ಮೋಹನ್ ಮನೆ ಮಾಡಲೆಂದು ಹತ್ತು ಲಕ್ಷ ಸಾಲ ಮಾಡಿದ್ದ. ಅದನ್ನು ತೀರಿಸಲು ಪ್ರತಿ ತಿಂಗಳೂ ಆತನ ಸಂಬಳದಿಂದ ಹತ್ತು ಸಾವಿರ ಜಮೆಯಾಗುತ್ತಿತ್ತು. ಉಳಿದ ಹತ್ತು ಸಾವಿರದಲ್ಲಿ ಸಂಸಾರ ನಡೆಯಬೇಕು. ಬೆಂಗಳೂರಿನಂಥ ನಗರದಲ್ಲಿ ಅದು ಕಷ್ಟಸಾಧ್ಯ. ಮತ್ತೆ ಅದಕ್ಕಾಗಿ ಸಂಬಂಧಿಕರಲ್ಲಿ ಸಾಲ ಮಾಡಿದ. ಇಂದು ತೀರಿಸಿದರಾಯ್ತು, ನಾಳೆ ಕಟ್ಟಿದರಾಯ್ತು ಎಂದು ದಿನ ದೂಡುತ್ತಲೇ ಬಂದ. ಈಗ ಸಂಬಂಧಿಕರ ಜತೆ ಸಂಬಂಧ ಕೆಟ್ಟಿದೆ. ಅವರು ಆತನನ್ನು ಕೋರ್ಟಿಗೆ ಎಳೆಯುವ ಯೋಚನೆಯಲ್ಲಿದ್ದಾರೆ.
ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತ ಬಿಟ್ಟಿ ಉಪದೇಶ ಕೊಡುವ ಮಂದಿ ಬೇಕಾದಷ್ಟಿದ್ದಾರೆ. ಆದ್ರೆ ಈ ರೀತಿ ಎಷ್ಟು ದಿನಾಂತ ಬದುಕೋಕೆ ಸಾಧ್ಯ? ಮಾಡಿದ ಸಾಲವನ್ನು ಒಂದಲ್ಲ ಒಂದು ದಿನ ತೀರಿಸಲೇಬೇಕು. ನೆನಪಿಡಿ, ಇದನ್ನು ತಾತ್ವಿಕವಾಗಿ ನೋಡಿದರೆ, ನಮ್ಮ ಜೀವನವೇ ಒಂದು ಸಾಲ. ಅದನ್ನೂ ಒಂದು ದಿನ ತೀರಿಸಬೇಕು. ಅದು ತುಂಬಾ ಗಂಭೀರವಾದ ವಿಚಾರವಾಯಿತು. ಆದರೆ ವಾಸ್ತವ ಬದುಕಿನ ಸಾಲದ ವಿಚಾರವೂ ಗಂಭೀರವೇ. ಸರಿಯಾದ ಸಮಯದಲ್ಲಿ ತೀರಿಸದಿದ್ದರೆ ಅದು ಕೊರಳಿಗೇ ಸುತ್ತಿಕೊಳ್ಳುತ್ತದೆ. ಸಾಲ ಮಾಡುವಾಗ ಹಾಲೋಗರ ಉಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಎಂಬ ಸರ್ವಜ್ಞನ ಮಾತು ನೀವು ಕೇಳಿದ್ದೀರಲ್ಲವೆ?
ಕೈಗೆ ಸಿಗುವ ಸಂಬಳ ಖರ್ಚಿಗೇ ಸಾಲದಿರುವಾಗ ಪಡೆದ ಸಾಲ ತೀರಿಸೋದಾದ್ರೂ ಹೇಗೆ ಎಂದು ಪರದಾಡಬೇಕಿಲ್ಲ. ಶ್ರಮವಹಿಸಿ ದುಡಿದು ಮಾನವಾಗಿ ಬದುಕಬೇಕೆನ್ನುವವರಿಗೆ ಒಂದಲ್ಲ ಒಂದು ದಾರಿ ಇದ್ದೇ ಇದೆ. ಒಂದಷ್ಟು ದಿನ ಗಂಜಿ ತಿಂದಾದರೂ ಸರಿ ಸಾಲವನ್ನು ನಿಯತ್ತಾಗಿ ತೀರಿಸಬೇಕೆನ್ನುವವರಿಗೆ ಇಲ್ಲಿದೆ 50 ಸೂತ್ರಗಳು.
ಉಳಿತಾಯ
'ಹನಿಹನಿಗೂಡಿದರೆ ಹಳ್ಳ' ಈ ಮಾತನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಹಾಗಿದ್ರೆ ಜೀವನದಲ್ಯಾಕೆ ಅಳವಡಿಸಿಕೊಂಡು ನೋಡಬಾರದು? ಹೇಗಂತೀರಾ? ತೀರಾ ದೊಡ್ಡದೂ ಅಲ್ಲದ ಸಣ್ಣದೂ ಅಲ್ಲದ ರಟ್ಟಿನ ಖಾಲಿ ಪೆಟ್ಟಿಗೆಯೊಂದನ್ನು ತೆಗೆದುಕೊಳ್ಳಿ. ಗಮ್ಟೇಪ್ನಿಂದ ಅದರ ನಾಲ್ಕೂ ಕಡೆ ಮುಚ್ಚಿ. ಬಳಿಕ ನೋಟು ತೂರಿಸಬಹುದಾದಷ್ಟು ಗಾತ್ರದ ತೂತೊಂದನ್ನು ಮಾಡಿ. ಈ ಬಾಕ್ಸ್ಗೆ ಪ್ರತಿದಿನ ನಿಮಗೆ ಸಾಧ್ಯವಾಗುವಷ್ಟು ಹಣವನ್ನು ಹಾಕುತ್ತಿರಿ. ಕೆಲ ತಿಂಗಳು ಬಿಟ್ಟು ನೋಡಿ. ದೊಡ್ಡ ಮೊತ್ತದ ಹಣ ಸಂಗ್ರಹವಾಗಿರುತ್ತದೆ. ಸಣ್ಣಪುಟ್ಟ ಕೈಗಡ ತೀರಿಸಲು ಇದು ಸಾಕಲ್ವೇ?
ಬಜೆಟ್
ಬಜೆಟ್ಗೂ ಸಾಲಕ್ಕೂ ಏನಪ್ಪಾ ಸಂಬಂಧ ಅಂತ ನೀವು ಕೇಳಬಹುದು. ಖಂಡಿತಾ ಸಂಬಂಧ ಇದೆ. ಬಜೆಟ್ ಅನ್ನು ಸರ್ಕಾರಗಳಿಗಷ್ಟೇ ಸೀಮಿತ ಅಲ್ಲ. ನಿಮ್ಮ ವೈಯಕ್ತಿಕ ಬದುಕಿಗೂ ಇದನ್ನು ಅನ್ವಯಿಸಬಹುದು. ಮೈಮೇಲೆ ಸಾಲ ಎಳೆದುಕೊಂಡವರು ತಿಂಗಳ ಮೊದಲೇ ಎಷ್ಟು ಖರ್ಚು ಮಾಡಬೇಕು, ಎಷ್ಟು ಉಳಿತಾಯ ಮಾಡಬೇಕು ಎಂದು ಲೆಕ್ಕ ಹಾಕಿಟ್ಟುಕೊಂಡರೆ ಸಾಲ ತೀರಿಸುವುದು ಕಷ್ಟವೇನಲ್ಲ.
ಪಾರ್ಟ್ಟೈಂ ಜಾಬ್
ದುಡಿಯುತ್ತಿರುವ ಸಂಬಳ ಸಂಸಾರ ನಡೆಸೋಕೆ ಸಾಧ್ಯವಾಗ್ತಿಲ್ಲ. ಅಂತಾದ್ರಲ್ಲಿ ಸಾಲ ಹೇಗೆ ತೀರಿಸೋದು ಎನ್ನುವ ಚಿಂತನೆಯೇ? ಯಾವುದಾದರೂ ಪಾರ್ಟ್ಟೈಂ ಜಾಬ್ ಸೇರ್ಕೊಳ್ಳಿ. ಈ ಕೆಲಸದಿಂದ ಸಿಗುವ ವೇತನ ಸಣ್ಣದಾದರೂ ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆ.
ಶಾಪಿಂಗ್ ಕಡಿಮೆ ಮಾಡಿ
ಕೆಲವರಿಗೆ ಅಗತ್ಯ ಇರಲಿ, ಇಲ್ಲದಿರಲಿ ಶಾಪಿಂಗ್ ಮಾಡೋದೊಂದು ಖಯಾಲಿ. ಗೆಳೆಯರ ತಂಡ ಕಟ್ಟಿಕೊಂಡು ಶಾಪಿಂಗ್ ಹೋಗ್ತಾರೆ. ಬೇಡದಿದ್ದರೂ ಒಂದಷ್ಟು ಬಟ್ಟೆ, ಬರೆಗಳನ್ನು ಕೊಂಡು ತರುತ್ತಾರೆ. ಅಲ್ಲಿಲ್ಲಿ ಸಾಲ ಮಾಡಿಕೊಂಡಿರುವಾಗ ಹೀಗೆಲ್ಲ ದುಂದು ವೆಚ್ಚ ಮಾಡಿದ್ರೆ ಹೇಗೆ? ಸಾಲ ತೀರಿಸುವವರೆಗಾದರೂ ಅನಗತ್ಯ ಶಾಪಿಂಗ್ಗೆ ಕಡಿವಾಣ ಇರಲಿ.
ವಿದ್ಯುತ್ ಉಳಿತಾಯ
ವಿದ್ಯುತ್ ಉಳಿತಾಯ ಮಾಡುವುದರಿಂದ ಎರಡು ಲಾಭ ಇದೆ. ಮೊದಲನೆಯದು ನಿಮ್ಮ ಕಿಸೆಗೆ, ಎರಡನೆಯದು ಪರಿಸರಕ್ಕೆ. ವಿದ್ಯುತ್ ಅನ್ನು ಹಿತಮಿತವಾಗಿ ಬಳಸುವುದರಿಂದ ನಿಮ್ಮ ಸಾಲನೇನೂ ತೀರುವುದಿಲ್ಲ. ಆದರೆ, ಅನಗತ್ಯ ವೆಚ್ಚಕ್ಕೆ ಕಡಿವಾಣವಂತೂ ಬೀಳುತ್ತದೆ. ಜತೆಗೆ ನಿಮ್ಮ ಹಣಕಾಸು ಹೊರೆಯನ್ನು ಕಡಿಮೆ ಮಾಡುತ್ತದೆ.
ಫಿಲ್ಮ್ಗೆ ಹೋಗೋದು ಕಡಿಮೆ ಮಾಡಿ
ಗೆಳೆಯನಿಂದ ಕೈಗಡ ಮಾಡಿಕೊಂಡಿರುತ್ತೀರಿ. ಆ ಸಾಲ ತೀರಿಸುವ ಬದಲು ಅವನ ಎದುರೇ ನೀವು ವಾರಕ್ಕೊಂದು ಸಿನಿಮಾಗೆ ಹೋಗುತ್ತಿದ್ದರೆ ಗೆಳೆಯನಿಗೆ ಹೇಗಾಗಬೇಡ? ಅಷ್ಟಕ್ಕೂ ಹಣ ಮರದಿಂದೇನೂ ಉದುರುವುದಿಲ್ಲ. ಅದು ಅವನು ಕಷ್ಟಪಟ್ಟು ದುಡಿದ ಹಣ. ಅದಕ್ಕಾಗಿ ಬಡ್ಡಿಯನ್ನೂ ವಸೂಲಿ ಮಾಡಲ್ಲ. ಇಷ್ಟಾದರೂ ಅವನ ಹಣವನ್ನು ಟೇಕ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುವುದು ಸರಿಯೇ? ಸಿನಿಮಾ ನೋಡುವ ಹುಚ್ಚು ಕಡಿಮೆ ಮಾಡಿ. ಈ ಮೂಲಕ ಉಳಿಯುವ ಹಣದಿಂದ ಸಾಲ ತೀರಿಸಿ.
ಮನೆಯಲ್ಲೇ ಅಡುಗೆ ಮಾಡ್ಕೊಳ್ಳಿ
ಬ್ಯಾಚುಲರ್ಸ್ಗಳಿಗೂ ಹೋಟೆಲ್ ಊಟಕ್ಕೂ ಅವಿನಾಭಾವ ಸಂಬಂಧ. ತರಕಾರಿ ಹೆಚ್ಚೋದು, ಪಾತ್ರೆ ತೊಳೆಯೋದು ಯಾರಪ್ಪಾ ಮಾಡ್ತಾರೆ..? ಅನ್ನುವ ಅವರು ದುಡಿದದ್ದನ್ನೆಲ್ಲ ಹೊಟೇಲ್ಗೆ ಸುರೀತಾರೆ. ಒಂದೆರಡು ತಿಂಗಳು ಮನೆಯಲ್ಲೇ ಅಡುಗೆ ಮಾಡಿ ನೋಡಿ. ಆರೋಗ್ಯನೂ ಸರಿಯಾಗಿರುತ್ತೆ, ಹಣನೂ ಉಳಿತಾಯ ಆಗುತ್ತೆ. ಮನೆ ಅಡುಗೆಯಿಂದ ತಿಂಗಳಿಗೆ ಒಂದೆರಡು ಸಾವಿರ ಉಳಿಸಿದರೂ ವರ್ಷಕ್ಕೆ ಎಷ್ಟಾಗುತ್ತೆ ನೀವೇ ಯೋಚಿಸಿ ನೋಡಿ?
ಮೊಬೈಲ್ ಇಂಟರ್ನೆಟ್
ಮನೆಯಲ್ಲೂ ಇಂಟರ್ನೆಟ್ ಸಂಪರ್ಕ ಪಡೆದುಕೊಂಡಿರ್ತೀರಿ. ಇನ್ನು ಮೊಬೈಲ್ಗೂ 3ಜಿ ಸಂಪರ್ಕ ಪಡೆದುಕೊಂಡಿರ್ತೀರಿ. ಸಾಲ ಮಾಡಿಕೊಂಡಿರುವಾಗ ಈ ರೀತಿಯ ದುಂದು ವೆಚ್ಚ ಬೇಕಾ? ಒಂದಾ ಮೊಬೈಲ್ ಇಂಟರ್ನೆಟ್ ಕ್ಯಾನ್ಸಲ್ ಮಾಡಿ. ಇಲ್ಲಾಂದ್ರೆ ಕಂಪ್ಯೂಟರ್ಗೆ ಹಾಕಿರುವ ಇಂಟರ್ನೆಟ್ ಸೌಲಭ್ಯವನ್ನು ರದ್ದು ಮಾಡಿ. ವೈಫೈ ಅಥವಾ ಬ್ಲೂಟೂತ್ ಮೂಲಕ ಕಂಪ್ಯೂಟರ್ಗೆ ಮೊಬೈಲ್ ಇಂಟರ್ನೆಟ್ ಸಂಪರ್ಕ ಕಲ್ಪಿಸಿ.
ಸಣ್ಣ ಉಳಿತಾಯ
ಮನೆಯಲ್ಲೊಂದು ಸಣ್ಣದೊಂದು ಬಾಕ್ಸ್ ಅನ್ನು ಬ್ಯಾಂಕ್ ರೀತಿ ಮಾಡಿಕೊಳ್ಳಿ. ಪ್ರತಿ ದಿನ ಇಂತಿಷ್ಟು ಹಣವನ್ನು ಆ ಬಾಕ್ಸ್ಗೆ ಹಾಕುತ್ತಿರಿ. ನೀವು ಆ ಬಾಕ್ಸ್ನೊಳಗೆ ಹಾಕುತ್ತಿರುವ ಹಣದ ಮೊತ್ತ ಕಡಿಮೆ ಇರಬಹುದು. ಆದರೆ, ತಿಂಗಳ ಅಂತ್ಯದ ವೇಳೆಗೆ ಆ ಮೊತ್ತ ದೊಡ್ಡದಾಗಿರುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಿ. ಯಾಕೆಂದರೆ ಹನಿ ಹನಿಗೂಡಿದರೆನೇ ಹಳ್ಳ.
ಆಟೋ ಪ್ರಯಾಣ
ಆಕಾಶವೇ ತಲೆ ಮೇಲೆ ಬಿದ್ದರೂ ಕೆಲವರಿಗೆ ಬಸ್ ಪ್ರಯಾಣ ಅಂದ್ರೆ ಆಗಿಬರೋಲ್ಲ. ಎಲ್ಲಿಗಾದ್ರೂ ಹೋಗ್ಬೇಕಾದಾಗ ಸ್ವಲ್ಪ ಲೇಟೇನಾದ್ರೂ ಆದ್ರೆ ಆಟೋದಲ್ಲೇ ಪ್ರಯಾಣಿಸಬೇಕು. ಆದ್ರೆ ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಅವಧಿಯಲ್ಲಿ ಬಸ್ನಲ್ಲೇ ಪ್ರಯಾಣಿಸಿದರೆ ವರ್ಷಕ್ಕೆ ಎಷ್ಟೊಂದು ಹಣ ಉಳಿತಾಯ ಆಗುತ್ತೆ ಅಲ್ವಾ?
ಹೊಸ ಮೊಬೈಲ್- ಸ್ವಲ್ಪ ದಿನ ಕಾಯಿರಿ
ಮೊದಲೇ ಸಾಲದ ಬದುಕು. ಅದರ ಮೇಲೆ ಸುಖಾಸುಮ್ಮನೆ ವೆಚ್ಚ ಮಾಡುವುದು ಸರೀನಾ? ಇಲ್ವಲ್ವಾ... ನಿಮ್ಮ ಕೈಯಲ್ಲಿರುವ ಮೊಬೈಲ್ ಹಳೆಯದಾಗಿರುತ್ತದೆ. ನಿಮ್ಮ ಗೆಳೆಯರ ಕೈಯಲ್ಲಿ ಹೊಸ ಮೊಬೈಲ್ ಓಡಾಡುತ್ತಿರುತ್ತದೆ. ಹಾಗಂತ ನೀವೂ ಹೊಸ ಮೊಬೈಲ್ ಖರೀದಿಸಬೇಕೆಂದು ಬಯಸುತ್ತಿದ್ದೀರಾ? ಸ್ವಲ್ಪ ದಿನ ಕಾಯಿರಿ. ಸಾಲ ತೀರಿಸಿಕೊಳ್ಳಿ. ಈ ಕಾಯುವಿಕೆಯಿಂದ ಅನುಕೂಲವೂ ಉಂಟು. ನೀವು ಹೊಸ ಮೊಬೈಲ್ ಕೊಳ್ಳುವಾಗ ನಿಮ್ಮ ಗೆಳೆಯರ ಕೈಯಲ್ಲಿರುವ ಮೊಬೈಲ್ ಹಳೆಯದಾಗಿರುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆಗೆ ಗುಡ್ಬೈ ಹೇಳಿ
ಬಹುತೇಕರ ಸಾಲದ ಸಮಸ್ಯೆಗೆ ಕ್ರೆಡಿಟ್ ಕಾರ್ಡೇ ಮೂಲ. ಈ ಕಾರ್ಡ್ವೊಂದು ಕೈಯಲ್ಲಿದ್ದರೆ ಏನಾದರೂ ಕೊಂಡುಕೊಳ್ಳಬೇಕೆನಿಸುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಅನ್ನು ಸ್ವಲ್ಪ ದಿನ ಬೀರುವಿನಲ್ಲಿಟ್ಟು ಬಿಡಿ. ಅಂದ್ರೆ ಕ್ರೆಡಿಟ್ ಕಾರ್ಡ್ನಿಂದ ಸ್ವಲ್ಪ ಸಮಯ ದೂರ ಇದ್ದು ಬಿಡಿ. ಸಾಲದ ಸಮಸ್ಯೆ ಪರಿಹಾರವಾದ ಬಳಿಕ ಬೇಕಿದ್ದರೆ ಬಳಸಿ.
ಮಹತ್ವ ಅರಿಯಿರಿ
ಒಂದು ವೇಳೆ ನೀವು 50 ಸಾವಿರದಂತೆ ಇಬ್ಬರಿಂದ ಸಾಲ ಪಡೆದಿರುತ್ತೀರಿ ಅಂತಿಟ್ಟುಕೊಳ್ಳಿ. ಇಬ್ಬರ ಸಾಲನೂ ಏಕಕಾಲದಲ್ಲೇ ತೀರಿಸಲು ಸಾಧ್ಯವಾದರೆ ಓಕೆ. ಅದು ಅಸಾಧ್ಯವೆಂದಾದರೆ ಮೊದಲು ಯಾರ ಸಾಲ ತೀರಿಸಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ಅಂದರೆ ಇಬ್ಬರಲ್ಲಿ ಒಬ್ಬ ನಿಮ್ಮ ಚಡ್ಡಿದೋಸ್ತ್ ಇನ್ನೊಬ್ಬ ಇತ್ತೀಚೆಗಷ್ಟೇ ಪರಿಚಿತನಾದಾತ ಅಂತಿಟ್ಟುಕೊಳ್ಳಿ. ಚಡ್ಡಿದೋಸ್ತ್ ಆದ್ರೆ ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು, ಅರ್ಥ ಮಾಡಿಸಿಕೊಳ್ಳಬಹುದು. ಆದರೆ, ಹೊಸ ಗೆಳೆಯ ಸಾಲ ಮರುಪಾವತಿಗೆ ದಿನ ದೂಕಿದಷ್ಟು ನಿಮ್ಮ ಮೇಲೆ ಅಪನಂಬಿಕೆ ಬೆಳೆಯಬಹುದು.
ಮೀಟರ್ ಬಡ್ಡಿ
ತುರ್ತಾಗಿ ಹಣ ಬೇಕಿರುತ್ತದೆ. ಯಾರೂ ಸಾಲ ಕೊಟ್ಟಿರುವುದಿಲ್ಲ. ಹಾಗಂತ ಯಾರೋ ಮೀಟರ್ ಬಡ್ಡಿಯವನ ಬಳಿ ಕೈಚಾಚಿರುತ್ತಿರುತ್ತೀರಿ. ಹಾಗಿದ್ದಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಿ. ಮೀಟರ್ ಬಡ್ಡಿ ಯಾವತ್ತೂ ಬೆಂಗಳೂರಿನ ಆಟೋಗಳ ಮೀಟರ್ನಂತೆ ಓಡುತ್ತಲೇ ಇರುತ್ತದೆ. ಹೇಗಾದರೂ ಸರಿ ಈ ಸಾಲವನ್ನು ಮೊದಲು ತೀರಿಸಿ.
ಪೋಷಕರನ್ನು ಕೇಳಿ
ನೀವು ವಿದ್ಯಾರ್ಥಿಯಾಗಿದ್ದರೆ ಸಾಲ ಮಾಡುವುದು ತಪ್ಪು. ಆದರೂ ಹೇಗೋ ಸಾಲ ಮಾಡಿಯಾಗಿದೆ. ಅದನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದಾಕ್ಷಣ ಪೋಷಕರ ಬಳಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಇದರಿಂದ ನೀವು ದಾರಿ ತಪ್ಪುವುದು ತಪ್ಪುತ್ತದೆ. ನೀವು ಒಳ್ಳೆಯ ಉದ್ದೇಶಕ್ಕೆ ಸಾಲ ಮಾಡಿದ್ದರೆ ಪೋಷಕರು ಗದರಲ್ಲ.
ಹಳೆಯ ಪುಸ್ತಕಗಳಿದ್ರೆ ಮಾರಾಟ ಮಾಡಿ
ನಿಮ್ಮ ಬಳಿ ಒಂದಷ್ಟು ದುಬಾರಿ ಪುಸ್ತಕಗಳಿರುತ್ತವೆ. ಆದರೆ, ಅವುಗಳು ನಿಮಗೆ ಉಪಯೋಗಿ ಅಂತ ಅನಿಸುತ್ತಿಲ್ಲ. ಮತ್ಯಾಕೆ ಅದನ್ನು ಮನೆಯಲ್ಲಿಟ್ಟು ಧೂಳು ಹಿಡಿಸುತ್ತೀರಾ? ಇಂದೇ ಅವುಗಳನ್ನು ಮಾರಿಬಿಡಿ. ಒಂದಷ್ಟು ಹಣನೂ ಸಿಗುತ್ತೆ, ಮನೇನೂ ಕ್ಲೀನ್ ಆಗುತ್ತೆ.
ಸಿಂಪಲ್ಲಾಗಿ ಮದುವೆ
ನಿಶ್ಚಿತಾರ್ಥ, ಮದುವೆ, ರಿಸೆಪ್ಶನ್ ಎಂದು ಲಕ್ಷಗಟ್ಟಲೆ ವ್ಯಯಿಸುವ ಬದಲು ಸಿಂಪಲ್ಲಾಗಿ ಮದುವೆ ಆಗಿ. ಅನಗತ್ಯ ಖರ್ಚು ಮಾಡುವುದು ಬಿಟ್ಟು ಆ ಹಣದಿಂದ ಸಾಲ ತೀರಿಸಿ. ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.
ಹನಿಮೂನ್ ಸ್ಕಿಪ್ ಮಾಡಿ
ತಲೆ ಮೇಲೆ ಸಾಲದ ಹೊರೆ ಹೊತ್ತುಕೊಂಡು ಹನಿಮೂನ್ ಹೋಗೋದಾದ್ರೂ ಹೇಗೆ? ಪ್ರವಾಸಿ ತಾಣಗಳಲ್ಲಂತೂ ಸಿಕ್ಕಾಪಟ್ಟೆ ವಸೂಲಿ ನಡೆಯುತ್ತೆ. ಸುಖಾಸುಮ್ನೆ ಹಣ ದುಂದುವೆಚ್ಚ ಮಾಡುವ ಬದಲು ಆ ಹಣವನ್ನು ಸಾಲ ತೀರಿಸಲು ಬಳಸಿ. ಜೀವನ ಇಲ್ಲೇ ಮುಗಿಯುವುದಿಲ್ಲ. ಸಾಲ ತೀರಿಸಿದ ಬಳಿಕ ಆರಾಮಾಗಿ ಹನಿಮೂನ್ಗೆ ಹೋಗಿ.
ನಗದನ್ನೇ ಕೊಡಿ
ಮನೆಗೆ ಅಗತ್ಯ ಸಾಮಾಗ್ರಿ ತರಲೆಂದು ಮಾಲ್, ಮಾರ್ಟ್ಗಳಿಗೆ ಹೋದಾಗ ಡೆಬಿಟ್ ಕಾರ್ಡ್ ಕೊಂಡು ಹೋಗುವುದೇ ಬೇಡ. ಕಾರ್ಡ್ ಇದ್ರೆ ಹಣ ಖಾಲಿಯಾಗೋದು ಗೊತ್ತಾಗಲ್ಲ. ಜೇಬಲ್ಲಿ ಕ್ಯಾಷ್ ಇಟ್ಟುಕೊಂಡು ಹೋಗಿ. ತನ್ನಿಂತಾನೇ ಕೊಳ್ಳುವ ವಸ್ತುವಿನ ಪ್ರಮಾಣವೂ ಕಡಿಮೆಯಾಗುತ್ತದೆ. ಹಣ ಉಳಿತಾಯವಾಗುತ್ತದೆ.
ಮನೆಯಲ್ಲೇ ಶೇವ್ ಮಾಡಿ
ಶೇವ್ ಮಾಡೋದಕ್ಕೆ ಸೆಲೂನ್ಗೆ ಹೋದ್ರೆ ಜೇಬಿಗೆ ಕತ್ತರಿ ಬೀಳುತ್ತೆ. ಅದರ ಬದಲು ಮನೆಯಲ್ಲೇ ಶೇವ್ ಮಾಡಿಕೊಳ್ಳಿ. ಕೂದಲಿಗೆ ಡೈ ಹಾಕೋದಿದ್ರೆ ಕುಟುಂಬ ಸದಸ್ಯರಲ್ಲೇ ಹೇಳಿ ಹಾಕಿಸಿ. ಉಳಿತಾಯವಾಗೋ ಹಣವನ್ನು ಡಬ್ಬಿಯೊಳಗೆ ಹಾಕಿಬಿಡಿ.
ಗಿಫ್ಟ್ ಕೊಡೋವಾಗ
ದೊಡ್ಡ ದೊಡ್ಡ ಮಾಲ್ಗಳಿಗೆ ಹೋಗಿ ದುಬಾರಿ ಗಿಫ್ಟ್ ತಂದು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಬದಲು ನೀವೇ ಮನೆಯಲ್ಲಿ ಕ್ರಿಯಾಶೀಲತೆ ಬಳಸಿ ಪುಟ್ಟ ಆಕರ್ಷಕ ಉಡುಗೊರೆಗಳನ್ನು ತಯಾರಿಸಬಹುದು. ನಿಮ್ಮ ಶ್ರಮವೂ ಅದರಲ್ಲಿ ಕಾಣುತ್ತದೆ. ಗಿಫ್ಟ್ ಪಡೆಯುವವರೂ ಖುಷಿಯಾಗುತ್ತಾರೆ.
ರಜೆ ಹಾಕಿ
ದೀಪಾವಳಿ, ಯುಗಾದಿ, ಹೊಸ ವರ್ಷ ಹೀಗೆ ಹಬ್ಬ ಹರಿದಿನಗಳು ಬಂದಾಗ ಆಫೀಸಲ್ಲಿ ಪಾರ್ಟಿ, ಸೆಲೆಬ್ರೇಷನ್ ಅಂತೆಲ್ಲಾ ಹಣ ಸಂಗ್ರಹಿಸಲು ತೊಡಗುತ್ತಾರೆ. ಹಬ್ಬದ ಮುನ್ನಾದಿನ ಆಫೀಸಿಗೆ ರಜೆ ಹಾಕಿ. ಹಣ ಉಳಿಯುತ್ತದಲ್ವಾ, ಸಾಲ ತೀರಿಸಿ.
ಲೈಬ್ರರಿಯಿಂದ ತನ್ನಿ
ನಿಮಗೆ ಪುಸ್ತಕಗಳೆಂದರೆ ಪಂಚಪ್ರಾಣ ಆಗಿರಬಹುದು. ಹಾಗಂತ ಪುಸ್ತಕಗಳು, ಸಿಡಿ, ಡಿವಿಡಿಗಳನ್ನು ಹಣ ಕೊಟ್ಟು ಖರೀದಿಸಿ ತರಬೇಡಿ. ಸಾಲ ಬೇಗನೆ ತೀರಬೇಕಂದ್ರೆ ತ್ಯಾಗ ಮಾಡಲೇಬೇಕು. ಬೇಕಾದ ಪುಸ್ತಕಗಳನ್ನು ಹತ್ತಿರದ ಲೈಬ್ರರಿಯಿಂದ ತಂದು ಓದಿ.
ಸೆಕೆಂಡ್ಹ್ಯಾಂಡ್
ಕುರ್ಚಿ, ಮೇಜು, ದೀವಾನ್, ಸೋಫಾ ಮುಂತಾದ ಪೀಠೋಪಕರಣಗಳು ಮನೆಗೆ ಬೇಕೇ ಬೇಕು ಎಂದಾಗ ದೊಡ್ಡ ದೊಡ್ಡ ಮಳಿಗೆಗಳಿಗೆ ಹೋಗಿ ಸಾವಿರಾರು ರು. ವೆಚ್ಚ ಮಾಡಬೇಡಿ. ಆನ್ಲೈನ್ನಲ್ಲಿ ಓಎಲ್ಎಕ್ಸ್ನಂತಹ ಪೇಜ್ಗೆ ಹೋಗಿ ನೋಡಿ. ಸೆಕೆಂಡ್ಹ್ಯಾಂಡ್ ವಸ್ತುಗಳು ಸಿಗುತ್ತವೆ. ದರವೂ ಕಡಿಮೆ ಇರುತ್ತದೆ.
ನಿಮ್ಮ ಕೆಲಸ ನೀವೇ ಮಾಡಿ
ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಅಡಿಗೆ ಮಾಡುವುದು ಇದೆಲ್ಲ ಕಷ್ಟದ ಕೆಲಸವೇ? ಸುಮ್ಮನೆ ಏಕೆ ಅದಕ್ಕೆಲ್ಲ ಕೆಲಸದವಳನ್ನು ಇಟ್ಟುಕೊಂಡು ಆಕೆಗೆ ಬೇರೆ ಸಂಬಳ ಕೊಡುತ್ತೀರಿ? ನಿಮ್ಮ ಕೆಲಸ ನೀವೇ ಮಾಡಿಕೊಂಡ್ರೆ ಚೆನ್ನ ಅಲ್ಲವೇ? ಹಣವೂ ಉಳಿಯುತ್ತೆ, ಸಾಲವೂ ತೀರುತ್ತೆ.
ರೈಲಲ್ಲಿ ಹೋಗಿ
ನಿಮ್ಮೂರಿಗೆ ರೈಲು ವ್ಯವಸ್ಥೆ ಇದೆ. ರೈಲಲ್ಲಿ ಯಾರಪ್ಪಾ ಹೋಗ್ತಾರೆ? ತಲುಪುವಾಗ್ಲೇ ಲೇಟಾಗುತ್ತೆ ಅಂತ ಕಥೆ ಹೇಳ್ಬೇಡಿ. ಸ್ವಲ್ಪ ಲೇಟಾದ್ರೂ ಪರ್ವಾಗಿಲ್ಲ. ಬಸ್ಸು, ಕಾರಲ್ಲಿ ದುಬಾರಿ ಹಣ ನೀಡಿ ಸಂಚರಿಸುವ ಬದಲು ಅತ್ಯಂತ ಕಡಿಮೆ ದರದಲ್ಲಿ ರೈಲಲ್ಲಿ ಆರಾಮವಾಗಿ ಸಂಚರಿಸಿ.
ಬಿಸ್ಲೆರಿನೇ ಬೇಕಾ?
ಯಾವುದೋ ಕೆಲಸದಲ್ಲಿ ಎಲ್ಲೋ ಹೋಗುತ್ತಿದ್ದೀರಿ. ಪ್ರತಿ ಬಾರಿ ನೀರು ಬೇಕೆಂದಾಗ ಲೀಟರ್ಗೆ 22 ಕೊಟ್ಟು ಬಿಸ್ಲೆರಿ ಬಾಟಲಿ ಕೊಂಡುಕೊಳ್ಳುವ ಬದಲು ಮನೆಯಲ್ಲೇ ನೀರನ್ನು ಚೆನ್ನಾಗಿ ಕುದಿಸಿ ಬಾಟಲಿಯಲ್ಲಿ ತುಂಬಿಸ್ಕೊಂಡು ಹೋಗಿ.
ಕರೆ ಕಡಿಮೆ
ಇಡೀ ದಿನ ಮೊಬೈಲ್ ಫೋನ್ನಲ್ಲಿ ನೇತಾಡುತ್ತಾ ಇರಬೇಡಿ. ಗೆಳೆಯರಿಗೆ, ಮನೆಯವರಿಗೆ ವಾರದಲ್ಲಿ ಮೂರು ಬಾರಿ ಕರೆ ಮಾಡಿ ಮಾತಾಡಿದ್ರೆ ಸಾಕು. ರೀಚಾರ್ಜ್ ಮಾಡಿ ಮಾಡಿ ಹಣ ಮುಗಿಯುವುದೇ ಗೊತ್ತಾಗುವುದಿಲ್ಲ. ತಿಂಗಳಿಗೇ ಇಷ್ಟೇ ರೀಚಾರ್ಜ್ ಮಾಡುತ್ತೇನೆ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಿ.
ಬೆಟ್ಟಿಂಗ್ ಬೇಡ್ವೇ ಬೇಡ
ಕ್ರಿಕೆಟ್ ಮ್ಯಾಚ್ ನಡೆದಾಗಲೆಲ್ಲ ಸ್ನೇಹಿತರು ಬೆಟ್ಟಿಂಗ್ ಕಟ್ಟುತ್ತಾರೆಂದು ನೀವೂ ಅವರ ಸಾಲಿಗೆ ಸೇರಬೇಡಿ. ಸಾಲದ ಸುಳಿಯಲ್ಲಿ ಸಿಲುಕಿರುವಾಗ ಇದೆಲ್ಲ ಬೇಕಾ? ಸುಮ್ಮನೆ ನಂಗೇನೂ ಗೊತ್ತಿಲ್ಲ ಎಂಬಂತೆ ಕುಳಿತುಬಿಡಿ.
ಸೀರೆಯಿಂದ ದೂರ
ಕಂತಿನಲ್ಲಿ(ಇನ್ಸ್ಟಾಲ್ಮೆಂಟ್) ಸೀರೆ ಕೊಡೋ ಮಳಿಗೆಗಳು ಎಷ್ಟೋ ಇವೆ. ಹೆಂಗಸರನ್ನು ಮರುಳು ಮಾಡೋದೇ ಇವರ ಉದ್ದೇಶ. ಒಂದು ಸೀರೆಯ ಕಂತು ಮುಗಿಸಿದ ತಕ್ಷಣ ಮತ್ತೊಂದು, ಅದು ಮುಗಿದ ಬಳಿಕ ಮಗದೊಂದು... ನೀವೇ ಸೀರೆ ಅಂಗಡಿ ತೆರೆಯುವಷ್ಟು ಸೀರೆ ಖರೀದಿಸಿಬಿಟ್ರೆ ಸಾಲ ತೀರಿಸೋರ್ಯಾರು?
ಕೊಡೆ ಹಿಡ್ಕೊಂಡು ಹೋಗಿ
ಮನೆಯಿಂದ ಆಫೀಸಿಗೆ ಹೋಗೋ ದಾರಿಯಲ್ಲೇ ನಿಮ್ಮ ಪ್ರೀತಿಯ ಐಸ್ಕ್ರೀಂ ಪಾರ್ಲರ್, ಪಾನಿಪುರಿ ಮಾರುವವ ಕಾಣುತ್ತಾನೆ. ನಾಲಗೆ ಚಪ್ಪರಿಸದೇ ಇರುತ್ತದಾ? ಹಣ ಉಳಿಸಬೇಕು ಅಂದ್ರೆ ಮನೆಯಿಂದ ಹೊರಹೋಗುವಾಗ ಕೊಡೆ ಹಿಡಿದುಕೊಂಡು ಹೋಗಿ. ಪಾನಿಪುರಿ, ಐಸ್ಕ್ರೀಂ ಅಂಗಡಿ ಸಮೀಪಿಸುತ್ತಿದೆ ಎನ್ನುವಾಗ ಕೊಡೆ ಅಡ್ಡಹಿಡಿಯಿರಿ.
ಓಟಿ ಮಾಡಿ
ಕೆಲವು ಕಚೇರಿಗಳಲ್ಲಿ ಒಟಿ ಸೌಲಭ್ಯ ಇರುತ್ತದೆ. ಓವರ್ ಟೈಂ ಕಚೇರಿಯಲ್ಲಿ ಡ್ಯೂಟಿ ಮಾಡಿದ್ರೆ ಹೆಚ್ಚುವರಿ ವೇತನ ನೀಡುತ್ತಾರೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಒಂದಷ್ಟು ದಿನ ಓಟಿ ಮಾಡಿ. ಆದರೆ, ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗುವಂತೆ ನೋಡಿಕೊಳ್ಳಿ.
ಇಂಟರ್ನೆಟ್
ನೀವು ಬಹುತೇಕ ಸಮಯ ಕಚೇರಿಯಲ್ಲೇ ಇರ್ತೀರಿ. ಕಚೇರಿಯಲ್ಲಿ ಇಂಟರ್ನೆಟ್ ಸೌಲಭ್ಯ ಇದ್ದೇ ಇರುತ್ತೆ. ಹಾಗಿದ್ದ ಮೇಲೆ ಮನೆಯಲ್ಲಿ ಮತ್ತೆ ಇಂಟರ್ನೆಟ್ನ ಅಗತ್ಯ ಇದೆಯೇ ಎಂಬ ವಿಚಾರದ ಕುರಿತು ವಿಮರ್ಶೆ ಮಾಡಿಕೊಳ್ಳಿ. ಡಾಕ್ಯುಮೆಂಟ್ಗಳ ಡೌನ್ಲೋಡ್ಗಳನ್ನು ಕಚೇರಿಯಲ್ಲೇ ಮಾಡಿಕೊಳ್ಳಿ. ತೀರಾ ಅನಿವಾರ್ಯತೆ ಇದ್ದರೆ ಮನೆ ಪಕ್ಕದ ಸೈಬರ್ ಕಫೆಗೆ ಹೋಗಿ.
ಇಸ್ತ್ರಿ ನೀವೇ ಮಾಡೋಕ್ಕೆ ಆಗೊಲ್ವಾ?
ಕೆಲವರಿಗೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ವಾಸಿಸೋರಿಗೆ ಬಟ್ಟೆಗೆ ಇಸ್ತ್ರಿ ಹಾಕೋದಂದ್ರೆ ಆಗಿ ಬರೋದಿಲ್ಲ. ಅದಕ್ಕೆ ಅವರು ಮನೆಪಕ್ಕದ ಇಸ್ತ್ರಿ ಅಂಗಡಿಯವನನ್ನೇ ಅವಲಂಬಿಸಿರುತ್ತಾರೆ. ಒಂದು ಜೊತೆ ಪಟ್ಟೆಗೆ ಕನಿಷ್ಠ 10ರಿಂದ 15 ಪ್ರತಿ ವಾರ ಏನಿಲ್ಲವೆಂದರೂ ನೀವು 100ರ ವರೆಗೆ ಇಸ್ತ್ರಿಯವನಿಗೇ ಸುರಿಯುತ್ತೀರಿ. ಇದನ್ನು ಉಳಿಸಲು ಸಾಧ್ಯವಿಲ್ಲವಾ?
ಹಾಳು ಮಾಡಬೇಡಿ
ಮನೆ ಮಂದಿಗೆ ಎಷ್ಟು ಬೇಕೋ ಅಷ್ಟೇ ಅಡುಗೆ ಮಾಡಿ. ಬೇಕಾಬಿಟ್ಟಿ ಅಡುಗೆ ಮಾಡಿ ಕೊನೆಗೆ ಅದನ್ನು ಮರುದಿನ ಕಸದಬುಟ್ಟಿಗೆ ಎಸೆಯುವುದರಿಂದ ಏನು ಲಾಭ ಬಂತು ಹೇಳಿ. ರಾತ್ರಿ ಮನೆಗೆ ಬರುತ್ತಿಲ್ಲವೆಂದಾದರೆ ಮೊದಲೇ ಮನೆಯೊಡತಿಗೆ ಅಥವಾ ಅಡುಗೆ ಮಾಡುವವರಿಗೆ ತಿಳಿಸಿ.
ಕೇಬಲ್ಬೇಕಾ?
ಬ್ಯಾಚುಲ್ ಆಗಿದ್ರೆ ಮನೆಯಲ್ಲಿ ಇಂಟರ್ನೆಟ್ ಹಾಕಿಸಿಕೊಂಡಿದ್ರೆ ಕೇಬಲ್ಗಾಗಿ ಪ್ರತ್ಯೇಕ ಹಣ ವೆಚ್ಚ ಮಾಡಬೇಕಾ? ಒಮ್ಮೆ ಯೋಚಿಸಿ ನೋಡಿ. ಕಂಪ್ಯೂಟರ್ಗೆ ಎಲ್ಸಿಡಿ, ಎಲ್ಇಡಿ ಮೊನಿಟರ್ ಇದ್ರೆ ಇಂಟರ್ನೆಂಟ್ ಮೂಲಕವೇ ಟೀವಿ ನೋಡಬಹುದು. ಇದರಿಂದ ವರ್ಷಕ್ಕೆ ಕನಿಷ್ಠವೆಂದ್ರೂ 2500ರ ವರೆಗಾದರೂ ಉಳಿತಾಯ ಆಗುತ್ತದೆ.
ಇಂಟರ್ನೆಟ್ ಶೇರಿಂಗ್
ನಗರಗಳಲ್ಲಿರುವ ಕೆಲವರಿಗೆ ಇಂಟರ್ನೆಟ್ ಅನಿವಾರ್ಯವಾಗಿ ಬಿಡುತ್ತದೆ. ಆದರೆ, ಇಂಟರ್ನೆಟ್ ಸೌಲಭ್ಯ ಪಡೆದುಕೊಂಡರೆ ಸಾಲ ತೀರಿಸಲು ಕಷ್ಟ ಆಗುತ್ತೆ. ಹಾಗಿದ್ರೆ ಇಂಟರ್ನೆಟ್ ಶೇರ್ ಮಾಡಿಕೊಳ್ಳಿ. ಅಂದರೆ ಒಂದೇ ಸಂಪರ್ಕವನ್ನು ಮೂರು ಮಂದಿ ಗೆಳೆಯರು ಹಂಚಿಕೊಳ್ಳಿ. ಕೆಲ ಕಂಪನಿಗಳು ಈ ಸೌಲಭ್ಯ ಕಲ್ಪಿಸುತ್ತವೆ. ಇದು ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆ.
ಮಕ್ಕಳಿಗೂ ಉಳಿತಾಯದ ಪಾಠ ಮಾಡಿ
ಮನೆಯ ಪರಿಸ್ಥಿತಿ ಕುರಿತು ಮಕ್ಕಳಿಗೂ ತಿಳಿ ಹೇಳಿ. ನಿಮ್ಮ ಸಮಸ್ಯೆಯ ಕುರಿತು ಅವರಿಗೂ ಅರಿವಿರಲಿ. ಈ ಮೂಲಕ ಅವರು ಅನಗತ್ಯ ಬೇಡಿಕೆಗಳನ್ನು ನಿಮ್ಮ ಮುಂದಿಡುವುದು ತಪ್ಪುತ್ತದೆ. ನಿಮ್ಮ ಮೇಲೆ ಬೀಳುವ ಹೆಚ್ಚುವರಿ ಹೊಣೆ ಕಡಿಮೆಯಾಗುತ್ತದೆ.
ಈಗ್ಲೇ ಮಗುಬೇಕಾ?
ಅಪ್ಪನಾಗುವ, ಅಮ್ಮನಾಗುವ ಖುಷಿಗಿಂತ ದೊಡ್ಡ ಸಂಭ್ರಮ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಆದರೆ, ಮಗು ಅನ್ನುವುದು ಸಂತೋಷವನ್ನಷ್ಟೇ ಅಲ್ಲ ಒಂದಷ್ಟು ಜವಾಬ್ದಾರಿ, ಖರ್ಚನ್ನೂ ಹೊತ್ತುಕೊಂಡು ಬರುತ್ತದೆ. ಮಗುವಾದ ಮೊದಲ ವರ್ಷದಲ್ಲೇ ಮಗುಬೇಕಾ? ಈ ಕುರಿತು ಗಂಭೀರವಾಗಿ ವಿಚಾರ ವಿಮರ್ಶೆ ನಡೆಸಿ. ಹಾಗಂತ ವರ್ಷಾನುಗಟ್ಟಲೆ ಹಾಗೇ ಇರಬೇಡಿ.ಟಿ
ಗುಂಡು, ಸಿಗರೇಟು ಬಿಡೋಕಾಗಲ್ವಾ?
ಬಹುತೇಕರು ತಿಂಗಳ ಸಂಬಳದ ಬಹುದೊಡ್ಡ ಪಾಲನ್ನು ಸುರಿಯೋದು ಗುಂಡು, ಸಿಗರೇಟ್ಗಾಗಿ. ಮನಸ್ಸು ಮಾಡಿದರೆ ಇವನ್ನು ಬಿಡುವುದು ಕಷ್ಟವೇನಲ್ಲ. ಆದರೆ, ಸಾಧ್ಯನೇ ಇಲ್ಲಾ ಅನ್ನುವವರು ಸಿಗರೇಟು, ಗುಂಡಿನ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಖರ್ಚಿನ ಬಾಬ್ತು ಸ್ವಲ್ಪಮಟ್ಟಿಗೆ ಇಳಿಕೆಯಾಗುತ್ತದೆ. ಸಾಲ ತೀರಿಸುವುದು ಸುಲಭವಾಗುತ್ತದೆ.
ಗರ್ಲ್ಫ್ರೆಂಡ್ಗಳಿಂದ ದೂರ ಇರಿ
ತಮಾಷೆ ಮಾಡ್ತಿದ್ದೀರಾ ಅಂದ್ಕೊಂಡಿದ್ದೀರಾ? ಖಂಡಿತಾ ಇಲ್ಲ. ಕೆಲವರ ಬದುಕು ಸಾಲದ ಸುಳಿಗೆ ಬೀಳೋದೆ ಈ ಗರ್ಲ್ಫ್ರೆಂಡ್ಗಳಿಂದ. ಗರ್ಲ್ಫ್ರೆಂಡ್ ಜತೆಗಿದ್ದರೆ ಕಾಫಿಡೇಗೆ, ಸಿನಿಮಾಗೆ ಅಂತ ವಾರಕ್ಕೊಂದು ದಿನವಾದರೂ ಕರೆದುಕೊಂಡು ಹೋಗಲೇಬೇಕು. ಅದಕ್ಕೆಲ್ಲ ನಿಮ್ಮ ಕಿಸೆಯಿಂದಲೇ ಹಣ ನೀಡಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೈಯಲ್ಲಿ ದುಡ್ಡಿದ್ದಾಗ ಇದೆಲ್ಲಾ ಓಕೆ. ಸಾಲ ಮೈಮೇಲೆ ಎಳೆದುಕೊಂಡಾಗ ಇದೆಲ್ಲ ಯಾಕೆ? ನಿಮ್ಮ ಸಮಸ್ಯೆಯನ್ನು ಅವಳಿಗೆ ಹೇಳಿ. ಅವಳು ನಿಜವಾಗಿಯೂ ನಿಜವಾಗಿಯೂ ಪ್ರೀತಿಸುತ್ತಿದ್ದರೆ ಅರ್ಥ ಮಾಡಿಕೊಳ್ಳುತ್ತಾಳೆ.
ಬ್ಯೂಟಿಪಾರ್ಲರ್ನಿಂದ ದೂರ
ಬ್ಯೂಟಿಪಾರ್ಲರ್ಗೆ ಕಾಲಿಟ್ಟ ತಕ್ಷಣ ಫೇಶಿಯಲ್, ಕ್ಲೀನ್ಅಪ್, ಬ್ಲೀಚಿಂಗ್ ಎಂದೆಲ್ಲಾ ಹೇಳಿ ನಿಮ್ಮನ್ನು ಮರುಳುಗೊಳಿಸುವವರೇ ಜಾಸ್ತಿ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ. ನಾನು ನೋಡಲು ಸುಂದರವಾಗಿಯೇ ಇದ್ದೇನೆ ಎಂದುಕೊಳ್ಳಿ. ಅಲ್ಲಿಂದ ಮೊದಲು ಕಾಲ್ಕೀಳಿ.
ಟಿಡಿಎಸ್ ಹಣ
ನೀವು ಉದ್ಯೋಗದಲ್ಲಿದ್ದು, ಎರಡಂಕಿಯ ಸಂಬಳ ಪಡೆಯುತ್ತಿದ್ದೀರಿ ಎಂದಾದರೆ ಖಂಡಿತ ಟಿಡಿಎಸ್ ಕಡಿತ ಆಗುತ್ತದೆ. ಇದಕ್ಕಾಗಿ ನೀವು ಫಾರಂ- 16 ಫೈಲ್ ಮಾಡಲೇಬೇಕು. ಈ ಹಣ ವರ್ಷದ ಅಂತ್ಯದಲ್ಲಿ ನಿಮ್ಮ ಖಾತೆಗೆ ಬಂದು ಬೀಳುತ್ತದೆ. ಒಂದು ವೇಳೆ ದೊಡ್ಡಮೊತ್ತದ ಟಿಡಿಎಸ್ ಕಡಿತ ಆಗುತ್ತಿದ್ದರೆ ವರ್ಷಾಂತ್ಯಕ್ಕೆ ನಿಮ್ಮ ಕೈಗೆ ದೊಡ್ಡ ಮೊತ್ತದ ಹಣವೇ ಸಿಗುತ್ತದೆ. ಆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬೇಡಿ. ಮೊದಲು ನೀವು ಮಾಡಿರುವ ಸಾಲ ತೀರಿಸಿ.
ಮನೆಯಲ್ಲೇ ಫಿಲ್ಮ್ ನೋಡಿ
ವಾರಾಂತ್ಯದಲ್ಲಿ ನಿಮ್ಮ ಕುಟುಂಬವಿಡೀ ಮಲ್ಟಿಫ್ಲೆಕ್ಸ್ನಲ್ಲೇ ಕೂತು ಸಿನಿಮಾ ನೋಡಬೇಕೆಂದೇನೂ ಇಲ್ಲ. ಈಗಂತೂ ಕೆಲ ಸಿನಿಮಾದ ಡೀವಿಡಿಗಳೂ ಬಾಡಿಗೆಗೆ ಸಿಗುತ್ತವೆ. ದೊಡ್ಡ ಸ್ಕ್ರೀನ್ನ ಎಲ್ಸಿಡಿ ಇದ್ದರೆ ಮನೆಯಲ್ಲೇ ಇಡೀ ಕುಟುಂಬ ಮನೆಯಲ್ಲೇ ಸಿನಿಮಾ ನೋಡಬಹುದು. ಸಿನಿಮಾ ಟಿಕೆಟ್ಗಾಗಿ ವೆಚ್ಚ ಮಾಡುವ 1 ಸಾವಿರದಷ್ಟು ಹಣ ಉಳಿತಾಯ ಮಾಡಬಹುದು.
ಕೊಟ್ಟ ಸಾಲ ಹಿಂಪಡೆಯಲು ನಾಚಿಕೆ ಏಕೆ?
ನಿಮ್ಮ ಗೆಳೆಯನಿಗೆ ಒಂದಷ್ಟು ಹಣ ಕೊಟ್ಟಿರುತ್ತೀರಿ. ವರ್ಷವಾದ್ರೂ ಆತ ಅದನ್ನು ವಾಪಸ್ ಕೊಟ್ಟಿಲ್ಲ. ಆಗ ನಿಮ್ಮ ಪರಿಸ್ಥಿತಿ ಚೆನ್ನಾಗಿತ್ತು. ನೀವು ಆ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದ್ರೆ ಈಗಲೂ ಸುಮ್ಮನೆ ಕೂರೋದು ಬುದ್ಧಿವಂತಿಕೆಯ ಲಕ್ಷಣವಲ್ಲ. ಅವನಿಗೆ ನಿಮ್ಮ ಪರಿಸ್ಥಿತಿ ಕುರಿತು ತಿಳಿ ಹೇಳಿ. ಕೊಟ್ಟ ಸಾಲ ಹಿಂಪಡೆಯಿರಿ.
ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ
ಎಲ್ಲಕ್ಕಿಂತಲೂ ಮುಖ್ಯವಾಗಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಆರೋಗ್ಯವೊಂದು ಚೆನ್ನಾಗಿದ್ದರೆ ಯಾವುದೇ ಸಮಸ್ಯೆಯನ್ನು ಎದುರಿಸಬಹುದು. ಆರೋಗ್ಯ ಪದೇ ಪದೆ ಕೈಕೊಡುತ್ತಿದ್ದರೆ ಸಾಲ ತೀರಿಸಲು ತೆಗೆದಿಟ್ಟ ಹಣ ಆಸ್ಪತ್ರೆಗೆ ಸುರಿಯಬೇಕಾದೀತು. ಈ ಕುರಿತು ಗಮನ ಇರಲಿ.
ಶ್ಯೂರಿಟಿ ಬೇಡ
ಮೈಮೇಲೆ ಸಾಲ ಮಾಡಿಕೊಂಡು ಇನ್ನೊಬ್ಬರ ಸಾಲಕ್ಕೆ ಶ್ಯೂರಿಟಿ ಹಾಕುವುದಿದೆಯಲ್ಲ ಅದಕ್ಕಿಂತ ಮುಠ್ಠಾಳತನ ಇನ್ನೊಂದಿಲ್ಲ. ಇದೊಂದು ರೀತಿಯಲ್ಲಿ ಕೋಲುಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿ. ಇನ್ನೊಬ್ಬರ ಬಗೆಗಿನ ಚಿಂತೆ ಬಿಡಿ. ಅವರೇನಾದರೂ ಸಾಲ ತೀರಿಸದೇ ಇದ್ದರೆ ನಿಮ್ಮನ್ನು ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು.
ಕಾರ್, ಬೈಕ್ ಪೂಲಿಂಗ್
ಕಚೇರಿಯ ಐದಾರು ಕಿ.ಮೀ. ಆಸುಪಾಸಿನಲ್ಲೇ ಮನೆ ಇದೆ ಎಂದಾದರೆ ಸುಖಾಸುಮ್ಮನೆ ಕಾರಿನಲ್ಲಿ, ಬೈಕಿನಲ್ಲಿ ಯಾಕೆ ಆಫೀಸ್ಗೆ ಹೋಗ್ತೀರಿ. ಅದರ ಬದ್ಲು ನಿಮ್ಮ ದಾರಿಯಲ್ಲೇ ಹೋಗ್ತಿರೋ ಗೆಳೆಯರ ಜತೆಗೆ ಹೋಗಿ. ಕಚೇರಿ ಕ್ಯಾಬ್ ಅನ್ನು ಬಳಸಿಕೊಳ್ಳಿ.
'ಮನೆಯಲ್ಲೇ ತರಕಾರಿ ಬೆಳೆಸೋಕೆ ಸಾಧ್ಯನಾ?
ಮನೆ ಹಿತ್ತಲಲ್ಲಿ ಒಂದಷ್ಟು ಜಾಗ ಇದೆಯೆಂದಾದ್ರೆ ನೀವೇ ಯಾಕೆ ಮನೆಗೆ ಬೇಕಾಗುವಷ್ಟು ತರಕಾರೀನ ಬೆಳೆಯಬಾರದು. ಬಸಳೆ, ಅಲಸಂದೆ, ಸೊಪ್ಪು, ಬೆಂಡೆ, ಹಾಗಲಕಾಯಿ, ಸೌತೆಕಾಯಿ, ಹೀರೇಕಾಯಿಯನ್ನು ಮನೆಯಲ್ಲೇ ಬೆಳೆಯಬಹುದು. ಇದು ನಿಮ್ಮ ಆರೋಗ್ಯಕ್ಕೂ ಉತ್ತಮ.
- ಅಜಿತ್ ಕುಮಾರ್/ಹಲೀಮತ್ ಸಅದಿಯಾ