ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ- ಇವುಗಳನ್ನು ತಾದಾತ್ಮ್ಯದಿಂದ ಆಸ್ವಾದಿಸುವುದು; ಆಸ್ವಾದ ಆನಂದದಲ್ಲಿ ಜೀವನ ಪ್ರೀತಿಯನ್ನು ಕೆಡುಕೊಳ್ಳುವುದು; ಜೀವನಪ್ರೀತಿಯಲ್ಲಿ ಲಭ್ಯವಾದ ಬದುಕಿನ ಪರಮ ಸುಖವನ್ನು ಮತ್ತೊಬ್ಬರಿಗೆ ಹಂಚುವುದು. ಸಾಂಸ್ಕೃತಿಕ ಬದುಕಿನ ಇಂಥ ವ್ಯಾಕರಣವನ್ನು ಅನ್ವಯಿಸಿಕೊಂಡು ತಮ್ಮ ಊರು, ಊರ ಜನ, ಹಿರಿಯರು, ಸ್ಮೇಹಿತರು, ವಿದ್ಯಾರ್ಥಿಗಳು, ಮಕ್ಕಳು ಒಟ್ಟಾರೆ ಎಲ್ಲರೊಂದಿಗೆ ಬೆರೆಯುತ್ತಿದ್ದವರಲ್ಲಿ ಡಾ.ಬಸವರಾಜ ಮಲಶೆಟ್ಟಿ (10.8.1949- 28.06.2014) ಒಬ್ಬರು.
ಜಾನಪದ ವಿದ್ವಾಂಸರಾಗಿದ್ದ ಮಲಶೆಟ್ಟಿಯವರಿಗೆ ಇದ್ದ ಒಂದು ವಿಶೇಷ ಗುಣ, ಸದಾ ಹರಿದು ತುಂಬಿಕೊಳ್ಳುತ್ತ, ಬದಲಾಗುತ್ತ ಸಾಗುವ ಚಲನಶೀಲವಾದ ಜಾನಪದ ವಿದ್ವತ್ತನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದುದು ಮತ್ತು ಅವರ ಗ್ರಹಿಕೆ-ತಿಳಿವಳಿಕೆಗಳನ್ನು ಸಮಚಿತ್ತದಿಂದ ಅವಾಹಿಸಿಕೊಳ್ಳುತ್ತಿದ್ದುದು. ಶ್ರೇಷ್ಠ ಗಮಕಿ ಜೋಳದರಾಶಿ ದೊಡ್ಡನಗೌಡರೊಂದಿಗೆ ಎಷ್ಟೋ ಎಷ್ಟೇ ಸಹಜ ಕುತೂಹಲದಿಂದ ಪಿಯುಸಿ ವಿದ್ಯಾರ್ಥಿಯೊಬ್ಬನ ಜತೆ ಬೆರೆಯುತ್ತಿದ್ದರು. ಜಾನಪದ ವಿದ್ವಾಂಸ ಮುದೇನೂರ ಸಂಗಣ್ಣ ಮತ್ತು ಸ್ವಾತಂತ್ರ್ಯ ಹೋರಾಟಗಾರ ಚಿತ್ತವಾಡಗಿಯ ಬೆಲ್ಲದ ಚೆನ್ನಪ್ಪನವರ ಮುಂದೆ ವಿದ್ಯಾರ್ಥಿಯಂತೆ ತಲೆಯಾಡಿಸುತ್ತ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ತಮ್ಮ ತಂದೆ ಮರಿಕಲ್ಲಪ್ಪನವರನ್ನು ಅವರು ತಂದೆಯಾಗಿ ನೋಡಿದ್ದಕ್ಕಿಂತಲೂ ಗೀಗೀ ಪದಗಳ ಹಾಡುಗಾರರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ನೋಡಿದ್ದೇ ಹೆಚ್ಚು. ತಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಲಶೆಟ್ಟಿಯವರಲ್ಲಿ ಹೇರಳ ಮಾಹಿತಿಗಳಿದ್ದವು. ಅವು ಚಾರಿತ್ರಿಕವೂ, ಅಲಿಖಿತವೂ ಆಗಿದ್ದರಿಂದ ಅವುಗಳಿಗೆ ಮಹತ್ವವಿತ್ತು.
ಮಲಶೆಟ್ಟಿಯವರ ಸರಳ, ಸಜ್ಜನಿಕೆ, ಮುಗ್ಧತೆ ಜ್ಞಾನಾಕಾಂಕ್ಷೆಯ ಮನೋಭಾವಕ್ಕೆ ಸಂಬಂಧಿಸಿದ್ದು; ಜಾನಪದದ ಬಗ್ಗೆ ಅವರು ಆಗಾಗ ಹೇಳುತ್ತಿದ್ದ ಮಾತು- 'ಇಂದು ನಮಗೆ ಲಭ್ಯವಾಗಿರುವ ಜನಪದೀಯ ಅಂಶಗಳು ಕಾವ್ಯೋಕ್ತವಾದವುಗಳು. ಪ್ರಾಚೀನ ಕಾವ್ಯಗಳು ಮತ್ತು ಸೀಮಿತ ವಲಯದ ಮಾಹಿತಿಯ ಆಧುನಿಕ ಜಾನಪದ ಕೃತಿಗಳು ಒಂದು ಕ್ಲುಪ್ತ ಸಂದರ್ಭದಲ್ಲಿ ತಮ್ಮ ಕಾಲದ ಜಾನಪದ ಮೌಲ್ಯವನ್ನು ಅನುಷಂಗಿಕವಾಗಿಯೂ ಪೂರಕವಾಗಿಯೂ ಉಲ್ಲೇಖಿಸಿವೆ. ನಮ್ಮ ಕಣ್ಣಿಗೆ ಕಾಣದ ಅಥವಾ ಕಂಡೂ ಅರಿವಿಗೆ ಮೂಡದ ನೂರಾರು ವಿಚಾರಗಳು ಗುಪ್ತವಾಗಿಯೇ ಉಳಿಯುತ್ತಿವೆ. ಅವೆಲ್ಲದನ್ನು ಕ್ಷೇತ್ರಕಾರ್ಯದಿಂದ ಪುನರ್ ಸಂಗ್ರಹಿಸಿ, ಸಂದರ್ಶನಗಳ ಮುಖಾಂತರ ಕ್ರೋಢೀಕರಿಸಿ, ಹಳ್ಳಿಯ ಬದುಕಿನಿಂದ ಮೌಲ್ಯದ ಉತ್ಖನನ ಮಾಡಬೇಕಾಗುತ್ತದೆ. ಈ ಕಾರ್ಯವನ್ನು ಆಧುನಿಕ ಜಾನಪದ ವಿದ್ವಾಂಸರು ನಿರಂತರ ಮಾಡಬೇಕು'. ಇದನ್ನು ತಮ್ಮ ಅಧ್ಯಯನದ ಪ್ರಣಾಳಿಕೆಯಂತೆ ಮಲಶೆಟ್ಟಿ ಅಳವಡಿಸಿಕೊಂಡಿದ್ದರು. ಅವರ ಜಾನಪದ ಜ್ಞಾನ ಸಂಪತ್ತು ಕೇವಲ ಪುಸ್ತಕೀಯವಾಗಿರಲಿಲ್ಲ. ಯಾವುದೇ ತಾತ್ತ್ವಿಕ ಅಂಶದ ಬಗ್ಗೆ ಸಂದೇಹವುಂಟಾದರೆ, ಅದನ್ನು ಪ್ರಾಯೋಗಿಕವಾಗಿ ಮನಗಂಡು, ಸಹನೆಯಿಂದ ಪರಿಶೀಲಿಸಿ ಸ್ವಂತ ನಿಲುವಿಗೆ ಸೇರಿಸುವ ಮನೋಭಾವವಿತ್ತು.
1973ರಿಂದ 2007ರವರೆಗೆ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಬಯಲಾಟಗಳ ಬಗ್ಗೆ ಬಾಲ್ಯಸಹಜ ಮೋಹವಿತ್ತು. ಹತ್ತರೆಳವೆಯಲ್ಲೇ ತಂದೆಯಿಂದ ಬಯಲಾಟದ ಪರಿಚಯ ಮಾಡಿಕೊಂಡರು. ಡಾ. ಎಂ.ಬಿ. ಕೊಟ್ರಶೆಟ್ಟಿ ಮಾರ್ಗದರ್ಶನದಲ್ಲಿ 'ಉತ್ತರ ಕರ್ನಾಟಕದಲ್ಲಿ ಬಯಲಾಟಗಳು' ವಿಷಯದಲ್ಲಿ ವಿಶೇಷ ಅಧ್ಯಯನ ನಡೆಸಿ ಪಿ.ಎಚ್‌ಡಿ ಮಾಡಿದರು. ಆ ನಿಬಂಧಕ್ಕೆ ಸಂಬಂಧಿಸಿ ಎರಡು ಅಂಶಗಳು ಮುಖ್ಯವಾಗುತ್ತವೆ. ಒಂದು; ಉತ್ತರ ಕರ್ನಾಟಕದಲ್ಲಿ ಬಯಲಾಟಗಳು ಗಟ್ಟಿಗೊಂಡವುಗಳು. ವೈವಿಧ್ಯ, ಸಹಜತೆ, ಕಲಾವಿದರ ತನ್ಮಯತೆ ಇವುಗಳ ವಿಷಯದಲ್ಲಿ ಆವರೆಗಿನ ವಿದ್ವಾಂಸರ ಅಭಿಪ್ರಾಯಗಳನ್ನು ಪರಿಷ್ಕರಿಸುವಂತೆ ಮಾಡಿದ್ದು. ಎರಡು; ಅವರೇ ಹೇಳಿತ್ತಿದ್ದಂತೆ 'ಬರೀ ಮೋಹ, ಆಸಕ್ತಿಗಳಿಗೂ ಸಂಶೋಧನೆಗೂ ಬಹಳ ಅಂತರವಿದೆ. ಸಂಶೋಧನೆಯ ಆಳಕ್ಕಿಳಿದಷ್ಟು ಅದರ ವ್ಯಾಪ್ತಿ ಹಿಗ್ಗುತ್ತಾ ಹೋಯಿತು. ಎಷ್ಟೋ ವಿಷಯಗಳು ನನ್ನ ಪೂರ್ವಭಾವಿ ನಂಬಿಕೆಗಳಿಗೆ ತೀರಾ ವಿರುದ್ಧವಾಗಿದ್ದವು.' ಹಲವು ಅಂಶಗಳನ್ನು ಹೊರತಂದ ಈ ನಿಬಂಧವು ಕನ್ನಡ ನಾಡಿನ ಒಟ್ಟಾರೆ ಜಾನಪದ ಅಧ್ಯಯನದ ಶ್ರೇಷ್ಠ ಹತ್ತು ಕೃತಿಗಳಲ್ಲಿ ಒಂದಾಗಿದೆ. ಅವರು ಬರೆದ 'ಉತ್ತರಕರ್ನಾಟಕದ ರಂಗಗೀತೆಗಳು' 'ಕೋಲಾಟದ ಪದಗಳು', 'ಹರಿಹರನ ಸಮಗ್ರ ಕೃತಿಗಳು', 'ಇಳೆಯಣ್ಣನ ಹಾಡು', 'ಗಿರಿಜಾ ಕಲ್ಯಾಣ', 'ಇತ್ತೀಚೆಗೆ ಬಂದ ಶರಣರ ಕೃತಿಗಳು' ಕನ್ನಡ ಸಾಹಿತ್ಯದ ಮುಂದಿವೆ. ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶಿವರಾತ್ರೀಶ್ವರ ಪ್ರಶಸ್ತಿಗಳು ಅವರಿಗೆ ಸಂದಿದ್ದವು.
ಮಲಶೆಟ್ಟಿ ಅವರ ಸಾವು, 'ಜೀವನ ಪ್ರೀತಿಯನ್ನು ಗಾಢವಾಗಿರಿಸಿಕೊಂಡಿದ್ದ ಜೀವಿಯ ಅಂತ್ಯ' ಎಂದು ಕಾಣುವುದು ಅವರನ್ನು ಬಲ್ಲವರಿಗೆ ಅಚ್ಚರಿಯೆನಿಸಲಾರದು.
= ಡಾ.ಮೃತ್ಯುಂಜಯ ರುಮಾಲೆ