ಮಾತೊಂದು ಬಳಿ ಬಂದು ತಾಕಿತು ಎನ್ನೆದೆಯಾ...
ಅಮ್ಮಾ ಎಂಬ ದನಿಗೆ ತಿರುಗಿ ನೋಡಿದಳು ಕಮಲ. ರಾಹುಲ್ ತಾಯಿಯ ಸೆರಗು ಹಿಡಿದು ಜಗ್ಗುತ್ತಿದ್ದಾನೆ. ನಾಲ್ಕು ವರುಷದ ಮಗನ...
ಅಮ್ಮಾ ಎಂಬ ದನಿಗೆ ತಿರುಗಿ ನೋಡಿದಳು ಕಮಲ. ರಾಹುಲ್ ತಾಯಿಯ ಸೆರಗು ಹಿಡಿದು ಜಗ್ಗುತ್ತಿದ್ದಾನೆ. ನಾಲ್ಕು ವರುಷದ ಮಗನ ಬಾಯಿಂದ ಬಂದ ಮೊದಲ ಮಾತಿದು. ನಂಬಲೇ ಆಗುತ್ತಿಲ್ಲ. ತಕ್ಷಣ ಅವನನ್ನೆತ್ತಿಕೊಂಡು 'ಏನಂದೆ ನೀನು?' ಎಂದು ಮತ್ತೆ ಮತ್ತೆ ಕೇಳಿದಳು.
ಅವನು ನಗು ಸೂಸುತ್ತ 'ಅಮ್ಮಾ ಅಮ್ಮ' ಎಂದು ಮತ್ತೆ ಗಿಳಿಯಂತೆ ಗುನುಗಿದ. ಆಗವಳಿಗೆ ಮೈಯೆಲ್ಲ ಪುಳಕ. ರೋಮಾಂಚನ. ಸ್ವರ್ಗ ಮೂರೇ ಗೇಣು. ಹಿರಿಹಿರಿ ಹಿಗ್ಗಿ ಮುತ್ತಿನ ಮಳೆಗರೆದಳು. ತನ್ನ ತಾ ಮರೆತಳು. ಒಂದೇ ಕ್ಷಣ ಸಾವರಿಸಿಕೊಂಡು 'ಅತ್ತೆ ಮಾವ ಬನ್ನಿ ಇಲ್ಲಿ. ಏನೂಂದ್ರೆ ಬೇಗ ಬನ್ನಿ' ಎಂದು ಮರುಧ್ವನಿಯಲ್ಲಿ ಕೂಗುಹಾಕಿದಳು. ಆ ಕೂಗಿಗೆ ದೇವರಕೋಣೆಯಲ್ಲಿದ್ದ ಅತ್ತೆ ಭಾಮಾಮಣಿ, ವರಾಂಡದಲ್ಲಿ ಪೇಪರ್ ಓದುತ್ತಾ ಕುಳಿತ ಮಾವ ಜಯಚಂದ್ರ ಹಾಗೂ ರೂಮಿನಲ್ಲಿ ಕಂಪ್ಯೂಟರ್ ಎದುರು ಕುಳಿತು ಯಾವುದೋ ಫೈಲ್ ನೋಡುತ್ತಿದ್ದ ಪತಿ ಪ್ರಭಾಕರ ಧಾವಿಸಿಬಂದರು. ಕಾರಣ ತಿಳಿದು ಹರ್ಷಿಸಿದರು. ಮನೆಯಲ್ಲಿ ಸಂತಸದ ಅಲೆ ಹರಡಿತು.
ಪ್ರಭಾಕರ ಮಗನ ಬಳಿ ಸಾರಿ 'ಅಪ್ಪ ಎನ್ನು ಮರಿ' ಎಂದ.
ರಾಹುಲ್ 'ಅಪ್ಪಾ, ಅಪ್ಪ' ಎನ್ನಲು ಪ್ರಭಾಕರ ಹಿಗ್ಗಿ ಹೀರೇಕಾಯಿ ಆದ. ಅಜ್ಜಿ- ತಾತನಿಗೆ ಬದುಕಿನಲ್ಲೇ ಸ್ವರ್ಗ ಸಿಕ್ಕಂತಾಯಿತು.
ಕಮಲ- ಪ್ರಭಾಕರರ ಮದುವೆಯಾಗಿ ಹತ್ತು ವರುಷಗಳಾದರೂ ಕಮಲಾಳ ಒಡಲು ತುಂಬಲಿಲ್ಲ. ಮೊಮ್ಮಕ್ಕಳನ್ನು ಕಾಣಲು ಹಂಬಲಿಸಿದ ಅತ್ತೆ, ಸೊಸೆಯ ಕೈಯ್ಯಿಂದ ಮಾಡಿಸದ ವ್ರತವೇ ಇಲ್ಲ. ತಿರುಗದ ಆಸ್ಪತ್ರೆ ಇಲ್ಲ. ಅದಾವ ದೇವರ ಕೃಪೆಯೋ? ಕೊನೆಗೆ ರಾಹುಲ್, ಕಮಲಳ ಮಡಿಲು ತುಂಬಿದ. ಆ ಮನೆ ನಂದಗೋಕುಲವಾಯಿತು. ಆದರೆ, ಆ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಕಾರಣ ಮಗು ಬೆಳೆಯುತ್ತ ಹೋದರೂ ಮಾತೇ ಬರಲಿಲ್ಲ. ಮತ್ತೆ ವೈದ್ಯರಲ್ಲಿಗೆ ಅಲೆದಾಟ. ಊಹ್ಞೂಂ, ಪ್ರಯೋಜನವಾಗಲಿಲ್ಲ. ಆದರೆ, ಪವಾಡವೆಂಬಂತೆ ರಾಹುಲ್ ಇಂದು ಮಾತನಾಡುತ್ತಿದ್ದಾನೆ. ಭಾಮಾಮಣಿ 'ದೇವರು ದೊಡ್ಡವ' ಎಂಬಂತೆ, ರಾಹುಲ್- ಜಯಚಂದ್ರ 'ಗಾಡ್ ಈಸ್ ಗ್ರೇಟ್' ಎನ್ನುತ್ತಾರೆ. ಪ್ರಭಾಕರನಿಗೆ ಆಶ್ಚರ್ಯದಿಂದ ಮಾತೇ ಹೊರಡುತ್ತಿಲ್ಲ. ಆದರೆ, ಈ ಸಂಗತಿ ಕಮಲಳ ಪಾಲಿಗಂತೂ ನಿಜಕ್ಕೂ ಮೊದಲ ಖುಷಿ. ಅವಳ ಮುಖ ಅರಳಿದ ತಾವರೆಯಾಗಿದೆ.
-ವಿಜಯ ನಾಗೇಶ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.