ಅಮ್ಮ, ಭಾರತಮಾತೆ,
ಇಂದು ನಿನ್ನ ಈ ದುಃಸ್ಥಿತಿ ಕಂಡು,
ಕೈಕಟ್ಟಿಕೊಂಡು,
ಸುಮ್ಮನೆ ಕೂರಲಾದೀತೆ?
ಎಲ್ಲೆಡೆ ಭ್ರಷ್ಟಾಚಾರ!
ಅತ್ಯಾಚಾರ!
ಅನಾಚಾರ!
ಇಡೀ ದೇಶ ಜಾಲಾಡಿದರೂ
ಒಬ್ಬಿಬ್ಬರಾದರೂ ಧರ್ಮನಿಷ್ಠರು
ಕಣ್ಣಿಗೆ ಬಿದ್ದಾರಾ?
ಎಂಥ ಅಧಃಪತನ!
ಈ ಸಂಪತ್ತಿಗೇನಾ ಹುತಾತ್ಮರಾದದ್ದು
ಅಯ್ಯೋ ನೇತಾಜಿ,
ತಾತಾಜಿ,
ಮಾತಾಜಿ?
ಇಲ್ಲ, ಇಲ್ಲ, ಇನ್ನು ದಿಮ್ಮಿಯ ಹಾಗೆ
ಸುಮ್ಮನಿರಲಾರೆ ನಾನು
ಕೈಗೆತ್ತಿಕೊಳ್ಳುತ್ತೇನೆ ಕಾನೂನು
ಈ ಕೂಡಲೇ ಶುರುಮಾಡುತ್ತೇನೆ
ರಕ್ತಕ್ರಾಂತಿ!
ಧರ್ಮಯುದ್ಧ!
ಸುಟ್ಟುಬಿಡುತ್ತೇನೆ ಒಬ್ಬೊಬ್ಬರನ್ನಾಗಿ
ಸಕಲ ದುಷ್ಟರನ್ನು,
ಭ್ರಷ್ಟರನ್ನು,
ಅನಿಷ್ಟರನ್ನು
ಹೇ ಮಾತೇ ಭಾರತಿ,
ತಗೋ ಮೊದಲ ಆಹುತಿ!
ಎಂದವನೇ
ಆ ಭಾರತಮಾತೆಯ ಕೃದ್ಧ ಕಂದ
ಬಂದೂಕು ಕೈಗೆತ್ತಿಕೊಂಡ,
ಗುರಿಯಿಟ್ಟ,
ಕುದುರೆ ಮೀಟಿದ,
ಗುಂಡು ಹಾರಿಸಿಯೇ ಬಿಟ್ಟ, ಢಂ!
ಅಗೋ
ನೆಗೆದು ಬಿದ್ದ.
- ಬಿ.ಆರ್. ಲಕ್ಷ್ಮಣರಾವ್
lakshmanaraobr@gmail.com