ಛೂ...ಮಂತ್ರಿಗಾಳಿ
ಶ್ರೀ ಮಾಲೀಕಯ್ಯ ಗುತ್ತೇದಾರ್ ಅವರಿಗೆ ನಮಸ್ಕಾರಗಳು...
ಸಾರ್ ಹೇಗಿದ್ದೀರಿ? ಸ್ವಲ್ಪ ಅಪ್‌ಸೆಟ್ ಆಗಿರಬೇಕು. ಅದು ಸಹಜವೇ ಬಿಡಿ. ಅದೃಷ್ಟ ನೆಟ್ಟಗೆ ಇದ್ದಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿ ಮಿರಿಮಿರಿ ಮಿಂಚಬೇಕಾಗಿತ್ತು. ಕೆಂಪು ಗೂಟದ ಕಾರಿನಲ್ಲಿ ರೊಯ್ಯೋ ರೊಯ್ಯೋ ಅಂತ ಸುತ್ತಬೇಕಾಗಿತ್ತು.
ಏನು ಮಾಡೋದು ಹೇಳಿ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಅಂತಾರಲ್ಲ, ಆ ರೀತಿ ಆಗಿದೆ ನಿಮ್ಮ ಪರಿಸ್ಥಿತಿ. ಎಲ್ಲದಕ್ಕೂ ನಸೀಬು ಇರಬೇಕು ಸಾರ್. ಇತ್ತೀಚೆಗೆ ಸಿಕ್ಕಾಪಟ್ಟೆ ಮೈ ಪರಚಿಕೊಳ್ತಾ ಇದ್ದೀರಿ ಅನ್ನೋ ಸುದ್ದಿ ಇದೆ. ಚಳಿಗಾಲ, ಹಾಗೇ ಇರುತ್ತೆ ಅಂದ್ಕೊಡಿದ್ದೆ. ಅದಲ್ವಂತೆ, ಪರಚಿಕೊಳ್ತಾ ಇರೋದಿಕ್ಕೆ ಬೇರೇನೇ ಕಾರಣ ಇದೆಯಂತೆ.
ಮಂತ್ರಿಗಳು ಸರಿಯಾಗಿ ಕೆಲಸ ಮಾಡ್ತಾ ಇಲ್ಲ. ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಸಪೋರ್ಟ್ ಸಿಗ್ತಾ ಇಲ್ಲ. ನಾನೇನಾದ್ರೂ ಮಂತ್ರಿ ಆಗಿದ್ರೆ ಅಲ್ಲಿ ಕಿತ್ತು ಇಲ್ಲಿ ಗುಡ್ಡೆ ಹಾಕ್ತಾ ಇದ್ದೆ ಅಂತೆಲ್ಲ ಹೈಕಮಾಂಡ್‌ಗೆ ಪತ್ರ ಬರೆದಿದ್ದೀರಂತೆ. ಇದು ಸ್ವಲ್ಪ ಕಾಮಿಡಿ ಅನಿಸೋದಿಲ್ವಾ?
ಹೌದು. ನಿಮ್ಮನ್ನ ಮಂತ್ರಿ ಮಾಡಿದ್ರು ಅಂತ ಇಟ್ಕೊಳೋಣ. ಏನ್ ಮಾಡ್ತೀರಿ? ಬಿಳಿ ಬಟ್ಟೆ ಹಾಕ್ಕೊಂಡು, ಘಮ್ ಅನ್ನೋ ಸೆಂಟ್ ಸುರ್ಕೊಂಡು ಕಣ್ತುಂಬ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಓಡಾಡ್ತೀರಿ ಅಷ್ಟೇ ತಾನೆ. ಈವಾಗ್ಲೇ ನೀವು ಅಫಜಲಪುರ ಅನ್ನೋ ಕ್ಷೇತ್ರವನ್ನೇ ಬಿಟ್ಟಿದ್ದೀರ. ಇನ್ನು ಮಂತ್ರಿ ಆದ್ರೆ ಆ ಕಡೆ ತಲೆ ಹಾಕಿಯೂ ಮಲಗಲ್ಲ ನೀವು.
ಈವಾಗ ಸ್ವಲ್ಪ ಪ್ಲ್ಯಾಶ್‌ಬ್ಯಾಕಿಗೆ ಹೋಗೋಣ. ನೀವು ಜನತಾ ಪರಿವಾರದವರು. ಜೆ.ಎಚ್. ಪಟೇಲರು ನಿಮ್ಮನ್ನ ಕರೆದು ಮಂತ್ರಿ ಮಾಡಿದ್ರು. ಸಿದ್ದರಾಮಯ್ಯ ಕೂಡ ಅದೇ ರೀತಿ ಮಾಡ್ತಾರೆ ಅಂತ ಕನಸು ಕಾಣ್ತಾ ಇದ್ರಿ ಅನ್ಸುತ್ತೆ. ಅಮೇಲೆ ದಳ ಬಿಟ್ಟು ಕಾಂಗ್ರೆಸ್ ಕಡೆ ಬಂದ್ರಿ. ಫುಲ್ ಸೆಟ್ಲ್ ಕೂಡ ಆಗೋದ್ರಿ. ಬಹಳ ಒಳ್ಳೇದು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಏನು ಮಾಡಿದ್ರಿ ಅಂತ ಸ್ವಲ್ಪ ನೆನಪು ಮಾಡ್ಕೊಳಿ. ನೆನಪು ಬರ್ತಾಯಿಲ್ವ? ನಾನೇ ಹೇಳ್ತೀನಿ ಕೇಳಿ.
ಗುಲ್ಬರ್ಗ ಲೋಕಸಭೆ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಎಲೆಕ್ಷನ್ನಿಗೆ ನಿಂತ್ರು. ಅಫಜಲಪುರಕ್ಕೆ ನೀವೇ ತಾನೆ ಶಾಸಕ. ಆದರೆ, ಅಲ್ಲಿ ಲೀಡ್ ಬಂದಿದ್ದು ಯಾರಿಗೆ ಸ್ವಾಮಿ? ಬಿಜೆಪಿ ಅಭ್ಯರ್ಥಿಗೆ 5 ಸಾವಿರ ವೋಟ್ ಲೀಡ್ ಬಂತು. ಯಾಕ್ರೀ ಹೀಗೆ ಅಂತ ಪಾರ್ಟಿನೋರು ಕೇಳಿದ್ರೆ ಅಯ್ಯೋ ಅದೆಲ್ಲ ನಂಗೊತ್ತಿಲ್ಲ ಅಂತ ಸಲೀಸಾಗಿ ಹೇಳಿದ್ರಿ. ಪಾರ್ಟಿಯೋರು ಸುಮ್ಮನೆ ಆದ್ರು. ಮಲ್ಲಿಕಾರ್ಜುನ ಖರ್ಗೆ ಸುಮ್ಮನೆ ಇರ್ತಾರ?
ರಾಜಕೀಯದಲ್ಲಿ ಅವರು ಏಳು ಕೆರೆ ನೀರು ಕುಡಿದೋರು ಸಾರ್. ಯಾವ ಹುತ್ತದಲ್ಲಿ ಯಾವ ಹಾವು ಇದೆ, ರಾಜಕಾರಣದಲ್ಲಿ ಯಾರ್ಯಾರು ಏನೇನು ಪಟ್ಟುಗಳನ್ನ ಹಾಕ್ತಾರೆ ಅನ್ನೋದನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಅವರು ನೋಡಿಬಿಟ್ಟಿದ್ದಾರೆ.
ಅಫಜಲಪುರದಲ್ಲಿ ಬಿಜೆಪಿಗೆ ಲೀಡ್ ಬಂದಿದ್ದೇ ತಡ. ಖರ್ಗೆ ಫುಲ್ ಡೀಟೇಲ್ಸ್ ತರಿಸಿಕೊಂಡ್ರು. ನೀವು ಆಡಿದ ಆಟವೆಲ್ಲ ಅವರಿಗೆ ಗೊತ್ತಾಗೋಯ್ತು. ಪಾಪ, ಅವರೇನೂ ಮಾಡ್ಲಿಲ್ಲ. ಟೈಮ್ ಬರ್ಲಿ ಅಂತ ಕಾಯ್ತಾ ಇದ್ರು. ವಿಧಾನಸಭೆ ಚುನಾವಣೆ ಬಂತು. ಶರದ್ ಪವಾರ್ ಅವರ ಪಾರ್ಟಿ ಎನ್‌ಸಿಪಿಗೆ ಹೋಗ್ತೀನಿ ಅಂತ ತಕತಕ ಕುಣಿದ್ರಿ. ಪವಾರ್ ಜೊತೆಗೂ ಮಾತಾಡಿದ್ರಿ. ಏನೂ ವರ್ಕ್‌ಔಟ್ ಆಗ್ಲಿಲ್ಲ.
ಕೊನೆಗೆ ಕಾಂಗ್ರೆಸ್‌ನಲ್ಲೇ ಉಳಿದುಕೊಂಡ್ರಿ. ಟಿಕೆಟ್ ಸುಲಭವಾಗಿ ಸಿಕ್ತಾ ನಿಮ್ಗೆ. ನಾಮಪತ್ರ ಹಾಕಲಿಕ್ಕೆ ನಾಳೆ ಕೊನೇ ದಿನ ಆಂದ್ರೂ ಟಿಕೆಟ್ ಸಿಗಲಿಲ್ಲ. ಹೆಂಗೋ ಏನೋ ಮಾಡಿ ಟೆಕೆಟ್ ತಗೊಂಡ್ರಿ. ಚುನಾವಣೆಯಲ್ಲೂ ಗೆದ್ದು ವಿಧಾನಸಭೆಗೆ ಹೋದ್ರಿ.
ಇನ್ನೇನು ಮಂತ್ರಿ ಆಗೇಬಿಟ್ಟೆ ಅಂತ ಕನಸು ಕಾಣ್ತಾಯಿದ್ರಿ ಅಲ್ವ ಗುತ್ತೇದಾರ್ ಅವರೇ. ಆವಾಗ ಕೈ ಇಟ್ರು ನೋಡಿ ಖರ್ಗೆ. ನೀವು ಸೀನಿಯರ್ ಶಾಸಕ. ಆದರೇನಂತೆ ನಿಮಗಿಂತ ಕಿರಿಯರಾದ ಡಾ. ಶರಣಪ್ರಕಾಶ್ ಪಾಟೀಲ್ ಮಂತ್ರಿಯಾಗಿ ಭರ್ಜರಿ ವೈದ್ಯಕೀಯ ಶಿಕ್ಷಣ ಖಾತೆಯನ್ನೂ ತಗೊಂಡ್ರು. ಅದಕ್ಕೆ ಖರ್ಗೆ ಅವರ ಆಶೀರ್ವಾದ ಕಾರಣ ಸ್ವಾಮಿ. ಹೇಗೆ ಕೊಟ್ರು ನೋಡಿದ್ರಾ ಏಟು ನಿಮಗೆ.
ಮಂತ್ರಿ ಆಗ್ಬೇಕು ಅಂತ ಏನೇನೋ ಸರ್ಕಸ್ ಮಾಡ್ತಾ ಇದ್ದೀರಿ. ಪತ್ರ ವ್ಯವಹಾರ ಬೇರೆ ಶುರುಮಾಡಿದ್ದೀರಿ. ನಿಮ್ಗೆ ಮಂತ್ರಿಗಿರಿ ಸಿಗೊತ್ತೋ ಇಲ್ಲವೋ ಯಾರಿಗೆ ಗೊತ್ತು. ಆದರೆ, ಪ್ರಯತ್ನ ಮಾಡ್ತಾನೇ ಇರಿ. ಬಿಡಬೇಡಿ. ಸಿಕ್ತೇನೆ ಸಾರ್, ನಮಸ್ಕಾರ...
- ಕೆ.ವಿ. ಪ್ರಭಾಕರ್
prabhukolar@yahoo.com