ಕನ್ನಡ ವಿಚಿತ್ರ ಕಥೆ
ತಿಮ್ಮಾ: ಯಾಕ ತಮ್ಮಾ ಮಾರಿ ಹರಳೆಣ್ಣೆ ಕುಡದ್ಯಂಗ ಕಾಣತೈತೆಲಾ?
ತಮ್ಮಾ: (ಮಾತನಾಡದೆ, ತಲೆ ಹಾಕುವನು)
ತಿಮ್ಮಾ: ಯಾಕಲೇ ತಮ್ಮಾ, ನಿನ್ನ ಜೋಡಿಯಿದ್ದವರ ಮಾರೀನೂ ಒಂಥರಾ ಅಗೇತಲಾಡ... ಯಾಕ?
ತಮ್ಮಾ: ಸಿನೆಮಾ ನೋಡಿ ಬಂದ್ವಿ...
ತಿಮ್ಮಾ: ಯಾವುದು?
ತಮ್ಮಾ: ಅದ್ಯಾವುದೋ ವಿಚಿತ್ರ ಹೆಸರಿನ ಸಿನೆಮಾ, ನಿನ್ನಿಲ್ಲಾ ಮೊನ್ನೆ ರಿಲೀಸ್ ಆಗೆತಲಾ ಅದಡಡ... ಇಲ್ಲೇ ಪೋಸ್ಟರ್ ಹಾಕ್ಯಾರ ನೋಡ.
ತಿಮ್ಮಾ: ಇದೇನ ಪೋಸ್ಟರ್ಲೇ? 120ನೇ ಇಂಟರ್ವೆಲ್ ಕಂಡಿರುವ ಅದ್ಧೂರಿ ಚಿತ್ರ ಅಂತ ಬರದಾರ...??
ತಮ್ಮಾ: ಹೌದು, ದಿನಕ್ಕ ನಾಲ್ಕ ಪ್ರದರ್ಶನದ ಹಂಗ, ಹತ್ತ ಥೆಟರ್ನ್ಯಾಗ ರಿಲೀಸ್ ಆಗೇತಿ, 3 ದಿನದಾಗ 120 ಇಂಟರ್ವೆಲ್ ಆದ್ವಲಾಡಡ...
ತಿಮ್ಮಾ: ಹಿಂದಡ 100 ಡೇಸ್, ಸಿಲ್ವರ್ ಜುಬಿಲಿ, ಅಂತೆಲ್ಲ ಸಿನೆಮಾ ಓಡತಿದ್ವು, ಅದನ್ನ ಪೋಸ್ಟರ್ನ್ಯಾಗ ಬರೀತಿದ್ರು, ಓಕೆ, ಆದರೆ ಈಗ ಇದು 100 ಇಂಟರ್ವೆಲ್ ಸಿನಿಮಾ ಅಂತ ಬರದಾರಲಪಾಡಡ...
ತಮ್ಮಾ: ಅದಕ್ಕ ನಮ್ಮ ಮಾರಿ ಹಂಗ ಆಗೇತಿ... ಈಗ ಏನ್ ಕೆಲಸ ಮಾಡಾಕ್ಕೂ ಮೂಡ್ ಇಲ್ಲ... ಆ ಹೀರೋ ಯಾಕ್ ಫೈಟ್ ಮಾಡಿದ ತಿಳಿಲಿಲ್ಲ, ಹಾಡ ಅಂತೂ ಹೊಯ್ಯೋಕೊಳ್ಳೊ ಹಂಗ ಅದಾವಪಾ...
ತಿಮ್ಮಾ: ಮುಂಜಾನೆ 6ಕ್ಕ ಆ ಹಾಡನ್ನ ಎಫ್.ಎಂ.ದವರು ಒದರಿಸಿ, ದಿಸ್ ಈಸ್ ನ್ಯೂ ಸುಪ್ರಭಾತ ಆಫ್ ಕರ್ನಾಟಕ ಅಂತಾರಲಾ!
ತಮ್ಮಾ: ಹೌದು, ಲೈಕ್ ಖಾರಾಬಾತ್, ಕೇಸರಿಬಾತ್, ಖಾಸ್ಬಾತ್, ದಿಸ್ ಈಸ್ ಬೆಸ್ಟ್ ಸುಪ್ರಭಾತ ಅಂತ ವರ್ಣಿಸ್ತಾರ ಬಿಡ...
ತಿಮ್ಮಾ: ಈ ಪ್ರಕಾರದ 120 ಸಿನೆಮಾ ವರ್ಷಕ್ಕ ಕೊಟ್ಟರ ಪ್ರೇಕ್ಷಕ ಏನ್ ಮಾಡಬೇಕಪಾ... ಬ್ಯಾರೆ ಭಾಷಾದಾಗ ಛೊಲೋ ಸಿನೆಮಾ ಅದಾವೇನಂತ ತೆಲುಗು, ತಮಿಳು, ಮಲೆಯಾಳಿ, ಮರಾಠಿ, ಹಿಂದಿ ಸಿನೆಮಾ ನೋಡ್ತಾನ...
ತಮ್ಮಾ: ಅದಕ್ಕ ನಮ್ಮ ಕನ್ನಡ ಸಿನೆಮಾದವರು ಆ ಸಿನೆಮಾದ 'ಹುಬಹು' ರಿಮೇಕ್ ಮಾಡ್ತಾರ...
ತಿಮ್ಮಾ: ಅಂದ್ರೇನು ಮಾಡ್ತಾರ?
ತಮ್ಮಾ: ಅಲ್ಲಿಯವರಂಗ ಶಾಟ್ ಇಡ್ತಾರ, ಸೆಟ್ಟಿಂಗ್ ಮಾಡ್ತಾರ, ಮ್ಯೂಜಿಕ್ ಅವರದಡ, ಹೀರೋಯಿನ್ ಎಲ್ಲಿಯವರೋ, ಹೀರೋ ಇಲ್ಲಿಯವರನ್ನೋದು ಬಿಟ್ಟರಡ ಹಾಡುವರು, ಬಾರಿಸುವರು, ಕುಣಿಯುವರು ಎಲ್ಲಾ ರಿಮೇಕ !!
ತಿಮ್ಮಾ: ಈ ಪರಿ ರಿಮೇಕ ಮಾಡಿದರೂ ನಮ್ಮಲ್ಯಾಕ ಆ ಸಿನೆಮಾ ಸಕ್ಸಸ್ ಆಗುದಿಲ್ಲ?
ತಮ್ಮಾ: ಯಾಕೆಂದರ ಎಲ್ಲಾನು ರಿಮೇಕ್ ಮಾಡೋ ಅವಸರದಾಗ 'ಕಥಿ' ಹೇಳೋದರಾಗ ಲದ್ದಿ ಒಗದಿರತಾರ.
ತಿಮ್ಮಾ: ಹೌದಡಡ?
ತಮ್ಮಾ: ಮತ್ತ ಕನ್ನಡ ಪ್ರೇಕ್ಷಕಗಡ ಎಲ್ಲಾನೂ ನಂಬರ್ಒನ್ ಇರಬೇಕಪಾ... ಸಿನೆಮಾ ಟೈಟಲ್ ಛಂದಿರಬೇಕು, ಹಾಡುಗಳು ಮಜಾ ಕೊಡಬೇಕು, ಐಟಂ ಸಾಂಗ್- ಐಟಂ ಎರಡೂ ಇರಬೇಕು. ಕಥಿ ಏವನ್ ಆಗಿರಬೇಕು, ಕ್ಯಾಮೆರಾ ವರ್ಕ್, ಸೆಟ್ಟಿಂಗ್, ಡ್ರೆಸ್, ಲೊಕೇಷನ್ನು ಎಲ್ಲಾನೂ ಮಸ್ತ್ ಇರಬೇಕು...
ತಿಮ್ಮಾ: ಇಷ್ಟೆಲ್ಲ ಬೆಸ್ಟ್ ಇದ್ದರ ಕನ್ನಡಿಗ ಕನ್ನಡ ಸಿನೆಮಾ ನೋಡ್ತಾನೇನು?
ತಮ್ಮಾ: ಇಲ್ಲಾ...!!
ತಿಮ್ಮಾ: ಯಾಕ...??
ತಮ್ಮಾ: ಅಷ್ಟೆಲ್ಲ ಇದ್ದು, ಮ್ಯಾಲೆ ಆ ಸಿನೆಮಾ ರಿಲೀಸ್ ಆದ ಥೇಟರ್ ಅವರ ಮನಿ ಹತ್ರ ಇದ್ದರ... ನೋಡಬಹುದು..!
-ಯಶವಂತ ಸರದೇಶಪಾಂಡೆ
khullamkhullabevubella@gmail.com