ಬೆಳಕಿಗಿಂತ ಕತ್ತಲೇ ಇಷ್ಟ
ಕತ್ತಲಾಯ್ತೆಂದರೆ ಸಾಕು- ಹೋಗಿ ಕೂರುತ್ತೇನೆ
ದೀಪಗಳ ಸುಳಿವಿಲ್ಲದ ಕಡೆ
ಜನ ಜಂಗುಳಿಯ ಗೌಜಿಲ್ಲದೆಡೆ
ನನ್ನ ದಿನ ಶುರುವಾಗುವುದೇ ಆಗ
ನನಗೆ ಬೆಳಕಿಗಿಂತ ಕತ್ತಲೇ ಇಷ್ಟ
ನನ್ನ ಹರಕು ಬಟ್ಟೆಗೆ
ಹೊಲಿಗೆ ಹಾಕಿದೆ ಈ ಕಗ್ಗತ್ತಲು
ನನ್ನ ದುರ್ಗಂಧಕೆ ಹಿಡಿ ಬೈಗುಳ ಹಾಕುವವರು
ತಂತಮ್ಮ ಮನೆಯಲಿ ಮಲಗಿದ್ದಾರೆ
ನಾನು ದೀರ್ಘ ಉಸಿರು ಬಿಟ್ಟು ಕೂತಿದ್ದೇನೆ
ನನಗೆ ಬೆಳಕಿಗಿಂತ ಕತ್ತಲೇ ಇಷ್ಟ
ಜನ ಹಾಕಿದ ತಂಗಳನ್ನವನ್ನು ಈಗಲೇ ತಿನ್ನುವುದು
ಅದು ಹೇಗಿದೆಯೆಂದು ಕಾಣುವುದಿಲ್ಲವಲ್ಲ,
ಮುದ್ದೆ ಮಾಡಿ ತುರುಕುತ್ತೇನೆ ಬಾಯೊಳಗೆ
ಹಸಿವಿನ ಭರಕೆ ಸರ್ರನೆ ಜಾರಿ ಹೊಟ್ಟೆಯೊಳಗೆ
ಮೃಷ್ಟಾನ್ನಕ್ಕೇನು ಕಮ್ಮಿ
ನನಗೆ ಬೆಳಕಿಗಿಂತ ಕತ್ತಲೇ ಇಷ್ಟ
ಮನೆ ಹೊರಗಿಟ್ಟ
ಸಾಮಾನು ಕದ್ದ
ಎಂದು ಜನ ಹಾಕುವ
ಸುಳ್ಳು ಆರೋಪಕ್ಕೆ
ಮರುಗುತ್ತೇನೆ ದಿನಪೂರ್ತಿ
ಈ ತಿರುಕನ ನ್ಯಾಯಾಲಯ
ತೆರೆಯುವುದೇ ಈಗ
ಅಲ್ಲಿ ನಾನು ನಿರಪರಾಧಿ
ಎಂದು ತೀರ್ಪು
ಕೊಟ್ಟುಕೊಂಡು
ನಿರಾಳನಾಗುತ್ತೇನೆ
ನನಗೆ ಬೆಳಕಿಗಿಂತ ಕತ್ತಲೇ ಇಷ್ಟ
ಕನಸಿನೊಳಗೆ ಲೀನನಾಗುತ್ತೇನೆ
ಅಲ್ಲಿ ಬೆಳಕಾದರೆ ಎದೆ ಝಲ್
ಎಂದು ಎದ್ದು ಕೂರುತ್ತೇನೆ.
ಕತ್ತಲೆಯ ಕನಸು ಬಿದ್ದಾಗ
ನೆಮ್ಮದಿಯ ನಿದ್ದೆ
ಜಗ ಹೀಗೆಯೇ ಇರಲೆಂದು
ಬೇಡುತ್ತೇನೆ
ನನ್ನ ಜಗವನ್ನು ಕಾಣುತ್ತೇನೆ
ನನಗೆ ಬೆಳಕಿಗಿಂತ ಕತ್ತಲೇ ಇಷ್ಟ
-ಪರೇಶ ಸರಾಫ