ದೇಶದ ಮುಕುಟಕ್ಕೆ 26 ಮುತ್ತಿನ ಮಣಿಗಳು
ಶಿಸ್ತಾಗಿ ನಿಂತು ರಾಷ್ಟ್ರಧ್ವಜಕ್ಕೊಂದು ಸೆಲ್ಯೂಟ್, ಮುಖ್ಯೋಪಾಧ್ಯಾಯರಿಂದ ಒಂದು ಭಾಷಣ, ಅತಿಥಿಗಳ ನುಡಿರಂಜನೆ, ಆಮೇಲೆ ನಾವೆಲ್ಲ ಕಾಯುತ್ತಿದ್ದ ಸಿಹಿ ಹಂಚುವಿಕೆ. ಅಲ್ಲಿಗೆ ಆ ವರ್ಷದ ಗಣರಾಜ್ಯೋತ್ಸವ ಮುಕ್ತಾಯ. ಗಣರಾಜ್ಯ ಎಂದರೆ ಬಾಲ್ಯದ ದಿನಗಳ ನೆನಪಿನಲ್ಲಿ ನಮ್ಮ ಕಣ್ಣಿನಲ್ಲಿ ಮೂಡುವ ಚಿತ್ರ ಇದು. ಆದರೆ ಇಷ್ಟೇನಾ? ಬೆಳೆಯುತ್ತ ಹೋದಂತೆ ಈ ಚಿತ್ರಕ್ಕೆ ಇನ್ನಷ್ಟು ಚಿತ್ತಾರಗಳು ಸೇರಿಕೊಳ್ಳಲಾರಂಭಿಸಿದವು. ನಮ್ಮ ಸಂವಿಧಾನ, ಜಗತ್ತಿನ ಎಲ್ಲ ಸಂವಿಧಾನಗಳ ಒಳ್ಳೆಯ ಅಂಶಗಳನ್ನೆಲ್ಲ ಸೇರಿಸಿಕೊಂಡಿದೆ ಅಂತ ಗೊತ್ತಾಯಿತು. ನಮ್ಮ ಸೇನೆ ಯಾವುದೇ ದಾಳಿಯನ್ನು ಸಮರ್ಥವಾಗಿ ತಡೆಯಬಲ್ಲ ಮಿಂಚಿನ ಕಿಡಿ ಎಂಬುದು ತಿಳಿಯಿತು. ನಮ್ಮ ದೇಶಕ್ಕೆ ವಿಶಿಷ್ಟ ಆಹಾರಪದ್ಧತಿಯಿದೆ ಅನ್ನುವುದು ರುಜುವಾತಾಯಿತು. ನಮ್ಮ ಬಟ್ಟೆಬರೆ ಇತರರ ಹಾಗಲ್ಲ ಎಂಬುದು ವೇದ್ಯವಾಯಿತು. ನಮ್ಮ ಸಿನಿಮಾ ಜಗತ್ತಿನಲ್ಲೆಲ್ಲ ಜಯಭೇರಿ ಬಾರಿಸಿದೆ ಅನ್ನುವುದು ಖುಷಿ ಕೊಟ್ಟಿತು. ನಮ್ಮ ಅಂಚೆ, ರೈಲ್ವೆಗಳಂಥ ಬೃಹತ್, ಪ್ರಾಮಾಣಿಕ ಸೇವೆಗಳು ಜಗತ್ತಿನಲ್ಲಿ ಮತ್ತೊಂದಿಲ್ಲ ಎಂಬುದು ಗೊತ್ತಾಗಿ ನಮ್ಮ ಕಾಲರ್ ಇನ್ನೊಂಚೂರು ಮೇಲೇರಿತು. ನಮ್ಮ ಸ್ವಾತಂತ್ರ್ಯ ಸಂಗ್ರಾಮವೂ ಅದನ್ನು ಮಾದರಿಯಾಗಿಟ್ಟುಕೊಂಡ ಇತರ ಚಳವಳಿಗಳೂ ನಮ್ಮ ಸ್ವಾಭಿಮಾನಕ್ಕೆ ಗರಿ ಸಿಕ್ಕಿಸಿದವು. ನಮ್ಮ ಹಸಿರು ಕ್ರಾಂತಿ, ಶ್ವೇತ ಕ್ರಾಂತಿಗಳು ನಮ್ಮ ಹೊಟ್ಟೆಯ ಚಿಂತೆಯನ್ನು ನೀಗಿದವು. ನಮ್ಮ ಹೊಸ ತರುಣ ತರುಣಿಯರಿಗೆ ಅಮೆರಿಕದವರು, ಯುರೋಪಿನವರು ಕರೆಕರೆದು ಕೆಲಸ ಕೊಟ್ಟು ಕಂಪ್ಯೂಟರ್ ಮುಂದೆ ಕೂರಿಸಿದರು. ಆಧುನಿಕ ಜಗತ್ತಿನಿಂದ ಬಸವಳಿದು ಬಂದ ಅನೇಕರು ನಮ್ಮ ಮಠ ಮಂದಿರಗಳಲ್ಲಿ ಅಧ್ಯಾತ್ಮದ ಹಸಿವು ನೀಗಿಸಿಕೊಂಡರು. ಹಿಮಾಲಯ ನಮ್ಮನ್ನು ತಂಪಾಗಿಟ್ಟಿತು, ಪಶ್ಚಿಮ ಘಟ್ಟಗಳು ನಮ್ಮ ಶ್ವಾಸಕೋಶಕ್ಕೆ ಆಮ್ಲಜನಕ ತುಂಬಿದವು... ಹೀಗೆ ಹತ್ತಾರು, ನೂರಾರು ಸಂಗತಿಗಳು ನಮ್ಮನ್ನು ಇತರರಿಂದ ಬೇರೆಯಾಗಿಸಿ, ಎದ್ದು ಕಾಣಿಸಿ ನಾವು ಬೀಗುವಂತೆ ಮಾಡಿವೆ ಎಂಬುದನ್ನು ಈ ಜನವರಿ ಇಪ್ಪತ್ತಾರರಂದು ನಾವು ನೆನಪು ಮಾಡಿಕೊಳ್ಳುವುದು ಬೇಡವೇ? ಲೆಕ್ಕ ಮಾಡುತ್ತ ಹೋದರೆ ಇಂಥವು ಇಪ್ಪತ್ತಾರೇನು, ನೂರಿಪ್ಪತ್ತಾರೂ ಸಿಗಬಹುದು. ಆದರೆ ಈ ಪಟ್ಟಿಯನ್ನು ಜನವರಿ 26ರ ಹಿನ್ನೆಲೆಯಲ್ಲಿ 26ಕ್ಕೇ ಮಿತಿಗೊಳಿಸಲಾಗಿದೆ.
ಜೈ ಜವಾನ್
ಅದು ನಮ್ಮ ಬೆಂಕಿಯ ಉಂಡೆ. ದೇಶದ ಹೆಮ್ಮೆ. ಚೈತನ್ಯದ ಚಿಲುಮೆ. ಅವರು ನಮ್ಮ ಹೀರೋಗಳು. ಯಾವುದೇ ರಾಷ್ಟ್ರದ ಪಾಲಿಗೆ ಮಿಲಿಟರಿ ಎಂಬುದು ಹಾಗೆಯೇ. ಭಾರತೀಯ ಸೇನೆಯೂ ಇದಕ್ಕೆ ಹೊರತಲ್ಲ. ದೇಶದ ಅರ್ಧ ದಶಲಕ್ಷ ಪಡೆ ಮೈಕೊರೆಯುವ ಸಿಯಾಚಿನ್ನ ಹಿಮಬಂಡೆಗಳ ನಡುವೆ ಕಾವಲು ನಿಂತಿದೆ. ಅದೇ ರೀತಿ ಖಚ್ನ ರಣ್ ಭಾಗದಲ್ಲಿ ಪಾಕಿಸ್ತಾನದ ಉಗ್ರರ ಮೇಲೆ ಹದ್ದಿನ ಕಣ್ಣು ನೆಟ್ಟಿದೆ. 1980ರಿಂದಲೂ ಹತ್ತಾರು ಲಕ್ಷ ಸೈನಿಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದೇಶದ ಗಡಿಯನ್ನು ಹೀಗೆ ರಕ್ಷಿಸಿಕೊಂಡು ಬರುತ್ತಿದ್ದಾರೆ. ಕಾರ್ಗಿಲ್ ವಿಜಯ ಅವರು ನಮಗೆ ಒದಗಿಸಿಕೊಟ್ಟ ವರ. ಪಶ್ಚಿಮ ಗಡಿಯುದ್ದಕ್ಕೂ 'ಆಪರೇಶನ್ ಪರಾಕ್ರಮ್' ಸಾಗಿಯೇ ಬಂದಿದೆ. ಇದರ ಹೊರತಾಗಿಯೂ ದೇಶದೊಳಗಣ ನೈಸರ್ಗಿಕ ವಿಕೋಪ, ತುರ್ತು ಸ್ಥಿತಿ, ಉಗ್ರರ ಅಟ್ಟಹಾಸದ ವಿರುದ್ಧ ನಿರಂತರ ಯುದ್ಧಕ್ಕೆ ನಮ್ಮ ಯೋಧರು ಸನ್ನದ್ಧರು. ವೃತ್ತಿನಿರತ 1.1 ದಶಲಕ್ಷ ಯೋಧರ ಬೃಹತ್ ಪಡೆ ಜಗತ್ತಿನಲ್ಲೇ ಎರಡನೆಯದೆಂಬ ಅತಿದೊಡ್ಡ ಹೆಗ್ಗಳಿಕೆ ಪಡೆದಿದೆ. ಇನ್ನು ಬಾನಗಲಕ್ಕೆ ಹಾರಾಡುತ್ತ ಕಾವಲಿಗೆ ಇರುವುದು ವಾಯುಪಡೆ. ಸಮುದ್ರದಲ್ಲಿ ತೇಲುತ್ತ ವಾಣಿಜ್ಯಿಕ ಹಾಗೂ ರಕ್ಷಣಾತ್ಮಕ ಕಾರ್ಯನಿರತವಾಗಿರುವುದು ನಮ್ಮ ನೌಕಾಪಡೆ. ಹತ್ತಾರು ಕೊರತೆ, ನೂರಾರು ಸಂಕಷ್ಟ, ದಿನಕ್ಕೊಂದು ನೋವು, ಕ್ಷಣಕ್ಕೊಂದು ಆತಂಕ ಇವೆಲ್ಲವನ್ನೂ ಮೀರಿ ದೇಶ ರಕ್ಷಣೆಗಾಗಿ ಸಾವಿಗೆ ಎದೆಯೊಡ್ಡಿ ನಿಂತ ನಮ್ಮ ಸೈನಿಕರಿಗೆ ಸಾಟಿ ಇನ್ನಾರು ಇದ್ದಾರು? ಇಷ್ಟಾದರೂ ಅವರ ಹಿತ ರಕ್ಷಣೆ, ಕುಟುಂಬ ಪಾಲನೆ ನಮಗೆ ನಮ್ಮ ರಾಜಕೀಯ ವ್ಯವಸ್ಥೆಗೆ ಆದ್ಯತೆ ಆಗದಿರುವುದು ದುರದೃಷ್ಟಕರ. ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಎದೆ ತಟ್ಟಿ ಹೇಳಿಕೊಳ್ಳಬಹುದಾದದ್ದು ಎಂದರೆ ನಮ್ಮದು 'ಗ್ಲೋಬಲ್ ಮಿಲಿಟರಿ ಪವರ್'.
ಇನ್ನು ಭಾರತೀಯ ಬಾಹ್ಯಾಕಾಶಯಾನ ಮತ್ತೊಂದು ಪ್ರತಿಷ್ಠೆಯ ಗರಿ. ಭೂಕಕ್ಷೆಯನ್ನು ದಾಟಿಸಿ ಖಗೋಲದ ಗುರಿಯತ್ತ ಉಪಗ್ರಹಗಳನ್ನು ಚಿಮ್ಮಿಸುವುದು ಹುಡುಗಾಟಿಕೆಯ ಮಾತಲ್ಲ. ಸಾಕಷ್ಟು ತಜ್ಞತೆ, ನಿಖರ ತಾಂತ್ರಿಕತೆ, ಸ್ಪಷ್ಟ ಪರಿಕಲ್ಪನೆ, ಅಗಾಧ ಜ್ಞಾನ, ಮಿತಿ ಇಲ್ಲದ ಪರಿಶ್ರಮ ಮಾತ್ರದಿಂದ ಇದು ಸಾಧ್ಯ. ಶೂಟರ್ ಒಬ್ಬನಿಗೆ ಹತ್ತು ಕಿಲೋಮೀಟರ್ನಷ್ಟು ದೂರ ನಭದಲ್ಲಿ ನಾಣ್ಯವೊಂದನ್ನು ಚಿಮ್ಮಿಬಿಡಲು ಅಗತ್ಯ ಇರುವ ಎಲ್ಲ ನೈಪುಣ್ಯಗಳೂ ರಾಕೆಟ್ ಉಡಾವಣೆಗೆ ಅಗತ್ಯ. ಅಂಥದ್ದೊಂದು ಪರಿಕ್ರಮ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯದ್ದು(ಇಸ್ರೋ). ನಾಲ್ಕು ದಶಕಗಳಲ್ಲಿ ಅದರದ್ದು ಅತ್ಯಂತ ಯಶಸ್ವಿ ಪಯಣ. ಅಮೆರಿಕನ್ ನಾಸಾದ ಎತ್ತರಕ್ಕಲ್ಲದಿದ್ದರೂ ಬಾನಂಗಳದ ಪೈಪೋಟಿಯಲ್ಲಿ ಹೊಳೆಯುವ ನಕ್ಷತ್ರವಾಗಿ ಇಸ್ರೋ ರಾರಾಜಿಸುತ್ತಿದೆ. ನಮ್ಮ ಪುರಾತನ ಖಗೋಳ ಶಾಸ್ತ್ರಜ್ಞ ಆರ್ಯಭಟನ ಹೆಸರಿನಿಂದ ಮೊದಲ್ಗೊಂಡು 1975ರಲ್ಲಿ ಆರಂಭವಾದ ನಮ್ಮ ಬಾಹ್ಯಾಕಾಶಯಾನ ತೀರಾ ಮೊನ್ನೆಮೊನ್ನೆ ಮಂಗಳನ ನೆಲೆಯವರೆಗೂ ಬಂದು ತಲುಪಿದೆ. ಸಂಪರ್ಕ ಕ್ರಾಂತಿ ಸಾಧಿಸಿದ್ದು ಇಸ್ರೋದ ಮಹತ್ತರ ಮೈಲುಗಲ್ಲು. ಇನ್ಸಾಟ್ ನಮ್ಮ ಮನೆಮಾತು. ಲಕ್ಷಾಂತರ ಡಾಲರ್ ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ನಮ್ಮ ಸ್ಯಾಟಲೈಟ್ಗಳು ಮಹತ್ವದ ಕೊಡುಗೆ ನೀಡಿವೆ.
ಇನ್ನು ಪರಮಾಣು ಶಕ್ತಿಯಾಗಿ ಭಾರತ ಹೊಮ್ಮಿದ ಯಶೋಗಾಥೆ ಪುಟ್ಟದ್ದೇನಲ್ಲ. ಮೇ 11, 1998. ಅಂದಿನ ಸೇನಾ ಸಂಶೋಧನಾ ಮುಖ್ಯಸ್ಥ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನೇತೃತ್ವದಲ್ಲಿ ನಡೆದ ಪೋಖ್ರಾನ್ ಅಣ್ವಸ್ತ್ರ ಪ್ರಯೋಗ ಜಗತ್ತಿನೆದುರು ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿಲ್ಲಿಸಿತು. ಅಂದಿನ ಮೇಜರ್ ಜನರಲ್ ಪೃಥ್ವಿರಾಜ್, ಆಟೋಮಿಕ್ ಎನರ್ಜಿ ವಿಭಾಗದ ಮುಖ್ಯಸ್ಥ ಆರ್. ಚಿದಂಬರಂ, ಮೇಜರ್ ಜನರಲ್ ನಟರಾಜ್ ಅವರುಗಳ ಪಾತ್ರ ಯಾವಜ್ಜೀವ ಸ್ಮರಣೀಯ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಇಚ್ಛಾಶಕ್ತಿಯ ಫಲವಾಗಿ ಬೃಹತ್ ಮರಳುಗಾಡಿನಲ್ಲಿ ಅಂದು ಸಂಜೆ 3.45ಕ್ಕೆ ಭಾರತದ ಅಣ್ವಸ್ತ್ರ ಶಕ್ತಿ ಸಾಬೀತಾಯಿತು. ಇದಕ್ಕೂ ಮುನ್ನ 1974ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಇಂಥದ್ದೊಂದು ಯಶೋಗಾಥೆಗೆ ಮುನ್ನುಡಿ ಬರೆದಿದ್ದರು. ಒಟ್ಟಾರೆ ಸೇನೆ, ಬಾಹ್ಯಾಕಾಶ ಸಂಶೋಧನೆ, ಅಣ್ವಸ್ತ್ರ ಪ್ರಯೋಗ - ಈ ಮೂರು ರೀತಿಯಿಂದಲೂ ಶಕ್ತಿಶಾಲಿ. ನಾವು ಯಾರಿಗೇನೂ ಕಮ್ಮಿ ಇಲ್ಲ!
ಗಾಂಧಿಯೆಂಬ ಸರಳರೇಖೆ
ಸತ್ಯ, ಅಹಿಂಸೆ, ಧರ್ಮವನ್ನು ಜಗತ್ತಿಗೇ ಬೋಧಿಸಿದ ಮಹಾನ್ ಶಕ್ತಿ ಗಾಂಧೀಜಿ. ಸ್ವಾತಂತ್ರ್ಯದ ಮೊದಲ ಕಿಡಿಯನ್ನು ಹೊತ್ತಿಸಿ ಅದು ದೇದೀಪ್ಯಮಾನ ದೀವಿಗೆಯಾಗಿ ಪ್ರಜ್ವಲಿಸುವಂತೆ ಮಾಡಿದ, ಅದರ ಬೆಳಕಲ್ಲಿ ದಾಸ್ಯದ ಸಂಕೋಲೆಯನ್ನು ಕರಗಿಸಿದ ದಿಟ್ಟ ಹೋರಾಟಗಾರ ನಮ್ಮ ರಾಷ್ಟ್ರಪಿತ. ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ವಿಶಿಷ್ಟ ಸ್ಥಾನ. ಹೋರಾಟ, ಚಳವಳಿ, ಶಾಂತಿ ಮಂತ್ರದ ಅಡಿಯಲ್ಲಿ ಫಲ ಕಾಣುವುದಾದರೆ ಅದು ಭಾರತದ ಮಣ್ಣಿನಲ್ಲಿ ಮಾತ್ರ. 1857ರ ಸಿಪಾಯಿ ದಂಗೆಯೊಂದಿಗೆ ಆರಂಭವಾದ ನಮ್ಮ ಸ್ವಾತಂತ್ರ್ಯ ಚಳವಳಿ ಎರಡು ಶತಮಾನಗಳವರೆಗೆ ನಿರಂತರ ಸದ್ದುಮಾಡಿತು. ಚದುರಿದಂತೆ ದೇಶದೆಲ್ಲೆಡೆ ಸದ್ದಿಲ್ಲದೇ ಮೊಳಗುತ್ತಿದ್ದ ಹೋರಾಟದ ಕಹಳೆಗೆ ಸಂಘಟಿತ ಧ್ವನಿ ನೀಡಿ ಜಗತ್ತಿನ ಕಿವಿಗೆ ಅಪ್ಪಳಿಸುವಂತೆ ಮಾಡಿದ್ದು ಮಹಾತ್ಮಾ ಗಾಂಧಿ. ಸರಳ ಬದುಕಿನ ಶ್ರೀಮಂತ ಚಿಂತನೆಯ ಧೀಮಂತ ವ್ಯಕ್ತಿತ್ವ ಅವರದ್ದು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು ಮಾತ್ರವಲ್ಲದೆ ಗ್ರಾಮ ಸ್ವರಾಜ್ಯದಂಥ ಉದಾತ್ತ ಚಿಂತನೆಯನ್ನು, ಸ್ವಾವಲಂಬಿ ಬದುಕಿನ ಸ್ಪಷ್ಟ ಪರಿಕಲ್ಪನೆಯನ್ನು ಜನಮಾನಸದಲ್ಲಿ ಬಿತ್ತಿ ಆಧುನಿಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಹಾಕಿದ್ದು ಅವರೇ. ಹೇಗೆ ನೋಡಿದರೂ ಗಾಂಧೀಜಿ ನಮ್ಮ ಐಕಾನ್. ಅವರೇ ಭಾರತ, ನಮ್ಮ ರಾಷ್ಟ್ರಪಿತ!
ಪೋಸ್ಟ್ ಬಂತು
ಸಂಪರ್ಕ ಕ್ರಾಂತಿಯೇ ನಡೆದು ಹೋಗಿದ್ದರೂ ಭಾರತೀಯ ಅಂಚೆ ವ್ಯವಸ್ಥೆ ಇಂದಿಗೂ ಅನಿವಾರ್ಯ ಅಂಗವಾಗಿ ನಮಗೆ ಕಂಡಿದ್ದರೆ ಅದು ದೇಶದ ವಿಶಿಷ್ಟತೆ ಅಲ್ಲದೆ ಮತ್ತಿನ್ನೇನು? 1,55,015 ಅಂಚೆ ಕಚೇರಿಗಳೊಂದಿಗೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಜಗತ್ತಿನ ಏಕೈಕ ಜಾಲ ನಮ್ಮದು. ರಸ್ತೆಗಳಿಲ್ಲದ, ಸೇತುವೆ ಕಾಣದ, ತಲುಪಲು ಅಸಾಧ್ಯ ಹಳ್ಳಿಗಳಿಗೂ ನಿಗದಿತ ಸಮಯದೊಳಗೆ ಸಂದೇಶ ತಲುಪಿಸುವ ನಿಖರತೆ ಸಾಧಿಸಿದ್ದರೆ ಅದು ಭಾರತೀಯ ಅಂಚೆ ಮಾತ್ರ. ತಿಂಗಳೊಂದಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಮನಿಯಾರ್ಡರ್ಗಳು ಇಂದಿಗೂ ರವಾನೆಯಾಗುತ್ತಿವೆ. ಆರ್ಥಿಕ ವಹಿವಾಟಿನಲ್ಲಿ ಇದರ ಪಾತ್ರ ಬಹುಮುಖ್ಯ. ಅಂಚೆ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸಣ್ಣ ಉಳಿತಾಯ ಜಗತ್ತಿಗೇ ಮಾದರಿ. 25 ಲಕ್ಷಕ್ಕೂ ಹೆಚ್ಚು ಅಂಚೆ ವಿಮಾ ಪಾಲಿಸಿಗಳು ಜೀವಂತವಿವೆ. 150 ವರ್ಷಗಳ ನಿರಂತರ, ಸಮರ್ಥ ಸೇವೆ ಭಾರತೀಯ ಅಂಚೆ ವ್ಯವಸ್ಥೆಯದ್ದು. ಇದನ್ನೂ ಮೀರಿಸಿ ಆಧುನಿಕ ಯುಗದಲ್ಲಿ ಮತ್ತೊಂದು ಸಂಪರ್ಕ ಕ್ರಾಂತಿ ಹಾಡಿದ್ದು ಕೊರಿಯರ್ಗಳೆಂಬ ವಿಶಿಷ್ಟ ಜಾಲ. ಖಾಸಗಿ ಸಹಭಆಗಿತ್ವದಲ್ಲಿ ದೇಶದ ಉದ್ದಗಲಗಳನ್ನು ಬೆಸೆದು ನಿಂತಿರುವ ಈ ವ್ಯವಸ್ಥೆ ಭಾರತೀಯ ಅಂಚೆಗೆ ಪ್ರಬಲ ಪೈಪೋಟಿಯಾಗಿದ್ದರೂ ಸೇವಾ ಗುಣಮಟ್ಟದ ದೃಷ್ಟಿಯಿಂದ ಅಪೇಕ್ಷಣೀಯ.
ಸಂವಿಧಾನ- ಚುನಾವಣೆ
ಜಗತ್ತಿನ ಅತ್ಯಂತ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಂವಿಧಾನ ನಮಗದು ಧರ್ಮಗ್ರಂಥವಿದ್ದಂತೆ. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ಜಗತ್ತಿನ ಉನ್ನತ, ಮಾದರಿ ರಾಜಕೀಯ ವ್ಯವಸ್ಥೆಗಳ ಅಧ್ಯಯನ ನಡೆಸಿ ಜಾತ್ಯತೀತ ಸಂವಿಧಾನಾತ್ಮಕ ಚೌಕಟ್ಟನ್ನು ಕಟ್ಟಿಕೊಟ್ಟಿತು. ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯ, ಐರ್ಲೆಂಡ್ ಮತ್ತು ಕೆನಡಾಗಳ ಸಂವಿಧಾನಗಳ ಅಂಶಗಳನ್ನು ಹೆಕ್ಕಿ ತೆಗೆದು ಭಾರತೀಯ ಸಂವಿಧಾನದ ಕರಡು ರೂಪಿಸಿ 1949 ನವೆಂಬರ್ 26ರಂದು ಮಂಡಿಸಲಾಯಿತು. ಅದು ಸ್ವೀಕಾರಗೊಂಡಿದ್ದು 1950 ಜನವರಿ 26ರಂದು. ವಿಮರ್ಶಕನೊಬ್ಬ ಇದನ್ನು, 'ಸುಂದರ ದಾಖಲೆ' ಎಂದಿದ್ದಾನೆ. ಆದರೆ ಮೂಲಭೂತ ಹಕ್ಕು, ಕರ್ತವ್ಯ ಹಾಗೂ ಸ್ವಾತಂತ್ರ್ಯ ಪ್ರತಿಪಾದನೆಯೊಂದಿಗೆ ಈವರೆಗೆ 84ಕ್ಕೂ ಹೆಚ್ಚು ತಿದ್ದುಪಡಿ ಕಂಡ ಜಗತ್ತಿನ ಮೊದಲ ನೀತಿ ನಿರೂಪಣಾ ಪುಸ್ತಕ ನಮ್ಮದು.
ಹಾಗೆಯೇ ಭಾರತದ ಚುನಾವಣೆಗಳೆಂದರೆ ಅದೊಂದು ಹಬ್ಬವಾಗಿ ನಿಲ್ಲುತ್ತದೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಮ್ಮ ಗುರಿ. ಇದಕ್ಕಾಗಿಯೇ ಪ್ರತ್ಯೇಕ ಚುನಾವಣಾ ಆಯೋಗ ನಿರಂತರ ಕಾರ್ಯನಿರತವಾಗಿದೆ. ಮಹಾ ಚುನಾವಣೆಗಳೆಂದರೆ ರಾಜಕೀಯ ವಿಜ್ಞಾನಿಗಳ ಪ್ರಕಾರ, 'ಬೃಹತ್ ಸರ್ಕಸ್!' ಮತಪತ್ರಗಳಿಂದ ಆರಂಭಗೊಂಡು ಇವತ್ತಿನ ಆಧುನಿಕ ಮತಯಂತ್ರದವರೆಗೆ ಸಾಗಿಬಂದ ಚುನಾವಣಾ ಯಾತ್ರೆ ಪ್ರತಿಬಾರಿಯೂ ಜಗತ್ತಿನ ಗಮನವನ್ನು ಒಂದಲ್ಲಒಂದು ರೀತಿಯಲ್ಲಿ ಸೆಳೆದೇ ಇದೆ. 1951-52ರಲ್ಲಿ ನಡೆದ ಪ್ರಪ್ರಥಮ ಮಹಾಚುನಾವಣೆಯಲ್ಲಿ 173 ದಶಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ವಿಶೇಷವೆಂದರೆ ಅಂದು ಅದರ ಬಹುಪಾಲು ಬಡವರು ಹಾಗೂ ಅನಕ್ಷರಸ್ಥರಿದ್ದರು. 1999ರ ಹೊತ್ತಿಗೆ 619 ದಶಲಕ್ಷ ಮತದಾರರ ಸಂಖ್ಯೆ ಮುಟ್ಟಿತ್ತು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶೇಷ ಎಂದರೆ 50 ವರ್ಷಗಳ ಅಂತರದಲ್ಲಿ ಮತದಾರರ ಸಂಖ್ಯೆ ಸರಿಸುಮಾರು ಆರು ಪಟ್ಟು ಬೆಳೆದಿತ್ತು. 2014ರ ಮಹಾಚುನಾವಣೆ ವೇಳೆ ಮತದಾರರ ಸಂಖ್ಯೆ 725 ದಶಲಕ್ಷ ತಲುಪುವ ನಿರೀಕ್ಷೆ ಇದೆ. ಜಗತ್ತಿನ ಅತಿದೊಡ್ಡ ಚುನಾವಣೆ ಎಂಬ ಹೆಗ್ಗಳಿಕೆಗೆ ನಾವು ಈ ಮೂಲಕ ಪಾತ್ರರಾಗಲಿದ್ದೇವೆ.
ಹಳಿಗಳ ದೇಶ!
ಚಕ್ರದ ಮೇಲೆ ಬದುಕೊಂದು ಸಾಗುತ್ತಲೇ ಇದ್ದರೆ ಅದು ಭಾರತೀಯ ರೇಲ್ವೆಯಲ್ಲಿ. 1.15 ಲಕ್ಷ ಕಿ.ಮೀ.ಗೂ ಉದ್ದದ, 7,500ಕ್ಕೂ ಹೆಚ್ಚು ನಿಲ್ದಾಣಗಳನ್ನು ಹೊಂದಿರುವ, ಪ್ರತಿನಿತ್ಯ 11 ಸಾವಿರಕ್ಕೂ ಹೆಚ್ಚು ರೈಲುಗಳ ಓಡಾಟದ ವ್ಯವಸ್ಥೆ ಎಂಬುದೊಂದಿದ್ದರೆ ಜಗತ್ತಿನಲ್ಲಿ ನಮ್ಮದು ಮಾತ್ರ. 1853ರಲ್ಲಿ ಮುಂಬೈ ಹಾಗೂ ಥಾಣೆ ನಡುವೆ ಮೊದಲ ಬಾರಿಗೆ ಪ್ಯಾಸೆಂಜರ್ ರೈಲಿನ ಓಡಾಟ ಆರಂಭಗೊಂಡಿತು. ಇವತ್ತು ದೇಶದ ಎಲ್ಲ ಮೂಲೆಗಳನ್ನು ಸಮಾನಾಂತರ ರೇಖೆಗಳೊಂದಿಗೆ 300ಕ್ಕೂ ಅಧಿಕ ರೈಲ್ವೆ ಯಾರ್ಡ್ ಬೆಸೆದಿದೆ. ಪ್ರಾಯಶಃ ಒಂದೇ ಒಂದು ದಿನ, ಅಲ್ಲ ಒಂದು ಗಂಟೆ ದೇಶದ ರೇಲ್ವೆ ವ್ಯವಸ್ಥೆ ಸ್ಥಗಿತಗೊಂಡರೆ ಇಡೀ ಜನಜೀವನವೇ ಕನಿಷ್ಠ ಹತ್ತು ವರ್ಷ ತನ್ನ ಅಭಿವೃದ್ಧಿಯನ್ನು ಕಳೆದುಕೊಂಡೀತು ಎನ್ನುವುದು ಅತಿಶಯ ಬಣ್ಣನೆ ಎನ್ನಿಸಿದರೂ ರೇಲ್ವೆಯ ಸೇವಾ ದಕ್ಷತೆ ವಿಚಾರದಲ್ಲಿ ಅದು ಸತ್ಯ. ಒಂದಿಡೀ ಬದುಕೇ ಹಳಿಗಳ ಮೇಲೆ ಸಾಗುತ್ತಲೇ ಇದ್ದರೆ ಅದು ಭಾರತದಲ್ಲಿ ಮಾತ್ರ. ಇಂದಿಗೂ ರೇಲ್ವೆ ತನ್ನ ಬೇಡಿಕೆಯನ್ನು ವೃದ್ಧಿಸಿಕೊಳ್ಳುತ್ತಲೇ ಇದೆ. ಏಕೆಂದರೆ ಅತ್ಯಂತ ಅಗ್ಗದಲ್ಲಿ ಸುಖಕರ, ಸುರಕ್ಷಿತ, ಕ್ಷಿಪ್ರ ಪ್ರಯಾಣಕ್ಕೆ ಮತ್ತೊಂದು ಹೆಸರು ಭಾರತೀಯ ರೇಲ್ವೆ. ಹಿಮಸಾಗರ್ ಎಕ್ಸ್ಪ್ರೆಸ್ ಇದಕ್ಕೆ ಸ್ಪಷ್ಟ ಸಾಕ್ಷಿ. ಜಮ್ಮುತಾವಿ ಹಾಗೂ ಕನ್ಯಾಕುಮಾರಿ ನಡುವಿನ ಅತ್ಯಂತ ಸುದೀರ್ಘ 3,726 ಕಿ.ಮೀಗಳಷ್ಟು ಮಾರ್ಗದಲ್ಲಿ ಸಂಚರಿಸುವ ಇದು ದೇಶದ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಅತಿಕಡಿಮೆ ವೆಚ್ಚದಲ್ಲಿ ಬೆಸೆದಿದೆ. ಮೂರು ಭಿನ್ನ ಗೇಜ್ಗಳೊಂದಿಗೆ ನಾಲ್ದಿಕ್ಕುಗಳನ್ನೂ ಬೆಸೆದಿರುವುದು ಇನ್ನೊಂದು ದಾಖಲೆ. 1.65 ದಶಲಕ್ಷಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ಏಕೈಕ ಸಂಸ್ಥೆ ಎಂಬ ಮತ್ತೊಂದು ಹೆಗ್ಗಳಿಕೆಯೂ ಭಾರತೀಯ ರೇಲ್ವೆಯದ್ದು.
ನಗರಗಳ ಸಂಚಾರ ದಟ್ಟಣೆಯನ್ನು ಹಗುರಗೊಳಿಸಿದ ಹೆಮ್ಮೆ ಭಾರತದ ಮೆಟ್ರೊ ರೇಲ್ವೆಯದ್ದು. ಕೋಲ್ಕೊತ್ತಾದಲ್ಲಿ ಮೊದಲ ಬಾರಿಗೆ ದೇಶದಲ್ಲಿ ಆರಂಭವಾದ ಮೆಟ್ರೊ ಸೇವೆ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ವಾಣಿಜ್ಯ ನಗರಿಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. 1973ರಲ್ಲಿ ಇಂದಿರಾಗಾಂಧಿ ಅವರು ಕೋಲ್ಕತ್ತಾದಲ್ಲಿ ಮೆಟ್ರೊ ವ್ಯವಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇವತ್ತು ಕೋಲ್ಕತ್ತಾ ಮೆಟ್ರೊ 16.45 ಕಿ.ಮೀ. ಉದ್ದದ ನಗರಪ್ರಯಾಣವನ್ನು ಕೇವಲ 32 ನಿಮಿಷಗಳಲ್ಲಿ ಸಾಧ್ಯವಾಗಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ನಿತ್ಯ ಪ್ರಯಾಣಿಕರು ಕ್ಷಿಪ್ರಯಾನದ ಸದುಪಯೋಗ ಪಡೆಯುತ್ತಿದ್ದಾರೆ. ಸ್ವಚ್ಛತೆ ಮೆಟ್ರೊ ರೇಲ್ವೆಯ ಇನ್ನೊಂದು ವಿಶೇಷ. ದೆಹಲಿ, ಮುಂಬೈ ಹಾಗೂ ಹೈದರಾಬಾದ್ ಮೆಟ್ರೊ ವ್ಯವಸ್ಥೆ ಸಹ ಇದರ ಕೀರ್ತಿಗಿಟ್ಟ ಮತ್ತಷ್ಟು ಗರಿಗಳು.
ಸಿಟಿ ಬಸ್ ಸ್ಪೆಷಲ್
ನಗರ ಸಾರಿಗೆ ವ್ಯವಸ್ಥೆ ಭಾರತೀಯ ಸಂಪರ್ಕದಲ್ಲಿ ಮಾಡಿದ ಕ್ರಾಂತಿಯನ್ನು ವಿಶ್ವ ನಿಬ್ಬೆರಗಾಗಿ ನೋಡುತ್ತಿದೆ. ಅದರಲ್ಲೂ ಮುಂಬೈ ಮತ್ತು ಬೆಂಗಳೂರಿನ ನಗರ ಸಾರಿಗೆ ವ್ಯವಸ್ಥೆಗಳು ಇನ್ನಿಲ್ಲದ ಇತಿಹಾಸವನ್ನು ಬರೆದಿವೆ. ಆಯೋಜಿತ ರಸ್ತೆ ಜಾಲ ಹಾಗೂ ನಗರ ಬೆಳವಣಿಗೆ ನಡುವೆಯೂ ಮೆಟ್ರೊ ಜನಜೀವನವನ್ನು ಸುರಕ್ಷಿತವಾಗಿ ಹೊತ್ತೊಯ್ಯುವ ಇವು 'ಇಲ್ಲಿ ಮಾತ್ರ ಇದು ಸಾಧ್ಯ' ಎಂಬ ಮಾತನ್ನು ಪೋಷಿಸಿಕೊಂಡಿವೆ. ದಟ್ಟಣೆಯ ಅವಧಿಯ ಸೇವೆಯನ್ನು ಹೊರತುಪಡಿಸಿಯೂ ನಗರದ ಮೂಲೆಮೂಲೆಗಳನ್ನು ಸಮರ್ಥವಾಗಿ ನಗರ ಸಾರಿಗೆ ಬಸ್ಗಳು ಬೆಸೆದಿವೆ. 3380ಕ್ಕೂ ಹೆಚ್ಚು ಮಾರ್ಗಗಳಲ್ಲಿ ಮುಂಬೈ ಟ್ರಾನ್ಸ್ಪೋರ್ಟ್ ಓಡಾಡುತ್ತಿದ್ದರೆ ಬೆಂಗಳೂರಿನಲ್ಲಿ ಬಿಎಂಟಿಸಿ 6399 ಮಾರ್ಗಗಳಲ್ಲಿ 83688 ಟ್ರಿಪ್ಗಳನ್ನು ಆಕರಿಸುತ್ತಿದೆ. ಟ್ಯಾಕ್ಸಿ, ಆಟೋರಿಕ್ಷಾಗಳ ಪೈಪೋಟಿಯನ್ನೂ ಮೀರಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ಸೌಲಭ್ಯ ನೀಡುತ್ತಿದೆ. ಮೆಟ್ರೊ ರೈಲುಗಳಿದ್ದರೂ ನಗರ ಸಾರಿಗೆ ವ್ಯವಸ್ಥೆಯ ಜನಪ್ರಿಯತೆ ದೇಶದಲ್ಲಿ ಕಡಿಮೆ ಆಗಿಲ್ಲ. ನಗರಗಳ ಅವೈಜ್ಞಾನಿಕ ಸಂಚಾರ ವ್ಯವಸ್ಥೆಯ ಸಂಕಷ್ಟವನ್ನು ಪರಿಹರಿಸುವಲ್ಲಿ ನಮ್ಮ ನಗರ ಸಾರಿಗೆಗಳ ವ್ಯವಸ್ಥೆ ಮಹತ್ವದ್ದು.
ಬಾನುಲಿಯೆಂಬ ಜನದನಿ
'ಬಾನುಲಿ' ಭಾರತದ ಧ್ವನಿ. ಆಕಾಶವಾಣಿ ಮನರಂಜನೆಯಷ್ಟೇ ಅಲ್ಲ, ಮಾಹಿತಿ ಮತ್ತು ಜ್ಞಾನಪ್ರಸಾರದ ಸಮರ್ಥ ಮಾಧ್ಯಮ ಕೂಡ. ಸ್ಯಾಟಲೈಟ್ಗಳು ದೂರದರ್ಶನ ವ್ಯವಸ್ಥೆಯನ್ನು ಹೊತ್ತು ತರುವ ಎಷ್ಟೋ ಮೊದಲೇ ಭಾರತದಂಥ ಅತಿವಿಸ್ತಾರದ ದೇಶದಲ್ಲಿ ಏಕಕಾಲಕ್ಕೆ ಬಿತ್ತರಗೊಳ್ಳುತ್ತಿದ್ದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಮ್ಮ ರೇಡಿಯೊ ಮಾತ್ರವೇ ಸಾಟಿ. ಅವಿರತ 30 ವರ್ಷ ಕಾಲ ವಿವಿಧಭಾರತಿ ಭಾರತೀಯರ ಮನಸ್ಸಿನಲ್ಲಿ ನೆಲೆಗೊಂಡು ರಾರಾಜಿಸಿದೆ. 1970ರಲ್ಲಿ ಮನರಂಜನೆಯ ಉದ್ದೇಶದಿಂದ ಮೊದಲ ಬಾರಿಗೆ ಪ್ರಸಾರ ಆರಂಭಿಸಿದ ಆಲ್ ಇಂಡಿಯಾ ರೇಡಿಯೊ ಇಂದಿಗೂ ಜನಪ್ರಿಯವೇ. ಭಾರತದಲ್ಲಿ ಆಕಾಶವಾಣಿಯ ಉದಯರಾಗವಿಲ್ಲದೆ ದೈನಂದಿನ ಜನಜೀವನವೇ ಆರಂಭಗೊಳ್ಳುತ್ತಿರಲಿಲ್ಲ. ದಿನದ 14 ಗಂಟೆ ಸರಿಸುಮಾರು 200ಕ್ಕೂ ಹೆಚ್ಚು ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗುತ್ತಿರುವ ಕಾರ್ಯಕ್ರಮ ವೈವಿಧ್ಯ ಬೇರಾವ ದೇಶದಲ್ಲೂ ಸಿಗಲು ಸಾಧ್ಯವಿಲ್ಲ. ಇಂದಿನ ಎಫ್.ಎಂ ರೇಡಿಯೋ ಹಾವಳಿ ತುಸುಮಟ್ಟಿಗೆ ಆಕಾಶವಾಣಿ ಪ್ರಾಮುಖ್ಯವನ್ನು ಕಡಿಮೆಗೊಳಿಸಿದ್ದು ನಿಜವಾದರೂ ದೇಶದ ಜನಸಂಖ್ಯೆ ಶೇ.97ರಷ್ಟು ಭಾಗವನ್ನು ತಲುಪುತ್ತಿದ್ದಾಗ ವಿವಿಧಭಾರತಿ ಸೇವೆ ಮಾಸಿ ಹೋಗಲು ಸಾಧ್ಯವಿಲ್ಲ. ಟಿ.ವಿ, ದೂರದರ್ಶನ, ಕೇಬಲ್ಗಳ ಭರಾಟೆಯೂ ಅದರ ಮೌಲ್ಯವನ್ನು ಕಸಿದುಕೊಂಡಿಲ್ಲ. ಜನದನಿಯ ಸಂಪರ್ಕ ಸೇತುವಾಗಿ ನಿಂತಿದ್ದು ಇದಕ್ಕೆ ಕಾರಣ.
ಇಂಡಿಯನ್ ಎಕ್ಸ್ಪ್ರೆಸ್
ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಕ್ಷಿಪ್ರಜ್ಞೆ ಭಾರತೀಯ ಪತ್ರಿಕೆಗಳು. ಸ್ವಾತಂತ್ರೋತ್ಸವ ಇತಿಹಾಸದಲ್ಲಿ ಇದು ನಿರ್ಮಿಸಿದ ದಾಖಲೆ ಜಗತ್ತಿಗೆ ಮಾದರಿಯಾದದ್ದು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎರಡು ವರ್ಷ ಮಾತ್ರ ತನ್ನ ಧ್ವನಿಯನ್ನು ಕಳೆದುಕೊಂಡ ಮಾಧ್ಯಮ ಆ ಮೊದಲು ಮತ್ತು ಆ ನಂತರ ಯಾವತ್ತೂ ಸಂಕೋಲೆಯೊಳಗೆ ಬಂಧಿಸಲ್ಪಡಲಿಲ್ಲ. ಆ ಸಂದರ್ಭದಲ್ಲೂ 'ಸ್ಟೇಟ್ಸ್ಮನ್'ನಂಥ ಪತ್ರಿಕೆಗಳು ಖಾಲಿ ಮುಖಪುಟ ಮುದ್ರಿಸಿ ತಮ್ಮ ಪ್ರತಿಭಟನೆ ದಾಖಲಿಸಿತ್ತು. ಸ್ವಾತಂತ್ರ್ಯ ಹೋರಾಟದಲ್ಲೂ ಭಾರತೀಯ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಗಣನೀಯ. ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ನಮ್ಮ ಸಂವಿಧಾನದ ಹೆಗ್ಗಳಿಕೆ. ಮಾಹಿತಿ ಹಕ್ಕು ಇಂದು ಕಾನೂನಾಗಿ ರೂಪುಗೊಂಡಿದೆ. ಮಾಹಿತಿ ನಿರಾಕರಣೆ ಭಾರತದಲ್ಲಿ ಶಿಕ್ಷಾರ್ಹ ಅಪರಾಧ. ಪ್ರಜಾಪ್ರಭುತ್ವ ರಾಷ್ಟ್ರವೊಂದರ ಸಮಾಜ ಸ್ವಾಸ್ಥ್ಯಕ್ಕೆ ಇದು ಅತ್ಯಂತ ಪ್ರಮುಖವಾದದ್ದು. ಆದ್ದರಿಂದಲೇ ನಾವಿದನ್ನು ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಿದ್ದೇವೆ. 1780ರಲ್ಲಿ ಭಾರತದ ಮೊದಲ ಪತ್ರಿಕೆ 'ಬೆಂಗಾಲ ಗೆಜೆಟ್'ನಿಂದ ಶುರುವಾದದ್ದೂ ಇಂಥ ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದೆ. ಮುದ್ರಣ ಸ್ವರೂಪದಲ್ಲಿ ಮಾತ್ರ ಇದ್ದ ಮಾಧ್ಯಮ ಇಂದು ತನ್ನ ಹರವನ್ನು ದೃಶ್ಯಕ್ಕೂ ವಿಸ್ತರಿಸಿಕೊಂಡಿದೆ. ದೇಶದಲ್ಲಿ ನೂರಾರು ಸ್ಯಾಟಲೈಟ್ ಚಾನೆಲ್ಗಳು, 5000ಕ್ಕೂ ಹೆಚ್ಚು ದಿನಪತ್ರಿಕೆ, 16 ಸಾವಿರಕ್ಕೂ ಮಿಕ್ಕಿದ ವಾರಪತ್ರಿಕೆ, 6 ಸಾವಿರದಷ್ಟು ದ್ವೈಮಾಸಿಕಗಳಿರುವುದು ಭಾರತದಲ್ಲಿ ಮಾತ್ರ! ಇಷ್ಟಾದರೂ ನಮ್ಮ ಓದುಗರ ಸಂಖ್ಯೆ ತೃಪ್ತಗೊಂಡಿಲ್ಲ. ಹೊಸಹೊಸ ಪತ್ರಿಕೆಗಳು ಜನಿಸುತ್ತಲೇ ಇವೆ. ಅದೇರೀತಿ ಹೋರಾಟ ಈ ನೆಲದ ಗುಣ. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ನ್ಯಾಯ ಗಳಿಕೆಗಾಗಿ, ಪ್ರಸಕ್ತ ಬೆಳವಣಿಗೆಗಳ ಬಗೆಗೆ ಅಭಿಮತ ದಾಖಲೆಗಾಗಿ ಇರುವ ಸಮರ್ಥ ಮಾಧ್ಯಮ ಚಳವಳಿ. ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯ ರಂಗಗಳಲ್ಲಿ ನಾವು ಭಾರತೀಯರು ದಾಖಲಿಸಿದಷ್ಟು ಸಂಖ್ಯೆಯ ಚಳವಳಿ ಬೇರಾರಿಂದಲೂ ಈವರೆಗೆ ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಹೋರಾಟವೇ ಮೊದಲ್ಗೊಂಡು ತೀರಾ ಇತ್ತೀಚೆಗೆ ಭ್ರಷ್ಟಾಚಾರ ವಿರೋಧಿ ಆಂದೋಲನದವರೆಗೆ ನಮ್ಮಲ್ಲಿ ನಡೆದ ಹೋರಾಟಗಳು ಅವೆಷ್ಟೋ.
ಆ ದೊಡ್ಡ ಐಟಿ ಗಾಳಿ
ವಿದ್ಯುನ್ಮಾನ ಸೇರಿದಂತೆ ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಇಂದು ವಿಶ್ವ ನಾಯಕತ್ವಕ್ಕೆ ಪೈಪೋಟಿ ಒಡ್ಡಿದೆ. ಬೆಂಗಳೂರು ಹೈದರಾಬಾದ್ನಂಥ ಐಟಿ ಹಬ್ಗಳು ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕುವತ್ತ ಸಾಗುತ್ತಿವೆ. ಭಾರತದ ಇನ್ಫೋಸಿಸ್ ಒಂದೇ ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಆಳುವಷ್ಟು ಸಾಮರ್ಥ್ಯ ಸಾಬೀತುಪಡಿಸಿದೆ. ಕನ್ನಡಿಗ ನಾರಾಯಣಮೂರ್ತಿ ಅವರ ಜೀವಮಾನದ ಕನಸಿನ ಕೂಸಾಗಿ ಜನಿಸಿದ ಇನ್ಫೋಸಿಸ್, ಇಂದು ಜಗತ್ತಿನ ಮನೆಮಾತು. ಕರ್ನಾಟಕದ ಇನ್ನೊಂದು ಪ್ರಮುಖ ಸಂಸ್ಥೆ ವಿಪ್ರೊ ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಅಜೀಂ ಪ್ರೇಮ್ಜಿ ನೇತೃತ್ವದಲ್ಲಿ ಕಳೆದೊಂದು ದಶಕದಲ್ಲಿ ಅದು ನಡೆಸಿದ ಕ್ರಾಂತಿ ಜನಜನಿತ. ಮೊಟೊರೊಲಾ, ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಹ ಭಾರತದ ಗ್ಲೋಬಲ್ ಬ್ರಾಂಡ್ಗಳಾಗಿವೆ. 1990ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಸಾಫ್ಟ್ವೇರ್ ಉದ್ದಿಮೆಗಳ ಸಂಘಟನೆ ನಾಸ್ಕಾಂ 4,000 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಸಾಫ್ಟ್ವೇರ್ ರಫ್ತು ದಾಖಲಿಸುವ ಮೂಲಕ ಆರ್ಥಿಕ ಮೌಲ್ಯವರ್ಧನೆಗೆ ಕೊಡುಗೆ ನೀಡಿದೆ. ಐಟಿ ವಲಯದಲ್ಲಿ ಭಾರತದ ರಫ್ತು ವಹಿವಾಟು ಪ್ರತಿವರ್ಷ ಸುಮಾರು 100 ಶತಕೋಟಿ. ಪ್ರತಿವರ್ಷ ಸರಾಸರಿ ಶೇ. 10ರಷ್ಟು ಬೆಳವಣಿಗೆ ದಾಖಲಿಸುತ್ತಲೇ ಸಾಗಿದೆ.
ಮಠ ಮಂದಿರಗಳು
ಜಾತ್ಯತೀತ ರಾಷ್ಟ್ರವಾಗಿದ್ದರೂ ಧಾರ್ಮಿಕವಾದ ವಿಶೇಷ ಪರಂಪರೆಯನ್ನು ಭಾರತ ದೊಂದಿದೆ. ನಂಬಿಕೆ ಈ ನೆಲದ ಮಣ್ಣಿನ ಗುಣ. ದೇವರು ಇಲ್ಲಿ ಸರ್ವಾಂತರ್ಯಾಮಿ. ಮಠ-ಮಂದಿರಗಳು ಜನಜೀವನದ ದಿನಚರಿಯ ಭಾಗ. ಪೂಜೆ, ಪುನಸ್ಕಾರಕ್ಕೆ ನಮ್ಮದು ವಿಶೇಷ ಆದ್ಯತೆ. ಧಾರ್ಮಿಕವಾಗಿಯಷ್ಟೇ ಅಲ್ಲ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮುದಾಯಿಕ ಹಾಗೂ ಕೌಟುಂಬಿಕ ಹಿರಿಮೆಯನ್ನು ಸಾರುವ ತಾಣವಾಗಿ ನಮ್ಮ ದೇಗುಲಗಳು ಪರಿಗಣಿಸಲ್ಪಡುತ್ತವೆ. ಕೆರೆ ಮತ್ತು ದೇಗುಲಗಳಿಲ್ಲದ ಗ್ರಾಮೀಣ ಭಾರತವನ್ನು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ತಿರುಪತಿಯಂಥ ಶ್ರೀಮಂತ ದೇಗುಲಗಳೂ ನಮ್ಮ ಪರಂಪರೆಯಲ್ಲಿವೆ. ವರ್ಷಕ್ಕೆ 500 ಕೋಟಿ ರುಪಾಯಿಗೂ ಹೆಚ್ಚು ಆದಾಯವನ್ನು ಈ ದೇಗುಲ ದಾಖಲಿಸುತ್ತಿದೆ. ವ್ಯವಸ್ಥಾಪನೆ ದೃಷ್ಟಿಯಿಂದಲೂ ಇದು ಜಗತ್ತಿನಲ್ಲಿ ದಾಖಲೆ. ಸರಾಸರಿ 45 ಸಾವಿರ ಭಕ್ತರು ನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ.
ಹಾಗೆಯೇ ಗುರು ಮತ್ತು ಮಠಕ್ಕೆ ನಮ್ಮದು ಅದ್ವೀತಿಯ ಸ್ಥಾನ. ಧಾರ್ಮಿಕ ನಾಯಕತ್ವದೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಸಾಧಿಸುವಲ್ಲಿ ಭಾರತೀಯ ಮಠಗಳು ವಹಿಸುವ ಪಾತ್ರ ಮಹತ್ವಪೂರ್ಣವಾದುದು. ಒಂದು ಅಂಕಿ-ಅಂಶದ ಪ್ರಕಾರ ಕರ್ನಾಟಕವೊಂದರಲ್ಲೇ 10 ಸಾವಿರಕ್ಕೂ ಹೆಚ್ಚು ಗುರುಮಠಗಳು ಇವೆ ಎನ್ನಲಾಗಿದೆ. ಗಂಗಾ ತಟದಲ್ಲಿ ದೇಶದ ಅತಿಹೆಚ್ಚು ಮಠಗಳು ಸ್ಥಾಪನೆಗೊಂಡಿವೆ. ವಿಶ್ವಕ್ಕೆ ಧಾರ್ಮಿಕ ನಾಯಕತ್ವ ಹಾಗೂ ಧರ್ಮಬೋಧೆಯನ್ನು ನೀಡಿದ್ದು ನಮ್ಮ ಮಠಗಳ ವೈಶಿಷ್ಟ್ಯ. ಮಾಧ್ವ ಮತ್ತು ಶಂಕರಾಚಾರ್ಯ ಪರಂಪರೆಯಲ್ಲಿ ದೇಶದ ಉದ್ದಗಲಕ್ಕೆ ಹರಡಿರುವ ಗುರುಪೀಠಗಳು ಪ್ರಭುತ್ವಕ್ಕೂ ಮಾರ್ಗದರ್ಶನ ನೀಡುತ್ತ ಬಂದಿವೆ. ಇತ್ತೀಚಿನ ಕಾರ್ಪೊರೇಟ್ ಮಠಗಳೂ ಸಹ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ.
ಪಶ್ಚಿಮಘಟ್ಟವೆಂಬ ತಡೆಗೋಡೆ
ಹಚ್ಚಹಸಿರ ಹೊಚ್ಚಡವನ್ನು ಹೊದ್ದು ಮಲಗಿರುವ ನಮ್ಮ ಪಶ್ಚಿಮಘಟ್ಟ ಭಾರತೀಯ ಪಾರಿಸಾರಿಕ ಸಿರಿವಂತಿಕೆಯನ್ನು ಇಮ್ಮಡಿಸಿದೆ. ಯುನೆಸ್ಕೊದ ವಿಶ್ವ ಪಾರಂಪರಿಕ ಸ್ಥಳಗಳೆಂಬ ಮಾನ್ಯತೆಯನ್ನೂ ಗಳಿಸಿರುವ ಭಾರತದ 29ನೇ ಸ್ಥಳವಾದ ಪಶ್ಚಿಮ ಘಟ್ಟ, ಜಗತ್ತಿನ ಜೀವವೈವಿಧ್ಯದ ಎಂಟು ಪ್ರಮುಖ ತಾಣಗಳಲ್ಲೊಂದು ಎನ್ನುವ ಹಿರಿಮೆಗೂ ಪಾತ್ರವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗೋವಾ, ತಮಿಳುನಾಡುಗಳಲ್ಲಿ ಹಾದುಹೋಗುವ 1600 ಕಿ.ಮೀ. ಉದ್ದದ ಪಶ್ಚಿಮ ಘಟ್ಟ ನಿಜಕ್ಕೂ ಹಾಟ್ಸ್ಪಾಟ್. 5,000 ಸಸ್ಯ ಪ್ರಭೇದಗಳು, 139 ಸಸ್ತನಿ, 508 ಪಕ್ಷಿ, 334 ಚಿಟ್ಟೆ, 179 ಉಭಯವಾಸಿ ಪ್ರಭೇದಗಳು ಇಲ್ಲಿವೆ. ಇಡೀ ದೇಶದ ಹವಾಮಾನ ಪರಿಸ್ಥಿತಿಯನ್ನೇ ನಿಯಂತ್ರಿಸುವುದು ಪಶ್ಚಿಮಘಟ್ಟ ಹಾಗೂ ಹಿಮಾಲಯ ಪರ್ವತ ಶ್ರೇಣಿಗಳು ಎನ್ನುವುದು ವಿಶೇಷ. ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ಉಪಖಂಡಗಳಿಂದ ಬರಬಹುದಾದ ಮಾನವ ನಿರ್ಮಿತ ಅಥವಾ ನೈಸರ್ಗಿಕ ದಾಳಿಯನ್ನು ಸಮರ್ಥವಾಗಿ ತಡೆದು ದೇಶವನ್ನು ರಕ್ಷಿಸುತ್ತಿರುವ ಶಕ್ತಿಶಾಲಿ ಪರ್ವತಗಳ ಸಾಲು ಹಿಮಾಲಯ. 10 ದಶಲಕ್ಷ ವರ್ಷ ಹಿಂದೆ ಭೂಫಲಕಗಳ ಚಲನೆಯಿಂದ ಕೆಳಗಿನ ಭೂಭಾಗ ಒತ್ತರಿಸಿಬಂದು ನಿರ್ಮಾಣಗೊಂಡಿರುವ ಈ ಪರ್ವತ ಶ್ರೇಣಿ ಕಣ್ಮನ ಸೆಳೆಯುವ ಸೌಂದರ್ಯದಿಂದ ಭಾರತದ ಹೆಗ್ಗುರುತು ಎನ್ನಿಸಿದೆ. ದಕ್ಷಿಣದ ಅರಾವಳಿ ಇದಕ್ಕಿಂತ 100 ಕೋಟಿ ವರ್ಷ ಹಳೆಯದು. ಪ್ರತಿವರ್ಷ 5 ಸೆಂ.ಮೀ.ನಷ್ಟು ಟಿಬೆಟಿಯನ್ ಪ್ಲಾಟೊದೊಳಗೆ ಭೂಭಾಗ ಜರುಗುವುದರೊಂದಿಗೆ ಹಿಮಾಲಯ ಪರ್ವತ ಶ್ರೇಣಿ 1.5 ಸೆಂ.ಮೀ.ನಷ್ಟು ಇಂದಿಗೂ ಬೆಳೆಯುತ್ತಿದೆ. ಮುಗುಲು ಚುಂಬಿಸುವ ರೀತಿಯಲ್ಲಿ ಬೆಳೆದು ನಿಂತಿರುವ ಹಿಮರಾಶಿ, ಮುಂಗಾರು ಮಾರುತಗಳನ್ನು ತಡೆದು ನಿಲ್ಲಿಸಿ ದೇಶಾದ್ಯಂತ ನಿರಂತರ ಮಳೆ ಸುರಿಸುವ ಆದೇಶವನ್ನೂ ನೀಡುತ್ತಿದೆ. ಧಾರ್ಮಿಕ, ಸಾಹಸ ಹಾಗೂ ಪಾರಿಸಾರಿಕ ಪ್ರವಾಸಿ ತಾಣವಾಗಿ ಹಿಮಾಲಯ ವಿಶ್ವದ ಗಮನ ಸೆಳೆಯುತ್ತಿದೆ.
ಐಐಟಿ- ಐಐಎಂ
ಶೈಕ್ಷಣಿಕ ರಂಗದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ)ಗಳು ಧ್ರುವತಾರೆಗಳಂತೆ ಮಿನುಗುತ್ತಿವೆ. ಜಗತ್ತಿನ ಜ್ಞಾನದಾಹ ನೀಗಿಸುವ ನಿಟ್ಟಿನಲ್ಲಿ ಗ್ಲೋಬಲ್ ಗುಣಮಟ್ಟದೊಂದಿಗೆ ತಾಂತ್ರಿಕ ಹಾಗೂ ನಿರ್ವಹಣಾ ಕೌಶಲವನ್ನು ಇವು ಬೋಧಿಸುತ್ತಿವೆ. ದೇಶದಲ್ಲಿ ಒಟ್ಟು ಆಳು ಐಐಟಿಗಳಿದ್ದು, 1951ರಲ್ಲಿ ಖರಗ್ಪುರದಲ್ಲಿ ಮೊದಲ ಸಂಸ್ಥೆ ಜನ್ಮತಾಳಿತು. ಉಳಿದಂತೆ ಚೆನ್ನೈ, ಮುಂಬೈ, ದೆಹಲಿ, ಖಾನ್ಪುರ, ಗುವಾಹತಿ ಹಾಗೂ ರೂರ್ಕಿಗಳಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕನಸಿನ ಬೀಜವಾಗಿ ಇವು ಮೊಳೆತಿವೆ. ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದೇ ಒಂದು ಗೌರವ ಎಂಬಷ್ಟರಮಟ್ಟಿಗಿನ ಪ್ರತಿಷ್ಠೆ ಐಐಟಿಗಳದ್ದು. ವರ್ಷಕ್ಕೆ 2000ಕ್ಕೂ ಹೆಚ್ಚಿನ ಪದವೀಧರರನ್ನು ಐಐಟಿಗಳು ನೀಡುತ್ತಿವೆ. ಲಕ್ಷಕ್ಕೂ ಅಧಿಕ ಮಂದಿ ಪ್ರವೇಶಾಪೇಕ್ಷೆಯಿಂದ ಅರ್ಜಿ ಹಾಕುತ್ತಿದ್ದಾರೆ ಎಂದರೆ ಗುಣಮಟ್ಟವನ್ನು ಊಹಿಸಬಹುದು. ಐಐಟಿ ಹಳೆ ವಿದ್ಯಾರ್ಥಿಗಳೆಂದರೆ ವಿಶೇಷ ಗೌರವ. ಜಾಗತಿಕ ಮಟ್ಟದಲ್ಲಿ ಸಿಟಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ವಿಕ್ಟರ್ ಮನೇಸ್, ಮ್ಯಾಕಿನ್ಸೆ ಆ್ಯಂಡ್ ಕಂಪನಿಯ ರಜತ್ ಗುಪ್ತಾ, ಕ್ಲೈನರ್ ಪರ್ಕಿನ್ಸ್ನ ವಿನೋದ್ ಕೌಶಲ್, ಎಟಿ ಅಂಡ್ ಟಿ ಬೆಲ್ ಲ್ಯಾಬರೊಟರಿಸ್ನ ಅರುಣ್ ಎನ್. ನೇತ್ರಾವಳಿ, ಇನ್ಫೋಸಿಸ್ನ ನಾರಾಯಣಮೂರ್ತಿ ಐಐಟಿ ಪ್ರತಿಭೆಗಳ ಕೆಲ ಉದಾಹರಣೆ.
ಇನ್ನು ಐಐಎಂ ಹೆಗ್ಗಳಿಕೆ ಇದಕ್ಕಿಂತ ಕಡಿಮೆ ಏನೂ ಇಲ್ಲ. ಬೆಂಗಳೂರು ಸೇರಿದಂತೆ ದೇಶದ 13 ನಗರಗಳಲ್ಲಿ ಇರುವ ಐಐಎಂಗಳೂ ನಿರ್ವಹಣಾ ಕೌಶಲದ ಮತ್ತೊಂದು ಹೆಸರು. ಅಹಮದಾಬಾದ್ ಐಐಎಂ ಜಗತ್ತಿನ ಅತ್ಯಂತ ಕಠಿಣ ಮ್ಯಾನೇಜ್ಮೆಂಟ್ ಶಾಲೆ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್, ಕೊಲಂಬಿಯಾ ಯೂನಿವರ್ಸಿಟಿ, ಸ್ಪೇನ್ನ ಇನ್ಸ್ಟಿಟ್ಯುಟೊ ಡಿ ಎಂಪ್ರೆಸಾ ಹಾಗೂ ಫ್ರಾನ್ಸ್ನ ಇನ್ಸೀಡ್ಗಳಷ್ಟೇ ಗೌರವ ಅಹಮದಾಬಾದ್ನ ಈ ಸಂಸ್ಥೆಗಿದೆ. ಐಐಎಂಗಳು ಕೂಡ ನೆಹರು ಕನಸಿನ ಕೂಸುಗಳೇ. 1961ರಲ್ಲಿ ಮೊದಲ ಐಐಎಂ ಕೋಲ್ಕತ್ತಾದಲ್ಲಿ ಜನ್ಮತಾಳಿತು. ಇಂದು ಅಹಮದಾಬಾದ್, ಬೆಂಗಳೂರು, ಲಖನೌ, ಕೋಜಿಕ್ಕೋಡ್, ಶಿಲ್ಲಾಂಗ್, ಇಂದೋರ್, ರೋಹ್ಟಕ್, ರಾಂಚಿ, ರಾಯ್ಪುರ, ತಿರುಚನಾಪಳ್ಳಿ, ಉದಯಪುರ, ಕಾಶಿಪುರಗಳಲ್ಲಿ ಐಐಎಂಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಪದವಿ ಪಡೆದವರ ಆರಂಭಿಕ ವಾರ್ಷಿಕ ವೇತನ ಸರಾಸರಿ 20 ಲಕ್ಷ ಎಂದರೆ ಈ ಸಂಸ್ಥೆಗಳ ಗುಣಮಟ್ಟವನ್ನು ಅಂದಾಜಿಸಬಹುದು.
ಆಹಾರ ದರ್ಶಿನಿಗಳು
ಜಗತ್ತಿನ ಯಾವುದೇ ಪ್ರಮುಖ ಪಟ್ಟಣಗಳಿಗೆ ಹೋದರೆ ನಿಮ್ಮನ್ನು ಸ್ವಾಗತಿಸಲು ಒಂದಾದರೂ ಉಡುಪಿ ಹೋಟೆಲ್ ಇದ್ದೇಇರುತ್ತದೆ ಎನ್ನುವುದು ಉತ್ಪ್ರೇಕ್ಷೆ ಏನಲ್ಲ. ಆಹಾರೋದ್ಯಮದಲ್ಲಿ ದರ್ಶಿನಿಗಳು ಮತ್ತು ಉಡುಪಿ ಹೋಟೆಲ್ ಪರಿಕಲ್ಪನೆಯೇ ವಿಶಿಷ್ಟವಾದದ್ದು. ಇಲ್ಲಿನ ಮಸಾಲೆ ದೋಸೆಯಿಂದ ತಣಿಯದ ಜಿಹ್ವೆ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ. ಅಕ್ಕಿಯಿಂದ ತಯಾರಿಸುವ ವಿಶಿಷ್ಟ ಗರಿಗರಿ ತಿಂಡಿ ಜತೆ ಆಲೂ ಪಲ್ಯ, ಘಮಘಮಿಸುವ ಸಾಂಬಾರ್ ನೀಡುವ ತೃಪ್ತಿಯೇ ವಿಭಿನ್ನ. ಹಾಗೆಯೇ ಭಾರತದ, ಅದರಲ್ಲೂ ದಕ್ಷಿಣ ಭಾರತದಲ್ಲಿ ತಯಾರಾಗುವ ಉದ್ದಿನ ವಡೆ ಮತ್ತು ಇಡ್ಲಿ ರುಚಿಗೆ ಅದು ಮಾತ್ರವೇ ಸಾಟಿ. ಬೆಳಗಿನ ಆರೋಗ್ಯಕಾರಿ, ನಿರುಪದ್ರವಿ ಹಾಗೂ ಅತ್ಯಂತ ಪುಷ್ಟಿದಾಯಕ ಆಹಾರ ಎನ್ನುವ ವಿಶ್ವಮಾನ್ಯತೆ ನಮ್ಮ ಇಡ್ಲಿ ಸಾಂಬಾರ್ಗೆ. ಬೇರಾವ ತಿಂಡಿಗೂ ಇಲ್ಲದ ವಿಶೇಷ ಕಾಂಬಿನೇಷನ್ ಇಡ್ಲಿ, ಚಟ್ನಿ, ಸಾಂಬಾರ್, ವಡಾದ್ದು. ಜಗತ್ತಿನ ಯಾವುದೇ ಆಹಾರ ತಜ್ಞರಿಗೆ ದಕ್ಕದ ವಿಶೇಷ ರಹಸ್ಯ ನಮ್ಮ ಅಡುಗೆಭಟ್ಟರದ್ದು. ಉಡುಪಿ ಎಂಬ ದೇಗುಲ ನಗರಿಯಲ್ಲಿ ಜನಿಸಿದ ಈ ತಿನಿಸುಗಳು ಮಧ್ವಾಚಾರ್ಯರ ಧರ್ಮಬೋಧೆಯಷ್ಟೇ ಹಿತವನ್ನು ನೀಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಶತಮಾನಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಇಡ್ಲಿ, ವಡಾ ಮತ್ತು ದೋಸೆಗಳು ಶುದ್ಧ ಸಸ್ಯಾಹಾರಿ ಖಾದ್ಯ ಹಾಗೂ ಸಾಂಪ್ರದಾಯಿಕ ಬ್ರಾಹ್ಮಣ ಶೈಲಿಯ ಅಡುಗೆಮನೆಯಲ್ಲಿ ಜನಿಸಿದ್ದೆಂಬ ಇತಿಹಾಸ ಹೊಂದಿವೆ. ಚಿಕಾಗೊ, ಲಂಡನ್, ಟೋಕಿಯೊ, ಅಬುದಾಬಿ, ಜೋಹಾನೆಸ್ಬರ್ಗ್ ಸೇರಿದಂತೆ ಜಗತ್ತಿನ ಎಲ್ಲೆಡೆ ಉಡುಪಿ ಹೋಟೆಲ್ಗಳು ರಾರಾಜಿಸುತ್ತಿವೆ ಮತ್ತು ದಕ್ಷಿಣ ಭಾರತದ ಈ ವಿಶೇಷ ಬ್ರಾಂಡ್ ತಿನಿಸನ್ನು ಬಿತ್ತರಿಸುತ್ತಿವೆ. ದಕ್ಷಿಣ ಭಾರತೀಯ ಅಡುಗೆಯಲ್ಲಿ ಮತ್ತೊಂದು ಜನಪ್ರಿಯ ಬ್ರಾಂಡ್ ಸಾಂಬಾರ್. ತರಕಾರಿ, ಬೇಳೆ ಜತೆ ತೆಂಗಿನಕಾಯಿ, ಮಸಾಲೆ ಪದಾರ್ಥಗಳ ಹದವಾದ ಮಿಶ್ರಣದಲ್ಲಿ ಕುದಿಯುವ ಸಾಂಬಾರ್ ಸುವಾಸನೆ ಹಾಗೂ ಅದ್ವಿತೀಯ ರುಚಿಯೊಂದಿಗೆ ಪಾಶ್ಚಿಮಾತ್ಯರನ್ನೂ ಸೆಳೆದಿದೆ. ಇಂಗ್ಲೆಂಡ್ನಲ್ಲಿ ವೀಕೆಂಡ್ ವಿಶೇಷ ರುಚಿಯಾಗಿ ಕರಿಬೇವಿನ ಘಮದೊಂದಿಗೆ ಸರ್ವ್ ಮಾಡಲಾಗುವ ನಮ್ಮ ಸಾಂಬಾರ್ ಅನ್ನು ಸವಿಯಲಾಗುತ್ತದೆ. ಅಲ್ಲಿನ ಹೋಟೆಲ್ಗಳ ಭಾನುವಾರದ ಮೆನುವಿನಲ್ಲಿ ಅನ್ನ, ಸಾಂಬಾರ್ಗೆ ಪ್ರಥಮ ಆದ್ಯತೆ.
ಇದು ಸ್ವರ ಸಾಗರ
ಭಾರತೀಯ ಸಂಗೀತ ಎಂದರೆ ಇಂಪಿಗೆ ಇನ್ನೊಂದು ಹೆಸರು. ಶಾಸ್ತ್ರೀಯ ಪರಂಪರೆಯಲ್ಲಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಎಂಬ ಎರಡು ವಿಧಗಳು ಇವೆ. ಇಲ್ಲಿನ ಸಂಗೀತ ದಿಗ್ಗಜರು ಜಗತ್ತಿನ ಯಾವುದೇ ಸ್ವರ ಪರಂಪರೆಗೆ ಕಡಿಮೆ ಇಲ್ಲದ ಇತಿಹಾಸ ಬರೆದಿದ್ದಾರೆ. ದಕ್ಷಿಣ ಭಾರತದ ದಾಸ ಸಮುದಾಯ ಸಂಗೀತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ದಾಖಲಿಸದೇ ಇರಲಾಗದು. ಹಾಗೆಯೇ ಉತ್ತರದ ಸೂಫಿಸಂತರು, ಘಜಲ್, ಕವ್ವಾಲಿ, ಜಾನಪದ, ರಂಗಭೂಮಿ, ಭಜನೆ ಮತ್ತು ಕೀರ್ತನ ಶೈಲಿಯೂ ಗಮನಾರ್ಹ. ಅಬ್ಬರವಿಲ್ಲದ, ಕಿವಿಗೆ ಇಂಪಾದ ಶೈಲಿ ನಮ್ಮದು. ಅತ್ಯಂತ ಕರಾರುವಾಕ್ಕು ಕಲಿಕೆಯೊಂದಿಗೆ ಮಾತ್ರ ತಾಳ, ಸ್ವರ, ಲಯಗಳೊಂದಿಗೆ ದಕ್ಕಿಸಿಕೊಳ್ಳಬಹುದಾದ ವಿದ್ಯೆ ಎಂದು ನಮ್ಮ ಶಾಸ್ತ್ರೀಯ ಸಂಗೀತ ಪರಿಗಣಿತವಾಗಿದೆ. ಭಾರತೀಯ ಸಂಗೀತ ಉಪಕರಣಗಳೂ ವಿಭಿನ್ನವಾದುವು. ಸಾಧನೆ, ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ಆಸಕ್ತಿಗಳಿಂದ ಮಾತ್ರ ಒಲಿಸಿಕೊಳ್ಳಬಹುದಾದ ಸಂಗೀತ ವಿದ್ಯೆ ಗುರು ಪರಂಪರೆಯಿಂದಲೇ ತಲೆಮಾರಿನಿಂದ ತಲೆಮಾರಿಗೆ ಹಬ್ಬಿಕೊಂಡು ಬಂದಿದೆ.
ಕರಕುಶಲನಗರ
ಕರಕುಶಲ ವಸ್ತುಗಳು ವಿಶ್ವಮಟ್ಟದಲ್ಲಿ ಭಾರತದ ರಾಯಭಾರಿಗಳು. ಆರ್ಥಿಕ ಹಾಗೂ ಸಾಂಸ್ಕೃತಿಕ ಎರಡೂ ದೃಷ್ಟಿಯಿಂದ ಇವು ಭಾರತವನ್ನು ಶ್ರೀಮಂತಗೊಳಿಸಿವೆ. ಸ್ವಾತಂತ್ರ್ಯಪೂರ್ವದ ಜನಪದ ಕುಶಲಗಾರಿಕೆ ರಾಜಾಶ್ರಯ ಪಡೆದಿತ್ತು. ನಂತರದ ದಿನಗಳಲ್ಲಿ ಸರ್ಕಾರಿ ಪ್ರೋತ್ಸಾಹ ಹಾಗೂ ಸಹಾಯಗಳೊಂದಿಗೆ ಅಳಿವನಂಚಿನಿಂದ ಹೊರಬರಲು ಪ್ರಯತ್ನಿಸುತ್ತಿವೆ. ಚನ್ನಪಟ್ಟಣದ ಗೊಂಬೆ, ಮೈಸೂರು ಮತ್ತು ಕಂಚಿಗಳ ರೇಶ್ಮೆ, ಕಾಶ್ಮೀರದ ಶಾಲು, ಜೈಪುರದ ಕೈಮಗ್ಗ, ಒರಿಸ್ಸಾದ ಕಸೂತಿ.... ಒಂದೊಂದು ರಾಜ್ಯದಲ್ಲೂ ಒಂದೊಂದು ಕಲಾಶ್ರೀಮಂತಿಕೆ ನೆಲೆಗೊಂಡಿದೆ. ಶ್ರೀಗಂಧ, ಬೀಟೆಯ ವಿಗ್ರಹಗಳು, ಪೀಠೋಪಕರಣ, ವಸ್ತ್ರವಿನ್ಯಾಸ, ಕಸೂತಿ, ಚಿತ್ರಕಲೆ ಇವೆಲ್ಲವೂ ಭಾರತದ ಹೆಗ್ಗಳಿಕೆಗಳೇ.
ಅನ್ನದೊಂದಿಗೆ ಶಿಕ್ಷಣ
ಅನ್ನ ಹಾಗೂ ಅಕ್ಷರ ದಾಸೋಹಗಳನ್ನು ಭಿನ್ನವಾಗಿ ನಾವೆಂದಿಗೂ ಕಂಡಿಲ್ಲ. ಅವೆರಡಕ್ಕೂ ಮನೆಯೇ ನಮಗೆ ಆಧಾರ. ಸಂತೃಪ್ತ ಹೊಟ್ಟೆಗಳು ಮಾತ್ರ ಮನಸ್ಸನ್ನು ಸುಸ್ಥಿತಿಯಲ್ಲಿಡಲು ಸಾಧ್ಯ ಎನ್ನುವುದು ನಮ್ಮ ನಂಬಿಕೆ. ಖಾಲಿ ಹೊಟ್ಟೆಯಲ್ಲಿದ್ದು ಮನಸ್ಸನ್ನು ತುಂಬಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ ಎನ್ನುವ ಪ್ರತಿಪಾದನೆ ಭಾರತೀಯರದ್ದು. ಜ್ಞಾನ ಎಂದೂ ನಮಗೆ ಉದ್ಯೋಗದ ಉದ್ದೇಶಕ್ಕಾಗಿ ಅಲ್ಲ. ಅದು ವ್ಯಕ್ತಿತ್ವದ ವಿಕಸನಕ್ಕೆ ಇರುವ ಮಾರ್ಗ. ಹೀಗಾಗಿಯೇ ಭಾರತೀಯ ಪರಂಪರೆಯಲ್ಲಿ ಶಿಕ್ಷಣದೊಂದಿಗೆ ಭೋಜನ ಉಚಿತ. ಈ ಪರಿಕಲ್ಪನೆಯಲ್ಲೇ ಉದಯಿಸಿದ್ದು ವಾರಾನ್ನ ಪದ್ಧತಿ. ವಿದ್ಯಾರ್ಥಿ ಜ್ಞಾನ ಹಾಗೂ ಅನ್ನವನ್ನು ಬೇಡಿಯೇ ಗಳಿಸಬೇಕು. ಅದರ ಆಧುನಿಕ ರೂಪ ಮಧ್ಯಾಹ್ನದ ಬಿಸಿಯೂಟ. ಜಗತ್ತಿನ ಬೇರಾವುದೇ ದೇಶದಲ್ಲೂ ಕಾಣಲು ಸಾಧ್ಯವಿಲ್ಲದ ಈ ವ್ಯವಸ್ಥೆ, ಜಗತ್ತಿನ ಅತ್ಯಂತ ದೊಡ್ಡ ದಾಸೋಹ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆ ಗಳಿಸಿಕೊಂಡಿದೆ. ಮಠಗಳಲ್ಲಿ ಚಾಲ್ತಿಯಲ್ಲಿದ್ದ ದಾಸೋಹ, ವಾರಾನ್ನ ಇತ್ಯಾದಿಗಳನ್ನು ಆಧಾರವಾಗಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ 1953ರಲ್ಲಿ ಶಾಲಾ ಮಕ್ಕಳಿಗೆ ಶೇಂಗಾ, ಬೇಯಿಸಿದ ಆಲೂಗಡ್ಡೆ, ಹಣ್ಣುಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತಂದಿತು. ನಂತರ 1961-62ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ. ಕಾಮರಾಜ್ ಅವರು ಬಡ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡುವ ಯೋಜನೆ ಜಾರಿಗೆ ತಂದರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳೂ ಇದೇ ಹಾದಿ ಹಿಡಿದವು. 1995ರಲ್ಲಿ ಕೇಂದ್ರ ಸರ್ಕಾರವೇ ಮಧ್ಯಾಹ್ನದ ಬಿಸಿಯೂಟದ ನೇತೃತ್ವ ವಹಿಸಿಕೊಂಡಿತು. ಈಗ ನಿತ್ಯ 12 ಕೋಟಿ ಬಡ ಮಕ್ಕಳು ಬಿಸಿಯೂಟ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಹಲವು ಖಾಸಗಿ ಸಂಸ್ಥೆಗಳೂ ಸ್ವಯಂಪ್ರೇರಣೆಯಿಂದ ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ.
ಕೃಷಿ ಪರಂಪರೆ
ಭಾರತೀಯ ಕೃಷಿ 5000 ವರ್ಷಗಳಷ್ಟು ಬೃಹತ್ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ. ನಾಗರಿಕತೆಯ ಜನನದ ಹೊಸ್ತಿಲಿನಲ್ಲೇ ಕೃಷಿಯೂ ಭಾರತದಲ್ಲಿ ಆವಿಷ್ಕಾರಗೊಂಡಿತು. ವೇದಕಾಲೀನ ಕೃಷಿ ಕೇವಲ ಉದ್ಯೋಗವಾಗಿರದೆ ಅದೊಂದು ಧರ್ಮವೆಂದು ಪರಿಗಣಿತವಾಗಿತ್ತು ಎನ್ನುತ್ತವೆ ನಮ್ಮ ಪುರಾಣಗಳು. ಕೃಷಿಕ ವರ್ಗ ರಾಜಾಡಳಿತಗಳಿಂದಲೂ ಅತ್ಯಂತ ಗೌರವದ ಸ್ಥಾನಮಾನ ಪಡೆದಿವೆ. ಇಂದಿಗೂ ಕೃಷಿಯೇ ದೇಶದ ಪ್ರಮುಖ ಉದ್ಯೋಗ ಎನ್ನುವುದು ನಿರ್ವಿವಾದ. ಸಹಜವಾಗಿಯೇ ಕೃಷಿಕ ನಮ್ಮ ಆರ್ಥಿಕತೆಯ ಬೆನ್ನೆಲುಬು. ಆದಾಯ, ಉತ್ಪನ್ನಗಳಿಂದ ಹೊರತಾಗಿ ಪೌಷ್ಟಿಕತೆ, ರುಚಿ ಹಾಗೂ ಗುಣಮಟ್ಟ ನಮ್ಮ ಕೃಷಿಯ ಉದ್ದೇಶ. ಆಹಾರ ಸ್ವಾವಲಂಬನೆ ನಮ್ಮ ಗುರಿ. ಈ ನಿಟ್ಟಿನಲ್ಲಿ 1961ರಲ್ಲಿ ಕೇಂದ್ರ ಕೃಷಿ ಸಚಿವ ಸಿ. ಸುಬ್ರಮಣಿಯಂ ಘೋಷಿಸಿದ 'ಹಸಿರು ಕ್ರಾಂತಿ' ದೇಶದ ಕೃಷಿ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ್ದು, ಕೆಲವರ್ಷಗಳಲ್ಲೇ ತನ್ನ ಗುರಿ ಸಾಧಿಸಿದ್ದು ಸುಳ್ಳಲ್ಲ. ನಂತರದ ದಶಕಗಳಲ್ಲಿ ವರ್ಗೀಸ್ ಕುರಿಯನ್ ಹುಟ್ಟುಹಾಕಿದ 'ಕ್ಷೀರಕ್ರಾಂತಿ' ಜಗತ್ತಿನ ಅತಿದೊಡ್ಡ ಕೃಷಿ ಅಭಿವೃದ್ಧಿ ಆಂದೋಲನ ಎನ್ನುವ ಹಿರಿಮೆಗೂ ಪಾತ್ರವಾಗಿದೆ.
ಕುಟುಂಬ ಕಾರಣ
ಅವಿಭಕ್ತ ಕುಟುಂಬ ಹಾಗೂ ದಾಂಪತ್ಯ ವಿಶ್ವಕ್ಕೇ ನಾವು ಬೋಧಿಸಿದ 'ವಸುದೈವ ಕುಟುಂಬಕಂ'ನ ಸಂಕೇತ. ನಾವು ಆಡಿದಂತೆ ನಡೆಯುವವರು. ಸಂಬಂಧಗಳ ಸವಿಸ್ತಾರ ಜಾಡಿನಲ್ಲಿ ಬಿಗಿದಪ್ಪಿ ಕುಳಿತು ಸವಿ ಉಣ್ಣುವ ಮನಸ್ಥಿತಿ ಭಾರತೀಯರಿಗೆ ಮಾತ್ರ ಒಲಿದು ಬಂದಂತಹದ್ದು. ಸುದೀರ್ಘ ದಾಂಪತ್ಯ, ಅದರ ಬದ್ಧತೆ ನಮ್ಮ ಜೀವನದ ಯಶಸ್ಸಿಗೆ ಬುನಾದಿ. ಮದುವೆ ಎಂಬುದು ಇಲ್ಲಿ ಕೇವಲ ಗಂಡು-ಹೆಣ್ಣಿನ ಕೂಟವಲ್ಲ. ಅದು ಪರಸ್ಪರರನ್ನು ಅರಿತು ಬಾಳುವ ತಪಸ್ಸು. ಭವ್ಯ ಜನಾಂಗದ ಕೊಡುಗೆಗೆ ಎರಡು ಹೃದಯಗಳ ಮೂಲಕ ವಿಭಿನ್ನ ಕುಟುಂಬಗಳು ಮಾಡಿಕೊಳ್ಳುವ ಕರಾರು. ಹೀಗಾಗಿಯೇ ಸಂಬಂಧಗಳು ನಮ್ಮಲ್ಲಿ ಅಪರಿಮಿತ. ಅಜ್ಜ-ಅಜ್ಜಿ, ಅಣ್ಣ-ಅತ್ತಿಗೆ, ತಂಗಿ-ಭಾವ, ಮಾವ-ಅತ್ತೆ, ಚಿಕ್ಕಪ್ಪ-ದೊಡ್ಡಪ್ಪ ಹೀಗೆ ಹೆಸರಿಸಲಾರದಷ್ಟು ಸಂಬಂಧಗಳ ಪರಿಧಿಯನ್ನು ವಿಸ್ತರಿಸಿಕೊಂಡ ದೇಶ ಜಗತ್ತಿನಲ್ಲಿ ಇನ್ನೊಂದು ಸಿಗಲಾರದು. ಭಿನ್ನಾಭಿಪ್ರಾಯ, ಜಗಳಗಳು ಕುಟುಂಬದಲ್ಲಿ ಇಲ್ಲವೆಂತಲ್ಲ. ಅವೆಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಹಿರಿತಲೆಯ ಮಾತಿಗೆ ಕುಟುಂಬದಲ್ಲಿ ಬೆಲೆ. ಸಮುದಾಯ, ಸಮಾಜ ಆರೋಗ್ಯಕರವಾಗಿ ನಿಲ್ಲುವುದೇ ಸದೃಢ ಅವಿಭಕ್ತ ಕುಟುಂಬದಿಂದ.
ರಂಗಭೂಮಿಯ ರಾಜ್ಯ
ವಿಶ್ವ ರಂಗಭೂಮಿಗೆ ಭಾರತದ ಕೊಡುಗೆ ಪುಟ್ಟದೇನಲ್ಲ. ಕರ್ನಾಟಕದ ಯಕ್ಷಗಾನ ಮತ್ತು ದೊಡ್ಡಾಟ, ಕೇರಳದ ಕಥಕ್ಕಳಿ ಹಾಗೂ ಮೋಹಿನಿ ಅಟ್ಟಂ, ತಮಿಳುನಾಡಿನ ಭರತನಾಟ್ಯ, ಆಂಧ್ರಪ್ರದೇಶದ ಕೂಚಿಪುಡಿ, ಬಿಹಾರದ ಸರೈಕೆಲಾಚೌ ಮುಂತಾದವುಗಳಿಗೆ ಸಾಟಿಯಾದ ಕಲಾ ಪ್ರಕಾರ ಜಗತ್ತಿನಲ್ಲಿ ಇನ್ನೊಂದಿಲ್ಲ. ಇದೂ ಶಾಸ್ತ್ರೀಯ ಮತ್ತು ಗುರು ಪರಂಪರೆಯ ಕಲಿಕೆಯೊಂದಿಗೆ ದಕ್ಕಬಹುದಾದ ವಿದ್ಯೆ., ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ದೃಶ್ಯ, ವಸ್ತ್ರಾಭರಣ, ಮುಖವರ್ಣಿಕೆ, ರಂಗಸಜ್ಜಿಕೆ... ಹೀಗೆ ವೈವಿಧ್ಯದ ಸಂಗಮ ನಮ್ಮದು. ವೃತ್ತಿಯಾಗಿಯೂ ಇವು ಇಲ್ಲಿ ಪಾಲನೆಗೊಳ್ಳುತ್ತಿವೆ. ಪುರಾಣದ ಭರತ ಮುನಿಯೇ ನಮ್ಮ ರಂಗಭೂಮಿಯ ಜನಕ ಎನ್ನುವ ಪ್ರತೀತಿ ಇದೆ. ಆತನೇ ನಮ್ಮ ಮೊದಲ ನೃತ್ಯಗುರು.
ಆಯುರ್ವೇದದ ದಾರಿ
ಆಯುರ್ವೇದ ಹಾಗೂ ಯೋಗ ಜಗತ್ತಿಗೆ ಭಾರತ ನೀಡಿದ ಅನರ್ಘ್ಯ ಕೊಡುಗೆ. ಚರಕ, ಸುಶ್ರುತರಿಂದ ಜನಿಸಿದ ಭಾರತೀಯ ವೈದ್ಯ ಪದ್ಧತಿ 'ಆಯುರ್ವೇದ' ಹೆಸರಿನಲ್ಲಿ ಇಂದು ವಿಶ್ವವ್ಯಾಪಿ. ಚಿಕಿತ್ಸಾ ಪದ್ಧತಿಯಾಗಿಯಷ್ಟೇ ಉಳಿಯದೆ ಶಾಸ್ತ್ರ ಹಾಗೂ ಕಲೆಯಾಗಿಯೂ ಇವು ಪಾಲನೆಯಾಗುತ್ತ ಬಂದಿವೆ.
ಆಯುರ್ವೇದ ಎನ್ನುವುದು ನಿಜಕ್ಕೂ ರೋಗ ಗುಣಪಡಿಸುವ ಕಲೆ. ವಾತ, ಪಿತ್ಥ, ಕಫ ಎಂಬ ತ್ರಿದೋಷಗಳ ನಿವಾರಣೆಗೆ ಜೈವಿಕ ಶಕ್ತಿಯ ಬಳಕೆ, ಪಂಚೇಂದ್ರಿಯಗಳ ನಿರ್ವಹಣೆಗೆ ಪಂಚಭೂತಗಳ ನೆರವು ಆಯುರ್ವೇದದ ಮೂಲಮಂತ್ರ. ಕೇವಲ ಕಾಯಿಲೆಯನ್ನು ಮಾತ್ರ ನೋಡದೆ ಇಡೀ ಶರೀರದ ಸ್ವಾಸ್ಥ್ಯವನ್ನು ಸಮಗ್ರವಾಗಿ ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವುದು ಆಯುರ್ವೇದದ ಹೆಗ್ಗಳಿಕೆ. ಆಯುರ್ ಎಂದರೆ ಜೀವನ, ವೇದ ಎಂದರೆ ಜ್ಞಾನ. ಆಯುರ್ವೇದವೆಂದರೆ ಸುಜ್ಞಾನ ಎಂದರ್ಥ. ಕೇವಲ ವಿಜ್ಞಾನವಷ್ಟೇ ಅಲ್ಲ ಇದು. ಗ್ರಾಮೀಣ ಭಾರತದಲ್ಲಿ ಕೌಟುಂಬಿಕ ಪರಂಪರೆ ಮೀಲಕ ಹರಿದುಬಂದಿದ್ದ ಈ ಚಿಕಿತ್ಸಾ ಪದ್ಧತಿ ಇಂದು ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಂಸ್ಥಿಕ ಜ್ಞಾನಶಿಸ್ತಾಗಿ ಮಾನ್ಯತೆ ಗಳಿಸಿದೆ. ವಿಶ್ವ ವೈದ್ಯ ವಲಯದಲ್ಲೂ ಇದು ಸಮ್ಮತ ಪದ್ಧತಿ. ಮೈಗ್ರೇನ್ನಿಂದ ಆರಂಭಿಸಿ ಪಾರ್ಶ್ವವಾಯು, ಹೃದಯಸ್ತಂಭನವರೆಗಿನ ನೂರಾರು ಕಾಯಿಲೆಗಳಿಗೆ ಮೂಲಭೂತ ಸೂತ್ರದ ಮೂಲಕವೇ ಚಿಕಿತ್ಸೆ ನೀಡುವುದು ಈ ಪದ್ಧತಿಯ ವೈಶಿಷ್ಟ್ಯ. ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ, ಗುಳಿಗೆ, ತೈಲ, ಚೂರ್ಣ ಇಲ್ಲಿ ಬಳಕೆಯಾಗುವ ಔಷಧಗಳು. ಆಧುನಿಕ ಸಂಶೋಧನೆಯೊಂದರ ಪ್ರಕಾರ ನಮ್ಮ ಕಹಿಬೇವೊಂದರಲ್ಲಿಯೇ 60 ಕಾಯಿಲೆಗಳನ್ನು ವಾಸಿಪಡಿಸುವ ಔಷಧೀಯ ಗುಣಗಳಿವೆ. 5000 ವರ್ಷಗಳ ಪರಂಪರೆ ಆಯುರ್ವೇದಕ್ಕಿದೆ.
ಈಗಿನ ಆಧುನಿಕ ಜೀವನಶೈಲಿಯ ಒತ್ತಡಗಳಿಂದ ಪಾರಾಗಲು ಇಡೀ ವಿಶ್ವ ಯೋಗದ ಬಗ್ಗೆ ಆಸಕ್ತಿ ತಾಳುತ್ತಿದೆ. ಇದನ್ನೂ 'ಸಮಗ್ರ ಚಿಕಿತ್ಸಾ ವಿಧಾನ'ವಾಗಿಯೇ ನೋಡಲಾಗುತ್ತಿದೆ. ಪತಂಜಲಿಯಿಂದ ಆರಂಭಗೊಂಡು 5000 ವರ್ಷಗಳ ಇತಿಹಾಸ ಇದಕ್ಕಿದೆ. ಯೋಗ ವಿದ್ಯೆಯಿಂದ 700 ವರ್ಷ ಬದುಕಿರುವ ಋಷಿಮುನಿಗಳಿದ್ದರು ಎನ್ನುತ್ತವೆ ಪುರಾಣಗಳು. ಅದೇನೇ ಇದ್ದರೂ ಯೋಗದಿಂದ ಹಲವಾರು ದೈಹಿಕ, ಮಾನಸಿಕ ಸಮಸ್ಯೆಗಳು ದೂರ ಆಗುವುದು ಖಂಡಿತ ಎನ್ನುವುದನ್ನು ಆಧುನಿಕ ಸಂಶೋಧನೆಗಳೂ ಸಾಬೀತುಪಡಿಸಿವೆ. ನಿಯಮಬದ್ಧವಾಗಿ ಯೋಗ ಅಭ್ಯಾಸ ಮಾಡಿ, ನಿತ್ಯ ಆಚರಿಸಿದರೆ ಹೃದಯಸ್ತಂಭನ, ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವಾರು ಕಾಯಿಲೆಗಳಿಂದ ದೂರ ಇರಬಹುದು ಎನ್ನುತ್ತಾರೆ ಯೋಗ ಗುರುಗಳು. ಮನಸ್ಸು ಮತ್ತು ದೇಹಗಳ ನಡುವೆ ಸಮನ್ವಯ ಸಾಧಿಸುವ ಯೋಗಕ್ಕೆ ಈಗ ವಿಶ್ವ ಮನ್ನಣೆ.
ಕ್ರಿಕೆಟ್ ಧರ್ಮ, ಸಚಿನ್ ದೇವರು
ಕ್ರಿಕೆಟ್ ನಡೆಯುತ್ತಿದೆ ಎಂದರೆ ಭಾರತೀಯರು ಉಸಿರು ಬಿಗಿಹಿಡಿದು ನಿಂತಿರುತ್ತಾರೆ. ಅದು ನಮ್ಮ ಪಾಲಿಗೆ ಕೇವಲ ಆಟವಲ್ಲ, ಯುದ್ಧ. ಕ್ರೀಡಾಂಗಣ ಬರಿ ನೆಲವಲ್ಲ, ರಣಾಂಗಣ. ಇತ್ತಂಡಗಳೇ ಪಡೆಗಳು. ಅದೇ ವೀರಾವೇಶ, ಅದೇ ಕೆಚ್ಚು, ಅದೇ ಕೌತುಕ, ಮತ್ತದೇ ಜಯದ ಹಂಬಲ. ಶತಾಯಗತಾಯ ಗೆಲುವೇ ನಮ್ಮ ಕನಸು. ಎದುರಾಳಿ ತಂಡ ಯಾವುದೇ ಇರಬಹುದು, ನಾವಲ್ಲಿ ಗೆಲ್ಲಬೇಕು. 11 ಯೋಧರಲ್ಲಿ ಯಾರೊಬ್ಬನೂ ಹೇಡಿತನ ಹಾಗಿರಲಿ, ತುಸು ಹಿನ್ನಡೆ ಪ್ರದರ್ಶಿಸಿದರೂ ನಮ್ಮಿಂದ ಅದನ್ನು ಸಹಿಸಲು ಸಾಧ್ಯವಿಲ್ಲ. ಅವತ್ತಿನ ಪಾಲಿಗೆ ಭಾರತೀಯರ ಮನಗಳಲ್ಲಿ ಆತನಿಗೆ ಖಳನಾಯಕನ ಪಟ್ಟ. ಈ ಕಾರಣಕ್ಕಾಗಿಯೇ ಸಚಿನ್ ನಮ್ಮ ಪಾಲಿಗೆ ದೇವರು. ದೇಶಕ್ಕಾಗಿ ಸತತ 24 ವರ್ಷ ಆಡಿದ, ದಾಖಲೆಗಳ ಸರಮಾಲೆಯನ್ನೇ ನಿರ್ಮಿಸಿದ ವಾಮನಮೂರ್ತಿ ಸಚಿನ್ಗಿಂತ ಬೇರೆ ದೇವರನ್ನು ಕ್ರೀಡಾ ಜಗತ್ತಿನಲ್ಲಿ ನಾವು ಕಾಣಲು ಸಾಧ್ಯವೇ ಇಲ್ಲ. ನಮ್ಮ ಮನಸ್ಥಿತಿಯೇ ಅಂಥದ್ದು, ಕ್ರೀಡಾಂಗಣವೆಂದರೆ ಕ್ರೀಡಾಸ್ಫೂರ್ತಿಯಷ್ಟೇ ಅಲ್ಲ, ದೇಶಪ್ರೇಮವೂ ಮಿಳಿತಗೊಂಡು ಸಮಗ್ರ ಭಾರತದ ಪ್ರಾತಿನಿಧ್ಯವನ್ನು ನಾವು ಅಲ್ಲಿ ಕಾಣಲು ಹಂಬಲಿಸುತ್ತೇವೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ 1983ರಲ್ಲಿ ಮೊದಲ ಬಾರಿ ವರ್ಲ್ಡ್ಕಪ್ ಗೆದ್ದುಕೊಟ್ಟ ಕಪಿಲ್ದೇವ್ ಇಂದಿಗೂ ನಮ್ಮ ಆರಾಧ್ಯಮೂರ್ತಿ. ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ನಿದ್ದೆಗೆಟ್ಟು ಕಾಮೆಂಟರಿ ಕೇಳುವ, ರಾತ್ರಿಯಿಡೀ ಟಿ.ವಿ ಮುಂದೆ ಜಾಗರಣೆ ಮಾಡುವ ಮನಸ್ಥಿತಿ ನಮ್ಮದು. ಕ್ರಿಕೆಟ್ ಪ್ರೇಮವೆಂದರೆ ನಿರುದ್ಯೋಗಿಗಳ ಗೀಳು ಎಂಬ ಆರೋಪದ ನಡುವೆಯೂ ಅದನ್ನು ಪ್ರೀತಿಸುವವರ, ಅದನ್ನೇ ಜೀವಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಏಕೆಂದರೆ ನಾವು ಭಾರತೀಯರು!
ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ. ಹಾಕಿಯಲ್ಲಿ ನಮ್ಮ ತಂಡ ಸೋತ ಕ್ಷಣ ದೇಶದ ಅದೆಷ್ಟೋ ಯುವ ಕ್ರೀಡಾಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಸೋತುಬಂದ ತಂಡದ ಮೇಲೆ ಹಲ್ಲೆ ನಡೆಸಿದ, ಆಟಗಾರನ ಪೋಸ್ಟರ್ಗಳಿಗೆ ಅವಮಾನ ಎಸಗಿದ ಪ್ರಕರಣಗಳಿಗೇನೂ ಕೊರತೆ ಇಲ್ಲ. ಇವತ್ತಿಗೂ ಹಾಕಿಯ ಸಾಮ್ರಾಜ್ಯದಲ್ಲಿ ನಾವು ಅನಭಿಷಿಕ್ತ ದೊರೆಗಳೇ. ಪಂದ್ಯಾವಳಿಗಳಲ್ಲಿ ಸೋಲಿನ ಪರಂಪರೆ ಕಾಣಿಸಿಕೊಂಡಿರಬಹುದು, ಆದರೆ ಹಾಕಿಗಾಗಿ ಮಿಡಿಯುವ, ತುಡಿಯುವ ಮನಸ್ಸುಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಹಾಕಿ ಹೀರೊ ಧ್ಯಾನ್ಚಂದ್ನನ್ನು ಭಾರತೀಯರು ಮರೆತಾರು ಹೇಗೆ?
ಚದುರಂಗವನ್ನು ಪರಿಚಯಿಸಿ ಜನಪ್ರಿಯಗೊಳಿಸಿದ್ದು ಸಹ ನಾವೇ. ಪುರಾಣೇತಿಹಾಸ ಕಾಲದಿಂದಲೂ ಬೇರೆಬೇರೆ ಮಾದರಿ ಹಾಗೂ ಹೆಸರುಗಳಲ್ಲಿ ನಾವು ಚದುರಂಗದಾಟವನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಇಂದು ವಿಶ್ವನಾಥನ್ ಆನಂದ್, ಕೊನೇರು ಹಂಪಿ ನಮ್ಮ ಕ್ರೀಡಾ ರಾಯಭಾರಿಗಳು. ಕಬಡ್ಡಿ ಅಥವಾ ಅದರಂಥ ವಿಶಿಷ್ಟ ಕ್ರೀಡೆಗಳು ಸಹ ಭಾರತದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದು ಉಳಿದುಕೊಂಡು ಬಂದಂಥವು. ದೈಹಿಕ ಹಾಗೂ ಮಾನಸಿಕ ಕಸರತ್ತು, ಪರಿಶ್ರಮ ಮಿಳಿತಗೊಂಡು ಸಾಗುವುದು ಭಾರತೀಯ ಕ್ರೀಡೆಗಳ ವಿಶೇಷತೆ.
ಅಡಿಯಿಂದ ಮುಡಿಯವರೆಗೆ
ಭಾರತೀಯರ ಉಡುಪೇ ನಮ್ಮ ಸೌಂದರ್ಯಪ್ರಜ್ಞೆಗೆ ಸಾಕ್ಷಿ. ದೇಹವನ್ನು ಕಂಡೂ ಕಾಣಿಸದ, ಸೌಂದರ್ಯವನ್ನು ಮುಚ್ಚಿಟ್ಟೂ ಮುಚ್ಚಿಡದ, ಅಶ್ಲೀಲತೆಯ ಸೋಂಕಿಲ್ಲದ, ರಸಿಕತೆಗೆ ಧಕ್ಕೆ ತಾರದ ವಿಶೇಷ ಉಡುಪುಗಳ ವಿನ್ಯಾಸದಲ್ಲಿ ನಾವು ಸಿದ್ಧಹಸ್ತರು. ಉಡುಪಿನಿಂದ ವ್ಯಕ್ತಿಗೋ, ವ್ಯಕ್ತಿಯಿಂದ ಉಡುಪಿಗೋ ಸೌಂದರ್ಯ ಇಮ್ಮಡಿಸುವ ದ್ವಂದ್ವ ಕಾಣಬಹುದಿದ್ದರೆ ಅದು ಭಾರತೀಯ ಶೈಲಿಯಲ್ಲಿ ಮಾತ್ರ. ನೆಹರು ಕೋಟ್ ಇರಬಹುದು, ನಮ್ಮ ಖಾದಿ ಜುಬ್ಬಾ ಇರಬಹುದು, ಕುರ್ತಾ-ಪೈಜಾಮಗಳೇ ಇರಬಹುದು, ಗಾಂಧಿ ಟೋಪಿ ಅಥವಾ ಮೈಸೂರು ಪೇಟಾ ಇರಬಹುದು, ಮೊಳಕಾಲ್ಮುರು ಸೀರೆ, ರೇಶ್ಮೆ ಧೋತಿ ಇರಬಹುದು. ಒಂದೊಂದಕ್ಕೂ ಅದರದ್ದೇ ಆದ ಪ್ರತ್ಯೇಕ ಐಡೆಂಟಿಟಿ. ಪ್ರಾದೇಶಿಕ ಸೊಗಡಿನಿಂದ ಆಯಾ ಸಮುದಾಯದ ಪ್ರತಿಷ್ಠೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿ ನಿಂತಿರುವ ಭಾರತೀಯ ಉಡುಪಿಗೆ ಸಾಟಿಯಾದದ್ದು ಅಥವಾ ಅದರ ವಿನ್ಯಾಸ ವೈವಿಧ್ಯವನ್ನು ಸರಿಗಟ್ಟಬಲ್ಲದ್ದು ಜಗತ್ತಿನಲ್ಲಿ ಬೇರಾವುದಿದೆ? ಬೆಂಕಿಪೊಟ್ಟಣದೊಳಗೆ ಮಡಚಿಡಬಲ್ಲ ಸೂಕ್ಷ್ಮ ನೇಯ್ಗೆ ನೈಪುಣ್ಯ ನಮ್ಮ ಇತಿಹಾಸದಲ್ಲಿ ದಾಖಲಾಗಿದೆ. ಕಸೂತಿ, ಕುಸುರಿಗಳ ಮೂಲಕ ಯಾವ ಆಧುನಿಕ ಡಿಸೈನರ್ಗಳಿಗೂ ಕಡಿಮೆ ಇಲ್ಲದಂತೆ ವಿನ್ಯಾಸ ಕಟ್ಟಿಕೊಟ್ಟವರು ನಾವು. ವೃತ್ತಿಪರ ಯುಗದಲ್ಲಿ ಆರ್ಥಿಕ ಪ್ರಾಬಲ್ಯವನ್ನು, ಬ್ರಾಂಡ್ ಭರಾಟೆಯನ್ನು, ಪೈಪೋಟಿಯ ಒತ್ತಡವನ್ನು ಎದುರಿಸಲಾಗದೆ ನಮ್ಮ ದಿರಿಸುಗಳು ಸೋತಂತೆ ಕಂಡರೂ ಆಪ್ತವಾಗಿ ಭಾರತೀಯ ಉಡುಪುಗಳು ಮೈಸುತ್ತಿಕೊಳ್ಳುತ್ತಿರುವುದಂತೂ ನಿಜ.
ಅಕ್ಷರ ಸಂತರು ನಾವು
ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಹೆಸರು ಬಹು ಎತ್ತರಕ್ಕಿದೆ. ವಿಶಿಷ್ಟ ಕಾವ್ಯ ಪರಂಪರೆ, ಕವಿ ತಲೆಮಾರು ನಮ್ಮ ಶ್ರೀಮಂತಿಕೆ ಎಂದೇ ಪರಿಗಣಿತವಾದದ್ದು. ರಾಜ-ಮಹಾರಾಜರ ಕಾಲದಿಂದಲೂ ಭಾಷೆ ಮತ್ತು ಸಾಹಿತ್ಯಕ್ಕೆ ಇನ್ನಿಲ್ಲದ ಪ್ರಾಮುಖ್ಯ ಕೊಟ್ಟುಕೊಂಡೇ ಬಂದಿದ್ದೇವೆ. ಆಧುನಿಕ ಭಾರತದಲ್ಲಿ ಸಾಹಿತ್ಯ ಚಳವಳಿಗಳ ಸರಣಿಯೇ ದಾಖಲಾಗಿದೆ. ವಚನಕಾರರ ಕೊಡುಗೆ ಈ ನಿಟ್ಟಿನಲ್ಲಿ ಒಂದು ಪುಟ್ಟ ಉದಾಹರಣೆ. ಸಾಹಿತ್ಯದಿಂದಲೇ ಸ್ವಾತಂತ್ರ್ಯ ಅರಿವನ್ನು ಮೂಡಿಸಿದ ನೆಲ ಇದು. ಭಾರತದಲ್ಲಿರುವಷ್ಟು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳು ವಿಶ್ವದ ಬೇರಾವ ದೇಶದಲ್ಲಿಯೂ ಕಾಣಲು ಸಾಧ್ಯವಿಲ್ಲ. ಬಹುಶಃ ಭಾಷಾ ವೈವಿಧ್ಯವೂ ಇದಕ್ಕೆ ಕಾರಣವಿರಬಹುದು. ಭಾರತೀಯರ ಚಿಂತನಶೀಲ ಮನಸ್ಸುಗಳ ಫಲವೂ ಇದಕ್ಕೆ ಕೊಡುಗೆ ನೀಡುತ್ತಿದ್ದಿರಬಹುದು. ಇಲ್ಲಿನ ರಾಜನೂ ಕವಿ, ಸಂತನೂ ಸಾಹಿತಿ, ರಾಜಕಾರಣಿಯೂ ವಿಮರ್ಶಕ, ಸಾಮಾನ್ಯನೂ ಬರಹಗಾರ. ಒಟ್ಟಾರೆ ವೃತ್ತಿ, ಸ್ಥಾನಮಾನ, ಭಾಷೆ, ಧರ್ಮ ಯಾವುದೇ ಇರಬಹುದು. ಪ್ರತಿಯೊಬ್ಬನೊಳಗೆ ಕವಿಮನಸ್ಸೆಂಬುದು ರಕ್ತಗತವಾಗಿ ಭಾರತೀಯನಿಗೆ ಬಳುವಳಿಯಾಗಿ ಬಂದಿದೆ. ಒಬ್ಬ ಸರ್ವಜ್ಞ, ತಿರುವಳ್ಳುವರ್, ಬಸವಣ್ಣ, ಪುರಂದರ, ಕನಕರು, ಒಬ್ಬ ರವೀಂದ್ರರು, ಹರಿವಂಶರಾಯ್ ಬಚ್ಚನ್, ಸತ್ಯಜಿತ್ ರೇ, ಸಲ್ಮಾನ್ ರಶ್ದಿ, ಕುವೆಂಪು, ಅಮಿತಾವ್ ಘೋಷ್, ಉಪಮನ್ಯು ಚಟರ್ಜಿ, ಪ್ರೇಮಚಂದ್, ಆರ್.ಕೆ. ನಾರಾಯಣ್, ವಿಕ್ರಂ ಸೇಥ್, ಅರುಂಧತಿ ರಾಯ್, ಎಸ್.ಎಲ್. ಭೈರಪ್ಪ ಹೀಗೆ ಭಾರತವನ್ನು ಸಾರಸ್ವತ ಲೋಕದಲ್ಲಿ ಶ್ರೀಮಂತಗೊಳಿಸಿದ ಬೃಹತ್ ಯಾದಿಯೇ ಕಣ್ಣೆದುರು ನಿಲ್ಲುತ್ತದೆ. ಮಾನವೀಯ ಮೌಲ್ಯದೊಂದಿಗೆ ಮೌಲಿಕ ಭಾಷೆ ಹಾಗೂ ವಸ್ತು ನಮ್ಮ ಸಾಹಿತ್ಯದ ವಿಶೇಷತೆ. ರವೀಂದ್ರನಾಥ ಟ್ಯಾಗೋರ್ ಹಾಗೂ ವಿ.ಎಸ್. ನೈಪಾಲ್ ಸಾಹಿತ್ಯದಲ್ಲಿ ನೊಬೆಲ್ ಪಡೆದದ್ದೇ ನಮ್ಮ ಶ್ರೀಮಂತಿಕೆಗೆ ಸಾಕ್ಷಿ.
ಹಸಿದವರಿಗೆ ಅನ್ನ ಮುಟ್ಟಿಸುವವರು!
ನಮ್ಮ ಯಾವುದೇ ವೃತ್ತಿಯ ಅಂತಿಮ ಉದ್ದೇಶ ಹಣ ಗಳಿಕೆ ಅಥವಾ ಜೀವನೋಪಾಯ ಮಾತ್ರವೇ ಅಲ್ಲ. ಹಾಗಾಗಿಯೇ ಕಿಸೆಯಲ್ಲಿ 10 ರುಪಾಯಿ ಇಲ್ಲದವನೂ ಭಾರತದಲ್ಲಿ ಬದುಕಬಲ್ಲ. ತಿಂಗಳ ಸಂಬಳ ಇಲ್ಲದೆಯೂ ಸಂಸಾರವನ್ನು ನಡೆಸಬಲ್ಲ. ಸೇವೆ ಇಲ್ಲಿನ ವೃತ್ತಿಯ ಮೂಲಮಂತ್ರ. ಅಂತಹ ಸೇವಾಕಾಂಕ್ಷೆಯೊಂದಿಗೇ ಶುರುವಾದ ವಿಶಿಷ್ಟ ವೃತ್ತಿಗಳ ಸಾಲಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ಮುಂಬೈನ ಡಬ್ಬಾವಾಲಾಗಳು. ಸೇವಾದಕ್ಷತೆಯ ಮೀಟರ್ನಲ್ಲಿ ಆರು ಸಿಗ್ಮಾದಲ್ಲಿ ಡಬ್ಬಾವಾಲಾಗಳ ರೇಟಿಂಗ್ನಲ್ಲಿ 99999999. ಅಂದರೆ ಆರು ದಶಲಕ್ಷ ವಹಿವಾಟಿನಲ್ಲಿ ಕೇವಲ ಒಂದೇಒಂದು ಲೋಪ ಕಾಣಸಿಗಬಹುದು ಎಂದರೆ ಅವರ ದಕ್ಷತೆಯನ್ನು ಅಳೆಯಬಹುದು. ಗಾಂಧಿ ಟೋಪಿ, ವಿಶಿಷ್ಟ ಧೋತಿಯೊಂದಿಗೆ ಮುಂಬೈನಲ್ಲಿ ಪ್ರತಿನಿತ್ಯ 3,500 ಡಬ್ಬಾವಾಲಾಗಳು 1.5 ಲಕ್ಷ ಊಟದ ಡಬ್ಬಿಗಳನ್ನು ಮನೆಗಳಿಂದ ಕಚೇರಿಗಳಿಗೆ ಸರಿಯಾದ ಸಮಯದಲ್ಲಿ ತಲುಪಿಸುತ್ತಾರೆ. ಉದ್ಯೋಗಿಗಳಿಗೆ ಅವರವರ ಮನೆಗಳಿಂದಲೇ ಮಧ್ಯಾಹ್ನದ ಊಟವನ್ನು ಬಿಸಿಬಿಸಿಯಾಗಿ ತಂದುಮುಟ್ಟಿಸುವುದು ವಿಶ್ವದ ಏಕೈಕ ಉದಾಹರಣೆ. ಇಷ್ಟಕ್ಕೆ ತಿಂಗಳಿಗೆ ಒಬ್ಬ ಡಬ್ಬಾವಾಲಾ ಪ್ರತಿಯೊಬ್ಬನಿಂದ ಪಡೆಯುವ ಶುಲ್ಕ 350-400 ರುಪಾಯಿ ದಾಟುವುದಿಲ್ಲ. ಹಾಗೆಯೇ ನಮ್ಮ ನಗರಗಳ ಚಿಂದಿ ಆಯುವ ಮಂದಿಯ ಯಶೋಗಾಥೆಯೂ ಮುಂದುವರಿಯುತ್ತದೆ. ಬೀದಿಬದಿಯಲ್ಲಿ ಬಳಸಿ ಬಿಸಾಡಿದ ಕಸದಲ್ಲೇ ರಸವನ್ನು ಹೆಕ್ಕಿತೆಗೆದು ಜೀವಿಸುವ ವಿಶಿಷ್ಟ ಉದ್ಯೋಗ ಎಂಬುದೊಂದಿದ್ದರೆ ಅದು ಭಾರತದಲ್ಲಿ ಮಾತ್ರ. ಹಳೆ ಪಾತ್ರ, ಹಳೆ ಕಬ್ಬಿಣ, ಹಳೆ ಪೇಪರ್ ಇವರ ಪಾಲಿಗೆ ಅತ್ಯಮೂಲ್ಯ ವಸ್ತುಗಳು. ಕಬಾಡಿವಾಲಾಗಳು ಎಂದೂ ಗುರುತಿಸುವ, ಅತಿ ಕಡಿಮೆ ಗೌರವದ, ಅತಿ ಹೆಚ್ಚು ಮೌಲ್ಯ ಹೊಂದಿರುವ ಇವರ ವೃತ್ತಿ ಯಾವ ಮ್ಯಾನೇಜ್ಮೆಂಟ್ ಸಂಸ್ಥೆಯಿಂದಲೂ ಪ್ರಮಾಣೀಕೃತಗೊಂಡಿಲ್ಲ. ಆದರೆ ತ್ಯಾಜ್ಯ ಮರುಬಳಕೆಯಲ್ಲಿ ಶೇ. 60ರಷ್ಟು ಪ್ರಮಾಣವನ್ನು ಇವರು ಸಾಧಿಸಿದ್ದಾರೆ. ಚಿಂದಿ ಆಯುವ ಮಂದಿ ಇಲ್ಲ ಎಂದಾಗಿದ್ದರೆ ಭಾರತ ಒಂದು ಬೃಹತ್ ಕಸದ ತೊಟ್ಟಿಯಾಗಿ ಅಥವಾ ಗೊಬ್ಬರದ ಗುಂಡಿಯಾಗಿ ಪರಿಣಮಿಸುತ್ತಿತ್ತೇನೋ.
ಹಾಲಿವುಡ್ಗೂ ಕಮ್ಮಿಯಿಲ್ಲ ಬಾಲಿವುಡ್!
ಜಗತ್ತಿನಲ್ಲಿ ಹಿಂದಿ ಮಾತಾಡುವುದು ನಮ್ಮದೊಂದೇ ದೇಶ. ಆದರೂ, ಬಾಲಿವುಡ್ ಸಿನಿಮಾಗಳು ವಿಶ್ವದ ಥಿಯೇಟರ್ಗಳಲ್ಲಿ ವಿಜೃಂಭಣೆಯಿಂದ ಬಿಡುಗಡೆಗೊಳ್ಳುತ್ತವೆ. ಅಲ್ಲೂ ಶತದಿನೋತ್ಸವ ಆಚರಿಸಿಕೊಳ್ಳುತ್ತವೆ. ಅಂಥ ಧೀಮಂತ ಸಿನಿಲೋಕ ನಮ್ಮ ಬಾಲಿವುಡ್. ಯಾವುದೋ ಜಪಾನಿಗನ ಕಂಪ್ಯೂಟರಿನ ಡೆಸ್ಕ್ಟಾಪ್ನಲ್ಲಿ ಅಮಿತಾಭ್ ಯಾಕಿದ್ದಾನೆ ಎನ್ನುವುದೂ ಆತನಿಗೂ ಗೊತ್ತಾಗದ ಆಕರ್ಷಣೆ. 'ಡಾನ್' ಶಾರೂಖ್ಖಾನ್ಗೆ ಆಸ್ಟ್ರೇಲಿಯದವ ಯಾರೋ ಮಂಗಳನ ಮೇಲಿನ ಸೈಟ್ ಅನ್ನೇ ಬರ್ತ್ಡೇಗೆ ಗಿಫ್ಟಾಗಿ ಕೊಡುತ್ತಾನೆಂದರೆ ನಮ್ಮ ತಾರೆಗಳು ಹಾಲಿವುಡ್ ಅನ್ನೂ ಮೀರಿಸಿದವರೆಂಬ ಹೆಮ್ಮೆ ಮೂಡದೇ ಇದ್ದೀತೆ? ಕತ್ರೀನಾ ಕೈಫ್ ಏಷ್ಯಾದ ಸೆಕ್ಸಿ ತಾರೆಯಾಗಿ, ಐಶ್ವರ್ಯ- ಸುಶ್ಮಿತಾ ಸೇನ್ ಭುವನ ಸುಂದರಿಯರಾಗಿ ಮೆರೆದಾಡಿದ್ದೂ ಬಾಲಿವುಡ್ಡಿನ ಹೆಗ್ಗಳಿಕೆಗಳೇ. 'ಶೋಲೆ', 'ಕ್ರಿಶ್', 'ಲಗಾನ್', 'ಚಕ್ ದೇ ಇಂಡಿಯಾ', 'ರಂಗ್ ದೇ ಬಸಂತಿ', 'ತ್ರೀ ಈಡಿಯಟ್ಸ್', 'ಲಂಚ್ಬಾಕ್ಸ್'- ಇವೆಲ್ಲವೂ ಜಾಗತಿಕ ಸಿನಿಮೋತ್ಸವಗಳಲ್ಲಿ ಘಟಾನುಘಟಿ ನಿರ್ದೇಶಕರ ಹುಬ್ಬೇರಿಸಿದಂಥ ಸಿನಿಮಾಗಳು. 'ಗಾಂಧಿ' ಚಿತ್ರದ ನಂತರ 'ಸ್ಲಂ ಡಾಗ್ ಮಿಲೇನಿಯರ್'ಗೆ ಆಸ್ಕರ್ ಸಿಕ್ಕಾಗ ಬಾಲಿವುಡ್ಡಿನ ಬೆಲೆ ಜಗತ್ತಿಗೆ ಇನ್ನಷ್ಟು ಅರಿವಾಯಿತು. ಇಷ್ಟೆಲ್ಲ ಕಾರಣಕ್ಕೇ ಎ.ಆರ್. ರೆಹಮಾನ್ಗೆ, ಇರ್ಫಾನ್ಖಾನ್ರಂಥವರಿಗೆ ಆ್ಯಂಗ್ಲೀ ಅಂಥ ಸ್ಟಾರ್ ಡೈರೆಕ್ಟರ್ಗಳು ಆಫರ್ ಮೇಲೆ ಆಫರ್ ಕೊಡುತ್ತಾರೆ.
ಶಿರದಲ್ಲೂ, ಚರಣದಲ್ಲೂ...
ಭಾರತ ಶಿಖರ ಮತ್ತು ಭೂಶಿರ ಎರಡೂ ಸುಂದರವೇ. ಪ್ರಾಕೃತಿಕ ಸೌಂದರ್ಯ ಶ್ರೀಮಂತಿಕೆಯನ್ನು ಎತ್ತಿಹಿಡಿಯುವ ಕಾಶ್ಮೀರ ಹಾಗೂ ಕನ್ಯಾಕುಮಾರಿಗಳನ್ನು ಹೊರತುಪಡಿಸಿ ನಾವು ನಮ್ಮ ದೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಿಸರ್ಗದ ವೈಭೋಗ ಮೆರೆಯುವ ಈ ಎರಡು ತಾಣಗಳನ್ನು ನೋಡಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಜೀವಮಾನದ ಕನಸು. ಆ ತಾಣದಲ್ಲಿ ಹೋಗಿ ನಿಂತಾಗೊಮ್ಮೆ ಅನುಭವಿಸುವ ಸಾರ್ಥಕ್ಯ ಭಾರತೀಯನಿಗೆ ಬೇರೆಲ್ಲಿಯೂ ದೊರೆಯಲು ಸಾಧ್ಯವಿಲ್ಲ. 'ಜನನಿ ಜನ್ಮಭೂಮಿಶ್ಚ ಸ್ವರ್ಗಾಧಪಿ ಗರೀಯಸಿ' ತಾಯ್ನೆಲವನ್ನೇ ತಾಯಿಯಾಗಿ ಪೂಜಿಸುವ, ಪ್ರೀತಿಸುವ ಮಂದಿ ನಾವು. ಕಾಶ್ಮೀರದಿಂದ ಕನ್ಯಾಕುಮಾರಿ ನಮ್ಮ ಸಮಗ್ರತೆಯ ಸಂಕೇತವೂ ಹೌದು. ತಾಯಿ ಭಾರತಿಯ ಶಿಖರವಾಗಿ ಕಾಶ್ಮೀರ ನಿಂತರೆ, ಪಾದಪದ್ಮಗಳಾಗಿ ಕನ್ಯಾಕುಮಾರಿ ಕಂಗೊಳಿಸುತ್ತದೆ. ಆ ಮಹಾಮತೆಗೆ ಇದರೊಂದಿಗೆ ನುಡಿನಮನ.
ಜೈ ಹಿಂದ್!
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
-ರಾಜೇಶ್ ಮುಂಡಿಗೇಸರ
rajeshkhegde@gmail.com