ತಲೆಯೆಂಬ ಬೋಳು ಬೆಟ್ಟ
ಎಲ್ಲಿ ನೋಡಿದರಲ್ಲಿ ಅವುಗಳದೇ ರಾಶಿ; ನಡುವಿನಲ್ಲಿ, ಮೂಲೆ ಮೂಲೆಗಳಲ್ಲಿ. ಅನಾಥ ಶವಗಳಂತೆ ಬಿದ್ದಿದ್ದವು. ಅಂತೆ ಏನು, ಅವೆಲ್ಲ ಅನಾಥ ಶವಗಳೇ. ನಾನವುಗಳ ಮಧ್ಯ ಯುದ್ಧ ಮುಗಿದ ಮೇಲೆ ಸೈನಿಕರ ಹೆಣಗಳ ನಡುವೆ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿದ್ದ ನಿಸ್ಸಹಾಯಕ ಅಶೋಕ ಚಕ್ರವರ್ತಿಯಂತೆ ನಿಂತಿದ್ದೆ. ಒಂದಿಷ್ಟು ತಿಂಗಳಿಂದ ಈ ಮಾರಣಹೋಮ ನಡೆಯುತ್ತಲೇ ಇದೆ. ಬೆಳಗ್ಗೆಯಿಂದ ಜೀವ ಕಳೆದುಕೊಂಡಿರುವ ಸಂಖ್ಯೆ ಅದಾಗಲೇ ಐವತ್ತರಿಂದ ನೂರೇನೋ. ಏನು ಮಾಡಿದರೂ ಇದನ್ನು ನಿಲ್ಲಿಸಲಾಗುತ್ತಿಲ್ಲ. ಕನ್ನಡಿಯೆದುರು ನಿಂತೆ. ಇದು ಹೀಗೆ ಮುಂದುವರಿದರೆ ನನ್ನ ಮುಂದಿನ ಗತಿಯೇನು? ಕನ್ನಡಿಯಲ್ಲಿ ನನ್ನ ಭವಿಷ್ಯದ ರೂಪ ನನ್ನನ್ನು ನೋಡಿ ನಗುತಿತ್ತು; 'ನಿನ್ನ ಕಥೆ ಇಷ್ಟೇ, ಇನ್ನೇನು ಮಾಡಿದರೂ ಇದನ್ನು ನಿಲ್ಲಿಸಲಾಗದು. ನನ್ನಂತೆ ನೀನಾಗಲೇಬೇಕು'. ಹೌದೆನ್ನಿಸಿತು ನನಗೆ.
ನಾನೀಗಷ್ಟೇ ಬಾಚಿಕೊಂಡ ಬಾಚಣಿಗೆ ನೋಡಿದೆ. ಒಂದರ್ಧ ನಿಮಿಷ ಬಾಚಿರಬಹುದೇನೋ... ಅದಾಗಲೇ ಹತ್ತಾರು ಕೂದಲುಗಳ ಬಲಿ. ರೂಮನ್ನು ಮತ್ತೆ ನೋಡಿದೆ. ಎಲ್ಲೆಂದರಲ್ಲಿ ಉದುರಿ ಬಿದ್ದಿರುವ ಕೂದಲುಗಳದ್ದೇ ಸಮಾವೇಶ. ಏನು ಮಾಡುವುದು? ತೋಚದೆ ಧೊಪ್ಪೆಂದು ಕುಳಿತೆ. ಕ್ಷಣದ ನಂತರ ಪೊರಕೆ ಹಿಡಿದು ಕೋಣೆ ಗುಡಿಸಿದೆ. ಸುಮಾರು ದಿನಗಳಿಂದ ನನ್ನ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಇದೇ ಕಾರಣವಿರಬಹುದು. ಇಲ್ಲದೆ ಇದ್ದಲ್ಲಿ ಮಂಡಿಪೇಟೆಯಲ್ಲಿ ಮಂಗಳವಾರ ಸಂತೆ ಮುಗಿದ ಮೇಲೆ ಇರುವಷ್ಟು ಗಲೀಜು ನನ್ನ ಕೋಣೆಯಲ್ಲಿರುತಿತ್ತು. ಆದರೆ ಈಗ ಕೆಲವು ದಿನಗಳಿಂದ ನ್ಯೂ ಯಾರ್ಕ್ ಮೇನ್ ರೋಡ್ನಂತೆ ಫಳಫಳ ಹೊಳೆಯುತ್ತಿದೆ. ಗುಡಿಸಿದ ಮೇಲೆ ಕಸವನ್ನು ಒಟ್ಟು ನೋಡಿದರೆ ಅದರಲ್ಲಿ ಬಹುಪಾಲು ಕೂದಲುಗಳೇ.
ಮತ್ತೆ ಕನ್ನಡಿಯೆದುರು ನಿಂತೆ. ಹಣೆಯ ಮೇಲ್ಭಾಗದ ಎಡ, ಬಲ ತುದಿ ಅದಾಗಲೇ ಹುಲ್ಲುಗಳಿಲ್ಲದ ದಾರಿಯಂತಾಗಿತ್ತು. ತಲೆಯ ಮೇಲ್ಭಾಗದಲ್ಲೂ ಮೊದಲಿನಂತೆ ಕೂದಲುಗಳಿಲ್ಲ. ತಲೆಯ ಹಿಂಭಾಗ ಕಾಣಿಸುತ್ತಿಲ್ಲವೆನ್ನುವ ಕಾರಣಕ್ಕೆ ಮೊಬೈಲಿನಿಂದ ಹಿಂಬದಿಯ ಚಿತ್ರ ತೆಗೆದೆ. ಅಲ್ಲೂ 30 ್ಢ 40 ಸೈಟು. ತುಂಬಾ ದಿನದಿಂದ ಸೈಟು ಖರೀದಿಸಬೇಕೆಂಬ ಆಸೆ ಇತ್ತು. ದೇವರು ಆ ಆಸೆಯನ್ನು ಹೀಗೆ ತೀರಿಸುತ್ತಿದ್ದಾನೆ ಅನ್ನಿಸಿತು. ಯಾಕೋ ಬೇಜಾರಾಗಿ ಹೊರನಡೆದೆ.
ಅದೇನೋ ಗೊತ್ತಿಲ್ಲ, ನನಗೆ ಮೊದಲಿನಿಂದಲೂ ಕೂದಲ ಮೇಲೆ ವ್ಯಾಮೋಹ. ಬಾಲ್ಡಿ ತಲೆಗಳನ್ನು ನೋಡಿದರೆ ನಗುತ್ತಿದ್ದೆ. ಕೂದಲಿಲ್ಲದವರು ಹಾಸ್ಯದ ವಸ್ತುವೇ. ಅಮ್ಮ ಈ ಸಂಗತಿಗೇನೋ ಜೋಡಿಸಿದಳು; ಚಿಕ್ಕವರಿದ್ದಾಗ ನನಗ್ಯಾರೋ ಬಾಲ್ಡಿ ಆಂಕಲ್ ತಲೆಮೇಲೆ ಕೈ ಆಡಿಸುತ್ತಾ ಹೇಳುತ್ತಿದ್ದರಂತೆ... 'ಪುಟ್ಟ, ನಿನ್ನ ಕೂದಲು ಕಾಡಿನ ರೀತಿ ಇದೆ. ಮುಂದೆ ನೀನು ನನ್ನ ಹಾಗೆ ಆಗುತ್ತೀಯ' ಅಂತ ಆಶೀರ್ವದಿಸಿದರಂತೆ. ಅಷ್ಟಕ್ಕೇ ನಾನು ಹೆದರಿ ಗೊಳೋ ಎಂದು ಅತ್ತು, ತುಂಬಾ ದಿನ ಅವರನ್ನು ನಾನು ಮಾತನಾಡಿಸಲೇ ಇಲ್ಲವಂತೆ. ಈಗ ಆ ಆಂಕಲ್ ಎಲ್ಲಿದ್ದಾರೆಂದು ಹುಡುಕುತ್ತಿದ್ದೇನೆ!
ಕೂದಲು ಉದುರುವುದಕ್ಕೆ ವಂಶವಾಹಿ ಸಮಸ್ಯೆಗಳೂ ಕಾರಣ ಎಂದು ಎಲ್ಲೋ ಓದಿ ಆತಂಕಗೊಂಡಿದ್ದೆ. ಹಲವು ಅವಿಷ್ಕಾರಗಳಂತೆ ಅದು ಸುಳ್ಳಿರಬಹುದು ಅಥವಾ ಸುಳ್ಳಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ. ಏಕೆಂದರೆ, ಅಪ್ಪನಿಗೆ ಕೂದಲುದುರುವುದು ಅದಾಗಲೇ ಶುರುವಾಗಿತ್ತು. ಕಾಲೇಜಿನಲ್ಲಿ ಅದಾಗಲೇ ಕೂದಲುದುರಿದ್ದ ಗೆಳೆಯನನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದೆವು. ಮೊಟ್ಟೆ, ಕುಂಬಳಕಾಯಿ, ಸೊನ್ನೆ ಹೀಗೆ ಯಾವುದೇ ದುಂಡಗಿನ ವಸ್ತು ಸಿಕ್ಕಿದರೆ ಸಾಕು ಅವನ ಮುಖದ ಪಕ್ಕ ಹೋಲಿಸಿ ನಗುತ್ತಿದ್ದೆವು. ಅವನ ಶಾಪ ಏನಾದರೂ ನನ್ನ ಕೂದಲ ಮೇಲೆ ಪರಿಣಾಮ ಬೀರಿತಾ? ಗೊತ್ತಿಲ್ಲ.
ದಾರಿಯಲ್ಲಿ ಅನೇಕ ಆಲೋಚನೆಗಳು ಕಾಡತೊಡಗಿದವು. ಅಯ್ಯೋ, 'ಯೋಚನೆ ಮಾಡಿದರೆ ಕೂದಲುಗಳು ಉದುರುತ್ತವೆ' ಅಂತ ಎಲ್ಲೋ ಓದಿದ ನೆನಪು. ಯೋಚಿಸುವುದನ್ನು ನಿಲ್ಲಿಸಬೇಕು. ಆದರೆ, ಹೇಗೆ? ಆಗ ಮತ್ತೊಂದು ಯೋಚನೆ ಹುಟ್ಟಿಕೊಂಡಿತು. ಅಯ್ಯೋ, ಹೀಗೆ ಯೋಚಿಸಿದರೆ ಮತ್ತಷ್ಟು ಕೂದಲು ಕಳೆದುಕೊಂಡೆನು ಎಂದು ದಿಗಿಲಾಯಿತು.
ಬಸ್ ತಂಗುದಾಣಕ್ಕೆ ಬಂದೆ. ಆ ಸಣ್ಣ ನಿಲ್ದಾಣದಲ್ಲಿ ಕುಳಿತಿಕೊಳ್ಳಲು ನಾಲ್ಕೈದು ಕಲ್ಲಿನ ಬೆಂಚುಗಳಿದ್ದವು. ಖಾಲಿಯಿದ್ದ ಬೆಂಚೊಂದರಲ್ಲಿ ಕುಳಿತು ಬಸ್ಗೆ ಕಾಯುತ್ತಾ ರಸ್ತೆ ನೋಡುತ್ತಾ ಕುಳಿತೆ. ರಸ್ತೆಯಲ್ಲಿ ಚೆನ್ನಾಗಿರುವ ಹುಡುಗಿಯರನ್ನು ಬಿಟ್ಟು, ಹೋಗಿ ಬರುವವರಲ್ಲಿ ಎಷ್ಟು ಜನ ಬಾಲ್ಡಿಗಳಿದ್ದಾರೆ ಎಂದು ನೋಡುತ್ತಿದ್ದೆ. ಹತ್ತರಲ್ಲಿ ಐವರು ಬಾಲ್ದಿಗಳೇ. ಕೆಲವರಿಗೆ ಮುಂದೆ ಕೂದಲಿಲ್ಲ. ಕೆಲವರಿಗೆ ಹಿಂದೆ ಇಲ್ಲ. ಕೆಲವರಿಗೆ ಪೂರ್ತಿ ಖಾಲಿ. ಇವರೆಲ್ಲ ನಾನು ಮುಂದೆ ಸೇರುವ ಸಂಘದ ಸದಸ್ಯರು ಅನ್ನಿಸಿತು.
ರಸ್ತೆಯ ಇನ್ನೊಂದು ಬದಿ, ಆ ಕಡೆಯಿಂದ ಬರುವ ಬಸ್ಗೆ ಕಾಯುತ್ತ ಕೆಲವರಿದ್ದರು. ಅದರಲ್ಲೊಬ್ಬ ಹುಡುಗನ ಸುತ್ತ ನಾಲ್ಕೈದು ಚೆಂದದ ಹುಡುಗಿಯರು ಮಾತನಾಡುತ್ತ ನಗುತ್ತ ನಿಂತಿದ್ದರು. ಸಾಮಾನ್ಯವಾಗಿ ಇಂಥ ದೃಶ್ಯ ಕಂಡಾಗ ನನಗೆ ಅಸೂಯೆ ಹುಟ್ಟುತ್ತದೆ. ಆದರೆ, ಇಂದು ಹೆದರಿಕೆ ಆಯಿತು. ಯಾಕಂದ್ರೆ ಆ ಗುಂಪಿನ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದ. ಬೋಳು ತಲೆಯವನು. ಅವನು ಆ ಹುಡುಗಿಯರನ್ನು ವಾರೆನೋಟದಿಂದ ನೋಡುತ್ತಿದ್ದಾನೆ. ಅಂಥ ನೋಟದಿಂದಲೇ ಆತ ಬೋಳ ಆದನಾ, ಗೊತ್ತಿಲ್ಲ.
ಅಲ್ಲಿಯೇ ನಿಂತಿದ್ದ ಅಂಕಲ್ ಒಬ್ಬರು ನನ್ನ ನೋಡಿ ಸ್ಮೈಲ್ ಕೊಟ್ಟರು. ನನಗೆ ಕಸಿವಿಸಿ. ನಾನಿಲ್ಲಿ ಬಸ್ ಕಾಯುವಾಗ ಅನೇಕ ಸಲ ಆ ಅಂಕಲ್ ಅನ್ನು ನೋಡಿದ್ದೆ. ಆದರೆ, ಯಾವತ್ತೂ ಅವರು ಮುಖಕ್ಕೆ ಮುಖ ಕೊಟ್ಟು ನಕ್ಕವರಲ್ಲ. ಇವತ್ತು ಯಾಕೆ ನಕ್ಕರೆಂಬುದು ಪ್ರಶ್ನೆ. ಅವರೂ ಬೋಳು ತಲೆಯವರೇ. ಬಾಲ್ಡಿಗಳ ಸಂಘಕ್ಕೆ ಅವರು ನನಗೆ ಸ್ವಾಗತ ಕೋರಿದರೇ? ನನಗಂತೂ ಆ ಮನುಷ್ಯ ಅಖಿಲ ಭಾರತ ಬೋಳು ಸಂಘದ ಅಧ್ಯಕ್ಷನಂತೆಯೇ ಕಂಡ. ಇಲ್ಲ ನಾನು ಹಾಗಾಗಬಾರದು. ಏನಾದರೂ ಮಾಡಲೇಬೇಕು ಅನ್ನಿಸಿತು.
ಬಸ್ಗೆ ಕಾಯುವುದನ್ನು ನಿಲ್ಲಿಸಿದೆ. ನಾನು ಹೋಗಬೇಕಾದ ಸ್ಥಳ ಅದಲ್ಲ, ಬೇರೆಯದೇ ಎಂದು ನಡೆಯಲು ಶುರುಮಾಡಿದೆ. ತಕ್ಷಣ ಮೊಬೈಲಿನ ಅಂತರ್ಜಾಲದಲ್ಲಿ ಕೂದಲುದುರುವಿಕೆಗೆ ಪರಿಹಾರ ಏನೆಂದು ಹುಡುಕಿದೆ. ಹತ್ತು ಸೆಕೆಂಡುಗಳಲ್ಲಿ ಸಾವಿರ ಫಲಿತಾಂಶಗಳು ಬಂದವು. ಒಂದೊಂದೇ ತೆರದುನೋಡಿದೆ. ಅಲ್ಲೊಂದು ಜಾಹೀರಾತು ಕಾಣಿಸಿತು; ಬೋಳು ತಲೆಯ ವ್ಯಕ್ತಿ ಚಿಕಿತ್ಸೆಯ ನಂತರ ಉಪೇಂದ್ರನ ಥರ ಆದ ಚಿತ್ರ ನೋಡಿದೆ. ಎಷ್ಟು ಖರ್ಚಾಗಬಹುದೆಂದು ಅಲ್ಲಿಯೇ ಕೆಳಗೆ ನೋಡಿದೆ. ಹತ್ತು ಸಾವಿರದಿಂದ ಒಂದು ಲಕ್ಷ ರುಪಾಯಿ ಅಂತ ಬರೆದಿತ್ತು. ಕೋಟಿ ಖರ್ಚಾಗಲಿ, ಬಿಡುವುದಿಲ್ಲ ಎಂದು ವಿಶ್ವಾಸದಲ್ಲಿ ಪರ್ಸ್ಗೆ ಕೈಹಾಕಿದೆ. ಹತ್ತು ರುಪಾಯಿ ಐವತ್ತು ಪೈಸೆ ಇತ್ತು. ಛೇ, ದುಡ್ಡು ಜೋಡಿಸಬೇಕು ಎಂದು ಪರ್ಸ್ ಮಡಚಿಟ್ಟುಕೊಳ್ಳುವಾಗ ಮತ್ತೆರಡು ಕೂದಲು ಉದುರಿ ಹೆಗಲ ಮೇಲೆ ಬಿದ್ದಿದ್ದು ಕಾಣಿಸಿತು. ಹಾಗೆ ನಡೆದು ಹೋಗುತ್ತಿದ್ದವನು ಮತ್ತದೇ ಬಸ್ನಿಲ್ದಾಣದಲ್ಲಿದ್ದ ಅಂಕಲ್ ಅನ್ನು ನೋಡಿದೆ. ಅವರು ನನ್ನನ್ನು ನೋಡಿ ಪುನಃ ಮಂದಹಾಸ ಬೀರಿದರು.
ಮತ್ತಷ್ಟು ಜೋರಾಗಿ ನಡೆಯತೊಡಗಿದೆ. ಎಲ್ಲಿಗೆ ಎಂದು ನನಗೆ ಗೊತ್ತಿಲ್ಲ. ಬಹುಶಃ ಬರೀ ತಲೆ ತುಂಬಾ ಕೂದಲು ತುಂಬಿರುವ ಆ ಜಗತ್ತಿನೆಡೆಗೆ. ನಡೆಯುವಾಗೆಲ್ಲ ಒಂದೇ ಒಂದು ಪ್ರಶ್ನೆ ನನ್ನ ಸದಾ ಕಾಡತೊಡಗಿತು. ಅದೇನೆಂದರೆ, ಈ ಕೂದಲು ಬೇಡ ಬೇಡ ಎಂದರೂ ಬೇಡದ ಕಡೆ ಬೆಳೆದು, ಬೇಕು ಬೇಕು ಎಂದರೂ ಬೇಕಾಗಿರುವ ಕಡೆ ಯಾಕೆ ಬೆಳೆಯುದಿಲ್ಲವಲ್ಲ ಯಾಕೆ?
- ಆರ್. ಶ್ರವಣ್ ಐತಾಳ್
RShravan_Ithal@infosys.com