ಜ್ಯೋತ್ಯಂಧಕಾರಗಳ ಕರ್ಮ ತೀರಿ
ಕತ್ತಲೂ ಅಲ್ಲದ ಇತ್ತ ಬೆಳಕೂ ಇಲ್ಲದ ನಟ್ಟಿರುಳ ನಗರದ ದುರುಳ ಪ್ರಭಾವಳಿಯಲ್ಲಿ ಹೀಗೆ
ಪೂರ್ವಜನ್ಮದ ಸ್ಮೃತಿಯಾಯಿತು
ಮೊದಲು ಮಿಂಚುಹುಳವಿದ್ದೆ
ಕತ್ತಲೆಂದರೇನಂತ ಚಂದ ಗೊತ್ತಿತ್ತು
ಆಗ ನನಗೆ ನಾನೇ ಬೆಳಕು
ಸ್ವಯಾರ್ಜಿತವೆಂಬಷ್ಟು ಸ್ವಯಂದ್ಯುತಿಯಿತ್ತು
ಬಳಿಕ ಮೊದಲ ಮಳೆಗೇಳುವ
ಹುಳುವಾಗಿ ತಳೆದೆ
ಫಡಫಡಿಸಿ ಮುತ್ತಿ ಚಡಪಡಿಸುತ್ತ
ಬೆಳಕಂದರೇನಂತ ತಿಳಿದು
ಸತ್ತೆ
ಹೀಗೆ ಜ್ಯೋತ್ಯಂಧಕಾರಗಳ
ಕರ್ಮ ತೀರಿತಾಗಿ ಕಡೆಗೆ ಈ ಜನುಮವಾಯಿತು
ಎಂತಲೇ ಕತ್ತಲೂ ಗೊತ್ತಿರದ
ಒಳಗೆ ಬೆಳಕೂ ಪಡಿಮೂಡದ
ಈ ಶಹರದಲ್ಲಿ ಇನ್ನೊಂದು ಹುಳುವಷ್ಟೇ ಇದ್ದೇನೆ
ಆಗಿ ಆಗಿ ಆಗಿ
ಹೋಗಿದ್ದೇನೆ ಇಲ್ಲಿರುವ ಎಲ್ಲರಂತೆ.
= ನಾಗರಾಜ ವಸ್ತಾರೆ
vastarey@vastareysmdc.co.in