ಪ್ರಪೋಸ್ ಮಾಡಿದಾಗ ತಿರಸ್ಕರಿಸಿದ್ದೆ. ಮತ್ತೆ ಮತ್ತೆ ಪೀಡಿಸಬಹುದು, ಕಾಡಿಸಿ ಕೊನೆಗೆ ಒಪ್ಪಿದರಾಯಿತು ಎಂಬ ಆಲೋಚನೆ ಇತ್ತು. ಆತನೀಗ ನನ್ನನ್ನು ನೋಡುವುದೇ ಇಲ್ಲ ನಾನೇನು ಮಾಡಲಿ?
- ಮಾನಸ ಪೂಜಾರಿ, ಮಂಗಳೂರು
ರೈಲು ಹೋದ ಮೇಲೆ ಕಾದೇನು ಪ್ರಯೋಜನ? ಆತ ಇನ್ನಾರಿಗೋ ಬಕೆಟ್ ಹಿಡಿಯುತ್ತಿರಬೇಕು. ನಿನ್ನ ಚಂಚಲ ಮನಸ್ಸನ್ನು ನಿಯಂತ್ರಿಸಿಕೋ. ತಿರಸ್ಕರಿಸಿ ಒಳ್ಳೆಯ ಕೆಲಸವನ್ನೇ ಮಾಡಿರುವೆ. ಚಿಂತೆ ಬೇಡ. ಓದಿನೆಡೆಗೆ ಗಮನವಿರಲಿ.
ಪತ್ರಿಕೆ ಪಾಠ ಹೇಳುತ್ತದೆ...
ಮಗ ವಿಪರೀತ ಪತ್ರಿಕೆ ಓದುತ್ತಾನೆ. ಪಾಠ ಪುಸ್ತಕ ಕಡೆಗಣಿಸುತ್ತಾನೆ ಎಂಬುದೇ ಚಿಂತೆ. ಪತ್ರಿಕೆ ತರಿಸುವುದನ್ನೇ ನಿಲ್ಲಿಸಬೇಕೆಂದಿರುವೆ. ಏನು ಮಾಡಲಿ?
- ಶಾಂತಿ ಭಟ್, ಬನವಾಸಿ
ಅಂಥ ತಪ್ಪು ಮಾಡಬೇಡಿ. ನಿಮ್ಮ ಮಗನ ಆಸಕ್ತಿಯನ್ನು ಪ್ರೋತ್ಸಾಹಿಸಿ. ಇಂದಿನ ಮಕ್ಕಳು ಕಂಪ್ಯೂಟರ್ ಗೇಮ್ಸ್, ಕಾರ್ಟೂನ್ ಅಂತ ಸಮಯ ಹಾಳು ಮಾಡುತ್ತಿರುತ್ತಾರೆ. ಪತ್ರಿಕೆಯು ಮಾಹಿತಿಯೊಂದಿಗೆ ಬದುಕುವ ರೀತಿಯನ್ನೂ ಹೇಳಿಕೊಡುತ್ತದೆ. ಆತ ಎಂದೂ ಸೋಲುವುದಿಲ್ಲ. ಪಾಠ ಪುಸ್ತಕ ಅಂಕ ಗಳಿಸಲಷ್ಟೇ ಸೀಮಿತ ಎಂಬುದು ನೆನಪಿನಲ್ಲಿರಲಿ.
ಪ್ರೇತಾತ್ಮದ್ದೇ ಭಯ
ನಾನಿರುವ ಬಾಡಿಗೆ ಮನೆಯಲ್ಲಿ ಒಂದು ಹೆಣ್ಣಿನ ಅತೃಪ್ತ ಆತ್ಮವಿದೆಯಂತೆ. ಒಬ್ಬಂಟಿ ಯುವಕರನ್ನು ಮೋಹಿಸುತ್ತದೆ ಎಂದೆಲ್ಲ ಸುತ್ತಲಿನವರು ಹೇಳುತ್ತಿದ್ದಾರೆ. ಭಯವಾಗುತ್ತಿದೆ. ದಾರಿಯೇನು?
- ಗಣೇಶ್ ಕೆ. ಸಿದ್ದಾಪುರ
ಸುಖಾಸುಮ್ಮನೆ ಅಪಾಯಕಾರಿ ಸನ್ನಿವೇಶ ತಂದುಕೊಳ್ಳಬೇಡ. ರಾತ್ರಿ ವೇಳೆ ಒಬ್ಬಂಟಿಯಾಗಿರಬೇಡ. ಅದರ ಬಗ್ಗೆ ಚಿಂತಿಸುತ್ತ ಎಲ್ಲರ ಬಳಿ ಹೇಳುತ್ತಾ ಹೋದರೆ ಇನ್ನಷ್ಟು ಭಯಾನಕ ಉಹಾಪೋಹ ಹೇಳಿ ಹೆದರಿಸುತ್ತಾರೆ. ಪ್ರೇತಾತ್ಮ ಎಂಬುದು ಭ್ರಮೆ ಎಂದು ಬಲವಾಗಿ ನಂಬು.
- ಡಾ. ನರೇಂದ್ರ ಗಾಂಧಿ