'ಜೀವನದಲ್ಲಿ ಏನು ಬೇಕಾದರೂ ಮಾಡಿ, ಆದರೆ ಸಾಲ ಮಾತ್ರ ಮಾಡಬೇಡಿ' ಎಂದು ಒಮ್ಮೆ ಮಾತಿನ ಮಧ್ಯೆ ಯೋಗಿ ದುರ್ಲಭಜೀ ಹೇಳಿದ್ದರು. ಅದಕ್ಕೆ ನಾನು, 'ಅಲ್ಲ ಯೋಗಿಜೀ ಸಾಲವನ್ನೇ ಮಾಡದಿದ್ದರೆ ತುಪ್ಪ ತಿನ್ನುವುದು ಹೇಗೆ? ಬ್ಯಾಂಕುಗಳು, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆ? ಲೇವಾದೇವಿಗಾರರು ಜೀವಿಸುವುದು ಹೇಗೆ? ಅದರ ಬದಲು, ಸಾಲ ಮಾಡಿ, ಆದರೆ ನಿಯತ್ತಾಗಿ ತೀರಿಸಿ ಅಂದ್ರೆ ಹೇಗೆ?' ಎಂದು ಕೇಳಿದೆ.
ಒಂದು ಕ್ಷಣದ ಮೌನದ ನಂತರ ಯೋಗಿಜೀ ಹೇಳಿದರು. 'ಎಲ್ಲರೂ ತೀರಿಸುತ್ತೇನೆ ಎಂದೇ ಸಾಲ ಮಾಡುತ್ತಾರೆ. ತೀರಿಸುತ್ತಾನೆಂದೇ ಸಾಲವನ್ನು ಕೊಡುತ್ತಾರೆ. ಆದರೆ ಹೇಳಿದ ದಿನದಂದು ಸಾಲ ತೀರಿಸಲು ಆಗುವುದಿಲ್ಲ. ಸಾಲ ಕೊಟ್ಟವರು ಬಂದು ಕೇಳುವಾಗ ಆಗುವ ಹಿಂಸೆ ಒಂದೆರಡಲ್ಲ. ಅನೇಕ ಮಂದಿ ಸಾಲ ಕೊಟ್ಟವರ ಹಿಂಸೆಯನ್ನು ತಾಳಲಾರದೇ ಹೆಂಡತಿ, ಮಕ್ಕಳಿಗೆ ವಿಷ ಕುಡಿಸಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಕಷ್ಟದಲ್ಲಿದ್ದಾನೆಂದು ಹಣ ಕೊಟ್ಟು ಹಣ ಹಾಗೂ ಸ್ನೇಹವನ್ನು ಕಳಕೊಂಡ ಎಷ್ಟೋ ಕಟ್ಟಾ ಸ್ನೇಹಿತರನ್ನೂ ನೋಡಿದ್ದೇನೆ. ಸಾಲಕ್ಕೆ ಸಂಬಂಧ, ವಿಶ್ವಾಸ, ಸ್ನೇಹ, ಮಾನ, ಮರ್ಯಾದೆ, ಜೀವವನ್ನು ಹೊಸಕಿ ಹಾಕುವ ತಾಕತ್ತಿದೆ. ವಾಪಸ್ ಕೊಡುತ್ತೇನೆಂದೇ ಎಲ್ಲರೂ ಸಾಲ ಮಾಡುತ್ತಾರೆ. ಆದರೆ ಸಾಲದ ಮಹಿಮೆಯನ್ನು ಅದನ್ನು ಅನುಭವಿಸಿದವನಿಗೇ ಗೊತ್ತು. ಸಾಲದ ರೂಪದಲ್ಲಿ ಹಣ ಬಂದಾಗ, ನೆಮ್ಮದಿ, ಸಂತಸ ಸಿಗಬಹುದು. ಆದರೆ ಅದು ಸ್ಲೋ ಪಾಯಿಸನ್. ಕ್ಷಣಕ್ಷಣಕ್ಕೂ ನಮ್ಮನ್ನು ಸುಡುತ್ತಲೇ ಹೋಗುತ್ತದೆ.'
ಯೋಗಿಜೀ ಹೇಳುವುದರಲ್ಲಿ ಸತ್ಯವಿದೆ. ಸಾಲ ನಮಗೆ ಆ ಕ್ಷಣಕ್ಕೆ ಪರಿಹಾರವಾಗಬಹುದು. ಆದರೆ ಅದು ಸಮಸ್ಯೆಯ ಆರಂಭ ಎಂಬುದನ್ನು ಮರೆಯುತ್ತೇವೆ. ಅದು ನಮ್ಮೊಳಗೇ ಆಶ್ರಯ ಪಡೆದು, ನಮ್ಮನ್ನೇ ಸಾಯಿಸುವ ಅರ್ಬುದ ರೋಗದಂತೆ.
ನಾವು ಅದೆಂಥ ಕೊಳ್ಳುಬಾಕ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ ಅಂದ್ರೆ ಸಾಲಗಾರನಾಗದೇ ಬದುಕಲು ಸಾಧ್ಯವೇ ಇಲ್ಲವೇನೋ? ಬರುವ ಸಂಬಳದಲ್ಲಿ ಸಂಸಾರ, ಹಾಲು, ಕರೆಂಟು, ನೀರು, ದಿನಸಿ, ತರಕಾರಿ, ಮಕ್ಕಳ ಫೀಸು, ಡಾಕ್ಟರು, ಔಷಧ, ಬಟ್ಟೆಬರೆ... ಅಷ್ಟಕ್ಕೇ ಸಾಕು. ಜೀವನದಲ್ಲೊಂದು ಕಾರು ಖರೀದಿಸಬೇಕು, ಸೈಟು ಕೊಳ್ಳಬೇಕು, ಮನೆ ಕಟ್ಟಿಸಬೇಕು, ಫ್ಲ್ಯಾಟ್ ಖರೀದಿಸಬೇಕು, ಮಗನ ಓದು ಹಾಗೂ ಮಗಳ ಮದುವೆ ಮಾಡಿಸಬೇಕು ಅಂದ್ರೆ ಏನು ಮಾಡೋದು?
ಸಾಲ ಮಾಡಲೇಬೇಕು!
ಯಾರಿಗೆ ಸಾಲುತ್ತದೆ ಸಂಬಳ? ಎಲ್ಲರಿಗೂ ಸಿಗುತ್ತದಾ ಗಿಂಬಳ?
ಗಿರವಿ ಅಂಗಡಿಯವನ ಬಳಿಯೋ, ಸ್ನೇಹಿತರಿಂದಲೋ, ಮೀಟರ್ ಬಡ್ಡಿಗೋ, ಬ್ಯಾಂಕಿನಿಂದಲೋ ಸಾಲ ಮಾಡಲೇಬೇಕು. ಬೇರೆ ದಾರಿಯೇ ಇಲ್ಲ. ಈ ರೀತಿ ಒಮ್ಮೆ ಸಾಲಗಾರನಾದರೆ ಜೀವನದುದ್ದಕ್ಕೂ ಸಾಲಗಾರ ಎಂಬ ಹಣೆಪಟ್ಟಿ ತಪ್ಪಿದ್ದಲ್ಲ. ಸಾಲದ ಮಹಿಮೆಯೆಂದರೆ ಅದಕ್ಕೆ ಒಮ್ಮೆ ಪ್ರವೇಶ ಕಲ್ಪಿಸಿದರೆ ಅದು ಶಾಶ್ವತ ಆಸರೆ ಕೇಳುತ್ತದೆ. ನಿವೃತ್ತಿಯ ನಂತರದ ಪಿಂಚಣಿಯಲ್ಲೂ ಕಂತು ಕಟ್ಟುವ ತನಕ ಬಿಡುವುದಿಲ್ಲ. ಇದು ನಮ್ಮ-ನಿಮ್ಮ ಕತೆಯಲ್ಲ. ಇದು ಎಲ್ಲರ ಪಾಡು. ಇರುವೆಗೆ ಇರುವೆ ಬಾಲ ದೊಡ್ಡದು. ಆನೆಗೆ ಆನೆ ಬಾಲ ದೊಡ್ಡದು. ಸಾಲದ ಮೊತ್ತ ಹೆಚ್ಚುಕಮ್ಮಿ ಇರಬಹುದು. ಆದರೆ ಎಲ್ಲರೂ ಸಾಲಗಾರರೇ. ನಾನಿರಬಹುದು, ಅಂಬಾನಿಯಿರಬಹುದು, ಪ್ರತಿಯೊಬ್ಬರೂ ಸಾಲಗಾರರೇ.
ಸಾಲ ಮಾಡುವುದು ತಪ್ಪಲ್ಲ, ಅಪರಾಧವೂ ಅಲ್ಲ. ಆದರೆ ಕೊನೆತನಕ ಸಾಲಗಾರರಾಗಿಯೇ ಇರುವುದು ಮಾತ್ರ ಘೋರ ಅಪರಾಧ. ಹಾಗಂತ ಸಾಲದಿಂದ ಬಿಡಿಸಿಕೊಳ್ಳುವುದು ಬ್ರಹ್ಮವಿದ್ಯೆಯೇನಲ್ಲ. ಬೇಕಾದಾಗ ಸಾಲ ಪಡೆದು, ಹೇಳಿದ ದಿನದೊಳಗೆ ವಾಪಸ್ ಮಾಡುವುದು ಜಾಣತನ. ಅದು ನಮ್ಮ ವ್ಯಕ್ತಿತ್ವದ ಘನತೆ. ಪಡೆದ ಸಾಲವನ್ನು ವಾಪಸ್ ಮಾಡುವುದು, ಹೇಳಿದ ಮಾತಿಗೆ ತಪ್ಪದಿರುವುದು ಹೆಚ್ಚುಗಾರಿಕೆ.
ಸಾಲವೆಂಬುದು ಹೊನ್ನ ಶೂಲ ನಿಜ. ಆದರೆ ಅದಕ್ಕೆ ನಾವು ಸಿಕ್ಕಿಹಾಕಿಕೊಳ್ಳಬೇಕಿಲ್ಲ. ಮಾಡಿದ ಸಾಲ ತೀರಿಸಲು ಹಲವಾರು ಮಾರ್ಗಗಳಿವೆ. ಸಾಲ ಮಾಡಿದಾಗ ನೀವು ಏನು ಮಾಡಬೇಕೆಂಬ ಪುಟ್ಟ ಎಚ್ಚರವಿದ್ದರೆ ಅದು ನಮ್ಮನ್ನು ಸಾಲದಿಂದ ಪಾರುಮಾಡುತ್ತದೆ. ಬೇರೆಯವರಿಂದ ಪಡೆದ ಹಣವನ್ನು ನಿಭಾಯಿಸುವ ಕಲೆ ನಿಮ್ಮದಾಗಲಿ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ