ಯಕ್ಷಲೋಕದಲ್ಲಿ ಚುಟುಕು ಅವಧಿಯಲ್ಲಿ ಬೆರಗಾಗುವಂತೆ ಬೆಳೆದ ಪ್ರತಿಭೆ ಅರ್ಪಿತಾ ಹೆಗಡೆ. ಇವರ ಕಥಾ ಸಂಯೋಜನೆಯ ಮತ್ತು ಅಭಿನಯದ 'ನಾಗಪಂಚಮಿ' ಪ್ರಸಂಗ ಬಿಡುಗಡೆ ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಇತ್ತೀಚೆಗಾಯಿತು. ರಾಘವೇಂದ್ರ ಆಚಾರ್‌ರ ದಕ್ಷ ನಿರ್ದೇಶನ ಹಾಗೂ ಭಾಗವತಿಕೆಯಲ್ಲಿ ಸಿರಿಕಲಾಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ 'ನಾಗಪಂಚಮಿ' ಕಿಕ್ಕಿರಿದ ಪ್ರೇಕ್ಷಕರನ್ನು ರಂಜಿಸಿತು.
ಅರ್ಪಿತಾ ಹೆಗಡೆ ಅವರ ದ್ವಿತೀಯ ಕಥಾ ಸಂಯೋಜನೆಯ ಪ್ರಸಂಗವಿದು. ಆದರೆ, ಪ್ರಥಮ ಪ್ರಯೋಗದಲ್ಲೇ ಗಣ್ಯರ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡಿತು. ಕಲಾವಿದರನ್ನೆಲ್ಲ ಅಚ್ಚುಕಟ್ಟಾಗಿ ಬಳಸಿಕೊಂಡಿದ್ದೇ ಪ್ರಯೋಗದ ಯಶಸ್ಸಿನ ರಹಸ್ಯ. ಪ್ರಸಾದ್ ಮೊಗೆಬೆಟ್ಟು ಅವರ ಪದ್ಯ ರಚನೆ ಮನೋಜ್ಞವಾಗಿತ್ತು.
ಅವಳೀ ಸರ್ಪಗಳ ಸುತ್ತ ಹೆಣೆಯಲಾದ ಕಥೆ ಇದು. ಶೇಷಗಿರಿಯ ಮಹಾರಾಜ ಶೃತಕೀರ್ತಿಯಾಗಿ ರವೀಶ ಹೆಗಡೆ, ಆತನ ಮಂತ್ರಿ ಅಶ್ವಸೇನನಾಗಿ ಮಂಜುನಾಥ ಭಟ್, ಮಹಾರಾಜರ ಮಕ್ಕಳು ಅಪೂರ್ವ, ಅಮೋಘರಾಗಿ ಪ್ರಕಾಶ್ ಕೆರಾಡಿ, ವಿನಯ್ ಭಟ್, ಕಥಾನಾಯಕಿ ಪಂಚಮಿ, ನಾಗಲಕ್ಷ್ಮಿಯರಾಗಿ ಅರ್ಪಿತಾ ಹೆಗಡೆ, ನಾಗಶ್ರೀ ಶಾಸ್ತ್ರಿ, ಹಾಸ್ಯ ಪಾತ್ರದ ತಿಮ್ಮನಾಗಿ ಇಟಗಿ ಮಹಾಬಲೇಶ್ವರ ಭಟ್, ತಿಮ್ಮನ ಸಂಗಾತಿ ದುರ್ಗಾಂಬ ಪಾತ್ರದಲ್ಲಿ ನಾಗರಾಜ ಬೀಜಮಕ್ಕಿ, ಕೈರಾಳಿಮಾಂತ್ರಿಕ ಕ್ಷುದ್ರಲೋಚನನಾಗಿ ಪ್ರಶಾಂತವರ್ಧನ, ಕೊರವಂಜಿಯಾಗಿ ನಿಹಾರಿಕಾ ಭಟ್, ಬ್ರಾಹ್ಮಣನಾಗಿ ವಾಸುದೇವ ಪ್ರಭು ಮತ್ತು ಈಶ್ವರನಾಗಿ ವಿನಯ್ ಹೊಸ್ತೋಟ ಮನೋಹರವಾಗಿ ಅಭಿನಯಿಸಿದರು. ಹಿಮ್ಮೇಳದಲ್ಲಿ ಮದ್ದಳೆ ಸುನಿಲ್ ಭಂಡಾರಿ, ನಾರಾಯಣ ಹೆಬ್ಬಾರ್, ಚಂಡೆಯಲ್ಲಿ ಶಿವಾನಂದ ಕೋಟ, ಶ್ರೀನಿವಾಸ ಪ್ರಭು ಮೆರುಗು ನೀಡಿದರು.
= ಸುರೇಶ್ ಹೆಗಡೆ