ನೀರಿನ ಒತ್ತಡ ಹೆಚ್ಚಿರಬೇಕು
ಹೆಸರು, ಊರಿಲ್ಲ
ರಾಜೀವ್ಗಾಂಧಿ ಕುಡಿಯುವ ನೀರಿನ ಯೋಜನೆಯಂತೆ ಹಣಕಟ್ಟಿ ನಲ್ಲಿನೀರು ಪಡೆಯುತ್ತಿದ್ದೇನೆ. ಆದರೆ ನೀರನ್ನು ಸರಿಯಾಗಿ ಕೊಡುತ್ತಿಲ್ಲ. ಪೈಪಿಗೆ ಎರಡು ಕಡೆ ಬೋರ್ ಮಾಡಲು ಅವಕಾಶವಿಲ್ಲ ಎಂದು ಹೇಳುತ್ತಿದ್ದಾರೆ. ಸರಿಯೇ?
- ಸರಿಯಾಗಿದೆ. ಏಕೆಂದರೆ ನಿಮ್ಮ ಹಾಗೆಯೇ ಇತರರಿಗೂ ತೊಂದರೆಯಾಗುತ್ತದೆ. ಪರಿಹಾರವೆಂದರೆ ಸಂಬಂಧಿಸಿದ ಅಧಿಕಾರಿ ಹೆಚ್ಚು ಒತ್ತಡದಿಂದ ನೀರು ಬಿಡಬೇಕು.
ತನಿಖೆಗೆ ಅರ್ಜಿ ಹಾಕಿ
ಕೃಷ್ಣಕುಮಾರ್, ಊರಿಲ್ಲ
ನಾನು ಬಾಡಿಗೆಗೆ ಇರುವ ಮನೆಯ ಮಾಲೀಕರು ಸೊಸೆ ಹಾಗೂ ಮೊಮ್ಮಗನ ಕಾಟ ತಡೆಯಲಾರದೆ ಮಗಳ ಮನೆಗೆ ಹೋದಾಗ ಅವರು ಮನೆಯ ಬೀಗ ಒಡೆದು ಅವರ ಸಾಮಾನು ಹೊರಗೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದಾಗ ಅವರು, ಇದು ಸಿವಿಲ್ ವ್ಯಾಜ್ಯವೆಂದು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ, ಸರಿಯೇ?
- ಪೊಲೀಸರ ಕ್ರಮ ಬೇಜವಾಬ್ದಾರಿತನದ್ದು. ಸಂಬಂಧಿಸಿದವರು ಕ್ರಿಮಿನಲ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ತನಿಖೆಗೆ ಪ್ರಾರ್ಥಿಸಿ. ಜತೆಗೆ ಪೊಲೀಸರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿ.
ಈಗ ಪರಭಾರೆಗೆ ಅವಕಾಶವಿದೆ
ಎನ್.ಎಲ್.ಶಾಸ್ತ್ರಿ, ತುಮಕೂರು
ಅಣ್ಣ ತಮ್ಮಂದಿರು ಶಾನುಭೋಗಿಕೆ ಇನಾಂ ಜಮೀನಿನ ಹಕ್ಕು ಕುರಿತು ಜಗಳವಾಡಿದಾಗ ಅಂದಿನ ಉಪವಿಭಾಗಾಧಿಕಾರಿಗಳು ಇಬ್ಬರಿಗೂ ಸಮನಾಗಿ ಮರು ಮಂಜೂರು ಮಾಡಿದರು. ಆದರೆ ತಮ್ಮ ತನಗೇ ಎಲ್ಲಾ ಜಮೀನು ಬರಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿ ಕೊನೆಗೆ ಅದು ತಹಸೀಲ್ದಾರ ನ್ಯಾಯಾಲಯಕ್ಕೆ ವರ್ಗವಾಗಿ ಬಂದು, ಅಲ್ಲಿನ ವಿಚಾರಣೆಯ ಫಲಿತಾಂಶ ತಿಳಿದಿಲ್ಲ. ಈಗ ಪಹಣಿಯಲ್ಲಿ ಅಣ್ಣನ ಮಕ್ಕಳು ಹಾಗೂ ತಮ್ಮನ ಮಕ್ಕಳೆಲ್ಲರೂ ಖಾತಾದಾರರೆಂದೂ, ಕೆಲವು ರೈತರು ಗೇಣಿದಾರರೆಂದೂ ನಮೂದಿಸಿದೆ. ಈಗ ಈ ಜಮೀನಿನ ವಿಭಾಗ ಹಾಗೂ ಕ್ರಯಕ್ಕೆ ಅವಕಾಶವಿದೆಯೇ? ಹಿಂದಿನ ಆದೇಶದಲ್ಲಿ ಉಪವಿಭಾಗಾಧಿಕಾರಿಗಳು ಸರ್ಕಾರದ ಪೂರ್ವಾನುಮತಿಯಿಲ್ಲದೆ ಜಮೀನು ಪರಭಾರೆಗೆ ಅವಕಾಶವಿಲ್ಲ ಎಂದು ಬರೆದಿದ್ದಾರೆ.
- ಕರ್ನಾಟಕ ಗ್ರಾಮ ಹುದ್ದೆಗಳ ಪದ್ಧತಿ ಕಾಯ್ದೆ, 1961ರ ಕಲಂ 5(3)ರಂತೆ ಮಂಜೂರಾತಿ ದಿನದಿಂದ 15 ವರ್ಷಗಳವರೆಗೆ ಜಮೀನು ಪರಭಾರೆ ಮಾಡುವಂತಿಲ್ಲ. ಆದ್ದರಿಂದ ಈಗ ಈ ಜಮೀನಿನ ಪರಭಾರೆಗೆ ಅವಕಾಶವಿದೆ.
- ಎಚ್.ಆರ್. ಕಸ್ತೂರಿರಂಗನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.