಾಯವಾಗಿ ವ್ಯಾಪಾರ ಮಾಡಬೇಕು. ಯಾರಿಗೂ ಮೋಸ ಮಾಡಬಾರದು. ನನ್ನ ಮಕ್ಕಳೂ ಅದನ್ನು ಪಾಲಿಸುತ್ತಿದ್ದಾರೆ. ಅದೇ ನನಗೆ ಸಂತೋಷ' ಎನ್ನುತ್ತ ಖುಷಿ ಪಡುತ್ತಾರೆ ಮಾನಂದಿ ನಂಜುಂಡ ಶೆಟ್ಟರು. ನಿಜಾರ್ಥದಲ್ಲಿ ಅವರದೀಗ ವಾನಪ್ರಸ್ಥದ ಬದುಕು!ಟಿ
ಹೀಗಿದ್ದಾರೆ ನಮ್ಮ ಶೆಟ್ಟರು
ಜೀವನದಲ್ಲಿ ಯಾವ ಘಟನೆಯೂ ನೋವು ಕೊಟ್ಟಿಲ್ಲ. ನಾನು, ಶ್ರೀಮತಿಯವರು, ಇಡೀ ಕುಟುಂಬ ಸಂತೃಪ್ತಿಯಿಂದ ಇದ್ದೇವೆ. ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ನಾಗಸುಂದರಮ್ಮ ನಂಜುಂಡ ಶೆಟ್ಟಿ ಐ ಬ್ಯಾಂಕ್ ಆರಂಭಿಸಿದ್ದು ಅತ್ಯಂತ ಖುಷಿ ಕೊಟ್ಟ ಕ್ಷಣ.
ಸಂಸ್ಥೆಯೊಂದರಲ್ಲಿನ ಅವ್ಯವಹಾರ ನಿಲ್ಲಿಸಲು ಮುಂದಾಗಿದ್ದಕ್ಕೆ ಒಮ್ಮೆ ಕೊಲೆ ಯತ್ನ ನಡೆದಿತ್ತು. 'ಇನ್ನು ಸಮಾಜಸೇವೆಯೆಲ್ಲ ಸಾಕು. ಸುಮ್ಮನೆ ಮನೆಯಲ್ಲಿದ್ದುಬಿಡಿ' ಎಂದು ಮನೆಯವರೆಲ್ಲ ಒತ್ತಾಯಿಸಿದರು. ಆ ಘಟನೆ ನಂತರ ಸಾಮಾಜಿಕ ಚಟುವಟಿಕೆಗಳು ಮತ್ತಷ್ಟು ಜಾಸ್ತಿಯಾಗಿವೆ.
ಮುಂಜಾನೆ ನಾಲ್ಕಕ್ಕೆ ಏಳುವುದು. ನಿತ್ಯ ಶೇವಿಂಗ್ ಮಾಡಿಕೊಳ್ಳುತ್ತಾರೆ. ಯೋಗ, ಸ್ನಾನ, ಪೂಜೆ ಮುಗಿಸುವವರೆಗೆ 6.30 ದಾಟಿರುತ್ತದೆ. ನಂತರ ಲಾಲ್ಬಾಗ್ನಲ್ಲಿ ಒಂದು ಗಂಟೆ ವಾಕಿಂಗ್. 9ಕ್ಕೆ ತಿಂಡಿ. ನಂತರ ಕಾಫಿ ಕುಡಿಯುತ್ತ 'ಕನ್ನಡಪ್ರಭ'ದ 'ಬೈಟು ಕಾಫಿ' ಓದುವುದು. ಅರ್ಧ ಗಂಟೆ ನಿದ್ದೆ. ಬಳಿಕ ಪತಿ-ಪತ್ನಿ ಜಯನಗರ ನಾಲ್ಕನೇ ಬ್ಲಾಕ್ನ ಮೈಯ್ಯಾಸ್ಗೆ ಹೋಗಿ ಬೈಟು ಕಾಫಿ ಕುಡಿಯುವುದು. ಬಳಿಕ ಸಂಘ-ಸಂಸ್ಥೆಗಳ ಸಭೆಗಳಲ್ಲಿ ಭಾಗಿ. ರಾತ್ರಿ 9ಕ್ಕೆ ಊಟ, 9.30ಕ್ಕೆ ನಿದ್ದೆ.
ಜಿಎಂಆರ್ ಗ್ರೂಪ್ನ ಜಿ.ಎಂ.ರಾವ್ ಒಳ್ಳೆಯ ಸ್ನೇಹಿತರು. ಈಗಲೂ ಅಪರೂಪಕ್ಕೊಮ್ಮೆ ಒಟ್ಟಿಗೆ ಊಟ ಮಾಡುವುದುಂಟು.
ಮನೆಮನೆ ಕಥೆ
ಮನೆಯಿಂದ ಹೊರ ಬಂದಾಗ ಉಳಿಯಲೊಂದು ಸೂರು ಇರಲಿಲ್ಲ. ಆಶ್ರಯ ನೀಡಿದ ಸ್ನೇಹಿತ ನಾಗರಾಜ ಶೆಟ್ಟಿ, 'ಸಾಲ ಮಾಡಿ ನೀನು ಮೊದಲು ಚಾಮರಾಜಪೇಟೆ 4ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ ಮನೆಯನ್ನೇ ಅಣ್ಣನಿಂದ ಖರೀದಿಸು' ಎಂದು ಸಲಹೆ ನೀಡಿದರು. ಮೂವರು ಗೆಳೆಯರು, ಭಾವನ ಬಳಿ 20 ಸಾವಿರ ಸಾಲ ಮಾಡಿ ಅಣ್ಣನಿಂದ ಮನೆ ಖರೀದಿಸಿದರು. 1967ರಲ್ಲಿ ಅದನ್ನು ಮಾರಿದರು. 44 ಸಾವಿರ ಬಂತು. ಜಯನಗರ ಮೊದಲ ಬ್ಲಾಕ್ನಲ್ಲಿ, ತರುವಾಯ ಎಂ.ಎನ್.ಕೃಷ್ಣರಾವ್ ಪಾರ್ಕ್ ಬಳಿ ಬಾಡಿಗೆ ಮನೆ ಹಿಡಿದರು. 1975ರಲ್ಲಿ ಜಯನಗರ 7ನೇ ಬ್ಲಾಕ್ನಲ್ಲಿ ಈಗ ವಾಸವಾಗಿರುವ 70್ಢ120 ಅಳತೆಯ ವಿಶಾಲ ನಿವೇಶನವನ್ನು 45 ಸಾವಿರಕ್ಕೆ ಕೊಂಡರು. ಎಂಟು ಕೊಠಡಿಗಳ, ಆಧುನಿಕ ವಿನ್ಯಾಸದ ಮನೆ ನಿರ್ಮಾಣ ಪೂರ್ಣಗೊಂಡಿದ್ದು 1972ರಲ್ಲಿ. ಆಗ ತಗುಲಿದ ವೆಚ್ಚ 1.80 ಲಕ್ಷ ರುಪಾಯಿ. ಈಗಲೂ ಅದೇ ಮನೆಯಲ್ಲಿ ವಾಸ. ಒಮ್ಮೆಯೂ ಮನೆ ದುರಸ್ತಿ ಮಾಡಿಸುವ ಪ್ರಮೇಯ ಬಂದಿಲ್ಲ.
- ರಾಜೇಶ ಮುಂಡಿಗೇಸರ
rajeshkhegde@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.