ಕಪ್ಪೆ ಜಿಗಿದ ಕೊಳ
ಬಾಷೋ ಹೆಸರನ್ನು ನಾನು ಮೊದಲು ನೋಡಿದ್ದು ಒಂದು ಹಾಯಿಕು ಮೂಲಕ. ಅದು ಹೀಗಿತ್ತು:
ಒಂದು ಪುರಾತನ ಕೊಳ
ಕಪ್ಪೆ ಜಿಗಿದಿದೆ
ಅಲೆಗಳ ಸಪ್ಪಳ
ಇದು ತನ್ನಷ್ಟಕ್ಕೇ ಒಂದು ಸುಂದರವಾದ ಕವಿತೆ. ಇದರಲ್ಲಿರುವ 'ಪುರಾತನ' ಎಂಬ ಪದವನ್ನು ಹಿಡಿದು ಹೋದರೆ ಪದ್ಯಕ್ಕೆ ಹತ್ತಾರು ಪುಟಗಳ ಅರ್ಥ ಹಚ್ಚಬಹುದು. ಹಾಗೆ ಮಾಡದೆಯೂ ಪದ್ಯವನ್ನು ಆಸ್ವಾದಿಸಬಹುದು. ಬಾಷೋಗಿಂತ ಮೊದಲಿನ ಕವಿಗಳು, ಕಪ್ಪೆಗಳು ಮಾಡುವ ವಟರ್ ವಟರ್ ಶಬ್ದದ ಬಗ್ಗೆ ಗಮನ ನೆಟ್ಟಿದ್ದರು. ಬಾಷೋ ಅದನ್ನು ಮುರಿದ. ಕಪ್ಪೆ ನೀರಿಗೆ ಜಿಗಿದಾಗ ಮಾಡುವ ಸಪ್ಪಳವನ್ನು ಕೇಳಿದ, ಅದನ್ನೇ ಬರೆದ. 'ಇದು ಮೊದಲ ನೋಟಕ್ಕೆ ಸರಳವಾಗಿದೆ. ಆದರೆ ಪದ್ಯವನ್ನು ಮತ್ತೆ ಓದಿಕೊಳ್ಳಿ. ಅದು ನಮ್ಮಲ್ಲಿ ಸುಂದರವಾದ ದ್ವಾರವೊಂದನ್ನು ಸದ್ದಿಲ್ಲದೆ ತೆರೆಯುತ್ತದೆ' ಎಂದು ಈ ಪದ್ಯದ ಬಗ್ಗೆ ಓಶೋ ಹೇಳುತ್ತಾರೆ.
ಇದು ಬರೀ ಪ್ರಕೃತಿ ಚಿತ್ರವೆ? ಬಾಷೋನ ಹಿನ್ನೆಲೆ ಅರಿತವರು ಹಾಗನ್ನಲಾರರು. ಆತ 14ನೇ ಶತಮಾನದಲ್ಲಿ ಬದುಕಿದ್ದ ಜಪಾನಿನ ಬಹುದೊಡ್ಡ ಹಾಯಿಕು ಕವಿ. ಸಂತತ್ವ, ಸುತ್ತಾಟ, ಝೆನ್ ರೂಢಿ, ಕವಿತ್ವದ ಹಂತಗಳ ಲಂಘನ... ಹೀಗೆಲ್ಲ ಜೀವನ ನಡೆಸಿದ ಈತನನ್ನು ಬಹುಶಃ ನಮ್ಮ ಅಲ್ಲಮನೊಂದಿಗೆ, ಮಧ್ಯ ಪ್ರಾಚ್ಯದ ಖಲೀಲ್ ಗಿಬ್ರಾನ್ನೊಂದಿಗೆ ಹೋಲಿಸಬಹುದು.
ಈತನ ಗುರು ಸತ್ತಾಗ, ಸಾವಿರಾರು ಜನ ಸೇರಿದ್ದರು. ಆತ ಬಾಷೋನ ಗುರು ಎಂಬುದಕ್ಕಾಗಿಯೇ ಎಲ್ಲರಿಗೆ ಕುತೂಹಲ. ಬಾಷೋ ಜೋರಾಗಿ ಅಳುತ್ತಿದ್ದ. 'ಇದೇನು ಬಾಷೋ, ನೀನು ಝೆನ್ ವಿವೇಕಿ. ನಶ್ವರವಾದ ದೇಹಕ್ಕಾಗಿ ಅಳುತ್ತೀಯಾ?' ಎಂದು ಯಾರೋ ಕೇಳಿದರು. 'ಹೌದು, ನಾನು ದೇಹಕ್ಕಾಗಿಯೇ ಅಳುತ್ತಿರುವುದು. ಗುರುವಿನ ದೇಹವನ್ನು ಇನ್ನು ನೋಡಲಾರೆನಲ್ಲ, ಸ್ಪರ್ಶಿಸಲಾರೆನಲ್ಲ ಎಂಬುದಕ್ಕಾಗಿಯೇ ದುಃಖ. ಅಳಿಯದ ಆತ್ಮಕ್ಕಾಗಿ ಯಾಕೆ ಅಳಬೇಕು?' ಎಂದನಂತೆ ಬಾಷೋ.
ಎಲೆಯುದುರಿದ ಕೊಂಬೆ
ಕಾಗೆ ಕುಳಿತಿದೆ
ಶರತ್ಕಾಲದ ಸಂಜೆ
=
ಚಂದ್ರ ದಾರಿಯ ತೋರುವನು
ಹೀಗೆ ಬಾ
ಪಯಣಿಗರ ನೆಲೆಗೆ
=
ರಾಜಧಾನಿಯಲ್ಲಿ
ತೊಂಬತ್ತೊಂಬತ್ತು ಸಾವಿರ ಜನ
ಹೂಗಳ ನೋಡುತ್ತ
ಹರೀಶ್ ಕೇರ
harishkera@gmail.com