ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಅಮ್ಮಾ, ಅಪ್ಪಾ ಯಾವಾಗ ಸಾಯ್ತಾರೆ?

ಬಹಳ ದಿನಗಳಿಂದ ಕಾಯಿಲೆ ಬಿದ್ದಿದ್ದ ಪಾರ್ವತವ್ವ ಮನೆಯ ಒಂದು ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದಳು. ಸುಸ್ತಾಗಿ ಆವರಿಸಿಕೊಂಡಿದ್ದರಿಂದ..

Rashmi Kasaragodu
Updated On : 18 Jan 2014, 5:03 am

ಬಹಳ ದಿನಗಳಿಂದ ಕಾಯಿಲೆ ಬಿದ್ದಿದ್ದ ಪಾರ್ವತವ್ವ ಮನೆಯ ಒಂದು ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದಳು. ಸುಸ್ತಾಗಿ ಆವರಿಸಿಕೊಂಡಿದ್ದರಿಂದ ಹಾಗೂ ಸಾಯಂಕಾಲ ಕಾಫಿ ಕುಡಿಯುವ ಅಭ್ಯಾಸವಿದ್ದುದ್ದರಿಂದ ತನ್ನ ಸೊಸೆಯನ್ನು 'ಸ್ವಲ್ಪ ಕಾಫಿ ಕೊಡವ್ವ' ಅಂತ ಒಂದೆರಡು ಬಾರಿ ಕೇಳಿದ್ದಳು. ಆದರೆ, ಟಿವಿ ನೋಡುವುದರಲ್ಲಿ ಮುಳುಗಿ ಹೋಗಿದ್ದ ಸೊಸೆ ರಾಧಿಕಾ, ಅತ್ತೆಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ರೋಸಿಹೋದ ಅತ್ತೆ, 'ಏನ್ ಕಾಲ ಬಂತಪ್ಪ, ಸಂಜೆ ಹೊತ್ತಾದ್ರು ದೇವರಿಗೆ ದೀಪ ಹಚ್ಚೋದಿಲ್ಲ, ಊದುಬತ್ತಿ ಹಚ್ಚೋದಿಲ್ಲ, ಅಡುಗೆ ತಯಾರಿ ಮಾಡೋದಿಲ್ಲ. ಮಧ್ಯಾಹ್ನ ಮಾಡಿದ್ದೆ ರಾತ್ರಿಗೆ ಊಟಕ್ಕೆ ಇಡುತ್ತಾರಲ್ಲಪ್ಪ. ಈ ಪರಿ ಸೋಂಬೇರಿತನ ಬೆಳೆಸಿಕೊಂಡರೆ ಮನೆಯಲ್ಲಿ ದರಿದ್ರ ತುಂಬಿಕೊಳ್ಳದೆ ಇನ್ನೇನಾಗುತ್ತೆ?' ಅಂತ ಬಯ್ಯೋದಿಕ್ಕೆ ಶುರುಮಾಡಿದಳು. ದಿನಾಲು ಅತ್ತೆಯ ಬೈಗುಳ ಕೇಳಿದ್ದ ಸೊಸೆ ಅದಕ್ಕೆ ಪ್ರತ್ಯುತ್ತರವಾಗಿ 'ನಿನ್ನಂಥ ಕಾಯಿಲೆ ಬಿದ್ದವರು ಮನೇಲಿದ್ರೆ, ಇರೋ ಬರೋ ದುಡ್ಡನ್ನು ತಗೊಂಡ್ ಹೋಗಿ ಆಸ್ಪತ್ರೆಗೆ ಇಟ್ರೆ ಮನೇಲಿ ದರಿದ್ರ ಬರದೆ ಇನ್ನೇನಾಗುತ್ತೆ? ನಿನ್ನ ಗೋಳು ನೋಡಿ ನೋಡಿ ಸಾಕಾಗಿದೆ, ಕುಂತ್ರೂ ತಪ್ಪು, ನಿಂತ್ರೂ ತಪ್ಪು, ಏನು ಮಾಡಿದ್ರು ತಪ್ಪು. ಯಾವಾಗ ನೆಗೆದು ಬಿದ್ದು ಸಾಯ್ತಿಯೋ' ಎಂದು ಬಡಬಡಿಸುತಿದ್ದಳು. ಅಲ್ಲಿಯೇ ಆಟವಾಡುತ್ತಿದ್ದ ಮಗ ಗೋಕುಲ್‌ಗೆ ತನ್ನ ತಾಯಿ ಮತ್ತು ಅಜ್ಜಿಯ ಮಾತುಗಳನ್ನು ನಿತ್ಯ ಕೇಳಿ ಕೇಳಿ ಅವನಿಗೆ ಕಂಠಪಾಠವಾಗಿಬಿಟ್ಟಿದ್ದವು.
ಅಂದು ಭಾನುವಾರವಾದ್ದರಿಂದ ವಸಂತ್ ಬಹಳ ಹೊತ್ತಿನ ತನಕ ಮಲಗಿದ್ದ. ಮಗ ಗೋಕುಲ್ ತಾಯಿಯೊಂದಿಗೆ ಜಗಳವಾಡುತ್ತ ಅಳುತ್ತಿದ್ದ, ಅವನ ಗಲಾಟೆ ಕೇಳಿ ವಸಂತ್ 'ಏನದು, ಯಾಕೆ ಗಲಾಟೆ ಮಾಡ್ತಾಯಿದ್ದೀರ? ಇವತ್ತು ಭಾನುವಾರ ಆದ್ರೂ ಸ್ವಲ್ಪ ನೆಮ್ಮದಿಯಾಗಿ ನಿದ್ದೆ ಮಾಡೋಕೆ ಬಿಡೋದಿಲ್ಲೇನು' ಎಂದು ಗದರಿದ. ರಾಧಿಕಾ ಗಂಡನ ಮಾತು ಕೇಳಿ ಮಗನಿಗೆ 'ನೋಡು ಕಂದ ಜೋರಾಗಿ ಅಳಬೇಡ, ಅಪ್ಪ ಎದ್ದು ಬಂದರೆ ಹೊಡೀತಾರೆ. ಆದ್ದರಿಂದ ಸುಮ್ನೆ ಇರು' ಅಂತ ಹೇಳಿದಳು.
ಸ್ವಲ್ಪ ಹೊತ್ತಿನ ನಂತರ ಅವನ ಗಲಾಟೆ ಕಡಿಮೆಯಾಗಿ ಆಟ ಆಡೋದಿಕ್ಕೆ ಶುರುಮಾಡಿದ. ಹಾಗೆ ಆಟದ ಸಾಮಾನು ಜೋಡಿಸೋದು, ಮತ್ತೆ ಬೀಳಿಸೋದು ಸಾಮಾನುಗಳು ಬಿದ್ದದ್ದು ನೋಡಿ ಖುಷಿಯಿಂದ ಜೋರಾಗಿ ಕಿರುಚಿ ಸಂತೋಷ ಪಡುತ್ತಿದ್ದ.
ಅಡುಗೆಮನೆಯಲ್ಲಿದ್ದ ರಾಧಿಕಾಳಿಗೆ ಮಗ ಕಿರುಚಿ ಗಲಾಟೆ ಮಾಡೋದು ನೋಡಿ, 'ಗೋಕುಲ್, ಜಾಸ್ತಿ ಕಿರುಚಬೇಡ ಕಣಪ್ಪ ಅಪ್ಪ ಮಲಗಿದ್ದಾರೆ. ಅವರಿಗೆ ತೊಂದರೆ ಆಗುತ್ತೆ' ಎಂದಾಗ, 'ಹೌದಾ? ಹಾಗಾದರೆ ಟಿವಿ ಆನ್ ಮಾಡ್ಕೊಡು, ಟಿವಿ ನೋಡ್ತಿನಿ'. 'ಆದರೆ ಜಾಸ್ತಿ ಸೌಂಡ್ ಹಾಕಬಾರದು' ಅಂತ ಹೇಳಿ ಟಿವಿ ಆನ್‌ಮಾಡಿ ಕೊಟ್ಟಳು. ಹಾಗೆ ಟಿವಿ ನೋಡುತ್ತ ಇರುವಾಗ ಕೆಲ ದೃಶ್ಯಗಳು ಅವನನ್ನು ನಗೆಗಡಲಿನಲ್ಲಿ ತೇಲಿಸಿದವು. ಅವುಗಳನ್ನು ನೋಡಿ ಜೋರಾಗಿ ನಗತೊಡಗಿದ್ದ.
ನಿರ್ಮಲ ಮನಸ್ಸಿನ ಮಕ್ಕಳು ಪ್ರತಿ ವಿಷಯದಲ್ಲೂ ಖುಷಿ ಕಾಣುತ್ತಾರೆ. ಆ ಸಂದರ್ಭವನ್ನು ಸಂತೋಷದಿಂದ ಅನುಭವಿಸುತ್ತಾರೆ. ಮಕ್ಕಳೇ ಹಾಗಲ್ಲವೆ? ಟಿವಿಯ ಸದ್ದು ಮತ್ತು ಮಗನ ಗಲಾಟೆ ಕೇಳಿದ ವಸಂತ್ 'ಏನೇ ಮತ್ತೆ ಸೌಂಡು?' ಗಂಡನ ದನಿ ಕೇಳಿದ ರಾಧಿಕಾ ಸರ್ರನೆ ಬಂದು ಟಿವಿ ಬಂದ್ ಮಾಡಿ 'ಎಷ್ಟು ಸಾರಿ ನಿಂಗೆ ಹೇಳೋದು? ಸುಮ್ನೆ ಮನೇಲಿ ಇರಲ್ಲ ಏನಾದ್ರು ಗಲಾಟೆ ಮಾಡ್ತಾ ಇರ್ತೀಯ, ಅಪ್ಪನಿಗೆ ನಿದ್ರೆ ಮಾಡೋದಿಕ್ಕೆ ತೊಂದರೆ ಆಗುತ್ತೆ' ಅಂತ ಆಗಿನಿಂದ ಹೇಳ್ತಾ ಇದ್ದೀನಿ. ಆದರೆ, ನೀನು ನನ್ನ ಮಾತೇ ಕೇಳ್ತಾಯಿಲ್ಲ' ಎಂದಳು.
ಟಿವಿ ಆಫ್ ಮಾಡಿದ್ದರಿಂದ, ಮಗನ ಮುಖ ಕಪ್ಪಿಟ್ಟಿತು. 'ಏನಮ್ಮ ನೀನು, ಆಗಿನಿಂದ ಗಲಾಟೆ ಮಾಡಬೇಡ, ಆಟ ಆಟಬೇಡ, ಸದ್ದುಮಾಡ ಬೇಡ, ಅಪ್ಪನಿಗೆ ತೊಂದರೆ ಆಗುತ್ತೆ ಅಂತ ಹೇಳ್ತಿಯಾ, ಈ ಅಪ್ಪನಿಂದಾಗಿ ನನಗೆ ಸಂತೋಷದಿಂದ ಇರೋದಿಕ್ಕೇ ಆಗ್ತಿಲ್ಲ. ಈ ಅಮ್ಮಾ, ಅಪ್ಪಾ ಯಾವಾಗ ಸಾಯ್ತಾರೆ?'.
ಮಗನ ಮಾತು ಕೇಳಿ ರಾಧಿಕಾಳ ಕೈಯಲ್ಲಿದ್ದ ಸೌಟು ಕೆಳಗೆ ಬಿತ್ತು. ಗರ ಬಡಿದಳಂತೆ ಕುಸಿದು ಕೂತದಳು. ಮಲಗಿದ್ದ ವಸಂತ, ಮಗನ ಮಾತು ಕೇಳಿ ದಢಾರನೆ ಎದ್ದು ಕುಳಿತ.


- ಪಿ.ಎಸ್. ರಂಗನಾಥ, ಮಸ್ಕತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments