ಲಾ ಪಾಯಿಂಟ್
ಮೇಲ್ಮನವಿ ಸಲ್ಲಿಸಿ
- ಪ್ರಶಾಂತ್, ನಾಗಸಮುದ್ರ
35 ವರ್ಷಗಳ ಹಿಂದೆ 4 ಗುಂಟೆ ಜಮೀನನ್ನು ಖರೀದಿಸಿ ಅದರಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದೇನೆ. ಖಾತೆ ನನ್ನ ಹೆಸರಿಗೆ ಇದೆ. ಹೀಗಿರುವಾಗ ಐದು ವರ್ಷಗಳ ಹಿಂದೆ ಹಿಂದಿನ ಖಾತೆದಾರರು ಆ ಜಾಗವನ್ನು ಏಲಿಯನೇಷನ್ ಮಾಡಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿ, ನನ್ನ ಕಾಂಪೌಂಡ್ ಜಾಗದಲ್ಲಿ ಓಡಾಡುವ ದಾರಿ ಬಿಡಬೇಕೆಂದು ದಾವಾ ಹಾಕಿದ್ದಾರೆ. ಪರಿಹಾರವೇನು?
- ಏಲಿಯನೇಷನ್ ಮಾಡುವಾಗ ಖಾತೆ ಯಾರ ಹೆಸರಿಗಿದೆ ಎಂದು ಡಿಸಿ ಪರಿಶೀಲಿಸಬೇಕಾಗಿತ್ತು. ಆ ಕಚೇರಿಯವರು, ಹಿಂದಿನ ಮಾಲೀಕರು ಈ ವಿಷಯ ಮರೆಮಾಚಿ ದುರುದ್ದೇಶದಿಂದ ನಿಮಗೆ ತಿಳಿಯದಂತೆ ಆದೇಶ ಮಾಡಿಸಿದ್ದಾರೆ. .ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಏಲಿಯನೇಷನ್ ಆದೇಶ ರದ್ದುಪಡಿಸಲು ಮನವಿ ಮಾಡಬಹುದು. ಖಾತಾ ಬದಲಾವಣೆ ಮಾಡಿಕೊಟ್ಟ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಬಹುದು.
ದಾವಾ ಹಾಕಬಹುದು
- ಸುಮಲತಾ, ಸಕಲೇಶಪುರ
ತಾತನ ಕಾಲದಿಂದ ಬಂದ ಪಿತ್ರಾರ್ಜಿತ ಆಸ್ತಿಯನ್ನು ನನ್ನ ಸಹೋದರನೇ ಇಟ್ಟು ಕೊಂಡು ಉಳಿದ ಹಕ್ಕುದಾರರಿಗೆ ಪಾಲು ಕೊಡಲು ಒಪ್ಪುತ್ತಿಲ್ಲ. ಪರಿಹಾರವೇನು?
-ನೀವೆಲ್ಲರೂ ನ್ಯಾಯಾಲಯದಲ್ಲಿ ದಾವಾ ಹಾಕಿ ನಿಮ್ಮ ನಿಮ್ಮ ಭಾಗ ಕೇಳಬಹುದು.
ದಾವಾಕ್ಕೆ ಲಿಮಿಟೇಷನ್ ಆಗಿಲ್ಲ
- ಹೆಸರು, ಊರು ಬೇಡ
ತಾತನವರು 1920ರಲ್ಲಿ ನಿಧನಹೊಂದಿದರು. ಕೆಲ ಸ್ವತ್ತುಗಳನ್ನು ನಮ್ಮ ತಂದೆ 1950-52ರಲ್ಲಿ ಖರೀದಿಸಿದರು. 1952ರಲ್ಲಿ ತಂದೆಯವರು ನಿಧನಹೊಂದಿದರು. ನಾನು ರಾಮೇಗೌಡನ ಮಗಳಾಗಿದ್ದು (ಗಂಡುಮಕ್ಕಳಿಲ್ಲ) ನನಗೆ ಆಸ್ತಿಯಲ್ಲಿ ಹಕ್ಕಿದೆಯೇ? ನನ್ನ ತಂದೆಯ 2ನೇ ಹೆಂಡತಿಯ ಒಬ್ಬ ಮಗಳು ಮಕ್ಕಳಿಲ್ಲದೆ ಸತ್ತಿದ್ದು, 2ನೇ ಮಗಳೂ ಸತ್ತಿದ್ದಾಳೆ. ಆಕೆಯ ಗಂಡನಿಗೆ ಇನ್ನೊಬ್ಬ ಹೆಂಡತಿಯಿಂದ ಮಗನಿದ್ದಾನೆ. 2012ರಲ್ಲಿ ನಾನು ಆಸ್ತಿಗಾಗಿ ದಾವಾ ಹಾಕಿದ್ದು, ಅದಕ್ಕೆ ಲಿಮಿಟೇಷನ್ ಇದೆಯೇ?
- ಆರು ಪುಟಗಳ ದೀರ್ಘ ಪತ್ರ ಬರೆದಿದ್ದೀರಿ. ವಿಷಯವನ್ನು ಸುತ್ತುಬಳಸಿ ನಮೂದಿಸಿದ್ದೀರಿ. ಆದ್ದರಿಂದ ನಿಮ್ಮ ಸಮಸ್ಯೆ ಅರ್ಥಮಾಡಿಕೊಳ್ಳುವುದೇ ಕಷ್ಟ.
- ನಿಮಗೆ ನಿಮ್ಮ ತಂದೆ ಆಸ್ತಿಯಲ್ಲಿ ಪೂರ್ಣ ಹಕ್ಕಿದೆ. ಎರಡನೇ ಹೆಂಡತಿ 1990ರಲ್ಲಿ ತೀರಿಕೊಂಡಿದ್ದರಿಂದಲೂ, ಆಕೆಗೆ ಹೆಣ್ಣುಮಕ್ಕಳೇ ಇದ್ದಿದ್ದರಿಂದ ಅವರ್ಯಾರಿಗೂ ಆಸ್ತಿಯಲ್ಲಿ ಹಕ್ಕಿಲ್ಲ. ನಿಮ್ಮ ದಾವಾಕ್ಕೆ ಲಿಮಿಟೇಷನ್ ಆಗಿಲ್ಲ.
-ಎಚ್.ಆರ್. ಕಸ್ತೂರಿರಂಗನ್