ಈ ಹಿಂದೆ ಕತಾರ್‌ಗೆ ಹೋಗಿದ್ದಾಗ ಅಲ್ಲಿ ಮಹಿಳೆಯರಿಗಾಗಿ ಎಲ್ಲೆಡೆ ಮೀಸಲಿಟ್ಟಿರುವ ಶೌಚಾಲಯಗಳನ್ನು ಕಂಡು ಸಂತಸ ಪಟ್ಟಿದ್ದೆ. ಪ್ರಾಯಶಃ ಈ ಶೌಚಾಲಯಗಳ ಕೊರತೆ ಕೇವಲ ಭಾರತದಲ್ಲಿರಬಹುದೆಂದು ನೊಂದುಕೊಂಡಿದ್ದೆ. ಆದರೆ ಈಗ ಪಾಶ್ಚಿಮಾತ್ಯ ದೇಶಗಳಲ್ಲೂ ಇದೇ ಸಮಸ್ಯೆ ಇರುವುದನ್ನು ಕಂಡು ಬೇಸರ ಪಡಬೇಕೋ, ಮರುಗಬೇಕೋ ತಿಳಿಯಲಿಲ್ಲ.
ಕಳೆದ ವಾರವಷ್ಟೇ ಬ್ರಿಟನ್ ಪ್ರವಾಸದಿಂದ ಮರಳಿದ ನಾನು ದುಬೈ ವಿಮಾನ ನಿಲ್ದಾಣ ತಲುಪಿದ ತಕ್ಷಣ ಮಾಡಿದ ಮೊದಲ ಕೆಲಸ ಎರಡು ನೀರಿನ ಬಾಟಲ್ ಖರೀದಿಸಿ ತೃಪ್ತಿಯಾಗುವಷ್ಟು ನೀರು ಕುಡಿದಿದ್ದು. ಪ್ರವಾಸದ ವೇಳೆಯಲ್ಲಿ ನೀರು ಸಿಗಲಿಲ್ಲವೇ ಎಂದು ಹುಬ್ಬೇರಿಸಬೇಡಿ. ನೀರೇನೋ ಸಿಗುತ್ತಿತ್ತು, ಆದರೆ ಶೌಚಾಲಯಗಳು ಸಿಗಬೇಕಲ್ಲ!
ಗಲ್ಫ್‌ನಲ್ಲಿ ಸಿಗುವ ಹಾಗೆ ಪಾಶ್ಚಿಮಾತ್ಯ ದೇಶಗಳಲ್ಲೂ ಎಲ್ಲೆಡೆಯೂ ಶೌಚಾಲಯಗಳು ದೊರೆಯಬಹುದೆಂಬ ತಪ್ಪು ಕಲ್ಪನೆಯಿಂದಾಗಿ (ನನ್ನ ಪತಿಯ ತಪ್ಪು ತಿಳಿವಳಿಕೆಯನ್ನೂ ಇದರಲ್ಲಿ ಸೇರಿಸಿಕೊಳ್ಳಬಹುದು) ಪ್ರವಾಸದ ಎರಡನೇ ದಿನ ಸಾಕಷ್ಟು ನೀರು, ಹಣ್ಣಿನ ರಸ ಕುಡಿದಿದ್ದೆ. ಕಿಂಗ್‌ಸ್ಟನ್‌ನಲ್ಲಿ ಸುತ್ತಾಡಿ ಸುಸ್ತಾಗುವುದಕ್ಕಿಂತ ಮೂತ್ರ ತಡೆಹಿಡಿದು ಸುಸ್ತಾಗಿತ್ತು.
ಕೆಲವು ಪಿಜ್ಜೇರಿಯಾಗಳಲ್ಲಿ ವಿಚಾರಿಸಿದರೆ ಅವರಲ್ಲಿ ಟಾಯ್ಲೆಟ್ ಸೌಕರ್ಯ ಇಲ್ಲವೆಂದು ಅರಿವಾಯಿತು. ಅಯ್ಯೋ ದೇವರೇ, ಇವರು ಶೌಚಕ್ಕೆ ಹೋಗುವುದೇ ಇಲ್ಲವೇ ಎನ್ನುವ ಗುಮಾನಿ ಬಂತು. ಪುಣ್ಯವೆಂಬಂತೆ ಕಣ್ಣಿಗೆ ಬಿದ್ದದ್ದು ಒಂದು ಪಬ್. ಮನಸ್ಸಿಲ್ಲದ ಮನಸ್ಸಿನಿಂದ ಒಳಗೆ ಹೋಗಿ ವಿಚಾರಿಸಿದಾಗ ನನಗೆ ನಿಟ್ಟುಸಿರು ಬಿಡುವಂತಾಯಿತು. ಆದರೆ ಶೌಚಾಲಯ ಬಳಸಲು ಕರಾರಿತ್ತು, ಅದು ಕೇವಲ ಗ್ರಾಹಕರಿಗೆ ಮೀಸಲು!
"Why dont you buy a drink for yourself?' ಎಂದು ಅಲ್ಲಿನ ಪರಿಚಾರಿಕೆ ಕೇಳಿದಾಗ ನನ್ನ ಪತಿ ತಲೆಯಾಡಿಸಿ ಮೆನು ನೋಡಿದರು. 'ಇಲ್ಲಿ ನೀರಿಗಿಂತ, ತಿಂಡಿ-ತಿನಿಸಿಗಿಂತ ಮದ್ಯವೇ ಅಗ್ಗ' ಎಂದು ಪತಿ ನಕ್ಕಾಗ ನನಗೆ ಅಳು ಬರುವುದೊಂದೇ ಬಾಕಿ. ಆತ ಒಂದು ಬಿಯರ್ ಆರ್ಡರ್ ಕೊಟ್ಟ ಮೇಲೆ ಆ ಮಹಾತಾಯಿ ನನಗೆ ಶೌಚಾಲಯದ ದಾರಿ ತೋರಿಸಿದಳು.
ಶೌಚಾಲಯದ ಬಾಗಿಲು ತೆರೆಯುತ್ತಿದ್ದಂತೆಯೇ ನಾನು ದಂಗಾಗಿ ಹೋದೆ. ಒಂದು ಕ್ಷಣ ನಾನು ವಿದೇಶದಲ್ಲಿರುವೆನೋ ಇಲ್ಲಾ ಭಾರತದಲ್ಲೋ ಎನ್ನುವ ಗುಮಾನಿ. ಗೋಡೆ, ಬಾಗಿಲುಗಳ ಮೇಲೆ ಜನರ ಚಿತ್ರ ವಿಚಿತ್ರ ಬರಹಗಳು, ಹಲವು ಹೆಸರುಗಳು, ಫೋನ್ ನಂಬರುಗಳು... ಗೋಡೆಗಳಿಗೆ ಪೇಂಟ್ ಮಾಡುವ ಅಗತ್ಯವೇ ಇರಲಿಲ್ಲ, ಅಷ್ಟು ಬರಹ ಅವುಗಳನ್ನು ರಂಗುರಂಗಾಗಿಸಿತ್ತು. ಈ ವಿಧ್ವಂಸಕ ಕೃತ್ಯ ಕಂಡು ಯಾರಿಗೆ ಶಂಕೆ ಬರುವುದಿಲ್ಲ? ನನ್ನ ಕಾರ್ಯ ಮುಗಿಸಿದ ಮೇಲೆ ದೇಹ ಮನಸ್ಸು ಎರಡೂ ಹಗುರ, ಪತಿಯ ಜೇಬೂ ಸ್ವಲ್ಪ ಹಗುರ ಅಲ್ಲಿ ನಾವು ಶೌಚಾಲಯ ಬಳಸಲು ತೆತ್ತ ಬೆಲೆ ಐದು ಪೌಂಡು (493 ರುಪಾಯಿ).
ಅಲ್ಲಿದ್ದ ಹದಿನೇಳೂ ದಿನ ಇದೇ ಕತೆ. ಬಸ್‌ನಿಲ್ದಾಣಗಳಲ್ಲಿ, ರೇಲ್ವೆ ಸ್ಟೇಶನ್‌ಗಳಲ್ಲಿ ಇರುತ್ತಿದ್ದ ಸಾರ್ವಜನಿಕ ಶೌಚಾಲಯಗಳನ್ನು ಬಳಸಲು 30 ಪೆನ್ಸ್‌ನಿಂದ ಒಂದು ಪೌಂಡು ತೆರಬೇಕಾಗುತ್ತಿತ್ತು. ಒಂದು ರೇಲ್ವೆ ಸ್ಟೇಶನ್‌ನಲ್ಲಿ ಶೌಚಾಲಯದ ಬಳಕೆ ಉಚಿತವಾಗಿದ್ದದ್ದು ಕಂಡು ನಮ್ಮಿಬ್ಬರಿಗೂ ಅಪರಿಮಿತ ಆನಂದ. ಆದರೆ ಆ ಸಂತಸ ಬಹಳ ಕಾಲ ನಿಲ್ಲಲಿಲ್ಲ. ಶೌಚಾಲಯದ ಬಾಗಿಲು ನೂಕಿ ಒಳಗೆ ಹೋದರೆ ಕಣ್ಣಿಗೆ ರಾಚಿದ್ದು ಸುತ್ತಲೂ ಬಳಸಿ ಬಿಸಾಡಿದ್ದ ಕಾಂಡೋಮುಗಳು, ರಕ್ತಸಿಕ್ತವಾಗಿದ್ದ ಟಾಮ್ಪೋನುಗಳು, ಸ್ಯಾನಿಟರಿ ಪ್ಯಾಡುಗಳು... ಮೂಗು ಮುಚ್ಚಿಕೊಂಡು ಹೊರ ಬರುತ್ತಿದ್ದಂತೆ ಪತಿಯ ಮುಖವೂ ಪೇಲವವಾಗಿತ್ತು, ಕಾರಣ ಗಂಡಸರ ಶೌಚಾಲಯವೂ ಇದಕ್ಕೆ ಹೊರತಾಗಿರಲಿಲ್ಲ. ಭಾರತದಲ್ಲಿಯೂ ಇದೇ ದೃಶ್ಯವಲ್ಲವೇ ನಮ್ಮ ಕಣ್ಣಿಗೆ ಬೀಳುವುದು ಎಂದು ಸಮಾಧಾನ ಪಟ್ಟುಕೊಂಡೆವು.
ಸ್ಕಾಟ್ಲೆಂಡಿನಲ್ಲಿ ಯಾರಾದರು ಬಂದು ಶೌಚಾಲಯ ಬಳಸಲು ಮನೆಯ ಕದ ತಟ್ಟಿದರೆ ನಿರಾಕರಿಸದೆ ಅವರನ್ನು ಬರಮಾಡಿಕೊಳ್ಳಬೇಕೆಂದು ಕಾನೂನು ಹೇಳುತ್ತದೆ ಎಂದು ಎಲ್ಲೋ ಓದಿದ ನೆನಪು. ಆದರೆ ಇದು ಕೇವಲ ಪುಸ್ತಕದಲ್ಲಿ ಮಾತ್ರ ಸಿಗುವ ಸಾಲು ಎನ್ನುವುದು ಅರಿವಾಗಿದ್ದು ಅಲ್ಲಿಗೆ ತೆರಳಿದ ಮೇಲೆಯೇ. ಎಡಿನ್‌ಬರ್ಗ್‌ನ ಕಾಫಿಶಾಪ್‌ವೊಂದರಲ್ಲಿ ಡ್ರಿಂಕ್ಸ್ (8 ಪೌಂಡ್/ 290 ರುಪಾಯಿ) ಆರ್ಡರ್ ಕೊಟ್ಟ ಮೇಲೆ ಶೌಚಾಲಯದ ಕೋಡ್ ತಿಳಿಸಿದಳು ಪರಿಚಾರಿಕೆ. ಇಲ್ಲಾ, ಈ ಬಾರಿ ಇಬ್ಬರೂ ಶೌಚಾಲಯ ಬಳಸಲಾಗಲಿಲ್ಲ, ಒಂದು ಆರ್ಡರ್‌ಗೆ ಸಿಗುವುದು ಒಂದೇ ಕೋಡ್ ಒಮ್ಮೆ ಬಳಸಿದ ಮೇಲೆ ಆ ಕೋಡನ್ನು ಮತ್ತೊಮ್ಮೆ ಬಳಸಲಾಗುವುದಿಲ್ಲ.
ಮತ್ತೊಮ್ಮೆ ಬಳಸಬೇಕಾದರೆ ಇನ್ನೊಂದು ಆರ್ಡರ್ ಕೊಡಬೇಕು, ಆಕೆ ಹೇಳಿದ್ದು ಕೇಳಿ ನಾನು ಸುಮ್ಮನಾಗಿದ್ದೆ.
ಇವುಗಳ ಮಧ್ಯೆ ಅಲ್ಲಿನ ಒಂದು ವಿಷಯ ಬಹಳ ಇಷ್ಟವಾಯಿತು. ಕೆಲವು ಮಹಿಳಾ ಸಾರ್ವಜನಿಕ ಶೌಚಾಲಯಗಳಲ್ಲಿ ಹಣ (ಒಂದು ಪೌಂಡು/98 ರುಪಾಯಿ, ಒಂದೂವರೆ ಪೌಂಡು) ಹಾಕಿ ಟಾಮ್ಪೋನುಗಳು, ಸ್ಯಾನಿಟರಿ ಪ್ಯಾಡುಗಳನ್ನು ಪಡೆಯುವ ಅವಕಾಶವಿತ್ತು. ನಾವು ಕಾಲೇಜಿನಲ್ಲಿದ್ದಾಗ ಸದಾ ಆಪತ್ಕಾಲಕ್ಕೆ ಬೇಕಾಗುತ್ತದೆಂದು ಸ್ಯಾನಿಟರಿ ಪ್ಯಾಡುಗಳನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಬಹುತೇಕ ಮೆಡಿಕಲ್ ಶಾಪುಗಳಲ್ಲಿ ಇರುತ್ತಿದ್ದುದ್ದು ಪುರುಷರು, ಅವರನ್ನು ಸ್ಯಾನಿಟರಿ ಪ್ಯಾಡುಗಳನ್ನು ಕೊಡಿ ಎಂದು ಕೇಳಲೂ ಮುಜುಗರ ಪಡುತ್ತಿದ್ದ ಕಾಲವದು. ಈ ಸೌಲಭ್ಯ ನಮ್ಮ ದೇಶದ ಕಾಲೇಜುಗಳಲ್ಲೂ ಇರಬಾರದೇ ಎನಿಸಿದ್ದು ಸತ್ಯ.
ಇನ್ನು ಪುರುಷರನ್ನು ಬಿಟ್ಟರೆ ಹೇಗೆ? ಪ್ರಮುಖ ಸಾರ್ವಜನಿಕ ಶೌಚಾಲಯಗಳಲ್ಲಿ ಹಣ (1 ಪೌಂಡು/ 98 ರು.) ಹಾಕಿ ಕಾಂಡೋಮುಗಳನ್ನು ಪಡೆಯುವ ಸೌಕರ್ಯವಿತ್ತು. ಈ ರೀತಿಯ ಕಾಂಡೋಮುಗಳನ್ನು ಪಡೆಯುವ ಸೌಕರ್ಯ (ಐದೋ, ಹತ್ತೋ ರುಪಾಯಿಗೆ) ಬೆಂಗಳೂರಿನ ಬಸ್‌ನಿಲ್ದಾಣ, ರೇಲ್ವೆ ನಿಲ್ದಾಣದಲ್ಲಿ ಇರುವುದು ನಾನು 'ಡೆಕ್ಕನ್ ಕ್ರಾನಿಕಲ್' ಪತ್ರಿಕೆಯಲ್ಲಿದ್ದಾಗ ಸುದ್ದಿಯಾಗಿತ್ತು. ಈ ಸೌಕರ್ಯ ಇನ್ನೂ ಚಾಲ್ತಿಯಲ್ಲಿದೆಯೋ ಇಲ್ಲವೋ ತಿಳಿದಿಲ್ಲ.
ಕಳೆದ ವರ್ಷ ಗೆಳೆಯನೊಬ್ಬ ತನ್ನ ಪತ್ನಿಯೊಡನೆ ಹದಿನೈದು ದಿನ ಯೂರೋಪ್ ಪ್ರವಾಸ ಮುಗಿಸಿ ಬಂದಾಗ ನಗುತ್ತಾ 'ಸಕ್ಕರೆ ಕಾಯಿಲೆ ಮತ್ತು ಗರ್ಭಿಣಿಯರಿಗೆ ಸರಿಯಾದ ಸ್ಥಳವಲ್ಲ ಈ ಪಾಶ್ಚಿಮಾತ್ಯ ದೇಶಗಳು' ಎಂದಿದ್ದ. ಕಾರಣ ಕೇಳಿದಾಗ, 'ಹೋಗು ಮಹರಾಯ, ಶೌಚಾಲಯಕ್ಕಾಗಿ ಮೂರು ಸಾವಿರ ರಿಯಾಲ್‌ಗೂ (ಸುಮಾರು 52 ಸಾವಿರ ರುಪಾಯಿ) ಮೇಲೆ ಖರ್ಚು ಮಾಡಿದ್ದೇನೆ. ಸಕ್ಕರೆ ಕಾಯಿಲೆಯಿದ್ದವರ ಗತಿಯೇನು ಅದು ಹೋಗಲಿ ಎಂದರೆ ಒಂದು ಶೌಚಾಲಯದಲ್ಲೂ ತೊಳೆದುಕೊಳ್ಳಲು ನೀರಿಲ್ಲ, ಎಲ್ಲಿ ನೋಡಿದರೂ ಪೇಪರ್ ಬಳಸಬೇಕು, ಗೆಳೆಯರ ಮನೆಗಳಿಗೆ ಹೋದರೂ ಪರಿಸ್ಥಿತಿ ಇದಕ್ಕೆ ಹೊರತೇನಲ್ಲ' ಎಂದು ಪೇಚಾಡಿದ್ದ.
ಇವೆಲ್ಲ ಕಂಡ ಮೇಲೆ ಭಾರತವನ್ನು ಹೀಯಾಳಿಸುವ ಪಾಶ್ಚಿಮಾತ್ಯರ ಮೇಲೆ ಕೆಂಡದಂಥ ಕೋಪ. ಎಲ್ಲರ ಮನೆಯ ದೋಸೆಯೂ ತೂತೇ ಪ್ರತ್ಯೇಕವಾಗಿ ಭಾರತದ ಕಡೆಗೆ ಬೊಟ್ಟು ಮಾಡಿ ತೋರಿಸುವ ಅಗತ್ಯವಿಲ್ಲ. ಆದರೂ ಮಹಿಳೆಯರು ಮೌನವಾಗಿ ಪರದಾದಬೇಕಾದ ಇಂಥ ಪರಿಸ್ಥಿಗಳನ್ನು ಯಾವ ದೇಶವಾಗಲಿ ಚರ್ಚಿಸಿ ಪರಿಹಾರ ಹುಡುಕಬಹುದಲ್ಲವೇ? ಅಭಿವೃದ್ಧಿಯ ಪಟ್ಟಿಯಲ್ಲಿ ಇಂಥ ಸೂಕ್ಷ್ಮ ವಿಚಾರಗಳನ್ನೂ ಸೇರಿಸಿಕೊಳ್ಳಬಹುದಲ್ಲವೇ?
-ಚೈತ್ರಾ ಅರ್ಜುನಪುರಿ
arjunpurichaitra@gmail.com