ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಸ್ವಪ್ನ ಸಾರಸ್ವತ

ಬಳ್ಳಂಬೀಡಿನ ನಾಲ್ಕುನೂರು ಎಕರೆ ಫಲವತ್ತಾದ ನೆಲವನ್ನು ಬಂಬ ಮಣಿಯಾಣಿಯಿಂದ ಖರೀದಿ ಮಾಡಿ ತನ್ನ ಸುಪರ್ದಿಗೆ ಪಡೆದ ದಿನ ಬೇಳಕಟ್ಟೆ ...

Rashmi Kasaragodu
Updated On : 4 Jan 2014, 3:46 am

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾದ, ಗೋಪಾಲಕೃಷ್ಣ ಪೈ ಅವರು ಬರೆದ 'ಸ್ವಪ್ನ ಸಾರಸ್ವತ' ಆರನೇ ಮುದ್ರಣ ಕಾಣುತ್ತಿದೆ. ಭಾಗ್ಯಲಕ್ಷ್ಮಿ ಪ್ರಕಾಶನ ಪ್ರಕಟಿಸಿರುವ ಈ ಕೃತಿಯಿಂದ ಆಯ್ದ ಪುಟಗಳು ನಿಮಗಾಗಿ.


ಬಳ್ಳಂಬೀಡಿನ ನಾಲ್ಕುನೂರು ಎಕರೆ ಫಲವತ್ತಾದ ನೆಲವನ್ನು ಬಂಬ ಮಣಿಯಾಣಿಯಿಂದ ಖರೀದಿ ಮಾಡಿ ತನ್ನ ಸುಪರ್ದಿಗೆ ಪಡೆದ ದಿನ ಬೇಳಕಟ್ಟೆ ರಾಮಚಂದ್ರ ಪೈ ತನ್ನ ಅಜ್ಜ ವಿಟ್ಠು ಪೈಯನ್ನು ಬಹಳ ನೆನಪಿಸಿಕೊಂಡಿದ್ದ. ಈ ಕಡೆಯ ಭೂಭಾಗದಲ್ಲೆಲ್ಲಾದರೂ ಒಂದು ತುಂಡು ನೆಲವನ್ನು ತನ್ನದಾಗಿಸಿ ಕೊಳ್ಳಬೇಕೆಂದು ವಿಟ್ಠು ಪೈಗೆ ಬಹಳ ಆಸೆ ಇತ್ತು. ಆ ಆಸೆಯನ್ನು ತನ್ನ ಮೊಮ್ಮಗನಿಗೆ ಹೇಳುವಾಗೆಲ್ಲ ತನ್ನ ತಂದೆ ಮಾಳಪ್ಪಯ್ಯ, ಅಜ್ಜ ನರಸಪ್ಪಯ್ಯ ಇವರುಗಳು ಬಾಳಿ ಬದುಕಿದ ರೀತಿಯನ್ನು ವಿಟ್ಠು ಪೈ ವಿವರಿಸುತ್ತಿದ್ದ ಕ್ರಮವಿತ್ತು. ಆ ದುರ್ಭರ ದಿನಗಳ ಕಷ್ಟಕಾಲದಲ್ಲೂ ತನ್ನ ನೆಲ, ತನ್ನ ಜನ ಎಂದು ಅವರು ಪಟ್ಟು ಹಿಡಿದುದನ್ನು ವಿಟ್ಠು ಪೈ ಅರ್ಧ ಹೆಮ್ಮೆಯಿಂದ, ಅರ್ಧ ದುಃಖದಿಂದ ಹೇಳುತ್ತಿದ್ದ. ಯಾವಾಗಲೂ ಇಂತಹ ಕಥೆಗಳು, ತನ್ನ ಕಾಲಕ್ಕಾದಾಗ ಒದಗಿ ಬಂದ ದುರ್ಗತಿಯನ್ನು ಕುರಿತು ಮರುಗುವಲ್ಲಿಗೆ ಅಂತ್ಯವಾಗುತ್ತಿದ್ದವು.
ವಿಟ್ಠು ಪೈಯ ಅಜ್ಜ ನರಸಪ್ಪಯ್ಯ ವರುಣಾಪುರದ ಸದ್ಗೃಹಸ್ಥರಲ್ಲಿ ಒಬ್ಬರೆಂದು ತುಂಬ ಹೆಸರುವಾಸಿ. ಅವರಿಲ್ಲದೇ ಸಾಸಷ್ಟಿಯ ಅರವತ್ತಾರು ಕುಟುಂಬಗಳಲ್ಲಿ ಯಾವುದೇ ಶುಭ ಸಮಾರಂಭಗಳೂ ನಡೆಯುತ್ತಿರಲಿಲ್ಲ ಅನ್ನುವುದು ಆಗಿನ ಹೇಳಿಕೆ. ವರುಣೆಯ ಅಗ್ರಹಾರದಲ್ಲಿ ನರಸಪ್ಪಯ್ಯನವರದು ದೊಡ್ಡ ಮನೆ. ಅಕ್ಕಿ, ಬೆಲ್ಲ, ತುಪ್ಪ, ಜೇನುತುಪ್ಪ, ಎಣ್ಣೆ, ತೆಂಗಿನಕಾಯಿ, ತೆಂಗಿನ ನಾರಿನ ಜುಂಗು, ಅಳಲೇ ಕಾಯಿ, ಹುಣಸೇ ಹಣ್ಣು, ಮೇಣ, ಗಂಧ, ಕರಿಮೆಣಸು ಇವುಗಳ ವ್ಯಾಪಾರ ಅವರಿಗೆ. ಕಾಡಿನ ಕಡೆಯಿಂದ ಬರುವ ಕುಡುಂಬಿಯರು ತಾವು ಶೇಖರಿಸಿದ ವಸ್ತುಗಳನ್ನು ಅವರಿಗೆ ಮಾರುವುದು, ಅವರಿಗೆ ಬೇಕಾದ ವಸ್ತುಗಳನ್ನು ನರಸಪ್ಪಯ್ಯನವರು ಕೊಡುವುದು - ಹೀಗೆ ಅವರ ವ್ಯಾಪಾರ. ವಿಜಯನಗರದ ಅರಸರ ಆಳ್ವಿಕೆಯ ಸಮಯ ಅವರದ್ದು ಊರ್ಜಿತಗೊಂಡ ವ್ಯಾಪಾರ. ಮನೆಯ ಹಜಾರದ ಒಂದು ಭಾಗವೇ ಅವರ ಮಳಿಗೆ. ನರಸಪ್ಪಯ್ಯ ಅಲ್ಲಿಯೇ ಚಕ್ಕಳ ಮಕ್ಕಳ ಕುಳಿತು ವ್ಯವಹಾರ ನಡೆಸುವುದು. ಅವರ ಮನಸ್ಸು ವಿಶಾಲವೂ, ಮೃದುವೂ ಆಗಿದ್ದುದರಿಂದ ದಾನಧರ್ಮಗಳೂ ಹೆಚ್ಚು.
ಚೌಕ ಮಹಲಿನ ಮನೆ. ಮನೆಯ ಎದುರಿನ ಅಂಗಳದಲ್ಲಿ ದಾಸವಾಳ, ಸಬ್ಜೆ, ರತ್ನಗಂಧಿ, ಪಚ್ಚೆತೆನೆ, ಅಗಸ್ತ್ಯಮಲ್ಲಿಗೆ, ಶಂಖಪುಷ್ಪ, ಅನಂತ, ದೇವಕಣಗಿಲೆ ಮುಂತಾದ ಹೂಗಿಡಗಳೂ ಸುರಗಿ ರೆಂಜೆ ಸಂಪಿಗೆ ಅಂತ ಹೂವಿನ ಮರಗಳೂ ಧಾರಾಳ. ಮನೆಯ ಹಿಂದಣ ಹಿತ್ತಲಲ್ಲಿ ಹಲಸಿನ ಮಾವಿನ ತೆಂಗಿನ ಮರಗಳ ನೆರಳು. ಅದರಾಚೆಯ ಮೂಲೆಯಲ್ಲಿ ಸದಾ ತುಂಬಿರುವ ಸಿಹಿನೀರಿನ ಬಾವಿ. ವ್ಯಾಪಾರ ಭರಭರಾಟೆಯಿಂದ ನಡೆದಂತೆ ಮನೆಗೆ ಮಹಡಿ ಏರಿತ್ತು. ಟಿ

---------------------
ಇತಿಹಾಸ ಕಲಿಸುವ ಪಾಠಗಳು
ವಿಲ್ ಡ್ಯುರಾಂಟ್ ಮತ್ತು ಅವರ ಪತ್ನಿ ಏರಿಯಲ್ ಡ್ಯುರಾಂಟ್ ಅವರು ರಚಿಸಿದ 'ಸ್ಟೋರಿ ಆಫ್ ಸಿವಿಲೈಜೇಶನ್‌' ಹತ್ತು ಸಂಪುಟಗಳಲ್ಲಿ ಪ್ರಕಟವಾದ ಬೃಹತ್ ಗ್ರಂಥ. ಈ ಕೃತಿಗೆ ಅನುಬಂಧ ರೂಪವಾಗಿ ಡ್ಯುರಾಂಟ್ ದಂಪತಿ 'ಲೆಸನ್ಸ್ ಆಫ್ ಹಿಸ್ಟರಿ' ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯ ಸಂಗ್ರಹಾನುವಾದವನ್ನು ಆರ್.ವಿ.ಕಟ್ಟೀಮನಿ, ತಡಕಲ್ ಅವರು 'ಇತಿಹಾಸ ಕಲಿಸುವ ಪಾಠ' ಹೆಸರಿನಲ್ಲಿ ಮಾಡಿರುವರು. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಹೆಚ್ಚು ಸ್ವಾತಂತ್ರ್ಯವನ್ನು ವಹಿಸಿ ಮಾಡಿರುವ ಅನುವಾದ ಇದು.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 64, ಬೆಲೆ ರು. 60


ಪತ್ರಿಕೋದ್ಯಮ ನೋಟಗಳು
ಕನ್ನಡದ ಹಿರಿಯ ಪತ್ರಿಕೋದ್ಯಮಿ ಶಿವಾನಂದ ಜೋಶಿಯವರು ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು 'ಪತ್ರಿಕೋದ್ಯಮ ವೃತ್ತಿ ಮಾರ್ಗದರ್ಶಿ' ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಕೇವಲ ಮುದ್ರಣ ಮಾಧ್ಯಮದ ಬಗ್ಗೆ ಹೇಳುತ್ತದೆ. ಪತ್ರಿಕೋದ್ಯಮದ ಇತಿಹಾಸದಿಂದ ಆರಂಭಿಸಿ ಒಂದು ಪತ್ರಿಕೆಯನ್ನು ಹೊರತರುವವರೆಗಿನ ಹಂತಗಳನ್ನು ಅವರು ವಿವರಿಸಿದ್ದಾರೆ. ಪತ್ರಿಕೆಯಲ್ಲಿ ಭಾಷಾ ಶುದ್ಧತೆಯ ಬಗ್ಗೆ ಚರ್ಚಿಸಿದ್ದಾರೆ. ಕನ್ನಡ ಪತ್ರಿಕೋದ್ಯದ ಕೆಲವು ಹಿರಿಯರ ಪರಿಚಯವನ್ನೂ ಇದು ಒಳಗೊಂಡಿದೆ.
ಪ್ರ: ಸವಿ ಸ್ನೇಹ ಪ್ರಕಾಶನ, ಹುಬ್ಬಳ್ಳಿ, ಪುಟಗಳು 366, ಬೆಲೆ ರು. 180




ಚೈತ್ರಗಾನ
ನವಿರಾದ ಭಾವನೆಗಳಿಗೆ ಅಕ್ಷರಗಳ ಮೂಲಕ ಮೈ ಕೊಡುವ ಕೆಲಸವನ್ನು 'ಚೈತ್ರಗಾನ' ಎಂಬ ಕವನ ಸಂಕಲನದಲ್ಲಿ ಚೈತ್ರಾ ಅರ್ಜುನಪುರಿಯವರು ಮಾಡಿದ್ದಾರೆ. 'ಒಬ್ಬಳೆ ಇದ್ದಾಗ ಒಂದು ಸುಂದರ ಚಿತ್ರ ಬರಿ/ ನಾನದರ ಬಣ್ಣವಾಗುತ್ತೇನೆ/ ಮೂಲೆಯಲ್ಲಿ ಕುಳಿತು ಒಂದು ಹಾಡು ಗುನುಗು/ ನಾನದರ ಪದವಾಗುತ್ತೇನೆ/ ಇರುಳಿನಲ್ಲಿ ಮಲಗಿ ನಿನ್ನ ಕಣ್ಣು ಮುಚ್ಚು/ ನಾನು ಕನಸಾಗಿ ಬರುತ್ತೇನೆ' ಎಂಬಂಥ ಅಪೂರ್ವ ಸಾಲುಗಳೂ ಇದರಲ್ಲಿವೆ. ಉತ್ತಮ ಕವನಗಳನ್ನು ಕಟ್ಟುವ ಶಕ್ತಿ ಅವರಲ್ಲಿದೆ ಎಂಬುದನ್ನು ಈ ಸಂಕಲನ ಹೇಳುತ್ತದೆ.
ಪ್ರ: ಶ್ರೀರಾಮ ಬುಕ್ ಸೆಂಟರ್, ಮಂಡ್ಯ, ಪುಟಗಳು 200, ಬೆಲೆ ರು. 125




ಸಾಮಾನ್ಯ ಹೆಣ್ಣಿನಂತೆ ರೇಣುಕೆ
ಕೆಟ್ಟ ಕೋಪಕ್ಕೆ ಹೆಸರಾದವನು ಜಮದಗ್ನಿ. ಅಷ್ಟೇ ಸಾತ್ವಿಕಳು ಆತನ ಪತ್ನಿ ರೇಣುಕೆ. ಅಪ್ಪನ ಮಾತೇ ಆದೇಶವೆಂದು ಬಗೆಯುವವನು ಅವರ ಪುತ್ರ ಪರಶುರಾಮ. ಪುರಾಣದ ಈ ಕತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಇವರ ಈ ಕತೆಯನ್ನು ಮನುಷ್ಯರ ಕಣ್ಣಲ್ಲಿ ನೋಡಿ 'ಬೆಟ್ಟದ ಚೆಲುವೆ' ಎಂಬ ನಾಟಕವನ್ನು ರಚಿಸಿದವರು ಜಿ.ಎಚ್.ಹನ್ನೆರಡುಮಠ ಅವರು. ಹೆಣ್ಣು ಈಗೂ, ಪುರಾಣ ಕಾಲದಲ್ಲೂ ಶೋಷಿತಳೇ. ರೇಣುಕೆಯನ್ನು ನಿಮಿತ್ತ ಮಾಡಿಕೊಂಡು ಸಮಕಾಲೀನ ಸಮಸ್ಯೆಯ ಕಡೆ ಈ ನಾಟಕ ಗಮನ ಸೆಳೆಯುತ್ತದೆ.
ಪ್ರ: ಸಂಕಲ್ಪ ಪ್ರಕಾಶನ, ಬೆಂಗಳೂರು, ಪುಟಗಳು 64, ಬೆಲೆ ರು. 50

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments