ನನ್ನ ಕ್ಲಾಸ್ಮೇಟೊಬ್ಬ ಇದ್ದ. ಪರೀಕ್ಷೆ ಹಾಲಿನಲ್ಲಿ ಆತನನ್ನು ನೋಡುವುದು ತುಂಬಾ ಕುತೂಹಲಕರ.
ಪರೀಕ್ಷೆಗೆ ಬರುವಾಗ ಆತ ಊರಿನಲ್ಲಿದ್ದ ದೇವಸ್ಥಾನಗಳಿಗೆಲ್ಲಾ ಹೋಗಿ ಬರುತ್ತಿದ್ದದ್ದರಿಂದ ಹಣೆಯಲ್ಲಿ ಬ್ರಹ್ಮಲಿಖಿತಕ್ಕೂ ಜಾಗವಿಲ್ಲದಂತೆ ಕುಂಕುಮ ಗಂಧ ಚಂದನ ವಿಭೂತಿ ಬೊಟ್ಟು ಇತ್ಯಾದಿ. ಬಂದು ಕುರ್ಚಿ ಮತ್ತು ಟೇಬಲ್ ಒರೆಸಿ, ಅದಕ್ಕೆರಡು ಪ್ರದಕ್ಷಿಣೆ ಬಂದು, ಅಲ್ಲಿ ಏನಾದರೂ ಕಸ ಇದ್ದರೆ ತೆಗೆದು, ಕುರ್ಚಿಯಲ್ಲಿ ಮೇಜಿನಲ್ಲಿ ಏನಾದರೂ ಬರೆದಿದೆಯಾ ನೋಡಿಕೊಂಡು, ಇದ್ದರೆ ಉಜ್ಜಿ ತೆಗೆದು ಕ್ಲೀನ್ ಮಾಡಿ, ಪೆನ್ನು ಪೆನ್ಸಿಲು ರಬ್ಬರು ಕಂಪಾಸು ಸ್ಕೇಲು ಇತ್ಯಾದಿ ಡೆಸ್ಕಿನೊಳಗಿಟ್ಟು, ಡೆಸ್ಕಿನಿಂದ ತೆಗೆದು ಮೇಲಿಟ್ಟು, ಮತ್ತೆ ಡೆಸ್ಕಿನಲ್ಲಿಟ್ಟು, ಒಂದೊಂದೇ ಪೆನ್ನು ತೆಗೆದು ರಿಫಿಲ್ ಇದೆಯಾ, ಇಂಕುಪೆನ್ನಿನಲ್ಲಿ ಇಂಕಿದೆಯಾ ನೋಡಿ, ಒಂದೆರಡು ಸಲ ಕೊಡವಿ, ಚೆನ್ನಾಗಿ ಬರೆಯುತ್ತದಾ ಅಂತ ನೋಡಲು ಗೀಚಿ, ತೃಪ್ತಿಯ ನಗು ಸೂಸಿ, ಪೆನ್ಸಿಲ್ ತೆಗೆದು ಮೊನೆ ಸರಿಯಿದೆಯಾ ಚೂಪಾಗಿದೆಯಾ ಮೊಂಡಾಗಿದೆಯಾ ನೋಡಿ, ಒಮ್ಮೆ ಕೈಗೆ ಚುಚ್ಚಿಕೊಂಡು ಆಹಾ ಅಂದು, ಅಂಗಿ ಪ್ಯಾಂಟುಗಳ ಸಕಲ ಜೇಬುಗಳನ್ನೂ ತಡವಿ ಮೇಲೆಕೆಳಗೆ ಮಾಡಿ, ಪರ್ಸು ತೆಗೆದು ಡೆಸ್ಕಿನೊಳಗಿಟ್ಟು ಅಸಮಾಧಾನಗೊಂಡು ಮತ್ತೆ ಜೇಬಿಗಿಳಿಸಿ, ಮತ್ತೆ ತೆಗೆದು ಅದರಲ್ಲೇನಾದರೂ ಚೀಟಿ ಇದೆಯಾ ನೋಡಿ, ಪ್ಯಾಂಟ್ ಜೇಬಿನಿಂದ ಕಾಗದದ ಕಟ್ಟು ತೆಗೆದು ಅದರಿಂದ ಒಂದು ಗಂಧಪ್ರಸಾದದ ಮುದ್ದೆ ತೆಗೆದು ಡೆಸ್ಕಿನ ಮುಂಭಾಗಕ್ಕೆ ಮೆತ್ತಿ, ನರಮನುಷ್ಯರಾರಿಗೂ ಅರ್ಥವಾಗದ ಭಾಷೆಯಲ್ಲಿ ಶೋಕಪೂರ್ವಕವಾದ ಶ್ಲೋಕ ಗೊಣಗಿಕೊಳ್ಳುತ್ತ, ಓದಿದ್ದೆಲ್ಲ ಎಲ್ಲಿ ಮರೆತುಹೋಗುವುದೋ ಅಂತ ತಲೆಯೆತ್ತದೆ ಮೆಲ್ಲಗೆ ಕುರ್ಚಿಯ ಮೇಲೆ ಕುಂಡೆಯೂರಿ, ಕೃತಾರ್ಥ ಭಾವದಿಂದ ಸುತ್ತಲೂ ಅವಲೋಕಿಸಿ...
ಆತ 35ಕ್ಕಿಂತ ಹೆಚ್ಚು ಮಾರ್ಕು ತೆಗೆದದ್ದು ನನ್ನ ಜೀವಮಾನದಲ್ಲಿ ನೋಡಲಿಲ್ಲ.
-ವಿನಯಶೀಲ ರಾವ್