ಖುಷಿ

ರೇಖಾಖುಷಿ ಕಮಲೇಶ್

ವ್ಯಕ್ತಿ ಅಳಿಸಿ ಹೋಗಬಹುದು; ರೇಖೆಗಳನ್ನು ಅಳಿಸಲಾಗದು. ಮೊನ್ನೆ ಕಮಲೇಶ್ ಇನ್ನಿಲ್ಲವಾದಾಗ ಕಲಾರಾಧಕರ ಮನ ಭಾರವಾಗಿದ್ದಂತೂ ಹೌದು. ಆದರೆ, ಅವರ ಅದ್ಭುತ ರೇಖಾಚಿತ್ರಗಳು 'ಅಳಬ್ಯಾಡ್ರೋ' ಎಂದು ಸಾಂತ್ವನ ರವಾನಿಸುತ್ತಿರುವುದಂತೂ ದಿಟ. ಇದು ಒಬ್ಬ ಕಲಾವಿದನ ನಿಜವಾದ ಯಶಸ್ಸು ಕೂಡ.
ಕನ್ನಡದ ವಿಶಿಷ್ಟ ಅಕ್ಷರ ವಿನ್ಯಾಸಕ್ಕೂ ಕಮಲೇಶ್ ಹೆಸರಾಗಿದ್ದರು. ಅದು 'ಕಮಲೇಶ್ ಶೈಲಿ' ಅಂತಲೇ ಜನಪ್ರಿಯವಾಗಿತ್ತು. ಕರ್ನಾಟಕ ಚಿತ್ರಕಲಾ ಪರಷತ್ತಿನವರು ಹೊರತಂದಿರುವ ಹೊತ್ತಿಗೆ 'ಸಿಂಪೋನಿ ಇನ್ ಲೈನ್ಸ್‌'ನಲ್ಲಿ 100 ಚಾರಿತ್ರಿಕ ಸ್ಥಳಗಳ ರೇಖಾಚಿತ್ರಗಳು ಅಚ್ಚೊತ್ತಿವೆ. ಮಧುಕೇಶ್ವರ ದೇಗುಲದಿಂದ ಪ್ರಾರಂಭಿಸಿ ವಿಧಾನಸೌಧದವರೆಗಿನ ಚಿತ್ರಗಳು ಇದರಲ್ಲಿವೆ. ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಿ.ಕೆ. ಚೌಟ ಅವರು ಈ ಕೃತಿಯನ್ನು ಬಹುವಾಗಿ ಮೆಚ್ಚಿ ಪ್ರಶಂಸಿದ್ದಾರೆ. ಅವರು ಚಾರಿತ್ರಿಕ ಸ್ಥಳಗಳ ಬಗ್ಗೆ ಚಿತ್ರ ಹಾಗೂ ಮಾಹಿತಿಗಳನ್ನು 'ಮಯೂರ' ಮಾಸಪತ್ರಿಕೆಯು ಹಲವು ವರ್ಷಗಳು ಮುದ್ರಿಸಿತ್ತು. ನಾಡಿನ ಪ್ರಸಿದ್ಧ ಪ್ರಶಸ್ತಿಗಳಲ್ಲಿ ಒಂದಾದ 'ಕಲಾಧ್ಯಾನ್‌'ಗೆ ಭಾಜನರಾಗಿದ್ದರು ಕಮಲೇಶ್.
ಮೈಸೂರು ಮೂಲದ ಕಮಲೇಶ್, 'ಕಾವಾ'ದಲ್ಲಿ ಕಲಾಭ್ಯಾಸ ನಡೆಸಿ ನಂತರದಲ್ಲಿ ರಾಜ್ಯದ ಎಲ್ಲ ಮ್ಯೂಸಿಯಂಗಳ ವಿನ್ಯಾಸಕಾರರಾಗಿ ಸರ್ಕಾರಿ ಸೇವೆಯಲ್ಲಿದ್ದವರು. ಅಲ್ಲದೆ ಚಿತ್ರಕಲಾ ಪರಿಷತ್ತಿನ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಸೇವೆಯ ಕಾಣ್ಕೆ ನೀಡಿದವರು. ಅವರು ಚಿತ್ರಕಲಾವಿದರಷ್ಟೇ ಅಲ್ಲದೆ ಹಿಂದೂಸ್ತಾನಿ ಗಾಯಕರು, ದೂರದರ್ಶನ ಹಾಗೂ ಚಲನಚಿತ್ರಗಳಿಗೆ ಕಲಾ ನಿರ್ದೇಶಕರು, ನಟರು ಕೂಡ. ಜಿ.ವಿ. ಅಯ್ಯರ್ ಅವರ 'ಅನುರಾಗ ಗೀತೆ'ಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಎಂ.ಎಸ್. ಸತ್ಯುರ ನಿರ್ದೇಶನದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 'ಚಿಕವೀರರಾಜೇಂದ್ರ' ಕೃತಿಯನ್ನು ಹಿಂದಿ ಅವತರಣಿಕೆಯಾದ ಧಾರಾವಾಹಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆದರೆ ದುರದೃಷ್ಟವಶಾತ್ ಪ್ರಸಾರವಾಗಲಿಲ್ಲ. ಪಿ. ಲಂಕೇಶ್ ಅವರ 'ಅನುರೂಪ' ಚಿತ್ರದಲ್ಲಿ ಖಳನಟನಾಗಿ ಕೂಡ ನಟಿಸಿದ್ದರಂತೆ! ಹತ್ತು ಹಲವು ನಾಟಕಗಳ ಕಲಾನಿರ್ದೇಶಕನಾಗಿಯೂ ಗುರ್ತಿಸಿಕೊಂಡಿದ್ದರು. ಪುಟ್ಟಪರ್ತಿಯ ಸಾಯಿಬಾಬಾ ಅವರ ಸಂಸ್ಥೆಗೂ ಬಹುವಾಗಿ ಕಲಾಬೆವರು ಸುರಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಎಲ್ಲ ಕೆಲಸಗಳಿಗೆ ಕಲಾವಿದರಾಗಿ ದುಡಿದಿದ್ದ ಕಮಲೇಶ್‌ಗೆ ಈ ರಾಜ್ಯೋತ್ಸವ ಪ್ರಶಸ್ತಿಯ ಭಾಗ್ಯ ಸಿಗಲಿಲ್ಲವೆಂಬುದು ಮಾತ್ರ ಅರಗಿಸಿಕೊಳ್ಳಲಾಗದ ವಿಷಯ. ಹಲವು ವರ್ಷ ದೆಹಲಿಯಲ್ಲಿನ ಗಣರಾಜ್ಯೋತ್ಸವಗಳ ಸ್ತಬ್ಧಚಿತ್ರಗಳ ರಚನಾ ಕೌಶಲ್ಯದ ರೂವಾರಿ ಕೂಡ ಇವರೇ. ರಾಜ್ಯದ ಚಾರಿತ್ರಿಕ ವಿಷಯದ ಪುಸ್ತಕಗಳಲ್ಲಿ ಇವರ ರೇಖಾಚಿತ್ರಗಳದ್ದೇ ಮೇಲುಗೈ.
ಕಮಲೇಶ್‌ರಲ್ಲಿದ್ದ ಹಿಂದೂಸ್ತಾನಿ ಹಾಡುಗಾರಿಕೆಯನ್ನು ಇಂಡಿಗೋ ರೇಡಿಯೋದಲ್ಲಿದ್ದ ಮಗ ಕೆ. ಅರ್ಜುನ್ ಹಾಗೂ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಮಗಳು ಲಾವಣ್ಯ ದಿನೇಶ್ ಕೂಡ ಆತು ಅನುಸರಿಸುತ್ತಾ ಬಂದಿದ್ದಾರೆ. ಧರ್ಮಪತ್ನಿ ಕೂಡ ಪಿಟೀಲು ವಾದಕರಾಗಿದ್ದರು. ಖ್ಯಾತ ಗಾಯಕಿ ಸುಲೋಚನಾ ವೆಂಕಟೇಶ್ ಅವರು ಕಮಲೇಶರ ತಂಗಿ. ಹೀಗೆ ಕಲೆಯೇ ಈ ಕುಟುಂಬದಲ್ಲಿ ಮೇಳೈಸಿವೆ. ಮಹಾನ್ ಕಲಾವಿದರ ಭೌತಿಕ ಶರೀರ ನಮ್ಮೊಂದಿಗಿಲ್ಲವಾದರೂ ಅವರ ರೇಖೆಗಳು ಕಲಾಭಿಮಾನಿಗಳ ಎದೆಯಲ್ಲಿ ಮಾಸದ ರಂಗೋಲಿ ಬಿಡಿಸಿವೆ.


=  ಸಂಕೇತ್ ಗುರುದತ್
gurudattans@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್