ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಒಂದು ನೈಟಿ ಕತೆ

ಹಿಂಗೇ ಮೊನ್ನೆ ಮಾಡಕ್ ಕ್ಯಾಮೆ ಇಲ್ದೆ ಭಟ್ರಂಗಡಿ ಕಟ್ಟೆ ಮೇಲ್ ಕುಂತ್ಕಂಡ್ ಓತ್ಲಾ ವಡೀತಿದ್ದೆ, ನನ್ನಂಗೆ ಮಾಡಕ್ ಕ್ಯಾಮೆ ಇಲ್ದಿರೋ ಐಕ್ಲೆಲ್ಲಾ, ಅಣ್ ತಮ್ಮಂದ್ರೆಲ್ಲಾ ನನ್ ಜೊತೆ ..

Rashmi Kasaragodu
Updated On : 18 Jan 2014, 5:09 am

ಹಿಂಗೇ ಮೊನ್ನೆ ಮಾಡಕ್ ಕ್ಯಾಮೆ ಇಲ್ದೆ ಭಟ್ರಂಗಡಿ ಕಟ್ಟೆ ಮೇಲ್ ಕುಂತ್ಕಂಡ್ ಓತ್ಲಾ ವಡೀತಿದ್ದೆ, ನನ್ನಂಗೆ ಮಾಡಕ್ ಕ್ಯಾಮೆ ಇಲ್ದಿರೋ ಐಕ್ಲೆಲ್ಲಾ, ಅಣ್ ತಮ್ಮಂದ್ರೆಲ್ಲಾ ನನ್ ಜೊತೆ ಸೇರ್ಕಂಡಿದ್ರು. ಅದೂ ಇದೂ, ಹಾಳೂ ಮೂಳೂ, ಮಣ್ಣೂ ಮಸಿ ಹಿಂಗೆ ಮಾತಾಡ್ಕಂಡ್ ಕುಂತಿದ್ವಿ... ಅಸ್ಟೊತ್ತಿಗೆ ಮೂಲೆ ಮನೆ ಆಂಟಿ ಕೊತ್ಮೆರಿ ಸಪ್ ತಗಳಕ್ಕೆ ಭಟ್ರಂಗ್ಡಿಗೆ ಬಂದ್ರು. ಅವ್ ಬಂದ್ ತಗಂಡ್ ವೋಗಿದ್ರಲ್ ಏನೂ ಇಸೇಸ ಇರ್ಲಿಲ್ಲ. ಆದ್ರೆ ಅವ್ರು ನೈಟೀ ಹಾಕಂಡ್ ಬಂದಿದ್ರು ಅನ್ನದೇ ಇಸ್ಯಾ.
ನಾನೂ ನಮ್ ಐಕ್ಲೆಲ್ಲಾ ಬೇರೆ ವಿಸ್ಯ ಬಿಟ್ ನೈಟಿ ವಿಸ್ಯಾ ಮಾತಾಡಕ್ ಶುರು ಹಂಚ್ಕಂಡ್ವಿ. 'ಈ ನನ್ಮಗಂದ್ ನೈಟಿ ಎಲ್ಲಿಂದ ಬಂತೋ ಗೊತ್ತಿಲ್ಲಾ ಕಣ್ಲಾ, ಎಲ್ಲಾ ಹೆಣ್ಮಕ್ಳೂ ಹಾಕಂಡ್ ರಸ್ತೇಲಿ ಓಡಾಡಕ್ ಶುರು ಮಾಡ್ಬಿಟ್ಟವೆ' ಅಂತ ಮಾತಿಗೆ ಶುರು ಹಚ್ದೆ. 'ಹೌದ್ ಕಣ್ಲಾ ಮಗಾ, ರಾತ್ರೆ ಒತ್ನಲ್ಲಿ ಮನೇಲಿ ಮಲಿಕಳವಾಗ್ ಹಾಕಳೋ ನೈಟಿನ ಬೆಳಗ್ಗವೊತ್ತು ರಸ್ತೇನಾಗ್ ಹಾಕಂಡ್ ಓಡಾಡದ್ ನೋಡಕ್ಕಾಗಕಿಲ್ಲ' ಅಂತ ಮಾತಿಗ್ ಮಾತ್ ಜೋಡ್ಸುದ್ರು ನಮ್ ಐಕ್ಲು.
ನೈಂಟಿ ಅಂದ್ರೆ ಗಂಡ್ಮಕ್ಳಿಗೆ ಯಂಗ್ ಶ್ಯಾನೆ ಇಷ್ಟಾನೋ ಹಂಗೆ ಹೆಣ್ಮಕ್ಳಿಗೆ ನೈಟಿ ಅಂತಂದ್ರೆ ಬಲೇ ಇಷ್ಟ. ಯಾಕಂದ್ರೆ ಅದನ್ನ ಹೊಲಿಯೋಕೆ ಬಲೇ ಈಜಿ. ಅಳತೆ ಇಲ್ಲಾ ಅಂದ್ರೂ ಪರ್ವಾಗಿಲ್ಲಾ. ಸೀರೆ ಉಡದ್ ಕಲ್ಯೋ ಥರ ಕಷ್ಟ ಪಡೋಹಂಗೇ ಇಲ್ಲ. ಭಾಳಾ ಸಲೀಸಾಗಿ ಹಾಕೋಬೋದು (ನೈಟೀನಾ ದೇಹಕ್ಕೆ ಏರಿಸೋದೋ ಅಥ್ವಾ ಇಳಿಸೋದೋ ಇಲ್ಲೀವರ್ಗೆ ಯಾವ್ ಬುದ್ವಂತ್ರುಗೂ ಗೊತ್ತಾಗಿಲ್ಲ). ಚೂಡೀದಾರ, ಮಿಡಿ, ಲಂಗ ದಾವಣಿ, ಇವನ್ನೆಲ್ಲ ಹಿಂದೆ ಹಾಕಿ ಅಷ್ಟೋಂದ್ ಫೇಮಸ್ ಆಗಿರೋದೇ ಇದಕ್ಕೆ ಉದಾಹರಣೆ. ಹಾಯಾಗಿ ಫ್ರೀಯಾಗಿ ಇರುತ್ತೆ ಹೆಣ್ಮಕ್ಳು ಉಪ್ಯೋಗ್ಸೋ ಎಲ್ಲ ಬಟ್ಟೆಗೆ ಕಂಪೇರ್ ಮಾಡುದ್ರೆ ನೈಟಿ ಬೆಲೆ ತುಂಬಾ ಕಡ್ಮೆ ಐತೆ. ಯಾವ್ ವೈಸ್ ಇದ್ರೂ ಪರ್ವಾಗಿಲ್ಲ. ಸಣ್ ಹುಡ್ಗೀರಿಂದ ಹಿಡಿದು ವಯಸ್ಸಾಗಿರೋ ಆಂಟಿಗಳ ವರ್ಗೂ ಯಾರ್ ಬೇಕಾದ್ರೂ ಹಾಕೋಬೋದು. ಯಾರೂ ಅದ್ರು ಬಗ್ಗೆ ತಲೆ ಕೆಡುಸ್ಕಳಕಿಲ್ಲ. ಬ್ರಿಟೀಸೋರು ನಮ್ದೇಶಕ್ ಬಂದಾಗ ಅವ್ ಜೊತೆ ಬಂದಿದ್ ಹೆಣ್ಮಕ್ಳು ಈ ನೈಟಿನ ಹಾಕೋತಿದ್ರಂತೆ. ಕಾಲ ಬದ್ಲಾದಂಗೆ ನಂ ಜನಾನೂ ಬದ್ಲಾದಂಗೆ ಈ ನೈಟಿನ ನಮ್ ಎಲ್ಲ ಹೆಣ್ಮಕ್ಳೂ ಮೆಚ್ಚಿಕೊಂಡು ಹಚ್ಚಿಕೊಂಡು ಈಗ ಬಿಟ್ ಇರೋಕಾಗಲ್ಲ ಅನ್ನೋವಷ್ಟ್ ಅಡಿಟ್ ಆಗ್ಬುಟವ್ರೆ. ಕೆಲ್ವು ಹೆಣ್ಮಕ್ಳು ನೈಟೀಲೂ ಚೆಂದಾ ಕಾಣ್ತಾರೆ, ಕೆಲುವ್ರು ಗೋಣೀಚೀಲ ತಗಲಾಕಿರೋ ಬೆದರು ಗೊಂಬೆ ಥರ ಕಾಣ್ತಾರೆ. ರಾತ್ರೆ ಕತ್ಲಲ್ಲಿ ಹೆಂಡ್ತೀನ ನೈಟಿಲಿ ನೋಡಿ ಹೆದ್ರುಕಂಡಿರೋ ಗಂಡ್ಮಕ್ಳಿಗೂ ಕೊರತೆ ಇಲ್ಲ.
ಆದ್ರೆ ಈ ನೈಟಿನ ಮನೇಲ್ ಮಾತ್ರ ಹಾಕಬೇಕು, ರಸ್ತೇಲಿ ಹಾಕಂಬಾರ್ದು ಅಂತ ಎಷ್ಟೋಂದ್ ಹಿರೀಕ್ರು ಹೇಳ್ತಾರೆ. ಆದ್ರೆ ಈಗಿನ್ ಕಾಲದ್ ಹೆಣ್ಮಕ್ಳು ಕೇಳ್ಬೇಕಲ್ಲಾ ಅಂತಿದ್ದಂಗೆ ನಮ್‌ಹಳ್ಳಿ ಬಿಟ್ಟು ಪ್ಯಾಟೆಗ್ ಹೋಗಿದ್ ಫ್ಲಾಪಿ ಬಾಯ್ ಅಲ್ಲಿಗ್ ಬಂದ. ಸರಿ ಅವ್ನ ಈ ಬಗ್ಗೆ ಕೇಳಿದ್ದಕ್ಕೆ ಅವ್ನ್ ಹೇಳ್ದ, 'ಲೇ ಸುಮ್ಕಿರಲೇ ನಮ್ ಹಳಿನಾಗ್ ಪರ್ವಾಗಿಲ್ಲ. ಸಿಟೀಲಂತೂ ಹೆಣ್ಮಕ್ಳು ಬೇರೆ ಬಟ್ಟೆಗೂ ನೈಟೀಗೂ ವ್ಯತ್ಯಾಸನೇ ಇಲ್ದಂಗೆ ತಿಳ್ಕಂಬಿಟ್ಟವ್ರೆ. ನೈಟೀನ ಮನೆ ಒಳಗೆ ಹಾಕಳ್ರಮ್ಮಿ ಅಂದ್ರೆ ಅದನ್ನೇ ಹಾಕಂಡ್ ಪಾರ್ಕಿಗೆ ವಾಕಿಂಗ್ ಓಯ್ತಾರೆ, ಅಂಗ್ಡಿಗೋಯ್ತಾರೆ, ಸಾಲದ್ದು ಅಂತ ದೇವಸ್ಥಾನಕ್ಕೂ ಬರ್ತಾರೆ. ಅದನ್ನ ನೋಡಕ್ಕಾಗದೆ ಇತ್ತೀಚೆಗೆ ಬೆಂಗ್ಲೂರಿನ್ ಕೆಲ್ವು ದೇವಸ್ಥಾನ್ದಾಗೆ "ಹೆಂಗಸರಿಗೆ ನೈಟಿಯೊಂದಿಗೆ ಒಳಗೆ ಪ್ರವೇಶವಿಲ್ಲ" ಅಂತ ಬೋರ್ಡ್ ಹಾಕ್ಬಿಟವ್ರೆ' ಅಂತ ಕಿಸುಕ್ ಅಂದ. 'ಇಷ್ಟ್ ಸಾಲ್ದು ಅಂತ ಇನ್ನೂ ಕೆಲವ್ರು ರಸ್ತೆಲಿ ನೈಟಿ ಹಾಕಂಬಾರ್ದು ಅಂತ ಗೊತ್ತಿರೋರು ನೈಟಿ ಮೇಲೊಂದು ಟವಲ್ನೋ ಇಲ್ಲಾ ಚೂಡೀದಾರದ ವೇಲ್ನೋ ಹಾಕಂಡ್ ರಸ್ತೆಗ್ ಬರ್ತಾರೆ. ಅವ್ರನ್ನ ಏನ್ ಬದ್ವಂತ್ರು ಅನ್ಬೇಕೋ ಅಥ್ವಾ ದಡ್ರು ಅನ್ಬೇಕೋ ಅಂತ ಗೊತ್ತಾಗ್ತಿಲ್ಲ' ಅಂತ ಮತ್ತೆ ಕಿಸುಕ್ ಅಂದ.
'ಲೋ ಫ್ಲಾಪಿ, ನಮ್ ಊರಿನ್ ಹೆಣ್ಮಕ್ಳೇನು ಕಡ್ಮೆ ಇಲ್ಲ ಕಣ್ಳಾ. ಅವ್ರೂ ನೈಟೀ ಹಾಕಂಡ್ ನೀರಿಗೋಯ್ತಾರೆ, ಅಂಗ್ಡಿಗೋಯ್ತಾರೆ. ಅಷ್ಟೇ ಯಾಕೆ ಗಂಡಾ ಮನೇಗ್ ಬರದ್ ಲೇಟಾದ್ರೆ ಅದೇ ನೈಟೀಲೇ ಸಾರಾಯ್ ಅಂಗ್ಡಿ ಅತ್ರಕ್ ಹೋಗಿ ಗಂಡನ್ ಜುಟ್ ಹಿಡ್ದು ಎಳ್ಕಂಡ್ ಓಯ್ತಾರೆ. ನಮ್ಮೂರೂ ಮುಂದುವರಿದೈತೆ ಕಣ್ಳಾ' ಅಂತ ಅಂದೆ. 'ಅಷ್ಟೇ ಯಾಕ್ಲಾ? ಇನ್ನೂ ಇಸ್ಯಾ ಐತೇ ಹೇಳ್ತೀನಿ ತಡಿ' ಅಂತ ಫ್ಲಾಪಿ ಬೀಡಿ ಹಚ್ಕಂಡ್ ಬರಕ್ ಹೋದ, ಇನ್ನು ಇವ್ ಹತ್ರ ತಗ್ಕಾಕಂಡ್ರೆ ಮಾತ್ ಕೊಡಕ್ಕಾಗಕ್ಕಿಲ್ಲ. ಮಾತಾಡ್ತಾ ಕುಂತ್ಕಂಡ್ ಲೇಟ್ ಆದ್ರೆ ಮನೇಲ್ ನನ್ ಎಂಡ್ರು ಅದೇ ಅದೇ ನೈಟಿ ಹಾಕಂಡ್ ತಲೇಮೇಲ್ ಕುಟ್ಟಕ್ ಲಟ್ಟಣಿಗೆ ಹಿಡ್ಕಂಡ್ ಕಾಯ್ತಿರ್ತಾಳೆ. ಇವ್ನ್ ಹತ್ರ ಮಳೆ ಹೊಡುಸ್ಕಳಕ್ಕಿಂತ ಮನೇಲ್ ಹೆಂಡ್ರ್ ಹತ್ರ ಬೈಸ್ಕಳದೇ ಪರ್ವಾಗಿಲ್ಲ ಅಂತ ಮನ್ಸಲ್ ಅನ್ಕಂಡ್ ಅಲ್ಲಿಂದ ಕಾಲ್ಕಿತ್ತಿದೆ... 'ಲೋ ಇರ್ಲಾ ಕ್ರಾಕು. ಎಲ್ಲಿಗ್ಲಾ ಓಯ್ತಿದ್ದೀಯ. ಬಾರ್ಲಾ ಇಲ್ಲಿ' ಅಂದ. 'ಮನೇಲಿ ಹೆಂಡ್ರುಗೆ ಇವತ್ ಹೊಸ ನೈಟಿ ಕೊಡುಸ್ತೀನಿ ಅಂತ ಏಳಿದಿನಿ, ಕೊಡುಸ್ಬುಟ್ ಫ್ರೀ ಮಾಡ್ಕಂಡ್ ಬರ್ತೀನಿ ಮಾತಾಡವ' ಅಂತ ಹೇಳಿ ಅಲ್ಲಿಂದ ಎಸ್ಕೇಪ್ ಆದೆ.

- ವೇಣು ಗೋಪಾಲ್
venugopal.2008@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments