ಮತ್ತೊಂದಿಷ್ಟು ಝೆನ್ ಹನಿಗಳು ಕನ್ನಡದ ಕಡಲನ್ನು ಸೇರಿವೆ. ಕುಚ್ಚಂಗಿ ಪ್ರಸನ್ನ ಅವರು 'ಇದು ಜೆನ್ ಅಲ್ಲ' ಕೃತಿಯಲ್ಲಿ ಒಂದಿಷ್ಟು ಸ್ವಾರಸ್ಯ ಗುಟುಕುಗಳನ್ನು ನೀಡಿದ್ದಾರೆ. ಸಹಜ ಪ್ರಕಾಶನ ಇದನ್ನು ಹೊರತಂದಿದೆ...
ನಿನ್ನ ಬಟ್ಟಲು ತೊಳೆದಿಡು
ಭಿಕ್ಕುವೊಬ್ಬ ಜೋಶುವಿಗೆ ಹೇಳಿದ, 'ನಾನು ಈಗ ತಾನೆ ಈ ವಿಹಾರಕ್ಕೆ ಕಾಲಿಟ್ಟಿದ್ದೇನೆ. ದಯವಿಟ್ಟು ನನಗೆ ಬೋಧಿಸಿ'.
'ನೀನು ಇನ್ನೂ ನಿನ್ನ ಗಂಜಿ ತಿಂದಿಲ್ಲವೇ?'
'ಹೌದು, ಈಗ ತಿಂದೆ' ಎಂದ ಭಿಕ್ಕು.
'ಹಾಗಿದ್ದರೆ ನೀನು ನಿನ್ನ ಬಟ್ಟಲುಗಳನ್ನು ತೊಳೆದಿಡು'.
=
ಗುರುವೆ ಈಗ ಹೇಗಿದೆ?
ಮಹಾಗುರು ಬಾ ತೀವ್ರವಾಗಿ ಕಾಯಿಲೆ ಬಿದ್ದಿದ್ದ. ಗುಡಿಯ ಮುಖ್ಯ ಅರ್ಚಕ ಆತನನ್ನು ಕೇಳಿದ, 'ಗುರುವೆ, ಈಗ ಹೇಗಿದೆ?'.
ಗುರು ಹೇಳಿದ, 'ಸೂರ್ಯ ಮುಖದ ಬುದ್ಧ, ಚಂದ್ರ ಮುಖದ ಬುದ್ಧ'. (ಸೂರ್ಯ ಮುಖದ ಬುದ್ಧನ ಆಯುಸ್ಸು 1800 ವರ್ಷಗಳಾದರೆ, ಚಂದ್ರಮುಖ ಬುದ್ಧನ ಆಯುಸ್ಸು ಕೇವಲ 24 ಗಂಟೆಗಳು)
=
ಮರಣದ ಬಗ್ಗೆ ಕೇಳಿದ
ಜೋಶು ಟೋಸುವನ್ನು ಕೇಳಿದ, 'ಮಹಾಮರಣವನ್ನುವ ಹೊಂದಿದ ಮನುಷ್ಯ ಮತ್ತೆ ಜೀವ ತಳೆದು ಬಂದಲ್ಲಿ ಏನರ್ಥ?'
ಟೋಸು ಹೇಳಿದ, 'ನಾನು ಇರುಳು ಸಂಚರಿಸಲು ಅವಕಾಶ ಕೊಡುವುದಿಲ್ಲ, ಹಗಲು ಬೆಳಕಿನಲ್ಲಿ ಬಾ'.
=
ಉದ್ಯಾನದಲ್ಲಿನ ಓಕ್ ಮರ
ಭಿಕ್ಕುವೊಬ್ಬ ಜೋಶುವನ್ನು ಕೇಳಿದ, 'ಬೋಧಿಧರ್ಮ ಚೀನಾಕ್ಕೆ ಬಂದುದರ ಅರ್ಥವೇನು?'
ಜೋಶು ಹೇಳಿದ, 'ಉದ್ಯಾನದಲ್ಲಿನ ಓಕ್ ಮರ'.