ಮೀಸೆ ಮಾವ
ಹಿಂದೆ, ತುಂಬಾ ಹಿಂದೆ, ಒಬ್ಬ ವ್ಯಕ್ತಿಯ ಮೀಸೆಗಳು ತುಂಬಾ ಉದ್ದವಾಗಿ ಬೆಳೆದಿದ್ದವು. ಮೂಗಿನಡಿಯಿಂದ ಇಳಿದು ನೆಲಮುಟ್ಟಿ ಇನ್ನೂ ಉದ್ದಕ್ಕೆ ಹೊರಟಿದ್ದವು. ಒಂದು ದಿನ, ಈ ಮೀಸೆಗಳ ಮೂಲಕ ನಡೆಯಲು ಸಾಧ್ಯವಾಗುತ್ತದೆಯೋ ಎಂದು ಆ ವ್ಯಕ್ತಿ ಪ್ರಯತ್ನಿಸಿದ. ಆಗಲಿಲ್ಲ. ಇನ್ನೂ ದಪ್ಪವಾಗಿ ಬೆಳೆಸಿ, ಎಣ್ಣೆ ಹಾಕಿ ಬಾಚಿ ಕಟ್ಟಿ, ಪೊರಕೆಯಂತೆ ಗಟ್ಟಿಯಾಗಿ ಜೋಡಿಸಿ, ಅವುಗಳನ್ನು ನೆಲಕ್ಕೆ ಊರಿ ನಡೆಯಲು ನೋಡಿದ. ಈಗ ಅವನಿಗೆ ನಡೆಯಲು ಸಾಧ್ಯವಾಯಿತು.
ಹೀಗೆ ತಮಾಷೆಗಾಗಿ ಶುರು ಮಾಡಿದ್ದು ಅವನಿಗೆ ಅಭ್ಯಾಸವಾಗಿಬಿಟ್ಟಿತು. ಆಮೇಲೆ ಆತ ಎಲ್ಲಿ ಹೋಗಬೇಕಾದರೂ ಮೀಸೆಯ ಮೂಲಕವೇ ನಡೆದು ಹೋಗುತ್ತಿದ್ದ. ದಿನ ಕಳೆದಂತೆ ಮೀಸೆಗಳೇ ಗಟ್ಟಿಯಾಗಿ ಅವನಿಗೆ ಆಧಾರವಾದವು. ಆತ ಮೀಸೆಗೆ ಶೂ ಕಟ್ಟತೊಡಗಿದ. ಕಾಲುಗಳು ತಮ್ಮ ಕೆಲಸವನ್ನೇ ಮರೆತುಬಿಟ್ಟವು.
ಊರಿನ ಜನ ಇವನನ್ನು ಮೊದಲು ತಮಾಷೆಯಿಂದ ನೋಡುತ್ತಿದ್ದವರು, ಈಗ ಈತನನ್ನು ವಿಶೇಷವಾಗಿ ಆರಾಧಿಸತೊಡಗಿದರು. ತಮಗ್ಯಾರಿಗೂ ದಕ್ಕದ ದಿವ್ಯತ್ವ ಈತನಲ್ಲಿದೆ ಎಂದು ನಂಬತೊಡಗಿದರು. ಆತನನ್ನು ಊರಿನ ಪ್ರಮುಖನ ಸ್ಥಾನಕ್ಕೆ ತಂದು ಕೂರಿಸಿದರು. ಮೀಸೆಯಿಂದಾಗಿ ಬಂದ ಹಿರಿತನದಿಂದ ಆತ ಅಧಿಕಾರ ಚಲಾಯಿಸತೊಡಗಿದ.
ಆದರೆ ಆ ರಾಜ್ಯದ ರಾಜ ತಿಕ್ಕಲ. ತಾನಲ್ಲದೆ ಇನ್ಯಾರೂ ಉದ್ದ ಮೀಸೆ ಬಿಡಬಾರದು ಎಂಬುದು ಅವನ ಹಠ. ಹಾಗಾಗಿ ಮೀಸೆ ಮಾವನ ಮೀಸೆಯನ್ನು ಕತ್ತರಿಸಲು ಆಜ್ಞೆ ಮಾಡಿದ. ಇದು ತಿಳಿದ ಕೂಡಲೇ ಮೀಸೆ ಮಾವ ನ್ಯಾಯಾಲಯದ ಮೊರೆ ಹೋದ. ನನ್ನಲ್ಲಿ ಮೀಸೆ ಎಲ್ಲಿದೆ? ನನ್ನ ಕಾಲು ಕಾಲಿನ ಕೆಲಸ ಮಾಡುತ್ತಿಲ್ಲ, ಆದರೆ ಮೀಸೆ ಕಾಲಿನ ಕೆಲಸ ಮಾಡುತ್ತ ತಾನೇ ಕಾಲಾಗಿದೆ. ಹಾಗಾಗಿ ನನ್ನ ಮೀಸೆಯನ್ನು ಮೀಸೆಯೆಂದು ಪರಿಗಣಿಸುವಂತಿಲ್ಲ ಎಂದು ವಾದಿಸಿದ. ನ್ಯಾಯಾಲಯಕ್ಕೂ ತಲೆ ಕೆಟ್ಟು ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತು.
ಈಗ ಅವನ ಮೀಸೆಯು ಮೀಸೆಯೋ ಅಥವಾ ಕಾಲೋ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
-ಹರೀಶ್ ಕೇರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.